ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಬಿಗ್‌ ಬಾಸ್‌' ಖ್ಯಾತಿಯ ರಾಶಿಕಾ ಶೆಟ್ಟಿಗೆ ತಂದೆಯಾದ ರವಿಚಂದ್ರನ್;‌ 'ಪ್ಯಾರ್‌' ಚಿತ್ರದಲ್ಲಿದೆ ಅಪ್ಪ-ಮಗಳ ಎಮೋಷನಲ್‌ ಕಥೆ

ʻಪ್ಯಾರ್‌ʼ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು, ʻಕ್ರೇಜಿ ಸ್ಟಾರ್ʼ ರವಿಚಂದ್ರನ್ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಶಿಕಾ ಶೆಟ್ಟಿ ಅಪ್ಪ-ಮಗಳಾಗಿ ಕಾಣಿಸಿಕೊಂಡಿದ್ದಾರೆ. ಎಸ್. ಸುಪ್ರೀತ್ ನಿರ್ದೇಶನದ ಈ ಚಿತ್ರದಲ್ಲಿ ತಂದೆಗಾಗಿ ಜೀವವನ್ನೇ ಪಣಕ್ಕಿಡುವ ಮಗಳ ಎಮೋಷನಲ್‌ ಕಥೆಯಿದೆ.

ತಂದೆ-ಮಗಳ ಬಾಂಧವ್ಯದ ಕಥಾನಕ ಒಳಗೊಂಡ 'ಪ್ಯಾರ್' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಎಸ್. ಎಂ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಚ್. ಎಸ್. ನಾಗಶ್ರೀ ಅವರು ನಿರ್ಮಿಸಿರುವ ಈ ಸಿನಿಮಾಕ್ಕೆ ಎಸ್. ಸುಪ್ರೀತ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ರಿಶ್ವಿನ್ ಹಾಗೂ ರಾಶಿಕಾ ಶೆಟ್ಟಿ ನಾಯಕ-ನಾಯಕಿಯಾಗಿ ನಟಿಸಿದ್ದು, ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ನಿರ್ದೇಶಕ ಸುಪ್ರೀತ್ ಮಾತನಾಡುತ್ತ, "ಈ ಹಿಂದೆ 'ಒಂದೇ ಮಾತಲಿ' ಹಾಗೂ 'ರಾಯಭಾರಿಯಾಗಿ' ಎಂಬ 2 ಹಾಡುಗಳನ್ನು ಬಿಡುಗಡೆ ಮಾಡಿದ್ದೆವು. ಅವುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಇದೀಗ ಟೀಸರ್ ರಿಲೀಸ್ ಆಗಿದೆ. ನಿರ್ಮಾಪಕರು ನನ್ನ ಮೇಲೆ ನಂಬಿಕೆಯಿಟ್ಟು ದೊಡ್ಡ ಮಟ್ಟದ ಬಂಡವಾಳ ಹೂಡಿದ್ದಾರೆ. ಯಾವುದಕ್ಕೂ ಕೊರತೆಯಾಗದಂತೆ ಧಾರಾಳವಾಗಿ ಖರ್ಚು ಮಾಡಿದ್ದಾರೆ" ಎಂದು ಹೇಳಿದರು.

ರಾಶಿಕಾ ಇಡೀ ಸಿನಿಮಾವನ್ನೇ ಆವರಿಸಿಕೊಂಡಿದ್ದಾರೆ

"ಪ್ರೀತಿ-ಪ್ರೇಮದ ಕಥೆಯ ಜತೆಗೆ ತಂದೆ-ಮಗಳ ನಡುವಿನ ಭಾವನಾತ್ಮಕ ಸಂಬಂಧವನ್ನು ತೆರೆದಿಡುವ ಕಥೆ ಚಿತ್ರದಲ್ಲಿದೆ. ಆ ಪ್ರೀತಿ ಮಗಳನ್ನು ಯಾವ ಮಟ್ಟಕ್ಕೆ ಕರೆದೊಯ್ಯಬಹುದು ಹಾಗೂ ತಂದೆಗೋಸ್ಕರ ಮಗಳು ಹೇಗೆ ತನ್ನ ಪ್ರಾಣವನ್ನೇ ಮುಡಿಪಾಗಿಡುತ್ತಾಳೆ ಎಂಬುದೇ ಈ ಚಿತ್ರದ ಕಥಾಹಂದರ. ಸ್ಕ್ರಿಪ್ಟ್ ಬರೆಯುವಾಗ ಅಂದುಕೊಂಡಿದ್ದನ್ನು ತೆರೆಮೇಲೆ ತರುವುದು ನಿಜಕ್ಕೂ ಸವಾಲಿನ ಕೆಲಸ. ನಾಯಕನ ಭಾಗವಹಿಸುವಿಕೆ (ಇನ್‌ವಾಲ್ವ್‌ಮೆಂಟ್) ತುಂಬಾ ಚೆನ್ನಾಗಿದೆ. ನಾಯಕಿ ರಾಶಿಕಾ ಇಡೀ ಸಿನಿಮಾವನ್ನೇ ಆವರಿಸಿಕೊಂಡಿದ್ದಾರೆ. ಇನ್ನು ರವಿಚಂದ್ರನ್ ಅವರು ತಂದೆಯ ಪಾತ್ರಕ್ಕೆ ನಾವಂದುಕೊಂಡಿದ್ದಕ್ಕಿಂತಲೂ ಹೆಚ್ಚು ಜೀವ ತುಂಬಿದ್ದಾರೆ. ಅವರೇ ನಮ್ಮ ಸಿನಿಮಾದ ದೊಡ್ಡ ಶಕ್ತಿ" ಎಂದರು ನಿರ್ದೇಶಕ ಸುಪ್ರೀತ್.

ನನಗೆ ಭಾವನಾತ್ಮಕ ಪಾತ್ರ ಸಿಕ್ಕಿದೆ

ನಾಯಕಿ ರಾಶಿಕಾ ಶೆಟ್ಟಿ, "ಟೀಸರ್ ನೋಡುವಾಗ ಮೊದಲ ದಿನದಿಂದ ನಮ್ಮ ಚಿತ್ರದ ಜರ್ನಿ ನೆನಪಾಯಿತು. ಒಂದು ಸಿನಿಮಾ ಮಾಡಿ ಅದನ್ನು ಪ್ರೇಕ್ಷಕರಿಗೆ ತಲುಪಿಸುವುದು ಕಷ್ಟದ ಕೆಲಸ. ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಅತೀವ; ಅಪ್ಪ ಅಂದರೆ ಏನು ಬೇಕಾದರೂ ಮಾಡಲು ಸಿದ್ಧವಿರುವ ಹುಡುಗಿ. 'ಮನದ ಕಡಲು' ನಂತರ ಎರಡನೇ ಚಿತ್ರದಲ್ಲೇ ಇಂಥ ಭಾವನಾತ್ಮಕ ಪಾತ್ರ ಸಿಕ್ಕಿದೆ" ಎಂದು ಹೇಳಿದರು.

ʻಹಕ್ಕುಗಳು ನನ್ನ ಬಳಿಯಿಲ್ಲ, ಅದರ ನೆಗೆಟಿವ್ಸ್‌ ಕೂಡ ಇಲ್ಲʼ; ʻಶಾಂತಿ ಕ್ರಾಂತಿʼ ರೀ-ರಿಲೀಸ್ ಬಗ್ಗೆ ಮೊದಲ ಬಾರಿ ಮಾತಾಡಿದ ರವಿಚಂದ್ರನ್!‌

ರಾಶಿಕಾ ಕಡೆಯಿಂದ ಚಿತ್ರಕ್ಕೆ ಉತ್ತಮ ಪ್ರಚಾರ ಸಿಕ್ಕಿದೆ

ನಿರ್ಮಾಪಕಿ ನಾಗಶ್ರೀ, "ಚಿತ್ರದ ಶೀರ್ಷಿಕೆ ರವಿಚಂದ್ರನ್ ಅವರಿಗೆ ಹೆಚ್ಚು ಹೊಂದುತ್ತದೆ. 'ಒಂದೇ ಮಾತಲಿ' ಹಾಡನ್ನು ಅವರೇ ಬಿಡುಗಡೆ ಮಾಡಿಕೊಟ್ಟಿದ್ದರಿಂದ ಎಲ್ಲ ಕಡೆ ತಲುಪಲು ಸಾಧ್ಯವಾಯಿತು. ರಾಶಿಕಾ ಅವರಿಂದಲೂ ಚಿತ್ರಕ್ಕೆ ಉತ್ತಮ ಪ್ರಚಾರ ಸಿಕ್ಕಿದೆ. ಮುಖ್ಯವಾಗಿ ಈ ಸಿನಿಮಾ ಮಾಡಲು ನಮ್ಮ ಕುಟುಂಬದವರ ಸಹಕಾರ ಅಪಾರವಾಗಿತ್ತು. ಅಕ್ಟೋಬರ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ" ಎಂದರು.

ರವಿಚಂದ್ರನ್ ಅವರಿಂದ ಚಿತ್ರಕ್ಕೆ ಕಳೆ ಬಂದಿದೆ

ನಾಯಕ ರಿಶ್ವಿನ್, "ನಮ್ಮ ಚಿತ್ರದ ಹಾಡೊಂದು ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿದೆ. ಇಡೀ ಚಿತ್ರತಂಡದ 4 ವರ್ಷಗಳ ಶ್ರಮ ಈ ಟೀಸರ್‌ನಲ್ಲಿದೆ. ಅಭಿನಯಕ್ಕೆ ತುಂಬಾ ಅವಕಾಶವಿರುವ ಪಾತ್ರ ನನ್ನದು. ಚಿತ್ರಕ್ಕೆ ವಿಶೇಷ ಕಳೆ ಬರುವುದೇ ರವಿಚಂದ್ರನ್ ಅವರ ಪಾತ್ರದಿಂದ. ತಂದೆ-ಮಗಳ ಭಾವನಾತ್ಮಕ ಸಂಬಂಧದ ಜತೆಗೆ ಯುವಜೋಡಿಯ ಪ್ರೇಮಕಥೆಯೂ ಚಿತ್ರದಲ್ಲಿದೆ" ಎಂದರು.

ಸೋನು ನಿಗಮ್, ಶ್ರೇಯಾ ಘೋಷಾಲ್, ಕುನಾಲ್ ಗಾಂಜಾವಾಲ, ವಿಜಯಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಪಲಕ್ ಮುಚ್ಚಲ್ ಈ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ನಟರಾದ ಅಚ್ಯುತ್ ಕುಮಾರ್, ವಿಜಯ್ ಸೂರ್ಯ, ಶಂಕರ್ ಅಶ್ವತ್ಥ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪಳನಿ ಡಿ. ಸೇನಾಪತಿ ಅವರ ಸಂಗೀತ ಹಾಗೂ ಕೆ. ಎಸ್. ಚಂದ್ರಶೇಖರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕಾಶ್ಮೀರ, ರಾಜಸ್ಥಾನ, ಅಂಡಮಾನ್ ಮಾತ್ರವಲ್ಲದೆ ಮಂಗಳೂರು, ಚಿಕ್ಕಮಗಳೂರು, ಮೈಸೂರು ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.