ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ravichandran: ಇದ್ದಕ್ಕಿದ್ದಂತೆ ಸೋಶಿಯಲ್‌ ಮೀಡಿಯಾದಲ್ಲಿ ‌ʻಶಾಂತಿ ಕ್ರಾಂತಿʼ ಟ್ರೆಂಡಿಂಗ್; ಫ್ಲಾಪ್‌ ಆಗಿದ್ದ ಸಿನಿಮಾವನ್ನು ರೀ-ರಿಲೀಸ್‌ ಮಾಡುವಂತೆ ಫ್ಯಾನ್ಸ್‌ ಆಗ್ರಹ!

'ಕ್ರೇಜಿ ಸ್ಟಾರ್' ರವಿಚಂದ್ರನ್ ನಿರ್ದೇಶನದ, 35 ವರ್ಷಗಳ ಹಿಂದೆ 10 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ ಬಾಕ್ಸ್ ಆಫೀಸ್‌ನಲ್ಲಿ ಸೋತಿದ್ದ 'ಶಾಂತಿ ಕ್ರಾಂತಿ' ಸಿನಿಮಾ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿದೆ. 4 ಭಾಷೆಗಳಲ್ಲಿ ಮೂಡಿಬಂದಿದ್ದ ಈ ಚಿತ್ರವೇ ನೈಜ 'ಪ್ಯಾನ್ ಇಂಡಿಯಾ' ಸಿನಿಮಾ ಎಂದು ಬಣ್ಣಿಸುತ್ತಿರುವ ಅಭಿಮಾನಿಗಳು, ಚಿತ್ರವನ್ನು ಮತ್ತೆ ಚಿತ್ರಮಂದಿರಗಳಲ್ಲಿ ರೀ-ರಿಲೀಸ್ ಮಾಡಿ ಎಂದು ಆಗ್ರಹಪಡಿಸುತ್ತಿದ್ದಾರೆ.

'ಶಾಂತಿ ಕ್ರಾಂತಿ' ಚಿತ್ರ ರೀ-ರಿಲೀಸ್‌ ಮಾಡುವಂತೆ ಫ್ಯಾನ್ಸ್‌ ಡಿಮ್ಯಾಂಡ್!

-

Avinash GR
Avinash GR Aug 5, 2026 1:16 PM

ʻಕ್ರೇಜಿ ಸ್ಟಾರ್‌ʼ ರವಿಚಂದ್ರನ್‌ ಅವರ ಕ್ರೇಜಿ ಪ್ರಾಜೆಕ್ಟ್‌ ಎನಿಸಿಕೊಂಡಿದ್ದ ಸಿನಿಮಾ ʻಶಾಂತಿ ಕ್ರಾಂತಿʼ. ಈ ಸೆಪ್ಟೆಂಬರ್‌ 19ಕ್ಕೆ ಈ ಸಿನಿಮಾ ತೆರೆಕಂಡು ಭರ್ತಿ 35 ವರ್ಷಗಳಾಗಲಿವೆ. ಕನ್ನಡ ಚಿತ್ರರಂಗದ ಪಾಲಿಗೆ ಇದು ನಿಜವಾದ ಪ್ಯಾನ್‌ ಇಂಡಿಯಾ ಸಿನಿಮಾ. ಒಂದು ಭಾಷೆಯಲ್ಲಿ ಸಿನಿಮಾ ಮಾಡಿ ಅದನ್ನು ಮಿಕ್ಕ ಭಾಷೆಗಳಿಗೆ ಡಬ್‌ ಮಾಡಿ, ಪ್ಯಾನ್‌ ಇಂಡಿಯಾ ಸಿನಿಮಾ ಎಂದು ಈಗ ರಿಲೀಸ್‌ ಮಾಡಲಾಗುತ್ತದೆ. ಆದರೆ ಅಂದು, 4 ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಿಸಿ, ಅದಕ್ಕೆ ತಕ್ಕಂತೆ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದ ಸಿನಿಮಾ ʻಶಾಂತಿ ಕ್ರಾಂತಿʼ. ಇದೀಗ ಈ ಸಿನಿಮಾ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ಆಗಿದೆ.

ರೀ-ರಿಲೀಸ್‌ಗೆ ಆಗ್ರಹ

ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ʻಶಾಂತಿ ಕ್ರಾಂತಿʼ ಸಿನಿಮಾದ್ದೇ ಸದ್ದು. ʻಈ ಚಿತ್ರವನ್ನು ಪುನಃ ರಿಲೀಸ್‌ ಮಾಡಿ, ನಾವು ಗೆಲ್ಲಿಸಿಕೊಡುತ್ತೇವೆʼ ಎಂದು ಸಿನಿಪ್ರಿಯರು ಹೇಳುತ್ತಿದ್ದಾರೆ. ಆ ಚಿತ್ರದ ವಿಶೇಷತೆಗಳನ್ನು ಪಟ್ಟಿ ಮಾಡಿ, "ಇದು ಕಣ್ರೀ ನಿಜವಾದ ಪ್ಯಾನ್‌ ಇಂಡಿಯಾ ಸಿನಿಮಾ" ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. 35 ವರ್ಷಗಳ ಹಿಂದೆಯೇ ರವಿಚಂದ್ರನ್‌ ತೋರಿದ್ದ ನೈಪುಣ್ಯತೆ ಹಾಗೂ ಕ್ರಿಯಾಶೀಲತೆಯನ್ನು ಕಂಡು ವಾವ್‌ ಎನ್ನುತ್ತಿದ್ದಾರೆ. ಆದರೆ, ಇಂದು ಇಷ್ಟೆಲ್ಲಾ ಹೊಗಳಿಕೆಗೆ ಪಾತ್ರವಾಗುತ್ತಿರುವ ಈ ಸಿನಿಮಾ ಅಂದು ಹೀನಾಯವಾಗಿ ಸೋತಿತ್ತು!

10 ಕೋಟಿ ರೂ. ಬಜೆಟ್‌ನ ಸಿನಿಮಾ

ಇದೊಂದು ಮಕ್ಕಳು ಪ್ರಧಾನವಾಗಿದ್ದ ಸಿನಿಮಾವಾಗಿದ್ದರಿಂದ, 1988ರ ನವೆಂಬರ್ 14ರ ಮಕ್ಕಳ ದಿನಾಚರಣೆಯಂದೇ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಾಲನೆ ನೀಡಲಾಗಿತ್ತು. ಈ ಸಿನಿಮಾದ ಮುಹೂರ್ತಕ್ಕೆ ಬೇರೆ ಬೇರೆ ರಾಜ್ಯಗಳ ಪತ್ರಕರ್ತರು ಬೆಂಗಳೂರಿಗೆ ಬಂದಿದ್ದರು. ಮುಹೂರ್ತಕ್ಕೂ ಮುನ್ನ ಆ ಪತ್ರಕರ್ತರಿಗೆಲ್ಲ ರವಿಚಂದ್ರನ್ ಅವರ ಸೂಪರ್ ಹಿಟ್ ಚಿತ್ರಗಳಾದ 'ಪ್ರೇಮಲೋಕ' ಮತ್ತು 'ರಣಧೀರ' ಸಿನಿಮಾಗಳನ್ನು ಪ್ರದರ್ಶಿಸಲಾಗಿತ್ತು.

ರವಿಚಂದ್ರನ್ ಅವರು 'ಶಾಂತಿ ಕ್ರಾಂತಿ' ಚಿತ್ರವನ್ನು ತಮ್ಮ ವೃತ್ತಿಜೀವನದ ಅತ್ಯಂತ ದುಬಾರಿ ಪ್ರಾಜೆಕ್ಟ್ ಆಗಿ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನಿರ್ದೇಶಿಸಲು ನಿರ್ಧರಿಸಿದ್ದರು. ನಾಯಕ ಸುಭಾಷ್‌ ಪಾತ್ರವನ್ನು ತಮಿಳು ಹಾಗೂ ಹಿಂದಿಯಲ್ಲಿ ರಜನಿಕಾಂತ್, ತೆಲುಗಿನಲ್ಲಿ ನಾಗಾರ್ಜುನ ಮತ್ತು ಕನ್ನಡದಲ್ಲಿ ರವಿಚಂದ್ರನ್ ನಿಭಾಯಿಸಿದರು. ಕನ್ನಡದಲ್ಲಿ ರಮೇಶ್‌ ಅರವಿಂದ್ ನಿಭಾಯಿಸಿದ್ದ ಪಾತ್ರವನ್ನು ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ರವಿಚಂದ್ರನ್‌ ನಿರ್ವಹಿಸಿದ್ದರು. ಎಲ್ಲಾ ಭಾಷೆಯಲ್ಲೂ ʻಶಾಂತಿ ಕ್ರಾಂತಿʼ ಎಂದೇ ಶೀರ್ಷಿಕೆ ಇಡಲಾಗಿತ್ತು; ಆದರೆ ತಮಿಳು ಆವೃತ್ತಿಗೆ ಮಾತ್ರ 'ನಾಟ್ಟುಕ್ಕು ಒರು ನಲ್ಲವನ್' ಎಂದು ಹೆಸರಿಡಲಾಗಿತ್ತು.‌

Crazy Star Ravichandran: ರವಿಚಂದ್ರನ್ ವಿರುದ್ಧ ಅತ್ಯಾಚಾರದ ಆರೋಪ; ಕಣ್ಣೀರಿಟ್ಟು ಕ್ಷಮೆ ಕೇಳಿದ ನಟಿ ಬಿಂದಿಯಾ!

ಈಗ ಅದು 115+ ಕೋಟಿ ರೂ.ಗೆ ಸಮ!

35 ವರ್ಷಗಳ ಹಿಂದೆಯೇ ಈ ಸಿನಿಮಾಗೆ 10 ಕೋಟಿ ರೂ. ವಿನಿಯೋಗಿಸಲಾಗಿತ್ತು. ಈಗಿನ ಮೌಲ್ಯಕ್ಕೆ ಹೋಲಿಸಿದರೆ ಆ ಮೊತ್ತ ಅಂದಾಜು 115 ಕೋಟಿ ರೂ.ಗಳಿಗೆ ಸಮ! ಅಲ್ಲಿಯವರೆಗೂ ಕನ್ನಡದಲ್ಲಿ ಇಷ್ಟೊಂದು ದುಬಾರಿ ಸಿನಿಮಾ ತೆರೆಗೆ ಬಂದೇ ಇರಲಿಲ್ಲ. ಅಂದು 10 ದಿನಗಳ ಚಿತ್ರೀಕರಣದ ನಂತರ ಕಥೆಯ ಗತಿಯ ಬಗ್ಗೆ ಸಂಶಯ ಮೂಡಿ, ರವಿಚಂದ್ರನ್ ʻಶಾಂತಿ ಕ್ರಾಂತಿʼ ಚಿತ್ರವನ್ನು ನಿಲ್ಲಿಸಲು ಬಯಸಿದ್ದರು. ಆದರೆ ತಂದೆ ವೀರಾಸ್ವಾಮಿ ಅವರು, "ರಜನಿಕಾಂತ್ ಮತ್ತು ನಾಗಾರ್ಜುನ ನಿನ್ನನ್ನು ನಂಬಿ ಕಾಲ್‌ಶೀಟ್‌ ನೀಡಿದ್ದಾರೆ, ಚಿತ್ರ ನಿಲ್ಲಿಸಬೇಡ" ಎಂದು ತಿಳಿಸಿದಾಗ ಮತ್ತು ಈಶ್ವರಿ ಪ್ರೊಡಕ್ಷನ್ಸ್ ಗೌರವಕ್ಕಾಗಿ ಈ ಚಿತ್ರವನ್ನು ಪೂರ್ಣಗೊಳಿಸಲು ರವಿಚಂದ್ರನ್‌ ನಿರ್ಧರಿಸಿದರು.

ರವಿಚಂದ್ರನ್‌, ಕಾಶೀನಾಥ್‌ ಸೇರಿ ಸ್ಯಾಂಡಲ್‌ವುಡ್‌ ಹೀರೋಗಳಿಗೆ ಭರ್ಜರಿ ಗೆಲುವು ತಂದುಕೊಟ್ಟಿದ್ದ ಕೆ. ಭಾಗ್ಯರಾಜ್‌ ಸಿನಿಮಾಗಳು; ಇಲ್ಲಿದೆ ರಿಮೇಕ್‌ ಚಿತ್ರಗಳ ಲಿಸ್ಟ್!‌

ಸಾಕಷ್ಟು ಏಳುಬೀಳುಗಳ ಮಧ್ಯೆಯೇ 1991ರ ಹೊತ್ತಿಗೆ ಈ ಸಿನಿಮಾದ ಶೂಟಿಂಗ್‌ ಅನ್ನು ರವಿಚಂದ್ರನ್‌ ಮುಗಿಸಿದ್ದರು. ಇದರ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕಾಗಿ 50 ಎಕರೆ ಜಮೀನಿನಲ್ಲಿ ಸೆಟ್‌ ಹಾಕಲಾಗಿತ್ತು. ತೆಲುಗು ಮತ್ತು ಕನ್ನಡ ಆವೃತ್ತಿಗಳು 1991ರ ಸೆಪ್ಟೆಂಬರ್ 19 ರಂದು ಬಿಡುಗಡೆಯಾದರೆ, ತಮಿಳು ಮತ್ತು ಹಿಂದಿ ಆವೃತ್ತಿಗಳು 1991ರ ಅಕ್ಟೋಬರ್ 2ರಂದು ಬಿಡುಗಡೆಯಾದವು. ಇಷ್ಟೆಲ್ಲಾ ವಿಶೇಷತೆಗಳಿದ್ದರೂ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸೋಲನ್ನು ಅನುಭವಿಸಿತು.

ಮೂಲ ಕನ್ನಡ ಆವೃತ್ತಿಯಲ್ಲಿ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ತೆಲುಗು ಆವೃತ್ತಿಯಲ್ಲಿ ನಾಗಾರ್ಜುನ ಮತ್ತು ತಮಿಳು ಹಾಗೂ ಹಿಂದಿಯಲ್ಲಿ ರಜನಿಕಾಂತ್ ನಟಿಸಿದ್ದರು. ಜೂಹಿ ಚಾವ್ಲಾ, ಖುಷ್ಬು ಮತ್ತು ಅನಂತ್ ನಾಗ್ ಈ ನಾಲ್ಕೂ ಆವೃತ್ತಿಗಳಲ್ಲಿ ಅಭಿನಯಿಸಿದ್ದರು.

ಮೋಡಿ ಮಾಡಿದ್ದ ಹಂಸಲೇಖ ಹಾಡುಗಳು

ʻಶಾಂತಿ ಕ್ರಾಂತಿʼ ಸಿನಿಮಾದ ಹಾಡುಗಳು ಇಂದಿಗೂ ಕೇಳುಗರ ಫೇವರೇಟ್‌. 'ಹುಟ್ಟೋದ್ಯಾಕೆ ಸಾಯೋದ್ಯಾಕೆ', 'ಮಧ್ಯರಾತ್ರಿಲಿ ಹೈವೇ ರಸ್ತೆಲಿ', 'ಗಾಳಿಯೋ ಗಾಳಿಯೋ' ಮುಂತಾದ ಹಾಡುಗಳು ದೊಡ್ಡ ಹಿಟ್‌ ಆಗಿದ್ದವು. ಎಸ್‌. ಪಿ. ಬಾಲಸುಬ್ರಹ್ಮಣ್ಯಂ, ಎಸ್‌. ಜಾನಕಿ, ಮನು ಹಾಗೂ ಕೆ. ಎಸ್‌. ಚಿತ್ರಾ ಹಾಡಿದ್ದ ಈ ಹಾಡುಗಳಿಗೆ ಹಂಸಲೇಖ ಅವರು ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದರು.

ʻಶಾಂತಿ ಕ್ರಾಂತಿʼ ಬಗ್ಗೆ ಅಭಿಮಾನಿಗಳ ಟ್ವೀಟ್‌



ಬಾಕ್ಸ್‌ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡರೂ, 'ಕಲ್ಟ್‌ ಕ್ಲಾಸಿಕ್‌' ಸ್ಥಾನಮಾನ ಹೊಂದಿರುವ ʻಶಾಂತಿ ಕ್ರಾಂತಿʼ ಸಿನಿಮಾಗೆ ಈಗ ಕ್ರೇಜ್‌ ಬಂದಿರುವುದು ಅಚ್ಚರಿ ಮೂಡಿಸಿದೆ. ಅಭಿಮಾನಿಗಳ ಆಸೆಯಂತೆ ಈ ಸಿನಿಮಾ ಮತ್ತೆ ತೆರೆಗೆ ಬರಲಿದೆಯಾ? ಕಾದು ನೋಡಬೇಕು.