"ತಲೆ ಬಾಚ್ಕೊಳಿ... ಪೌಡ್ರು ಹಾಕೊಳಿ... ದುನಿಯಾ ತುಂಬಾ ಕಾಸ್ಟ್ಲಿ" ಎಂಬ ಪಂಚಿಂಗ್ ಡೈಲಾಗ್ ಮೂಲಕ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಪಟ್ಟಕ್ಕೇರಿದ ಅದ್ಭುತ ಪೋಷಕ ನಟ ರಂಗಾಯಣ ರಘು. ರಂಗಾಯಣ ಸಂಸ್ಥೆಯ ಮೂಲಕ ರಂಗಭೂಮಿ ಪ್ರವೇಶಿಸಿ, ಬೆಳ್ಳಿಪರದೆಗೆ ಕಾಲಿಟ್ಟು, ಇಂದು ಸ್ಯಾಂಡಲ್‌ವುಡ್‌ನ ಅತ್ಯಂತ ಬಹುಬೇಡಿಕೆಯ ನಟನಾಗಿ ಬೆಳೆದು ನಿಂತಿದ್ದಾರೆ. ತಮ್ಮ ವಿಶಿಷ್ಟ ಮ್ಯಾನರಿಸಂ ಹಾಗೂ ಅಮೋಘ ನಟನೆಯ ಮೂಲಕ ಕೋಟ್ಯಂತರ ಸಿನಿಮಾಪ್ರೇಮಿಗಳನ್ನು ರಂಜಿಸಿರುವ ರಘು, ಇದೀಗ ತಮ್ಮ ವೃತ್ತಿಜೀವನದ ಮೈಲಿಗಲ್ಲಿನ 400ನೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ರಂಗಾಯಣ ರಘು ಅವರ ಈ ಮಹತ್ವದ 400ನೇ ಚಿತ್ರಕ್ಕೆ 'ಹೊಸ ಜೀವನ' ಎಂದು ಹೆಸರಿಡಲಾಗಿದ್ದು, ಚಿತ್ರದ ಶೀರ್ಷಿಕೆಯನ್ನು ಸ್ಯಾಂಡಲ್‌ವುಡ್‌ನ 'ನಟರಾಕ್ಷಸ' ಡಾಲಿ ಧನಂಜಯ್ ಅನಾವರಣಗೊಳಿಸಿದ್ದಾರೆ. ಟೈಟಲ್ ಲಾಂಚ್ ಮಾಡಿ ಮಾತನಾಡಿದ ಧನಂಜಯ್, ರಂಗಾಯಣ ರಘು ಅವರ ಸಾಧನೆಯನ್ನು ಶ್ಲಾಘಿಸಿ, ಇಡೀ ಚಿತ್ರತಂಡಕ್ಕೆ ಶುಭಾಶಯಗಳನ್ನು ಕೋರಿದ್ದಾರೆ.
'ಹೊಸ ಜೀವನ' ಚಿತ್ರಕ್ಕೆ ನಿರ್ದೇಶಕರು ಯಾರು?
ಈ ಹಿಂದೆ ಹಲವು ಯಶಸ್ವಿ ಕಿರುಚಿತ್ರಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದ ಮೋಹನ್ ಕುಮಾರ್ ಹನುಮಯ್ಯ, 'ಹೊಸ ಜೀವನ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ಕಮರ್ಷಿಯಲ್ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಬಡ್ತಿ ಪಡೆದಿದ್ದಾರೆ. ಈ ಚಿತ್ರದಲ್ಲಿ ರಂಗಾಯಣ ರಘು ಅವರೊಂದಿಗೆ ಪ್ರಭು ಮುಂಡ್ಕೂರ್, ಸ್ವಾತಿ ಮುಪ್ಪಾಲ, ಅಚ್ಯುತ್ ಕುಮಾರ್, ಶಿವರಾಜ್ ಕೆ.ಆರ್. ಪೇಟೆ, ಸುಹಾಸ್ ಅತ್ರೆಯಸ್, ಅಭಿ ಸಾಮ್ರಾಟ್ ಮತ್ತು ಉದಯ್ ಆಚಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದೆ.
ಹೊಸ ಜೀವನ ಚಿತ್ರಕ್ಕೆ ಜಿ.ಎಸ್. ಸಂಜೀವ್ ಪ್ರಸಾದ್ ಬಂಡವಾಳ ಹೂಡಿದ್ದು, ನಿರ್ದೇಶಕ ಮೋಹನ್ ಕುಮಾರ್ ಹನುಮಯ್ಯ ಕೂಡ ಸಹ-ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತಿದ್ದಾರೆ. 'ಅರ್ಜುನ್ ಪ್ರೊಡಕ್ಷನ್' ಹಾಗೂ 'ಚಿರು ಪ್ರೊಡಕ್ಷನ್' ಜಂಟಿಯಾಗಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿವೆ.
ಹೊಸ ಜೀವನ ಚಿತ್ರದ ಕಥಾಹಂದರ ಏನು?
'ಹೊಸ ಜೀವನ' ಸಿನಿಮಾವು ಕೇವಲ ಮನರಂಜನೆಯಷ್ಟೇ ಅಲ್ಲದೆ, ಪ್ರಸ್ತುತ ಸಮಾಜಕ್ಕೆ ಅಗತ್ಯವಿರುವ ಗಟ್ಟಿ ಸಂದೇಶವನ್ನು ಹೊಂದಿರಲಿದೆ. ಸ್ನೇಹ, ಪ್ರೀತಿ, ಬದುಕಿನ ತೀವ್ರ ಹೋರಾಟ ಹಾಗೂ ಜೀವನದ ನೈಜ ಮೌಲ್ಯಗಳ ಸುತ್ತ ನಿರ್ದೇಶಕರು ಒಂದು ಸುಂದರ ಕಥಾಹಂದರವನ್ನು ಹೆಣೆದಿದ್ದಾರೆ. ಸದ್ಯದಲ್ಲೇ ಚಿತ್ರದ ಉಳಿದ ಅಪ್‌ಡೇಟ್‌ಗಳು ಹೊರಬೀಳಲಿವೆ ಎಂದು ಮಾಹಿತಿ ನೀಡುತ್ತದೆ ಚಿತ್ರತಂಡ
ಈ ಚಿತ್ರದ ಕಥೆಗೆ ಪೂರಕವಾಗಿ ಸುಮುಖ ರಾವ್ ಸಂಗೀತ ನಿರ್ದೇಶನ ಮಾಡಿದ್ದು, ಸುನಾದ್ ಗೌತಮ್ ಹಿನ್ನೆಲೆ ಸಂಗೀತ ಒದಗಿಸುತ್ತಿದ್ದಾರೆ. ರಾಜ್ ಕಾಂತ್ ಎಸ್. ಅವರ ಛಾಯಾಗ್ರಹಣ ಹಾಗೂ ಶಶಿಧರ್ ಗೌಡ ಅವರ ಸಂಕಲನ ಚಿತ್ರಕ್ಕಿದೆ. ಪ್ರತಾಪ್ ಎಂ.ಆರ್. ಸಂಭಾಷಣೆ ಬರೆದಿದ್ದಾರೆ.