‘ಕಾಂತಾರ’ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಗಮನಸೆಳೆದ ನಟ-ನಿರ್ದೇಶಕ ರಿಷಬ್ ಶೆಟ್ಟಿ, ಸದ್ಯ ‘ಜೈ ಹನುಮಾನ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಬೆನ್ನಲ್ಲೇ ಅವರ ಮತ್ತೊಂದು ಬೃಹತ್ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಸೆಟ್ಟೇರಲು ಸಜ್ಜಾಗಿದೆ. ಮಹಾನ್ ಮರಾಠ ಯೋಧ ಛತ್ರಪತಿ ಶಿವಾಜಿ ಮಹಾರಾಜರ ಜೀವನಾಧಾರಿತ ಈ ಚಿತ್ರವನ್ನು ಸುಮಾರು 500 ಕೋಟಿ ರೂಪಾಯಿಗಳಿಗೂ ಅಧಿಕ ವೆಚ್ಚದಲ್ಲಿ ಅತ್ಯಂತ ಅದ್ದೂರಿಯಾಗಿ ನಿರ್ಮಿಸಲಾಗುತ್ತಿದೆ.
ಹಾಲಿವುಡ್ ಸಾಹಸ ನಿರ್ದೇಶಕರ ದಂಡು
17ನೇ ಶತಮಾನದ ಬೃಹತ್ ಯುದ್ಧ ಸನ್ನಿವೇಶಗಳು ಮತ್ತು ಅದ್ಧೂರಿ ಆಕ್ಷನ್ ದೃಶ್ಯಗಳನ್ನು ಸಂಯೋಜಿಸಲು ಚಿತ್ರತಂಡ ಅಂತಾರಾಷ್ಟ್ರೀಯ ಮಟ್ಟದ ಪ್ರಸಿದ್ಧ ಸಾಹಸ ನಿರ್ದೇಶಕರನ್ನು ಭಾರತಕ್ಕೆ ಕರೆತರುತ್ತಿದೆ. 'ಗೇಮ್ ಆಫ್ ಥ್ರೋನ್ಸ್', 'ವೈಕಿಂಗ್ಸ್', 'ದಿ ವಿಚರ್' ಮತ್ತು 'ಗ್ರಾವಿಟಿ'ಯಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಕೆಲಸ ಮಾಡಿದ ಮಾರ್ಕ್ ಹೆನ್ಸನ್ ತಂಡ ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಲಿದೆಯಂತೆ.
ಇವರೊಂದಿಗೆ 'ದಿ ಫೇಟ್ ಆಫ್ ದಿ ಫ್ಯೂರಿಯಸ್' ಖ್ಯಾತಿಯ ವ್ಲಾಡ್ ರಿಂಬರ್ಗ್ ಹಾಗೂ 'ಟ್ರಾಯ್: ಫಾಲ್ ಆಫ್ ಎ ಸಿಟಿ' ಚಿತ್ರದಲ್ಲಿ ಕೆಲಸ ಮಾಡಿದ್ದ ಕ್ರೇಗ್ ಮ್ಯಾಕ್ರೇ ಕೂಡ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ಈ ಚಿತ್ರವನ್ನು ಒಂದೇ ಭಾಗದಲ್ಲಿ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ ಕಥೆಯ ವ್ಯಾಪ್ತಿ ದೊಡ್ಡದಾಗಿರುವುದರಿಂದ ಈಗ ಎರಡು ಭಾಗಗಳಲ್ಲಿ ಹೊರತರಲು ನಿರ್ಮಾಪಕರು ತೀರ್ಮಾನಿಸಿದ್ದಾರೆ. ಮೊದಲ ಭಾಗ 2028ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಎರಡನೇ ಭಾಗ 2029ಕ್ಕೆ ರಿಲೀಸ್ ಆಗಲಿದ್ದು, ಶೀಘ್ರದಲ್ಲೇ ಚಿತ್ರತಂಡದಿಂದ ಅಧಿಕೃತ ಘೋಷಣೆ ಹೊರಬೀಳಲಿದೆ.
Rishab Shetty: ರಕ್ಷಿತ್ ಶೆಟ್ಟಿ ಸೇರಿ ಎಲ್ಲರನ್ನ ಅನ್‌ಫಾಲೋ ಮಾಡಿದ ರಿಷಬ್ ಶೆಟ್ಟಿ!
ಚಿತ್ರದ ಬಹುಪಾಲು ಚಿತ್ರೀಕರಣವು ಶಿವಾಜಿ ಮಹಾರಾಜರು ಸಾಮ್ರಾಜ್ಯ ಸ್ಥಾಪಿಸಿದ ಮಹಾರಾಷ್ಟ್ರದ ನೈಜ ತಾಣಗಳಲ್ಲೇ ನಡೆಯಲಿದೆಯಂತೆ. ಈ ಚಿತ್ರದ ಮುಖ್ಯ ತಾರಾಗಣದಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ನಟ-ನಟಿಯರು ಕಾಣಿಸಿಕೊಳ್ಳಲಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ಪಾತ್ರವನ್ನು ರಿಷಬ್ ಶೆಟ್ಟಿ ನಿಭಾಯಿಸಲಿದ್ದಾರೆ. ಶಿವಾಜಿ ಮಹಾರಾಜರ ತಾಯಿ ರಾಜಮಾತಾ ಜಿಜಾಬಾಯಿ ಪಾತ್ರದಲ್ಲಿ ಶೆಫಾಲಿ ಶಾ ಮಿಂಚಲಿದ್ದಾರೆ. ಉಳಿದಂತೆ, ಮುಘಲ್ ಚಕ್ರವರ್ತಿ ಔರಂಗಜೇಬ್ ಪಾತ್ರದಲ್ಲಿ ವಿವೇಕ್ ಓಬೆರಾಯ್ ಮತ್ತು ಪ್ರಮುಖ ಖಳನಾಯಕನ ಪಾತ್ರದಲ್ಲಿ ಅರ್ಜುನ್ ರಾಂಪಾಲ್ ನಟಿಸಲಿದ್ದಾರೆ.
ರಿಷಬ್ ಶೆಟ್ಟಿ-ಅಕ್ಷಯ್ ಸಿನಿಮಾಗಳು ಒಂದೇ ದಿನ ತೆರೆಗೆ; ಬಾಕ್ಸ್ ಆಫೀಸ್ ಫೈಟ್ ಪಕ್ಕಾ!
6 ಭಾಷೆಗಳಲ್ಲಿ ಜಾಗತಿಕ ರಿಲೀಸ್
1923ರ 'ಸಿಂಹಗಢ್' ಮೂಕಿ ಚಿತ್ರದಿಂದ ಹಿಡಿದು ಇಲ್ಲಿಯವರೆಗೆ ಶಿವಾಜಿ ಮಹಾರಾಜರ ಕುರಿತು 60ಕ್ಕೂ ಹೆಚ್ಚು ಸಿನಿಮಾ ಹಾಗೂ ಧಾರಾವಾಹಿಗಳು ಬಂದಿವೆ. ಈಗ 'ದಿ ಪ್ರೈಡ್ ಆಫ್ ಭಾರತ್' ಈ ಪರಂಪರೆಗೆ ಹೊಸ ಮೆರುಗು ನೀಡಲು ಹೊರಟಿದ್ದು, ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು ಮತ್ತು ಮರಾಠಿ ಸೇರಿದಂತೆ 6 ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.