ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರವಿತೇಜ ನಟನೆಯ 'ಇರುಮುಡಿ' ಚಿತ್ರತಂಡಕ್ಕೆ ಸಂಕಷ್ಟ! ಇದ್ದಕ್ಕಿದ್ದಂತೆಯೇ ನಿರ್ಮಾಪಕರಿಗೆ ತೆಲಂಗಾಣ ಕಾರ್ಮಿಕ ಇಲಾಖೆ ನೋಟಿಸ್ ಕೊಟ್ಟಿದ್ದೇಕೆ?

Ravi Teja: ರವಿ ತೇಜ ನಟನೆಯ ಬ್ಲಾಕ್‌ಬಸ್ಟರ್ ‘ಇರುಮುಡಿ’ ಚಿತ್ರತಂಡಕ್ಕೆ ಬಾಲಕಾರ್ಮಿಕ ಕಾಯ್ದೆ ಉಲ್ಲಂಘನೆ ಆರೋಪದಡಿ ತೆಲಂಗಾಣ ಕಾರ್ಮಿಕ ಇಲಾಖೆ ಅಧಿಕೃತ ನೋಟಿಸ್ ಜಾರಿ ಮಾಡಿದೆ. ಬಾಲನಟಿ ನಕ್ಷತ್ರ ಅವರ ಚಿತ್ರೀಕರಣದ ಅವಧಿ, ಸಂಭಾವನೆಯ ನಿಗದಿತ ಠೇವಣಿ ಹಾಗೂ ವಿದ್ಯಾಭ್ಯಾಸದ ಸುರಕ್ಷತೆಯ ನಿಯಮ ಪಾಲನೆಯ ಬಗ್ಗೆ ಜಂಟಿ ಆಯುಕ್ತರು ವಿವರಣೆ ಕೇಳಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿ ಬ್ಲಾಕ್‌ಬಸ್ಟರ್ ಎನಿಸಿಕೊಂಡಿದ್ದ ಖ್ಯಾತ ನಟ ರವಿತೇಜ ಅಭಿನಯದ ‘ಇರುಮುಡಿ’ ಚಿತ್ರತಂಡಕ್ಕೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ. ತೆಲಂಗಾಣ ಕಾರ್ಮಿಕ ಇಲಾಖೆಯು ಚಿತ್ರದ ನಿರ್ಮಾಪಕರಿಗೆ ಬಾಲಕಾರ್ಮಿಕ ಕಾಯ್ದೆ ಉಲ್ಲಂಘನೆ ಆರೋಪದಡಿ ಗಂಭೀರ ನೋಟಿಸ್ ಜಾರಿ ಮಾಡಿದ್ದು, ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.

ಈಗ್ಯಾಕೆ ನೋಟಿಸ್‌ ನೀಡಲಾಗಿದೆ?

ಶಿವ ನಿರ್ವಾಣ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ರವಿತೇಜ ಜೊತೆಗೆ ಪ್ರಿಯಾ ಭವಾನಿ ಶಂಕರ್, ಬಾಲನಟಿ ಬೇಬಿ ನಕ್ಷತ್ರ, ಶ್ವಾಸಿಕಾ ಹಾಗೂ ಸಾಯಿ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಿಸಿದ್ದರು. ಆಗಸ್ಟ್‌ನಲ್ಲಿ ತೆರೆಕಂಡಿದ್ದ ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 250 ಕೋಟಿಗೂ ಅಧಿಕ ಗಳಿಕೆ ಕಂಡು ಭರ್ಜರಿ ಯಶಸ್ಸು ಕಂಡಿತ್ತು. ಆದರೆ, ಸಿನಿಮಾ ತೆರೆಕಂಡು ಯಶಸ್ವಿಯಾಗಿ ಎರಡು ತಿಂಗಳು ಕಳೆದ ಬೆನ್ನಲ್ಲೇ ಈ ಹೊಸ ವಿವಾದ ಭುಗಿಲೆದ್ದಿದೆ.

ನೋಟಿಸ್‌ನಲ್ಲಿವೆ ಹಲವು ಪ್ರಶ್ನೆಗಳು?

‘ಜೈ ಲೋಕಸತ್ತಾ ಸೋಷಿಯಲ್ ಜಸ್ಟೀಸ್ ಫೋರಂ’ ನೀಡಿದ ದೂರಿನ ಆಧಾರದ ಮೇಲೆ ಕ್ರಮ ಕೈಗೊಂಡಿರುವ ತೆಲಂಗಾಣ ಕಾರ್ಮಿಕ ಇಲಾಖೆಯ ಜಂಟಿ ಆಯುಕ್ತರು, ಚಿತ್ರದಲ್ಲಿ ಬಾಲನಟಿಯೊಂದಿಗೆ ಶೂಟಿಂಗ್ ನಡೆಸುವಾಗ ಬಾಲಕಾರ್ಮಿಕ ಕಾಯ್ದೆ ಮತ್ತು ನಿಯಮಾವಳಿಗಳನ್ನು ಸರಿಯಾಗಿ ಪಾಲಿಸಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.

ಚಿತ್ರೀಕರಣಕ್ಕೂ ಮುನ್ನ ಸಂಬಂಧಪಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟ್‌ರಿಂದ ಕಡ್ಡಾಯ ಪೂರ್ವಾನುಮತಿ ಪಡೆಯಲಾಗಿದೆಯೇ? ಬಾಲಕಿಯ ಪೋಷಕರಿಂದ ಕಾನೂನುಬದ್ಧ ಲಿಖಿತ ಒಪ್ಪಿಗೆ ಪತ್ರ ಪಡೆಯಲಾಗಿದೆಯೇ? ಹಾಗೂ ನಿಯಮದಂತೆ ಬಾಲಕಿಯ ಒಟ್ಟು ಸಂಭಾವನೆಯಲ್ಲಿ ಶೇಕಡಾ 20ರಷ್ಟು ಮೊತ್ತವನ್ನು ಆಕೆಯ ಹೆಸರಿನಲ್ಲಿ ಫಿಕ್ಸೆಡ್ ಡೆಪಾಸಿಟ್ ರೂಪದಲ್ಲಿ ಇಡಲಾಗಿದೆಯೇ ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ನೋಟಿಸ್‌ನಲ್ಲಿ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

Irumudi OTT: ಥಿಯೇಟರ್‌ನಲ್ಲಿ ಹಿಟ್, ಒಟಿಟಿಯಲ್ಲಿ ‘ಇರುಮುಡಿ’ ಟ್ರೋಲ್

ನಟನೆಯಿಂದ ಬಾಲಕಿಯ ವಿದ್ಯಾಭ್ಯಾಸಕ್ಕೆ ತೊಂದರೆ ಆಯಿತೇ?

ಇದಿಷ್ಟೇ ಅಲ್ಲದೆ, ಚಿತ್ರೀಕರಣದ ವೇಳೆ ಬಾಲಕಿಯ ಕಾಲ್ ಶೀಟ್‌ಗಳು, ಹಾಜರಾತಿ ದಾಖಲೆಗಳು, ಆಕೆ ಪ್ರತಿದಿನ ಕೆಲಸ ಮಾಡಿದ ಅವಧಿಯ ವಿವರಗಳನ್ನು ಸಲ್ಲಿಸಬೇಕಾಗಿದೆ. ಬಾಲಕಿಯ ಶಿಕ್ಷಣ ಹಾಗೂ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳು ಮತ್ತು ಆಕೆಯ ಸುರಕ್ಷತೆ ಹಾಗೂ ಯೋಗಕ್ಷೇಮದ ಮೇಲ್ವಿಚಾರಣೆಗಾಗಿ ಪ್ರತ್ಯೇಕ ಪಾಲಕರನ್ನು ನಿಯೋಜಿಸಲಾಗಿತ್ತೇ ಎಂಬುದರ ಬಗ್ಗೆಯೂ ದಾಖಲೆಗಳನ್ನು ಕೇಳಲಾಗಿದೆ.

ನೋಟಿಸ್‌ಗೆ ನವೆಂಬರ್‌ 4ರಂದು ಉತ್ತರ ನೀಡಬೇಕು

ಜೊತೆಗೆ, ಸಿನಿಮಾ ಪ್ರಚಾರ ಕಾರ್ಯಕ್ರಮಗಳು ಹಾಗೂ ಪ್ರಿ-ರಿಲೀಸ್ ಇವೆಂಟ್‌ಗಳಲ್ಲಿ ಬಾಲಕಿ ಭಾಗವಹಿಸಿದ್ದರ ಬಗ್ಗೆಯೂ ವಿವರಣೆ ಕೇಳಲಾಗಿದೆ. ಈ ಎಲ್ಲಾ ದಾಖಲೆಗಳು ಹಾಗೂ ಸಮಗ್ರ ವಿವರಗಳೊಂದಿಗೆ ನವೆಂಬರ್ 4 ರಂದು ಬೆಳಿಗ್ಗೆ 11 ಗಂಟೆಗೆ ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ‘ಇರುಮುಡಿ’ ಚಿತ್ರದ ನಿರ್ಮಾಪಕರಿಗೆ ಅಧಿಕಾರಿಗಳು ಡೆಡ್‌ಲೈನ್ ನೀಡಿದ್ದಾರೆ. ಭರ್ಜರಿ ಕಲೆಕ್ಷನ್‌ನ ಖುಷಿಯಲ್ಲಿದ್ದ ನಿರ್ಮಾಣ ಸಂಸ್ಥೆಗೆ ಈ ನೋಟಿಸ್ ತಲೆನೋವಾಗಿ ಪರಿಣಮಿಸಿದೆ.