ʻಕ್ರೇಜಿ ಸ್ಟಾರ್ʼ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅವರು ಸದ್ದಿಲ್ಲದೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯ ಅವರೀಗ ಒಂದು ಸಿನಿಮಾದಲ್ಲಿ ನೆಗೆಟಿವ್ ಶೇಡ್‌ನಲ್ಲೂ ಬಣ್ಣ ಹಚ್ಚಿದ್ದಾರೆ. ಆ ಸಿನಿಮಾಗೆ ʻಕೌಂತೇಯʼ ಎಂದು ಹೆಸರಿಡಲಾಗಿದೆ. ಈ ಚಿತ್ರವನ್ನು ಚಂದ್ರಹಾಸ ಎಂಬುವವರು ನಿರ್ದೇಶಿಸಿದ್ದು, ಪಾತ್ರವರ್ಗದಿಂದಲೇ ಈ ಚಿತ್ರ ಗಮನಸೆಳೆಯುತ್ತಿದೆ.
ಮೈಸೂರು ಸುತ್ತಮುತ್ತ ಶೂಟಿಂಗ್
ಕೌಂತೇಯ ಚಿತ್ರಕ್ಕೆ ಈಚೆಗಷ್ಟೇ ಮುಹೂರ್ತ ನಡೆದಿದ್ದು, ಆಗಲೇ ಶೇ.70ರಷ್ಟು ಶೂಟಿಂಗ್ ಮೈಸೂರು ಸುತ್ತಮುತ್ತ ನಡೆದಿದೆ. ಮನೋರಂಜನ್ ಜೊತೆಗೆ ಅಚ್ಯುತ್ ಕುಮಾರ್ ಕೂಡ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾದಲ್ಲಿ ಮರ್ಡರ್ ಮಿಸ್ಟ್ರಿ ಕಥಾಹಂದರವಿದೆ. ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಅವರು ಪಾಸಿಟಿವ್ ರೋಲ್‌ನಲ್ಲಿ ಕಾಣಿಸಿಕೊಂಡರೇ, ಮೊದಲ ಬಾರಿಗೆ ಮನೋರಂಜನ್ ನೆಗೆಟಿವ್ ರೋಲ್‌ಗೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಅವರ ಗೆಟಪ್ ಭಿನ್ನವಾಗಿದ್ದು, ಯಾಕೆ ನೆಗೆಟಿವ್ ಪಾತ್ರ ನಿಭಾಯಿಸುತ್ತಿದ್ದಾರೆ ಎಂಬುದಕ್ಕೂ ಸದ್ಯ ಚಿತ್ರತಂಡ ಉತ್ತರ ನೀಡಿಲ್ಲ.
Ravichandran: ನನ್ನ ಮನೆ ಮೇಲೆ ಕಲ್ಲು ಬಿಸಾಕಿದ್ರು, ಪ್ರಿಂಟ್ ಸುಟ್ಟಾಕಿದ್ರು.. ರವಿಚಂದ್ರನ್ ಹೀಗಂದಿದ್ದೇಕೆ?
ಸಿನಿಮಾದಲ್ಲಿದ್ದಾರೆ ಹಲವು ನಟಿಯರು
ಈ ಚಿತ್ರದಲ್ಲಿ ಮನೋರಂಜನ್‌ಗೆ ಜೋಡಿಯಾಗಿ ಅನನ್ಯ ರಾಜೇಶ್ ನಟಿಸುತ್ತಿದ್ದಾರೆ. ಇದು ಅವರಿಗೆ ಮೊದಲ ಸಿನಿಮಾ. ಆದರೆ ಚಿತ್ರದ ನಾಯಕಿಯಾಗಿ ಶರಣ್ಯ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಅವರಿಗಿಲ್ಲಿ ಅಚ್ಯುತ್ ಕುಮಾರ್ ಮಗಳ ಪಾತ್ರ ಸಿಕ್ಕಿದೆ. ಪೊಲೀಸ್ ಅಧಿಕಾರಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದು, ಇದೇ ಮೊದಲ ಬಾರಿಗೆ ಅವರು ಖಾಕಿ ಧರಿಸಿ, ಖಡಕ್ ಆಗಿ ಮಿಂಚಿದ್ದಾರೆ.
ನಿರ್ದೇಶಕರು ಹೇಳಿದ್ದೇನು?
"ಕೌಂತೇಯ ಅಂದರೆ ಕುಂತಿ ಪುತ್ರ ಎಂಬ ಅರ್ಥ ಇದೆ. ಈ ಚಿತ್ರದಲ್ಲಿ ಕೌಂತೇಯ ಯಾರು ಎಂಬುದು ಒಂದೆಡೆಯಾದರೆ, ಮತ್ತೊಂದೆಡೆ ಮರ್ಡರ್ ಮಿಸ್ಟ್ರಿ ಕಥೆಯನ್ನು ಕೌತುಕವಾಗಿ ತೆಗೆದುಕೊಂಡು ಹೋಗಿದ್ದೇವೆ. ಇದು ಮಾಮೂಲಿ ರೀತಿಯ ಕಥೆ ಅಲ್ಲ. ನಿರೂಪಣೆಯಲ್ಲೂ ವಿಭಿನ್ನತೆ ಕಾಪಾಡಿಕೊಂಡಿದ್ದೇವೆ. ಅವೆಲ್ಲವನ್ನೂ ಸದ್ಯದಲ್ಲೇ ಮೊದಲ ಝಲಕ್ ಮೂಲಕ ಹರಿಬಿಡುವ ಆಲೋಚನೆ ಇದೆ. ತಾರಾಗಣದಲ್ಲೂ ವಿಶೇಷತೆ ಇದೆ. ಊಹೆಗೆ ನಿಲುಕದಂತೆ ಸ್ಕ್ರೀನ್‌ಪ್ಲೇ ಮಾಡಿರುವುದು ಚಿತ್ರದ ಪ್ಲಸ್ ಪಾಯಿಂಟ್. ಅಚ್ಯುತ್ ಕುಮಾರ್ ತಂದೆಯ ಪಾತ್ರವಾದರೂ ಬೇರೆ ರೀತಿ ಇದೆ. ರವಿಚಂದ್ರನ್ ಪುತ್ರ ಮನೋರಂಜನ್ ಫಸ್ಟ್ ಟೈಮ್ ನೆಗೆಟಿವ್ ಶೇಡ್‌ನಲ್ಲಿ ನಟಿಸುತ್ತಿದ್ದಾರೆ" ಎಂದು ನಿರ್ದೇಶಕ ಬಿ ಕೆ ಚಂದ್ರಹಾಸ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಶ್ರೀ ಮಾಂಕಾಳಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಸಿನಿಮಾಕ್ಕೆ ಸುರೇಶ್ ಕುಮಾರ್ ಬಂಡವಾಳ ಹೂಡಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ ಬಿ ಕೆ ಚಂದ್ರಹಾಸ. ಇವರ ಜತೆ ಚಿತ್ರಕಥೆಗೆ ಸಾಥ್ ನೀಡುವುದರ ಜತೆಗೆ ಸಂಭಾಷಣೆಗೆ ಪೆನ್ನು ಹಿಡಿದಿದ್ದಾರೆ ಹರಿ. ಛಾಯಾಗ್ರಹಣವನ್ನು ಪಿ ಎಲ್ ರವಿ ಮಾಡುತ್ತಿದ್ದಾರೆ.