ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೊದಲ ದಿನವೇ ಬಾಕ್ಸ್‌ ಆಫೀಸ್ ಧೂಳೀಪಟ ಮಾಡಲಿದೆಯೇ 'ಟಾಕ್ಸಿಕ್'? ‌ʻರಾಕಿ ಭಾಯ್ʼ ಯಶ್‌ ಅಬ್ಬರಕ್ಕೆ ಎಷ್ಟಾಗಲಿದೆ ಕಲೆಕ್ಷನ್?

ಯಶ್‌ ಅಭಿನಯದ ʻಟಾಕ್ಸಿಕ್‌ʼ ಸಿನಿಮಾವು ಗ್ಯಾಂಗ್‌ಸ್ಟರ್ ಕಥೆಯು ವಿಶ್ವದಾದ್ಯಂತ ತೆರೆಕಂಡು ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರವು ಮೊದಲ ದಿನ ಸಂಜೆ ವೇಳೆಗೆ ದಾಖಲೆ ಪ್ರಮಾಣದ ಕಲೆಕ್ಷನ್ ಬಾಚಿಕೊಂಡಿದೆ. ಮುಂಗಡ ಬುಕಿಂಗ್‌ನಲ್ಲಿ ₹25 ಕೋಟಿ ಗಳಿಸಿದ್ದ ಈ ಸಿನಿಮಾವು ಮೊದಲ ದಿನ ಬಹುತೇಕ ಹೌಸ್‌ಫುಲ್ ಪ್ರದರ್ಶನ ಕಂಡಿದೆ.

ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರವು ಬೆಳ್ಳಿಪರದೆಯ ಮೇಲೆ ಭರ್ಜರಿಯಾಗಿ ಅಪ್ಪಳಿಸಿದ್ದು, ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್‌ನೊಂದಿಗೆ ಧೂಳೆಬ್ಬಿಸಿದೆ. ಆಗಸ್ಟ್ 26ರಂದು ವಿಶ್ವಾದ್ಯಂತ ತೆರೆಕಂಡ ಈ ಸಿನಿಮಾ, ದೇಶಾದ್ಯಂತ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುತ್ತಿದೆ. ಎಲ್ಲಾ ಭಾಷೆಗಳಲ್ಲೂ ಉತ್ತಮ ವೆಲ್‌ಕಮ್‌ ಪಡೆದುಕೊಂಡಿದೆ.

ರಿಲೀಸ್‌ಗೂ ಮುನ್ನವೇ ದಾಖಲೆ ಬರೆದಿದ್ದ ʻಟಾಕ್ಸಿಕ್‌ʼ

ಗೀತು ಮೋಹನ್‌ದಾಸ್ ನಿರ್ದೇಶನದ 1940 ರಿಂದ 1970ರ ದಶಕದ ಗೋವಾದ ಹಿನ್ನೆಲೆಯ ಈ ಗ್ಯಾಂಗ್‌ಸ್ಟರ್ ಕಥೆಯಲ್ಲಿ ಯಶ್ ದ್ವಿಪಾತ್ರದಲ್ಲಿ ಅಬ್ಬರಿಸಿದ್ದಾರೆ. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ತಾರಾಗಣದಲ್ಲಿರುವ 3 ಗಂಟೆ 14 ನಿಮಿಷಗಳ ಈ ಬಹುಭಾಷಾ ಚಿತ್ರವು ಬಿಡುಗಡೆಗೂ ಮುನ್ನವೇ ಮುಂಗಡ ಬುಕಿಂಗ್‌ನಲ್ಲಿ ಬರೋಬ್ಬರಿ 25 ಕೋಟಿ ಗಳಿಸಿತ್ತು. ಬರೋಬ್ಬರಿ 7 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮುಂಗಡವಾಗಿಯೇ ಮಾರಾಟವಾಗಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದವು.

ʻನಿನ್ನ ಬಹುನಿರೀಕ್ಷಿತ ಟಾಕ್ಸಿಕ್‌...ʼ;‌ ಮಗ ಯಶ್‌ ನಟಿಸಿರುವ ಸಿನಿಮಾಗೆ ತಾಯಿ ಪುಷ್ಪಾ ವಿಶ್‌ ಮಾಡಿದ್ದು ಹೀಗೆ!

ಮೊದಲ ದಿನ ಎಷ್ಟಾಯ್ತು ಗಳಿಕೆ?

ಬಾಕ್ಸಾಫೀಸ್ ಟ್ರ್ಯಾಕಿಂಗ್ ವರದಿಗಳ ಪ್ರಕಾರ, ಆಗಸ್ಟ್‌ 26ರ ಸಂಜೆ ತನಕ 'ಟಾಕ್ಸಿಕ್' ಹೌಸ್‌ಫುಲ್ ಪ್ರದರ್ಶನಗಳನ್ನು ಕಂಡಿದೆ. ದೇಶದ 1,355 ನಗರಗಳ 3,682 ಚಿತ್ರಮಂದಿರಗಳಲ್ಲಿ 13,188 ಶೋಗಳಿಂದ ಸಂಜೆ 4 ಗಂಟೆಯ ಲೈವ್ ಅಪ್‌ಡೇಟ್ ಪ್ರಕಾರ ಈ ಚಿತ್ರವು 79 ಕೋಟಿ ಕಲೆಕ್ಷನ್ ದಾಖಲಿಸಿದೆ. ಇದರಲ್ಲಿ ಹಿಂದಿ ಆವೃತ್ತಿಯೊಂದರಲ್ಲೇ ₹45 ಕೋಟಿ ಹಾಗೂ ಕನ್ನಡ ಆವೃತ್ತಿಯು ಸಂಜೆ 6 ಗಂಟೆಯ ವೇಳೆಗೆ ₹19 ಕೋಟಿ ಗಡಿ ದಾಟಿ ಮುನ್ನುಗ್ಗುತ್ತಿದ್ದು, ತೆಲುಗು ₹9.50 ಕೋಟಿ ಗಳಿಕೆ ಆಗಿರುವ ಮಾಹಿತಿ ಇದೆ.

ತಮಿಳು ಮತ್ತು ಮಲಯಾಳಂನಲ್ಲಿ ಕಲೆಕ್ಷನ್‌ ಇನ್ನಷ್ಟು ಪಿಕಪ್‌ ಆಗಬೇಕಿದೆ. ಕನ್ನಡ ಆವೃತ್ತಿಯು ಗರಿಷ್ಠ ಶೇ. 83ರಷ್ಟು ಆಕ್ಯುಪೆನ್ಸಿ ದಾಖಲಿಸಿದೆ. ಆದರೆ ದಿನ ಮುಗಿಯುವ ಹೊತ್ತಿಗೆ ಕಲೆಕ್ಷನ್ ಮತ್ತಷ್ಟು ವೇಗ ಪಡೆದುಕೊಂಡಿದೆ. ಸಂಜೆ ವೇಳೆ 79 ಕೋಟಿಯಾದರೆ, ದಿನ ಮುಗಿಯುವುದರೊಳಗೆ ಈ ಮೊತ್ತ ಇನ್ನೂ ಜಾಸ್ತಿ ಆಗುವ ನಿರೀಕ್ಷೆ ಇದೆ.

ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಟಾಕ್ಸಿಕ್‌

ಇನ್ನು, ಯಶ್‌ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್‌ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ನಿರ್ದೇಶಕಿ ಗೀತು ಮೋಹನ್‌ದಾಸ್‌ ಅವರ ವೃತ್ತಿಜೀವನದಲ್ಲಿ ಇದು ಮೊದಲ ದೊಡ್ಡ ಕ್ಯಾನ್ವಾಸ್‌ನ ಸಿನಿಮಾವಾಗಿದ್ದು, ಪ್ಯಾನ್‌ ಇಂಡಿಯಾ ಸ್ಟಾರ್‌ ಹೀರೋ, ಭಾರಿ ಬಜೆಟ್‌, ಜೊತೆಗೆ ಐವರು ಜನಪ್ರಿಯ ನಟಿಯರು... ಇದೆಲ್ಲವನ್ನೂ ಸರಿದೂಗಿಸುವಲ್ಲಿ ಅವರು ಕೊಂಚ ಎಡವಿದರೇ ಎಂಬ ಅನುಮಾನ ಪ್ರಥಮಾರ್ಧ ಮುಗಿಯುವ ಹೊತ್ತಿಗೆ ಕಾಡುತ್ತದೆ.

ಕಥೆ ಆರಂಭವಾದ ಕೆಲ ಸಮಯದವರೆಗೆ ಮೂಲ ಸ್ವರೂಪವೇನು ಎಂಬುದು ಸ್ಪಷ್ಟವಾಗುವುದಿಲ್ಲ; ಅಷ್ಟರಮಟ್ಟಿಗೆ ಸಂಕೀರ್ಣವಾದ ಕಥಾಹಂದರವನ್ನು ಇದು ಒಳಗೊಂಡಿದೆ. ಯಶ್‌ ಅಭಿಮಾನಿಗಳು ನಿರೀಕ್ಷೆ ಮಾಡಿದಂತಹ ಕಮರ್ಷಿಯಲ್‌ ಅಂಶಗಳು ಕೊಂಚ ಕಮ್ಮಿ ಎಂದು ವಿಮರ್ಶೆಗಳು ಹೇಳುತ್ತವೆ.