ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ನನ್ನ ಮಗ ಹಲಸಿನ ಹಣ್ಣು ಇದ್ದಂಗೆ, ಎಷ್ಟೇ ನೆಗೆಟಿವ್‌ ಮಾಡಿದ್ರು ಅವ್ನ ಯಾರೂ ತಡೆಯೋಕೆ ಆಗಲ್ಲ': ಟೀಕೆಗಳಿಗೆ ಯಶ್ ತಾಯಿ ಪುಷ್ಪಾ ಅರುಣ್‌ಕುಮಾರ್ ಖಡಕ್ ತಿರುಗೇಟು!

ʻರಾಕಿಂಗ್‌ ಸ್ಟಾರ್‌ʼ ಯಶ್‌ ನಟನೆಯ ʻಟಾಕ್ಸಿಕ್‌ʼ ಸಿನಿಮಾ ಕುರಿತು ಹಬ್ಬುತ್ತಿರುವ ನಕಾರಾತ್ಮಕ ಮಾತುಗಳಿಗೆ ನಟ ಯಶ್ ತಾಯಿ ಪುಷ್ಪಾ ಅರುಣ್‌ಕುಮಾರ್ ಖಡಕ್ ಪ್ರತ್ಯುತ್ತರ ನೀಡಿದ್ದಾರೆ. ಯಶ್ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ಅವರು, ಟ್ರೋಲರ್ಸ್‌ಗಳಿಗೆ ನೇರ ಎಚ್ಚರಿಕೆ ನೀಡಿದ್ದಾರೆ.

ʻರಾಕಿಂಗ್ ಸ್ಟಾರ್ʼ ಯಶ್ ಅವರ ʻಟಾಕ್ಸಿಕ್‌ʼ ಸಿನಿಮಾ ಕುರಿತು ಕೇಳಿಬರುತ್ತಿರುವ ನೆಗೆಟಿವ್ ಮಾತುಗಳಿಗೆ ಅವರ ತಾಯಿ ಪುಷ್ಪಾ ಅರುಣ್‌ಕುಮಾರ್ ನೇರಾನೇರ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಮಗನ ಪ್ರತಿಭೆ, ಶ್ರಮ ಮತ್ತು ಅಚಲವಾದ ಆತ್ಮವಿಶ್ವಾಸದ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ಅವರು, ಟೀಕೆ ಮಾಡುವವರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ವಿಶ್ವವಾಣಿ ಟಿವಿಗೆ ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಮಾತನಾಡಿದ ಅವರು, "ನಿಂದಿಸುವವರು ಎಲ್ಲಿಲ್ಲ ಹೇಳಿ? ಡಾ. ರಾಜ್‌ಕುಮಾರ್ ಅವರನ್ನೇ ಬಿಟ್ಟಿಲ್ಲ. ನಿಂದಿಸುವವರು ನಿಂದಿಸುತ್ತಲೇ ಇರುತ್ತಾರೆ, ನಾವು ಮಾತ್ರ ಮುನ್ನುಗ್ಗುತ್ತಲೇ ಇರಬೇಕು" ಎಂದು ಹೇಳಿದ್ದಾರೆ.

ಹಲಸಿನ ಹಣ್ಣಿನ ಪರಿಮಳ ಮುಚ್ಚಿಡಲು ಸಾಧ್ಯವಿಲ್ಲ

ಯಶ್ ಅವರ ಪ್ರತಿಭೆಯನ್ನು ಹಲಸಿನ ಹಣ್ಣಿಗೆ ಹೋಲಿಸಿ ಮಾತನಾಡಿರುವ ಪುಷ್ಪಾ, "ಹಲಸಿನ ಹಣ್ಣನ್ನು ಗಿಡದಿಂದ ಕೊಯ್ದು ತಂದು ಕೋಣೆಯಲ್ಲಿಟ್ಟರೂ ಪರಿಮಳ ಬರುತ್ತದೆ, ಫ್ರಿಡ್ಜ್‌ನಲ್ಲಿಟ್ಟರೂ ಅದರ ವಾಸನೆ ಬಂದೇ ಬರುತ್ತದೆ. ನನ್ನ ಮಗ ಕೂಡ ಹಲಸಿನ ಹಣ್ಣಿನಂತೆ; ಅವನಲ್ಲಿ ಪ್ರತಿಭೆ ಮತ್ತು ಸಾಮರ್ಥ್ಯ ಇರುವವರೆಗೂ ಯಾರೂ ಅವನನ್ನು ಅಲುಗಾಡಿಸಲು ಸಾಧ್ಯವಿಲ್ಲ. ಇಂತಹ ನೆಗೆಟಿವ್ ಮಾತುಗಳಿಂದ ಅವನಿಗೆ ಯಾವುದೇ ಪರಿಣಾಮ ಬೀರಲ್ಲ. ಆತ ಅಷ್ಟು ಗಟ್ಟಿಯಾಗಿದ್ದಾನೆ. ಆತನ ಅಭಿಮಾನಿಗಳು ಎಂದಿಗೂ ಕೈಬಿಡದೆ ಬೆನ್ನಿಗೆ ನಿಲ್ಲುತ್ತಾರೆ ಎಂಬ ಗಟ್ಟಿ ನಂಬಿಕೆ ನನಗಿದೆ" ಎಂದಿದ್ದಾರೆ.

ಬಾಡಿಗೆ ಕಟ್ಟಲು ಕಷ್ಟವಿದ್ದರೂ ಆತುರಪಡಲಿಲ್ಲ!

ಯಶ್ ಅವರ ಆರಂಭಿಕ ದಿನಗಳನ್ನು ಮೆಲುಕು ಹಾಕಿದ ಅವರು, "ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಕಾಲದಲ್ಲೇ ಯಶ್‌ಗೆ ಸಾಕಷ್ಟು ಸಿನಿಮಾ ಆಫರ್‌ಗಳು ಬರುತ್ತಿದ್ದವು. ಆ ಸಮಯದಲ್ಲಿ ನಮಗೆ ಮನೆಯ ಬಾಡಿಗೆ ಕಟ್ಟಲು ಹಣವಿಲ್ಲದ ಪರಿಸ್ಥಿತಿಯಿತ್ತು. ಆದರೂ ಯಶ್ ಆತುರಪಟ್ಟು ಯಾವುದೋ ಒಂದು ಸಿನಿಮಾಗೆ ಒಪ್ಪಿಕೊಳ್ಳಲಿಲ್ಲ. ಇಷ್ಟು ಎತ್ತರಕ್ಕೆ ಬೆಳೆಯುವ ದೂರದೃಷ್ಟಿ ಮತ್ತು ಧೈರ್ಯ ಅವನಲ್ಲಿ ಮೊದಲೇ ಇತ್ತು. ನಾವೇನೂ ಅವನಿಗೆ ಪೆನ್ನು-ಪುಸ್ತಕ ಹಿಡಿದು ಹೇಳಿಕೊಟ್ಟಿಲ್ಲ; ಎಲ್ಲವನ್ನೂ ಸ್ವಪ್ರಯತ್ನದಿಂದಲೇ ಕಲಿತು ಬೆಳೆದಿದ್ದಾನೆ. 'ಕೆಜಿಎಫ್' ಬಂದಾಗಲೂ ನಾವು ಅತಿಯಾಗಿ ಹೊಗಳಲಿಲ್ಲ, ಏಕೆಂದರೆ ಅವನಲ್ಲಿ ಇನ್ನೂ ಸಾಧಿಸುವ ಅಗಾಧ ಸಾಮರ್ಥ್ಯವಿದೆ" ಎಂದು ತಿಳಿಸಿದ್ದಾರೆ.

ಡ್ರೈವರ್ ಮಗ ಇಷ್ಟೆಲ್ಲಾ ಮಾಡ್ತಾನೆ ಅಂದ್ರೆ ಸಹಿಸಿಕೊಳ್ಳೋ ಕೆಪಾಸಿಟಿ ಇರಬೇಕು!



ಟೀಕೆ-ಟಿಪ್ಪಣಿಗಳನ್ನು ಸಮಾಜದಲ್ಲಿ ಎಲ್ಲರೂ ಎದುರಿಸಲೇಬೇಕು ಎಂದ ಪುಷ್ಪಾ, ಹಿರಿಯ ನಟರ ಉದಾಹರಣೆಗಳನ್ನು ನೀಡಿದ್ದಾರೆ. "ಇವತ್ತು ನಿಂದಿಸುವವರು ಡಾ. ರಾಜ್‌ಕುಮಾರ್ ಅವರನ್ನೇ ಬಿಟ್ಟಿಲ್ಲ. ಸಮಾಜ ಪ್ರತಿಯೊಬ್ಬರನ್ನೂ ಪರೀಕ್ಷಿಸುತ್ತದೆ, ಎಲ್ಲವನ್ನೂ ಮೆಟ್ಟಿ ನಿಂತು ಗೆದ್ದು ಬರುವವನೇ ನಿಜವಾದ ಜಾಣ. ಶಂಕರ್ ನಾಗ್ ಅವರು ಹೇಳಿದಂತೆ, ದೇವರು ಕೈಗೆ ಬಿಳಿ ಹಾಳೆ ಮತ್ತು ಪೆನ್ನು ಕೊಟ್ಟಿರುತ್ತಾನೆ. ಅದರಲ್ಲಿ ಸೈಕಲ್ ಬರೆದುಕೊಳ್ಳುತ್ತೀರೋ ಅಥವಾ ವಿಮಾನ ಬರೆದುಕೊಳ್ಳುತ್ತೀರೋ ಎಂಬುದು ನಿಮ್ಮ ಧೈರ್ಯಕ್ಕೆ ಬಿಟ್ಟಿದ್ದು. 'ಡ್ರೈವರ್ ಮಗ' ಎಂದು ಯಾರೂ ಒಂದೇ ಚೌಕಟ್ಟಿನಲ್ಲಿ ಉಳಿಯಬೇಕಿಲ್ಲ. ಪ್ರೇಕ್ಷಕರು ಗುಣಮಟ್ಟದ ಸಿನಿಮಾವನ್ನು ಎಂದಿಗೂ ತಲೆಯ ಮೇಲೆ ಹೊತ್ತು ಕೊಂಡಾಡುತ್ತಾರೆ" ಎಂದು ಪುಷ್ಪಾ ಹೇಳಿದ್ದಾರೆ.

Yash: 'ಟಾಕ್ಸಿಕ್' ಜೊತೆಗೆ 'ಜಾಕಿ 42' ಸಿನಿಮಾ ಟ್ರೇಲರ್‌ ಪ್ರದರ್ಶನ, ಕುದುರೆ ರೇಸ್‌ ಕುರಿತ ಚಿತ್ರದಲ್ಲಿ ನಟ ಕಿರಣ್‌ ರಾಜ್‌

ರೈತನಂತೆ ಮುಂದಿನ ಕೆಲಸದಲ್ಲಿ ಮಗ್ನ

ಸಿನಿಮಾ ಸುತ್ತಲಿನ ಟೀಕೆಗಳ ನಡುವೆಯೂ ಯಶ್ ಮುಂದಿನ ಹೆಜ್ಜೆಯ ಬಗ್ಗೆ ಗಮನಹರಿಸಿದ್ದಾರೆ ಎಂದು ತಿಳಿಸಿದ ಅವರು, "ನೆಗೆಟಿವಿಟಿ ಎಂದಿಗೂ ಶಾಶ್ವತವಲ್ಲ, ಅಂತಿಮವಾಗಿ ಒಳ್ಳೆಯ ಪ್ರಯತ್ನವೇ ಗೆಲ್ಲುವುದು. ಈ ವರ್ಷದ ಬೆಳೆ ತೆಗೆದ ನಂತರ ಮುಂದಿನ ವರ್ಷ ಏನು ಬೆಳೆಯಬೇಕು ಎಂದು ಯೋಚಿಸುವ ರೈತನಂತೆ, ಯಶ್ ಮುಂದಿನ ಸಿನಿಮಾದ ಮೂಲಕ ಪ್ರೇಕ್ಷಕರಿಗೆ ಏನು ಹೊಸತು ಕೊಡಬೇಕು ಎಂಬುದರಲ್ಲೇ ಸದಾ ನಿರತನಾಗಿದ್ದಾನೆ" ಎಂದು ಹೇಳಿದ್ದಾರೆ.

"ನಾನು ಕೂಡ ʻಟಾಕ್ಸಿಕ್‌ʼ ಸಿನಿಮಾ ನೋಡಿದೆ. ಆದರೆ ಜನ ಬಂದು ಮಾತನಾಡಿಸುತ್ತಿದ್ದ ಕಾರಣ ಸಾಕಷ್ಟು ಗೊಂದಲವಾಗಿ ನನಗೆ ಪೂರ್ತಿ ಅರ್ಥವಾಗಲಿಲ್ಲ. ಬೆಂಗಳೂರಿಗೆ ಬಂದು ಇನ್ನೊಮ್ಮೆ ನೋಡುವೆ. ಯಶ್ ಜೊತೆ ಮಾತನಾಡುತ್ತಿರುತ್ತೇನೆ. ಪಾಪ, ತುಂಬಾ ಕೆಲಸದಲ್ಲಿ ಓಡಾಡುತ್ತಿರುತ್ತಾನೆ. ಸ್ವಲ್ಪ ವಿಶ್ರಾಂತಿ ತೆಗೆದುಕೋ ಎಂದು ಹೇಳಿದ್ದೇನೆ. ಆದರೆ ಅವನು ವಿಶ್ರಾಂತಿ ಪಡೆಯದೆ ಮುಂದಿನ ಚಿತ್ರದ ಯೋಜನೆಯಲ್ಲಿ ತೊಡಗಿರುತ್ತಾನೆ" ಎಂದು ಪುಷ್ಪಾ ಅರುಣ್‌ ಕುಮಾರ್‌ ತಿಳಿಸಿದ್ದಾರೆ.