ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಮಾಫಿ ಸಾಕ್ಷಿ ವಿರೋಧಿಸುವ ಅಧಿಕಾರ ಆರೋಪಿಗೆ ಇಲ್ಲ...ʼ; ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಭಾರಿ ಹಿನ್ನಡೆ!

Actor Darshan Case: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ಪ್ರದೂಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವುದನ್ನು ವಿರೋಧಿಸಿ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಆರೋಪಿಗಳಿಗೆ ಇಂತಹ ಪ್ರಕ್ರಿಯೆಯನ್ನು ಪ್ರಶ್ನಿಸುವ ಕಾನೂನಾತ್ಮಕ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠವು, ಕೇವಲ ಕ್ರಾಸ್ ಎಕ್ಸಾಮಿನೇಷನ್ ನಡೆಸಲು ಮಾತ್ರ ಅವಕಾಶವಿದೆ ಎಂದಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಪ್ರಕರಣದ ಆರೋಪಿ ಪ್ರದೂಷ್‌ನನ್ನು ಅಪ್ರೂವರ್ ಆಗಿ ಪರಿಗಣಿಸುವುದನ್ನು ಪ್ರಶ್ನಿಸಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ (ಅ.8) ವಜಾಗೊಳಿಸಿದೆ. ಈ ಮೂಲಕ ಮಾಫಿ ಸಾಕ್ಷಿ ಪ್ರಕ್ರಿಯೆಗೆ ತಡೆ ತರಲು ಯತ್ನಿಸುತ್ತಿದ್ದ ದರ್ಶನ್ ಪರ ಕಾನೂನು ತಂಡಕ್ಕೆ ಭಾರಿ ಹಿನ್ನಡೆಯಾಗಿದೆ.

ಸುಪ್ರೀಂ ಕೋರ್ಟ್ ಆದೇಶದಲ್ಲೇನಿದೆ?

ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಹಾಗೂ ನ್ಯಾಯಮೂರ್ತಿ ವಿನೋದ್ ಚಂದ್ರನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಪೀಠವು, "ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವುದನ್ನು ಪ್ರಶ್ನಿಸುವ ಅಥವಾ ವಿರೋಧಿಸುವ ಯಾವುದೇ ಕಾನೂನುಬದ್ಧ ಅಧಿಕಾರ ಆರೋಪಿಗಳಿಗೆ ಇರುವುದಿಲ್ಲ" ಎಂದು ಸ್ಪಷ್ಟಪಡಿಸಿ ಅರ್ಜಿಯನ್ನು ತಿರಸ್ಕರಿಸಿತು.

ವಿಜಯಲಕ್ಷ್ಮೀ ಪರ ವಕೀಲರ ವಾದವೇನಿತ್ತು?

ದರ್ಶನ್ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ನಾಗಮುತ್ತು, "ಪ್ರಕರಣದ ಪ್ರಮುಖ ಆರೋಪಿಯೊಬ್ಬ ಮಾಫಿ ಸಾಕ್ಷಿಯಾಗುವುದನ್ನು ಮತ್ತು ಆತನ ಹೇಳಿಕೆ ದಾಖಲಿಸಿಕೊಳ್ಳುವುದನ್ನು ಸೆಷನ್ಸ್ ನ್ಯಾಯಾಲಯ ಪರಿಗಣಿಸಲು ಬರುವುದಿಲ್ಲ. ಮಾಫಿ ಸಾಕ್ಷಿ ಹೇಳಿಕೆಯನ್ನು ಪರಿಗಣಿಸುವ ಅಧಿಕಾರ ಇರುವುದು ಕೇವಲ ಪ್ರಿನ್ಸಿಪಲ್ ಕೋರ್ಟ್‌ಗೆ ಮಾತ್ರ. ಟ್ರಯಲ್ ಕೋರ್ಟ್‌ಗೆ ಈ ರೀತಿಯ ಅಧಿಕಾರವಿಲ್ಲ" ಎಂದು ವಾದ ಮಂಡಿಸಿದ್ದರು.

ನ್ಯಾಯಪೀಠದ ಕಟು ನಿಲುವು

ದರ್ಶನ್ ಪರ ವಕೀಲರ ಈ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದ ನ್ಯಾಯಪೀಠ, "ಮಾಫಿ ಸಾಕ್ಷಿಯ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಎಲ್ಲ ಅಧಿಕಾರವೂ ವಿಚಾರಣಾ ನ್ಯಾಯಾಲಯಕ್ಕೆ ಇದೆ. ಟ್ರಯಲ್ ಕೋರ್ಟ್‌ಗೆ ಅಧಿಕಾರವಿಲ್ಲ ಎಂಬ ವಾದವನ್ನು ಒಪ್ಪಲು ಸಾಧ್ಯವೇ ಇಲ್ಲ" ಎಂದು ಖಡಕ್ ಆಗಿ ಹೇಳಿತು.

Vijayalakshmi Darshan: ದೈವದ ಮೊರೆ ಹೋದ ವಿಜಯಲಕ್ಷ್ಮಿ! ಮಾಫಿ ಸಾಕ್ಷಿ ಸಂಕಷ್ಟದಿಂದ ಪಾರಾಗ್ತಾರಾ ದರ್ಶನ್‌?

ಸರ್ಕಾರದ ಪರ ವಕೀಲರ ಪ್ರತಿವಾದ

ಇದೇ ವೇಳೆ ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ, "ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಿಕೊಳ್ಳುವುದನ್ನು ಪ್ರಶ್ನಿಸುವ ಹಕ್ಕು ಆರೋಪಿಗಳಿಗೆ ಇಲ್ಲ. ಆದರೆ, ಆ ಸಾಕ್ಷಿ ನೀಡುವ ಹೇಳಿಕೆಯ ಆಧಾರದ ಮೇಲೆ ಆತನನ್ನು ಕ್ರಾಸ್ ಎಕ್ಸಾಮಿನೇಷನ್‌ಗೆ ಒಳಪಡಿಸುವ ಹಕ್ಕು ಆರೋಪಿಗಳಿಗೆ ಇದ್ದೇ ಇರುತ್ತದೆ. ಹೈಕೋರ್ಟ್‌ನಲ್ಲೂ ನಡೆದ ವಿಚಾರಣೆ ವೇಳೆ ಆರೋಪಿಗಳು ಹಾಜರಿರಲು ಅವಕಾಶ ನೀಡಲಾಗಿತ್ತು" ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಸರ್ಕಾರದ ವಾದವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್, "ಆರೋಪಿ ಕಡೆಯವರಿಗೆ ಮಾಫಿ ಸಾಕ್ಷಿಯನ್ನು ಕೇವಲ ಪಾಟಿಸವಾಲು ನಡೆಸುವ ಹಕ್ಕಿದೆಯೇ ಹೊರತು, ಆ ಪ್ರಕ್ರಿಯೆಯನ್ನೇ ವಿರೋಧಿಸುವ ಅಥವಾ ಪ್ರಶ್ನಿಸುವ ಹಕ್ಕಿಲ್ಲ" ಎಂದು ಪುನರುಚ್ಚರಿಸಿ ಆದೇಶ ನೀಡಿತು. ಪ್ರದೂಷ್ ಈಗಾಗಲೇ ನ್ಯಾಯಾಲಯದ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಿದ್ದು, ಆತನ ಹೇಳಿಕೆಯನ್ನು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲು ಇದ್ದ ಕಾನೂನು ತೊಡಕುಗಳು ಸುಪ್ರೀಂ ಕೋರ್ಟ್‌ನ ಈ ಆದೇಶದೊಂದಿಗೆ ಸಂಪೂರ್ಣವಾಗಿ ನಿವಾರಣೆಯಾದಂತಾಗಿದೆ.