‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರ ‘ಶಾಂತಿ ಕ್ರಾಂತಿ’ ಸಿನಿಮಾವನ್ನು ಮರುಬಿಡುಗಡೆ ಮಾಡಬೇಕು ಎಂಬ ಅಭಿಯಾನ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಅಸಲಿ ಪ್ಯಾನ್ ಇಂಡಿಯಾ ಸಿನಿಮಾ ಎಂದರೆ ಏನು ಎಂಬುದನ್ನು ತೋರಿಸಿಕೊಟ್ಟಿದ್ದೇ ‘ಶಾಂತಿ ಕ್ರಾಂತಿ’. ಅಂದು ಫ್ಲಾಪ್ ಆದ ಸಿನಿಮಾವನ್ನು ಈಗ ರಿಲೀಸ್ ಮಾಡಿ, ನಾವು ಗೆಲ್ಲಿಸೋಣ ಎಂಬ ಮಾತುಗಳು ಕೇಳಿಬಂದಿವೆ. ಈ ಸದ್ದು ನಟ ರವಿಚಂದ್ರನ್ ಮನೆಯನ್ನು ತಲುಪಿದ್ದು, ಅದಕ್ಕೆ ಅವರ ಕಡೆಯಿಂದ ರಿಯಾಕ್ಷನ್ ಕೂಡ ಸಿಕ್ಕಿದೆ.
ರೀ-ರಿಲೀಸ್ ಮಾಡೋಕೆ ರೆಡಿ
‘ಶಾಂತಿ ಕ್ರಾಂತಿ’ ಸಿನಿಮಾವನ್ನು ಮರುಬಿಡುಗಡೆ ಮಾಡುವುದರ ಬಗ್ಗೆ ರವಿಚಂದ್ರನ್ ಮನೆಯಲ್ಲಿ ಚರ್ಚೆಯಾಗಿದೆ. ಆ ಬಗ್ಗೆ ರವಿಚಂದ್ರನ್ ಅವರ ಪುತ್ರ ವಿಕ್ರಮ್ ಪ್ರತಿಕ್ರಿಯಿಸಿದ್ದಾರೆ. "ಶಾಂತಿ ಕ್ರಾಂತಿ ಸಿನಿಮಾ ರೀ-ರಿಲೀಸ್ ಆಗಬೇಕು ಎಂದು ಡ್ಯಾಡಿಯನ್ನು (ರವಿಚಂದ್ರನ್) ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಜನ ಟ್ಯಾಗ್ ಮಾಡಿ, ಕೇಳುತ್ತಿದ್ದಾರೆ. ಗುಡ್‌ನ್ಯೂಸ್ ಏನೆಂದರೆ, ನಾನು ಮತ್ತು ಅಪ್ಪ ಈ ಬಗ್ಗೆ ಚರ್ಚೆ ಮಾಡಿದ್ದೇವೆ. ರೀ-ರಿಲೀಸ್ ಕುರಿತಂತೆ ಮಾತುಕತೆ ನಡೆಯುತ್ತಿದೆ" ಎಂದು ಹೇಳಿದ್ದಾರೆ.
ಸಿನಿಮಾ & ಜನರ ಪ್ರೀತಿಯೇ ನಮ್ಮ ಆಸ್ತಿ
ಅಂದಹಾಗೆ, ರವಿಚಂದ್ರನ್ ಅವರ ಹಿರಿಮಗ ಮನೋರಂಜನ್‌ಗೂ ‘ಶಾಂತಿ ಕ್ರಾಂತಿ’ ಸಿನಿಮಾವನ್ನು ರೀ-ರಿಲೀಸ್ ಮಾಡಬೇಕು ಎಂಬ ಆಸೆ ಇತ್ತಂತೆ. "ನನಗಿಂತ ನಮ್ಮ ಅಣ್ಣ ಮನೋರಂಜನ್‌ಗೆ ಈ ಸಿನಿಮಾವನ್ನು ರೀ-ರಿಲೀಸ್ ಮಾಡಬೇಕು ಎಂದು ತುಂಬಾ ಆಸೆ ಇದೆ. ಸಿನಿಮಾ ಮತ್ತು ಜನರ ಪ್ರೀತಿಯನ್ನೇ ನಾವು ನಮ್ಮ ಆಸ್ತಿ ಎಂದು ಹೇಳುತ್ತೇವೆ. 'ಇಷ್ಟೊಂದು ಜನರು ಆಸೆ ಪಡುತ್ತಿದ್ದಾರೆ, ನೋಡು ಏನು ಮಾಡ್ತೀಯಾ' ಎಂದು ಅಪ್ಪ ಕೂಡ ಅಂದರು. ನನಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆ ಬಗೆಗಿನ ಕೆಲಸಗಳು ಈಗಷ್ಟೇ ಶುರುವಾಗಿವೆ" ಎನ್ನುತ್ತಾರೆ ವಿಕ್ರಮ್ ರವಿಚಂದ್ರನ್.
ಬಜೆಟ್ 10 ಕೋಟಿ ಅಲ್ಲ!
"ತುಂಬಾ ಜನ ʻಶಾಂತಿ ಕ್ರಾಂತಿʼ ಸಿನಿಮಾಗೆ 10 ಕೋಟಿ ಬಜೆಟ್ ಅಂತಿದ್ದಾರೆ. ಆದರೆ, ಆ ಸಿನಿಮಾದ ಬಜೆಟ್ ಅದಕ್ಕಿಂತ ಜಾಸ್ತಿ ಇದೆ. ನನಗೆ ರವಿಚಂದ್ರನ್ ಅವರ ಮಗನಾಗಿರುವುದಕ್ಕೆ ಹೆಮ್ಮೆ ಇದೆ. ಅವರ ಮಗ ಅನ್ನುವುದಕ್ಕಿಂತ ಹೆಚ್ಚಾಗಿ ನಾನು ಅವರಿಗೆ ಬಿಗ್ ಫ್ಯಾನ್. ಜನರ ಒತ್ತಾಯದ ಮೇರೆಗೆ, ಎಲ್ಲವೂ ಸರಿಯಾದರೆ 'ಶಾಂತಿ ಕ್ರಾಂತಿ' ರೀ-ರಿಲೀಸ್ ಆಗುತ್ತದೆ" ಎಂದು ವಿಕ್ರಮ್ ಭರವಸೆ ನೀಡಿದ್ದಾರೆ.
Shanti Kranti: ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಶಾಂತಿ ಕ್ರಾಂತಿ' ಬಾಕ್ಸ್ ಆಫೀಸ್ ಅಲ್ಲಿ ಸೋತಿದ್ದೇಕೆ..?
ಮರುಬಿಡುಗಡೆಗೆ ಇರುವ ತೊಡಕುಗಳೇನು?
‘ಶಾಂತಿ ಕ್ರಾಂತಿ’ ಸಿನಿಮಾವನ್ನು ಮರುಬಿಡುಗಡೆ ಮಾಡುವುದು ಅಷ್ಟು ಸುಲಭದ ವಿಚಾರವಲ್ಲ. ಮೂಲಗಳ ಪ್ರಕಾರ, ಎನ್. ವೀರಾಸ್ವಾಮಿ ಅವರ ನಿಧನದ ನಂತರ ಈಶ್ವರಿ ಸಂಸ್ಥೆಯಡಿಯಲ್ಲಿ ಅವರು ನಿರ್ಮಿಸಿದ್ದ ಸಿನಿಮಾಗಳ ಎಲ್ಲಾ ರೀತಿಯ ಹಕ್ಕುಗಳು ಅಧಿಕೃತವಾಗಿ ಅವರ 2ನೇ ಪುತ್ರ ವಿ. ಬಾಲಾಜಿ ಅವರ ಹೆಸರಿನಲ್ಲಿ ಇವೆಯಂತೆ. 'ಕುಲಗೌರವ', 'ನಾಗರಹಾವು', 'ಚಕ್ರವ್ಯೂಹ', 'ಪ್ರೇಮಲೋಕ', 'ರಣಧೀರ', 'ಶಾಂತಿ ಕ್ರಾಂತಿ', 'ರಾಮಾಚಾರಿ' ಸೇರಿದಂತೆ 'ಚಿನ್ನ' ಚಿತ್ರದವರೆಗಿನ ಎಲ್ಲಾ ಸಿನಿಮಾಗಳ ಸಂಪೂರ್ಣ ರೈಟ್ಸ್ ಕಾನೂನುಬದ್ಧವಾಗಿ ಬಾಲಾಜಿಗೆ ಸೇರಿವೆ ಎಂದು ಹೇಳಲಾಗುತ್ತಿದೆ. ಈಗ ಶಾಂತಿ ಕ್ರಾಂತಿಯನ್ನು ರೀ-ರಿಲೀಸ್ ಮಾಡಬೇಕು ಎಂದರೆ ಬಾಲಾಜಿ ಮನಸ್ಸು ಮಾಡಬೇಕು ಎನ್ನಲಾಗುತ್ತಿದೆ.
ಮತ್ತೊಂದು ತೊಡಕು ಏನೆಂದರೆ, ‘ಶಾಂತಿ ಕ್ರಾಂತಿ’ ಸಿನಿಮಾದ ಮದರ್ ಪ್ರಿಂಟ್ ಚೆನ್ನೈನ ಪ್ರಸಾದ್ ಲ್ಯಾಬ್‌ನಲ್ಲಿ ನಡೆದ ಬೆಂಕಿ ಅನಾಹುತದಲ್ಲಿ ಅಗ್ನಿಗೆ ಆಹುತಿಯಾಗಿದೆ ಎಂಬ ಮಾಹಿತಿ ಇದೆ. ‘ಶಾಂತಿ ಕ್ರಾಂತಿ’ ಸಿನಿಮಾದ ಮೂಲ ಪ್ರಿಂಟ್ ಇಲ್ಲವೇ ಇಲ್ಲ! ಸದ್ಯ ಟಿವಿ ರೈಟ್ಸ್‌ಗೆಂದು ಕೊಟ್ಟಿರುವ 1080p HD ಗುಣಮಟ್ಟವಷ್ಟೇ ಉಳಿದಿರುವುದು. ಅದನ್ನು ಪುನಃ ಹೈ ಕ್ವಾಲಿಟಿಯಲ್ಲಿ ರೆಡಿ ಮಾಡಬೇಕು ಎಂದರೆ ಅದು ಸಣ್ಣ ಕೆಲಸವಲ್ಲ. ಅಂದು ಅತ್ಯುತ್ತಮ ತಾಂತ್ರಿಕತೆಯಲ್ಲಿ ಸಿನಿಮಾ ಮಾಡಿದ್ದ ರವಿಚಂದ್ರನ್, ಈಗ ಕಳಪೆ ಗುಣಮಟ್ಟದಲ್ಲಿ ಸಿನಿಮಾವನ್ನು ರಿಲೀಸ್ ಮಾಡಲು ಸಾಧ್ಯವೇ? ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಸಿಗಬೇಕಿದೆ.