ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೈಸೂರು ದಸರಾಗೆ ಈ ಬಾರಿ ಮೆರುಗು ತುಂಬಲಿದ್ದಾರೆ 30ಕ್ಕೂ ಹೆಚ್ಚು ಸ್ಯಾಂಡಲ್‌ವುಡ್‌ ತಾರೆಯರು; ಏನಿದು ಬಿಗ್‌ ಪ್ಲ್ಯಾನ್?‌

Mysuru Dasara: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಜಂಬೂಸವಾರಿ ಮೆರವಣಿಗೆಗೆ ಈ ಬಾರಿ ಬೆಳ್ಳಿತೆರೆಯ ವೈಭವ ಜತೆಯಾಗಲಿದೆ. ಕನ್ನಡ ಚಿತ್ರರಂಗದ 30ಕ್ಕೂ ಅಧಿಕ ಮುಂಚೂಣಿ ತಾರೆಯರು ತೆರೆದ ಅಂಬಾರಿ ವಾಹನದಲ್ಲಿ ಸಾಗಲಿದ್ದಾರೆ. 93 ವರ್ಷಗಳ ಸಿನಿರಂಗದ ಇತಿಹಾಸ ಸಾರುವ ಅಪರೂಪದ ಸ್ತಬ್ಧಚಿತ್ರವೂ ಇವರೊಂದಿಗೆ ಸಾಗಲಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಜಂಬೂಸವಾರಿ ಮೆರವಣಿಗೆಗೆ ಈ ಬಾರಿ ಸ್ಯಾಂಡಲ್‌ವುಡ್ ತಾರೆಯರ ದಂಡು ವಿಶೇಷ ಮೆರುಗು ನೀಡಲಿದೆ. ಕನ್ನಡ ಚಿತ್ರರಂಗದ 30ಕ್ಕೂ ಹೆಚ್ಚು ಜನಪ್ರಿಯ ನಟ-ನಟಿಯರು ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಸಂಸ್ಕೃತಿ ಮತ್ತು ನಾಡಹಬ್ಬದ ವೈಭವದ ಜೊತೆಗೆ ಈ ಬಾರಿ ಬೆಳ್ಳಿತೆರೆಯ ತಾರಾ ಮೆರುಗು ಜತೆಯಾಗಲಿದೆ.

ರವಿಚಂದ್ರನ್‌ ಜೊತೆ ತಾರೆಯರು

ತಾರೆಯರ ಭಾಗವಹಿಸುವಿಕೆಗಾಗಿ ವಿಶೇಷವಾಗಿ ತೆರೆದ ‘ಅಂಬಾರಿ ಬಸ್’ ವ್ಯವಸ್ಥೆ ಮಾಡಲಾಗಿದ್ದು, ಕಲಾವಿದರು ಇದರಲ್ಲಿ ಕುಳಿತು ಸಾರ್ವಜನಿಕರತ್ತ ಕೈಬೀಸುತ್ತಾ ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಕನ್ನಡ ಚಿತ್ರರಂಗದ ದಿಗ್ಗಜರು ಹಾಗೂ ಮುಂಚೂಣಿ ನಟರಾದ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್, ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಹಿರಿಯ ನಟಿ ಉಮಾಶ್ರೀ, ನಟಿಯರಾದ ರಚಿತಾ ರಾಮ್, ಸಪ್ತಮಿ ಗೌಡ ಹಾಗೂ ರುಕ್ಮಿಣಿ ವಸಂತ್ ಸೇರಿದಂತೆ ಪ್ರಮುಖ ತಾರೆಯರಿಗೆ ಈಗಾಗಲೇ ಅಧಿಕೃತ ಆಹ್ವಾನ ನೀಡಲಾಗಿದೆ.

Ravichandran: ಇದ್ದಕ್ಕಿದ್ದಂತೆ ಸೋಶಿಯಲ್‌ ಮೀಡಿಯಾದಲ್ಲಿ ‌ʻಶಾಂತಿ ಕ್ರಾಂತಿʼ ಟ್ರೆಂಡಿಂಗ್; ಫ್ಲಾಪ್‌ ಆಗಿದ್ದ ಸಿನಿಮಾವನ್ನು ರೀ-ರಿಲೀಸ್‌ ಮಾಡುವಂತೆ ಫ್ಯಾನ್ಸ್‌ ಆಗ್ರಹ!

ಸ್ಯಾಂಡಲ್‌ವುಡ್‌ ಇತಿಹಾಸ ಸಾರುವ ಸ್ತಬ್ಧಚಿತ್ರ

ಇದೇ ವೇಳೆ ಕನ್ನಡ ಚಿತ್ರರಂಗದ 93 ವರ್ಷಗಳ ಭವ್ಯ ಇತಿಹಾಸವನ್ನು ಸಾರುವ ವಿಶೇಷ ಸ್ತಬ್ಧಚಿತ್ರವೊಂದು ಜಂಬೂಸವಾರಿಯ ಮೆರವಣಿಗೆಯಲ್ಲಿ ಸಾಗಲಿದೆ. ಕನ್ನಡ ಚಿತ್ರರಂಗದ ಮೇರು ಕಲಾವಿದರಾದ ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಅವರ ಕೊಡುಗೆಯನ್ನು ಸ್ಮರಿಸುವ ವಿಶಿಷ್ಟ ಸ್ತಬ್ಧಚಿತ್ರ ನಿರ್ಮಾಣವಾಗುತ್ತಿದ್ದು, ಇದು ನೋಡುಗರ ಕಣ್ಮನ ಸೆಳೆಯಲಿದೆ.

ಕೆ.ಆರ್. ವೃತ್ತದವರೆಗೆ ಮಾತ್ರ ಇರಲಿದ್ದಾರೆ ಕಲಾವಿದರು

ನೆಚ್ಚಿನ ನಟ-ನಟಿಯರನ್ನು ಕಣ್ತುಂಬಿಕೊಳ್ಳಲು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸುವ ಸಾಧ್ಯತೆಯಿರುವುದರಿಂದ, ಭದ್ರತೆ ಹಾಗೂ ಜನದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ತಾರೆಯರ ಮೆರವಣಿಗೆಯನ್ನು ಅರಮನೆ ಆವರಣದಿಂದ ಕೆ.ಆರ್. ವೃತ್ತದವರೆಗೆ ಮಾತ್ರ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೆ ಮಾತ್ರ ತೆರೆದ ಬಸ್‌ನಲ್ಲಿ ಸಾಗುವ ತಾರೆಯರು, ನಂತರ ಮೆರವಣಿಗೆಯಿಂದ ನಿರ್ಗಮಿಸಲಿದ್ದು, ಉಳಿದ ಸಾಂಪ್ರದಾಯಿಕ ಜಂಬೂಸವಾರಿ ಎಂದಿನಂತೆ ಬನ್ನಿಮಂಟಪದತ್ತ ಸಾಗಲಿದೆ.