ʻಹಕ್ಕುಗಳು ನನ್ನ ಬಳಿಯಿಲ್ಲ, ಅದರ ನೆಗೆಟಿವ್ಸ್ ಕೂಡ ಇಲ್ಲʼ; ʻಶಾಂತಿ ಕ್ರಾಂತಿʼ ರೀ-ರಿಲೀಸ್ ಬಗ್ಗೆ ಮೊದಲ ಬಾರಿ ಮಾತಾಡಿದ ರವಿಚಂದ್ರನ್!
ʻಶಾಂತಿ ಕ್ರಾಂತಿʼ ಸಿನಿಮಾವನ್ನು ರೀ-ರಿಲೀಸ್ ಬಗ್ಗೆ ನಟ-ನಿರ್ದೇಶಕ ವಿ. ರವಿಚಂದ್ರನ್ ಸ್ಪಷ್ಟನೆ ನೀಡಿದ್ದಾರೆ. ಚಿತ್ರದ ಮೂಲ ನೆಗೆಟಿವ್ ನಾಶವಾಗಿದ್ದು, ಹಕ್ಕುಗಳು ಸಹೋದರ ಬಾಲಾಜಿ ಬಳಿಯಿವೆ ಎಂದಿದ್ದಾರೆ. ಹಳೆಯ ಪ್ರಿಂಟ್‌ಗಳ ಮೂಲಕ ಮರುರೂಪಿಸಲು ₹3 ಕೋಟಿ ವೆಚ್ಚವಾಗಲಿದ್ದು, ಮರುಸೃಷ್ಟಿ ಕಷ್ಟಸಾಧ್ಯ ಎಂದಿದ್ದಾರೆ.
-
ಕನ್ನಡ ಚಿತ್ರರಂಗದ ಮಹತ್ವಾಕಾಂಕ್ಷೆಯ ಚಿತ್ರಗಳಲ್ಲಿ ಒಂದಾದ ‘ಶಾಂತಿ ಕ್ರಾಂತಿ’ ಮರುಬಿಡುಗಡೆಯಾಗಲಿದೆ ಎಂಬ ಸುದ್ದಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಿಡುಗಡೆಯಾದ ಸಮಯದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ತೀವ್ರ ಸೋಲು ಕಂಡಿದ್ದರೂ, ಈಗ ಈ ಕ್ಲಾಸಿಕ್ ಚಿತ್ರಕ್ಕೆ ಅಪಾರ ಬೇಡಿಕೆ ವ್ಯಕ್ತವಾಗಿದೆ.
ಕೆಲ ದಿನಗಳ ಹಿಂದೆ ರವಿಚಂದ್ರನ್ ಅವರ ಸಹೋದರ ಬಾಲಾಜಿ ಹಾಗೂ ಪುತ್ರರಾದ ಮನೋರಂಜನ್ ಮತ್ತು ವಿಕ್ರಮ್ ಈ ಬಗ್ಗೆ ರೀ-ರಿಲೀಸ್ ಬಗ್ಗೆ ಮಾತನಾಡಿದ್ದರು. ಆದರೆ, ಇದೀಗ ಸ್ವತಃ ‘ಕ್ರೇಜಿ ಸ್ಟಾರ್’ ವಿ. ರವಿಚಂದ್ರನ್ ಅವರೇ ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದು, ಸಿನಿಮಾದ ರೀ-ರಿಲೀಸ್ ಸಾಧ್ಯತೆಯ ಬಗ್ಗೆ ಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ.
ನೆಗೆಟಿವ್ ನಾಶವಾಗಿದೆ, ಹಕ್ಕುಗಳು ತಮ್ಮನ ಬಳಿ ಇವೆ
ಆ ಚಿತ್ರದ ಮರುಬಿಡುಗಡೆ ಕುರಿತು ಮಾತನಾಡಿದ ರವಿಚಂದ್ರನ್, "ಸಿನಿಮಾದ ಮೂಲ ನೆಗೆಟಿವ್ ಇಂದು ಲಭ್ಯವಿಲ್ಲ, ಆ ಪ್ರಾಜೆಕ್ಟ್ ಈಗ ನನ್ನ ಬಳಿಯೂ ಇಲ್ಲ. ಅದರ ಎಲ್ಲಾ ಹಕ್ಕುಗಳು ನನ್ನ ತಮ್ಮ ಬಾಲಾಜಿ ಬಳಿ ಇದ್ದು, ಆತನೇ ಮಾಲೀಕ. ಹಾಗಾಗಿ ಮೊದಲು ಆತನ ಒಪ್ಪಿಗೆ ಮತ್ತು ಆಸಕ್ತಿ ಮುಖ್ಯ. ಅಂದಿನ ಕಾಲದಲ್ಲಿ 'ಕ್ಲೀವ್ ನೆಗೆಟಿವ್' ತಂತ್ರಜ್ಞಾನ ಬಳಸಲಾಗುತ್ತಿತ್ತು. 25 ವರ್ಷಗಳ ಅವಧಿಯಲ್ಲಿ 'ಪ್ರಸಾದ್ ಲ್ಯಾಬ್'ನಲ್ಲಿ ಸಂಗ್ರಹಿಸಲಾಗಿದ್ದ ಹಲವು ಚಿತ್ರಗಳ ನೆಗೆಟಿವ್‌ಗಳು ಹಾಳಾಗಿಹೋಗಿವೆ. ನಾವು ಎಚ್ಚೆತ್ತುಕೊಳ್ಳುವಷ್ಟರಲ್ಲಿ ನಮ್ಮ ಸಿನಿಮಾದ ನೆಗೆಟಿವ್ ಕೂಡ ನಾಶವಾಗಿತ್ತು" ಎಂದು ವಿವರಿಸಿದರು.
ರೀ-ರಿಲೀಸ್‌ಗೆ ಬೇಕು ₹3 ಕೋಟಿ!
ಇಂದಿನ ಆಧುನಿಕ ತಂತ್ರಜ್ಞಾನವನ್ನು ಬಳಸಿ ಸಿನಿಮಾವನ್ನು ಮರುರೂಪಿಸುವ ಸಾಧ್ಯತೆಗಳಿದ್ದರೂ, ಅದು ಸುಲಭದ ಹಾದಿಯಲ್ಲ ಎಂದಿದ್ದಾರೆ ರವಿಚಂದ್ರನ್. "ಯಾರ ಬಳಿಯಾದರೂ ಹಳೆಯ ಪ್ರಿಂಟ್‌ಗಳು, ಯು-ಮ್ಯಾಟಿಕ್ ಟೇಪ್ ಅಥವಾ ಎಚ್‌ಡಿ ಟೇಪ್‌ಗಳು ಉಳಿದಿದ್ದರೆ, ಅವುಗಳನ್ನು ತಂದು ಜೋಡಿಸಿ ಕೆಲಸ ಆರಂಭಿಸಬಹುದು. ಆದರೆ ಇದು ಸುದೀರ್ಘ ಪ್ರಕ್ರಿಯೆ. ಇದಕ್ಕೆ ಸುಮಾರು 3 ಕೋಟಿಗೂ ಅಧಿಕ ಹೆಚ್ಚುವರಿ ಹೂಡಿಕೆಯ ಅಗತ್ಯವಿದೆ. ಚಿತ್ರವನ್ನು ಮರುಬಿಡುಗಡೆ ಮಾಡಬೇಕೆಂದರೆ ಅದರ ಸಂಗೀತ ಮತ್ತು ಆರ್ಕೆಸ್ಟ್ರಾವನ್ನು ಮೊದಲಿನಿಂದಲೇ ಮರುಸೃಷ್ಟಿಸಬೇಕಾಗುತ್ತದೆ" ಎಂದು ಅವರು ತಿಳಿಸಿದರು.
ಅಂದು ಮದುವೆ ಮನೆಯಂತಿದ್ದ ಶೂಟಿಂಗ್
‘ಶಾಂತಿ-ಕ್ರಾಂತಿ’ ಚಿತ್ರದ ಅದ್ದೂರಿ ನಿರ್ಮಾಣದ ದಿನಗಳನ್ನು ಸ್ಮರಿಸಿದ ರವಿಚಂದ್ರನ್ ಅವರು, "ಆ ಕಾಲದಲ್ಲೇ ಭಾರತದಲ್ಲೇ ನಿರ್ಮಾಣವಾದ ಅತ್ಯಂತ ದೊಡ್ಡ ಸಿನಿಮಾ ಅದು. ಇಂದು 10 ಕೋಟಿ ಬಜೆಟ್ ಬಗ್ಗೆ ಮಾತನಾಡುತ್ತಾರೆ, ಆದರೆ ಅಂದಿನ ಕಾಲದಲ್ಲೇ ಈ ಚಿತ್ರದ ಪ್ರತಿದಿನದ ಶೂಟಿಂಗ್ ವೆಚ್ಚವೇ 6 ಲಕ್ಷ ರೂಪಾಯಿ ದಾಟುತ್ತಿತ್ತು. ಕೇವಲ ಒಂದು ಹಾಡನ್ನೇ 10 ದಿನಗಳ ಕಾಲ ಚಿತ್ರೀಕರಿಸಿದ್ದೆವು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರತಿದಿನ 5 ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಇರುತ್ತಿತ್ತು; ಇಡೀ ಚಿತ್ರೀಕರಣದ ವಾತಾವರಣ ಒಂದು ದೊಡ್ಡ ಮದುವೆ ಮನೆಯಂತಿತ್ತು" ಎಂದರು.
3 ಸಾವಿರ ಮಕ್ಕಳ ಶ್ರಮಕ್ಕೆ ಧನ್ಯವಾದ
ಚಿತ್ರದಲ್ಲಿ ಭಾಗವಹಿಸಿದ್ದ ಮಕ್ಕಳ ಕೊಡುಗೆಯನ್ನು ನೆನೆದ ರವಿಚಂದ್ರನ್, "ಸುಮಾರು 3 ಸಾವಿರಕ್ಕೂ ಹೆಚ್ಚು ಮಕ್ಕಳೊಂದಿಗೆ ಆ ಸಿನಿಮಾ ಮಾಡಲಾಗಿತ್ತು. ಮೈದಾನದ ನೂರಾರು ಮೂಲೆಗಳಲ್ಲಿ ಮಕ್ಕಳು ನಿಂತಿದ್ದರೂ, ಮೈಕ್‌ನಲ್ಲಿ ನೀಡಿದ ಒಂದೇ ಒಂದು ಸೂಚನೆಗೆ ತಕ್ಷಣ ಸ್ಪಂದಿಸುತ್ತಿದ್ದರು. ಅವರಲ್ಲಿ ಎಷ್ಟೋ ಜನರ ಮುಖಗಳು ಪರದೆಯ ಮೇಲೆ ಸರಿಯಾಗಿ ಕಾಣಿಸದೇ ಇದ್ದರೂ, ಅವರೆಲ್ಲರೂ ಸಿನಿಮಾಗಾಗಿ ಅಷ್ಟೇ ಶ್ರಮಿಸಿದ್ದರು. ಇಂದು ಆ ಮಕ್ಕಳಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದರು.