ʻಪಾರ್ಥನ್ ಪರಪಂಚʼ ಚಿತ್ರಕ್ಕೆ ʻಅಣ್ಣಯ್ಯʼ ಸೀರಿಯಲ್ ನಟ ವಿಕಾಶ್ ಉತ್ತಯ್ಯ ಹೀರೋ; ಕೋರ್ಟ್ ರೂಮ್ ಡ್ರಾಮಾದಲ್ಲಿ ರಂಗಾಯಣ ರಘು ಜುಗಲ್ಬಂದಿ
ʻಪಾರ್ಥನ್ ಪರಪಂಚʼ ಚಿತ್ರವು ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಕೋರ್ಟ್ ರೂಮ್ ಡ್ರಾಮಾವನ್ನು ಒಳಗೊಂಡಿದ್ದು, 'ಅಣ್ಣಯ್ಯ' ಧಾರಾವಾಹಿಯ ಖ್ಯಾತ ನಟ ವಿಕಾಶ್ ಉತ್ತಯ್ಯ ನಾಯಕನಾಗಿ ನಟಿಸುತ್ತಿದ್ದಾರೆ. ಶ್ರೀಹರ್ಷ ಎಂ.ಎನ್ ನಿರ್ದೇಶನದ ಈ ಚಿತ್ರದಲ್ಲಿ ರಂಗಾಯಣ ರಘು ಡಿಫೆನ್ಸ್ ಲಾಯರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
-
ಕನ್ನಡದಲ್ಲಿ ʻದಿ ಜಡ್ಜ್‌ಮೆಂಟ್ʼ ಚಿತ್ರದ ನಂತರ ಮತ್ತೊಂದು ಕೋರ್ಟ್ ಹಾಲ್ ಡ್ರಾಮಾ ಕುರಿತ ಸಿನಿಮಾ ನಿರ್ಮಾಣವಾಗುತ್ತಿದೆ. ಶ್ರೀಹರ್ಷ ಎಂ.ಎನ್. ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆ ಚಿತ್ರದ ಹೆಸರು ʻಪಾರ್ಥನ್ ಪರಪಂಚʼ. ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಗುರುತಿಸಿಕೊಂಡಿರುವ ನಟ ವಿಕಾಶ್ ಉತ್ತಯ್ಯ ಅವರು ಈ ಚಿತ್ರದ ಹೀರೋ. ಸದ್ಯ ಕಿರುತೆರೆಯಲ್ಲಿ ʻಅಣ್ಣಯ್ಯʼ ಸೀರಿಯಲ್ ಮೂಲಕ ಫೇಮಸ್ ಆಗಿರುವ ವಿಕಾಶ್ ಈ ಬಾರಿ ಪಾರ್ಥನ್ ಪರಪಂಚಕ್ಕೆ ಕಾಲಿಟ್ಟಿದ್ದಾರೆ.
ಸಿರಿ ಸಿನಿಮಾಸ್ ಮೂಲಕ ಸೀತಾ ಹರ್ಷವರ್ಧನ್ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ವಿಕಾಶ್ ಜೊತೆಗೆ ʻಬ್ಲಾಂಕ್ʼ ಖ್ಯಾತಿಯ ಮಂದಾರ, ರಂಗಾಯಣ ರಘು, ಅಮಿತ್, ಸಂಪತ್ ಮೈತ್ರೇಯ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ʻಪಾರ್ಥನ್ ಪರಪಂಚʼ ಚಿತ್ರದ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದೆ.
Apaayavide Eccharike Movie: ವಿಕಾಶ್ ಉತ್ತಯ್ಯ ಅಭಿನಯದ ʼಅಪಾಯವಿದೆ ಎಚ್ಚರಿಕೆʼ ಚಿತ್ರದ ಟ್ರೈಲರ್ ಔಟ್
ಬೆಂಗಳೂರಿನಲ್ಲೇ ಸಂಪೂರ್ಣ ಚಿತ್ರೀಕರಣ
"ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜತೆಗೆ ಕೋರ್ಟ್ ರೂಂ ಡ್ರಾಮಾ ಇರುವ ಸಿನಿಮಾ. ರಂಗಾಯಣ ರಘು ಅವರು ಡಿಫೆನ್ಸ್ ಲಾಯರ್ ಹಾಗೂ ಸೀತಾ ಅವರು ಪಬ್ಲಿಕ್ ಪ್ರಾಸಿಕ್ಯೂಟರ್ ಪಾತ್ರ ಮಾಡುತ್ತಿದ್ದಾರೆ. ಛಾಯಾಗ್ರಾಹಕರಾಗಿ ಜೈ ಆನಂದ್, ಸಂಗೀತ ನಿರ್ದೇಶಕರಾಗಿ ಅನಂತ್ ಆರ್ಯನ್ ಕೆಲಸ ಮಾಡುತ್ತಿದ್ದಾರೆ. ಇಡೀ ಚಿತ್ರದ ಕಥೆ ಬೆಂಗಳೂರಲ್ಲಿ ನಡೆಯುತ್ತದೆ. ಈಗಾಗಲೇ 4-5 ದಿನಗಳ ಶೂಟಿಂಗ್ ಆಗಿದ್ದು, ಈಗ ಕೋರ್ಟ್ ಹಾಲ್ ಸೆಟ್‌ನಲ್ಲಿ ಶೂಟಿಂಗ್ ನಡೆಯುತ್ತಿದೆ" ಎಂದರು ನಿರ್ದೇಶಕ ಶ್ರೀಹರ್ಷ.
ನಟನೆಯ ಜೊತೆಗೆ ನಿರ್ಮಾಣ
"ಒಂದು ಅದ್ಭುತವಾದ ಟೀಂ ರೆಡಿ ಆಗಿದೆ. ನಮ್ಮ ಸಿರಿ ಸಿನಿಮಾಸ್ ಮೂಲಕ ನಿರ್ಮಾಣ ಮಾಡುವ ಜತೆಗೆ ಒಂದು ಪಾತ್ರ ಕೂಡ ಮಾಡುತ್ತಿದ್ದೇನೆ" ಎಂದಿದ್ದಾರೆ ಈ ಚಿತ್ರದ ನಟಿ ಮತ್ತು ನಿರ್ಮಾಪಕಿ ಸೀತಾ. "ಇವತ್ತಿನ ದಿನಕ್ಕೆ ಹೊಂದುವ ಕಥೆ. ರಿಯಾಲಿಟಿಗೆ ಹತ್ತಿರವಾದ ಕಂಟೆಂಟ್ ಸಿನಿಮಾ, ನಾನು ಕೂಡ ಲಾಯರ್, ಒಂದು ಕೇಸ್ ಹೇಗೆ ಟ್ವಿಸ್ಟ್ ಅಂಡ್ ಟರ್ನ್ ಪಡೆಯುತ್ತ ಹೋಗುತ್ತದೆ ಎಂಬುದನ್ನು ನಿರ್ದೇಶಕರು ತುಂಬಾ ಚೆನ್ನಾಗಿ ಹೇಳುತ್ತ ಹೋಗಿದ್ದಾರೆ" ಎಂಬುದು ನಟ ವಿಕಾಶ್ ಉತ್ತಯ್ಯ ಅವರ ಹೇಳಿಕೆ.
ನನ್ನ ಪಾತ್ರ ತುಂಬಾ ಚೆನ್ನಾಗಿದೆ
ಬ್ಲಾಂಕ್ ಸಿನಿಮಾದ ನಂತರ ಮತ್ತೊಂದು ಉತ್ತಮ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸುತ್ತಾರೆ ನಟಿ ಮಂದಾರ. "ಬ್ಲಾಂಕ್ ಚಿತ್ರದ ನಂತರ ಒಂದೊಳ್ಳೆ ಪಾತ್ರಕ್ಕಾಗಿ ಕಾಯುತ್ತಿದ್ದೆ. ನಾನಿಲ್ಲಿ ಜೆನ್‌ಜೀ ಹುಡುಗಿ. ನಿರ್ದೇಶಕರು ನನ್ನ ಪಾತ್ರವನ್ನು ತುಂಬಾ ಚೆನ್ನಾಗಿ ಕ್ರಿಯೇಟಿವ್ ಆಗಿ ರೂಪಿಸಿದ್ದಾರೆ. ಕಥೆ ಕೇಳಿದ ಕೂಡಲೇ ನನಗೆ ಖುಷಿಯಾಯ್ತು, ಹಾಗಾಗಿ ನಟಿಸಲು ಒಪ್ಪಿಕೊಂಡೆ" ಎನ್ನುತ್ತಾರೆ ನಟಿ ಮಂದಾರ.
ಇದು ನನಗೆ ಬೇರೆ ಥರದ ಪಾತ್ರ
"ಶ್ರೀ ಹರ್ಷ ಅವರು ಸಾಹಿತಿ ನರಸಿಂಹಮೂರ್ತಿ ಅವರ ಮಗ. ಈವರೆಗೆ ಯಾರೂ ಗೆಸ್ ಮಾಡಿರದಂಥ ಘಟನೆಯನ್ನು ಶ್ರೀಹರ್ಷ ಯೋಚನೆ ಮಾಡಿದ್ದಾರೆ. ವಿಕಾಸ್ ಮಡಿಕೇರಿ ಹುಡುಗ, ಇದರಲ್ಲಿ ಲಾಯರ್, ಒಂದು ಕ್ಲೂ ಹಿಂದೆ ಹೋದಾಗ ಏನೇನಾಗುತ್ತೆ ಅನ್ನೋದನ್ನು ಚೆನ್ನಾಗಿ ಹೇಳುತ್ತಿದ್ದಾರೆ. ಟಗರುಪಲ್ಯ, ಅಜ್ಞಾತವಾಸಿ, ಶಾಖಾಹಾರಿ ನಂತರ ಇದು ನನಗೆ ಬೇರೆ ಥರದ ಪಾತ್ರ" ಎಂದರು ರಂಗಾಯಣ ರಘು.
45 ದಿನಗಳಲ್ಲಿ ಶೂಟಿಂಗ್ ಮುಗಿಸುವ ಪ್ಲ್ಯಾನ್ ಇದ್ದು, ಅದರಲ್ಲಿ 20 ರಿಂದ 25 ದಿನ ಕೋರ್ಟ್ ಹಾಲ್‌ನಲ್ಲೇ ಶೂಟಿಂಗ್ ನಡೆಯಲಿದೆ. ಈ ಚಿತ್ರದಲ್ಲಿ 4 ಹಾಡುಗಳಿದ್ದು, ಇಂದು ನಾಗರಾಜ್, ಶ್ರೀಹರ್ಷ ಬೆಳ್ಮಣ್ಣು, ಜಸ್ಕರಣ್ ಸಿಂಗ್ ಹಾಡುತ್ತಿದ್ದಾರೆ.