ಬೆಂಗಳೂರು: ಸ್ಯಾಂಡಲ್‌ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ತೆರೆಮೇಲೆ ಮತ್ತೊಂದು ಮ್ಯಾಜಿಕ್ ಮಾಡಿದ್ದಾರೆ. 2022ರಲ್ಲಿ ಬಿಡುಗಡೆಯಾದ ʼಕಾಂತಾರʼದ (Kantara) ಮೂಲಕ ತುಳುನಾಡಿನ ಜನಜೀವನವನ್ನು, ಅಲ್ಲಿನ ಸಂಸ್ಕೃತಿಯನ್ನು, ದೈವಾರಾಧನೆಯನ್ನು ಪರಿಚಯಿಸಿದ್ದ ಅವರು ಇದೀಗ ಅದರ ಪ್ರೀಕ್ವೆಲ್ ʼಕಾಂತಾರ: ಚಾಪ್ಟರ್ 1' (Kantara Chapter 1) ಮೂಲಕ ಪ್ರೇಕ್ಷಕರನ್ನು 4ನೇ ಶತಮಾನಕ್ಕೆ ಕರೆದೊಯ್ದಿದ್ದಾರೆ. ಈ ಫ್ಯಾಂಟಸಿ ಆ್ಯಕ್ಷನ್ ಡ್ರಾಮಾ ನಿರ್ದೇಶಿಸುವ ಜತೆಗೆ ನಾಯಕನಾಗಿಯೂ ಅವರು ಮಿಂಚಿದ್ದಾರೆ. ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಾಣದ ಈ ಚಿತ್ರ ಅಕ್ಟೋಬರ್ 2ರಂದು ವಿಶ್ವಾದ್ಯಂತ ವಿವಿಧ ಭಾಷೆಗಳಲ್ಲಿ ತೆರೆಕಂಡಿದ್ದು, ಈಗಾಗಲೇ ಜಾಗತಿಕವಾಗಿ 700 ಕೋಟಿ ರೂ. ಬಾಚಿಕೊಂಡು ಮುನ್ನುಗ್ಗುತ್ತಿದೆ. ಚಿತ್ರತಂಡ ಇದೀಗ ಅಭೂತಪೂರ್ವ ಯಶಸ್ಸನ್ನು ಸಂಭ್ರಮಿಸುತ್ತಿದೆ. ಈ ಮಧ್ಯೆ ರಿಷಬ್ ಶೆಟ್ಟಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (H.D. Deve Gowda) ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ದೇವೇಗೌಡ ಅವರೊಂದಿಗಿನ ಫೋಟೊವನ್ನು ರಿಷಬ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ʼʼಇದು ಬರೀ ಭೇಟಿಯಲ್ಲ, ನಮ್ಮ ನಾಡಿನ ಹಿರಿಯ ಚೇತನದೊಂದಿಗಿನ ಒಂದು ಸುಂದರ ಸಂವಾದ. ನಾಡಿನ ಅತ್ಯುನ್ನತ ಸ್ಥಾನಕ್ಕೆ ಏರಿ, ಕನ್ನಡಿಗರ ಕೀರ್ತಿಯನ್ನು ಹೆಚ್ಚಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆಶೀರ್ವಾದ ಪಡೆದ ಕ್ಷಣಗಳು. ಅವರ ಅನುಭವದ ಮಾತುಗಳು ಮತ್ತು ಪ್ರೀತಿಯ ತಲೆದಡವು, ನನಗೆ ಮತ್ತಷ್ಟು ಶಕ್ತಿ ತುಂಬಿದೆ. ಈ ಪ್ರೀತಿ, ಆಶೀರ್ವಾದ ಸದಾ ಇರಲಿʼʼ ಎಂದು ಅವರು ಬರೆದುಕೊಂಡಿದ್ದಾರೆ.
ರಿಷಬ್ ಶೆಟ್ಟಿ ಅವರ ಎಕ್ಸ್ ಪೋಸ್ಟ್:
ಈ ಸುದ್ದಿಯನ್ನೂ ಓದಿ: Rishab Shetty: ಡಿವೈನ್ ಸ್ಟಾರ್ ಮೀಟ್ಸ್ ಬಿಗ್ ಬಿ; ʼಕೌನ್ ಬನೇಗಾ ಕರೋಡ್‌ಪತಿ' ಶೋನಲ್ಲಿ ರಿಷಬ್ ಶೆಟ್ಟಿ
ಕೆಲವು ದಿನಗಳ ಹಿಂದೆ ಎಚ್.ಡಿ. ದೇವೇಗೌಡ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಚೇತರಿಸಿಕೊಂಡು ತಮ್ಮ ನಿವಾಸಕ್ಕೆ ಮರಳಿದ್ದಾರೆ. ಹೀಗಾಗ ಅವರ ಆರೋಗ್ಯವನ್ನೂ ರಿಷಬ್ ಶೆಟ್ಟಿ ವಿಚಾರಿಸಿದರು. ಕೆಲವು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪತ್ನಿ ಜತೆ ʼಕಾಂತಾರ: ಚಾಪ್ಟರ್ 1' ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅಪರೂಪದ ದಾಖಲೆ ಬರೆದ ʼಕಾಂತಾರ: ಚಾಪ್ಟರ್ 1'
ʼಕಾಂತಾರ: ಚಾಪ್ಟರ್ 1' ಬಿಡುಗಡೆಯಾಗಿ 2 ವಾರ ಕಳೆದಿದ್ದು, ಬಾಕ್ಸ್ ಆಫೀಸ್‌ನಲ್ಲಿ 700 ಕೋಟಿ ರೂ. ಕ್ಲಬ್ ಸೇರಿದೆ. ಈ ವಿಚಾರವನ್ನು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಘೋಷಿಸಿದೆ. ʼʼಕಾಂತಾರ ಚಾಪ್ಟರ್ 1' ಅಬ್ಬರ ಮುಂದುವರಿದಿದ್ದು 2 ವಾರಗಳಲ್ಲಿ ವಿಶ್ವಾದ್ಯಂತ 717.50 ಕೋಟಿ ರೂ. ಗಳಿಸಿದೆ. ದೀಪಾವಳಿಯನ್ನು ʼಕಾಂತಾರʼದೊಂದಿಗೆ ಆಚರಿಸಿʼʼ ಎಂದು ಬರೆದುಕೊಂಡಿದೆ.
ದೀಪಾವಳಿ ಟ್ರೈಲರ್ ಔಟ್
ಚಿತ್ರಕ್ಕೆ ಎಲ್ಲೆಡೆ ಭರ್ಜರಿ ಪ್ರತಿಕ್ರಿಯೆ ಲಭಿಸುತ್ತಿದ್ದು, ನೋಡುಗರು, ವಿಮರ್ಶಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದೀಗ ಚಿತ್ರತಂಡ ದೀಪಾವಳಿ ಟ್ರೈಲರ್ ರಿಲೀಸ್ ಮಾಡಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಚಿತ್ರದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸುತ್ತಿದ್ದು, ಮುಖ್ಯ ಪಾತ್ರಗಳಲ್ಲಿ ಗುಲ್ಶನ್ ದೇವಯ್ಯ, ರಾಕೇಶ್ ಪೂಜಾರಿ, ಜಯರಾಮ್ ಮತ್ತಿತರರು ಕಾಣಿಸಿಕೊಂಡಿದ್ದಾರೆ.