ʻರಾಕಿಂಗ್ ಸ್ಟಾರ್ʼ ಯಶ್ ಅವರ ಅಭಿಮಾನಿಯೊಬ್ಬ ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ. ಅಂದು ಆತನ ಅಂತ್ಯಕ್ರಿಯೆಗೆ ಯಶ್ ಹೋಗಿರಲಿಲ್ಲ. ಅದಕ್ಕೆ ಒಂದು ಬಲವಾದ ಕಾರಣ ಇತ್ತು. ಅದನ್ನು ಈಗ ಯಶ್ ಬಹಿರಂಗಪಡಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯಾಗಿ ಸಮಾಜಕ್ಕೆ ಯಾವುದೇ ಕಾರಣಕ್ಕೂ ತಪ್ಪು ಸಂದೇಶ ರವಾನೆಯಾಗಬಾರದು, ಇಂತಹ ದುಡುಕಿನ ನಿರ್ಧಾರಗಳಿಗೆ ಪ್ರೋತ್ಸಾಹ ಸಿಗಬಾರದು ಎಂಬ ಸಾಮಾಜಿಕ ಜವಾಬ್ದಾರಿಯಿಂದಲೇ ತಾವು ಆ ನಿರ್ಧಾರ ತೆಗೆದುಕೊಂಡಿದ್ದಾಗಿ ಯಶ್ ಸ್ಪಷ್ಟಪಡಿಸಿದ್ದಾರೆ.
ಅಲ್ಲಿಗೆ ಹೋದರೆ ಸಮಾಜಕ್ಕೆ ತಪ್ಪು ಮಾದರಿಯಾಗುತ್ತಿತ್ತು
'ಆಪ್ ಕೀ ಅದಾಲತ್' (Aap Ki Adalat) ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಯಶ್ ಅವರು ಈ ಸೂಕ್ಷ್ಮ ವಿಚಾರದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಅಭಿಮಾನಿಯ ಅಂತ್ಯಕ್ರಿಯೆಯಿಂದ ದೂರ ಉಳಿದ ನಿರ್ಧಾರವನ್ನು ಸಮರ್ಥಿಸಿಕೊಂಡ ಯಶ್, "ಅಭಿಮಾನಿಯೊಬ್ಬರ ಸಾವು ನನಗೆ ತೀವ್ರ ದುಃಖ ತಂದಿತ್ತು. ಆದರೆ, ನಾನು ಆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರೆ ಸಮಾಜಕ್ಕೆ ಒಂದು ತಪ್ಪು ಮಾದರಿಯಾಗುತ್ತಿತ್ತು. 'ಇಂತಹ ದುಡುಕಿನ ಕೃತ್ಯ ಎಸಗಿದರೆ ತಮ್ಮನ್ನು ನೋಡಲು ಯಶ್ ಬರುತ್ತಾರೆ' ಎಂಬ ತಪ್ಪು ಭಾವನೆ ಇತರ ಯುವಜನರಲ್ಲಿ ಮೂಡುವುದು ನನಗೆ ಇಷ್ಟವಿರಲಿಲ್ಲ. ಆತ ಪ್ರಾಣ ಕಳೆದುಕೊಂಡ ಮೇಲೆ ನಾನು ಅಲ್ಲಿಗೆ ಹೋಗಿ ಏನಾಗಬೇಕಿದೆ? ಅಂತಹದ್ದನ್ನು ನಾನು ಪ್ರೋತ್ಸಾಹಿಸಿದರೆ ಅದು ಸಮಾಜಕ್ಕೆ ಮಾಡುವ ದೊಡ್ಡ ಅನ್ಯಾಯವಾಗುತ್ತಿತ್ತು" ಎಂದು ಹೇಳಿದ್ದಾರೆ.
ಘಟನೆಯ ಹಿನ್ನೆಲೆ ಏನು?
2021ರ ಫೆಬ್ರವರಿಯಲ್ಲಿ ಮಂಡ್ಯ ಜಿಲ್ಲೆಯ ಕೋಡಿದೊಡ್ಡಿ ಗ್ರಾಮದ 25 ವರ್ಷದ ರಾಮಕೃಷ್ಣ ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದರು. ಆತ ಬರೆದಿಟ್ಟಿದ್ದ ಡೆತ್‌ನೋಟ್‌ನಲ್ಲಿ, ತಮ್ಮ ಅಂತ್ಯಕ್ರಿಯೆಗೆ ನೆಚ್ಚಿನ ನಟ ಯಶ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರಬೇಕೆಂದು ಕೊನೆಯ ಆಸೆ ವ್ಯಕ್ತಪಡಿಸಿದ್ದರು. ಅಂದು ಸಿದ್ದರಾಮಯ್ಯ ಅವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು, ಆದರೆ ಯಶ್ ಮಾತ್ರ ಹೋಗಿರಲಿಲ್ಲ. ಈ ಘಟನೆ ಆಗ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
Yash: ʻಟಾಕ್ಸಿಕ್ʼ ಸಿನಿಮಾಗೆ ಸಿಕ್ತು ʻಎʼ ಸರ್ಟಿಫಿಕೇಟ್! 3.14 ಗಂಟೆ ಅವಧಿಯ ಈ ಚಿತ್ರದ ಒಂದೆಳೆ ಏನು?
ಸಾಧನೆ ಮಾಡಿ ಕರೆದರೆ ಖಂಡಿತ ಹೋಗುವೆ
ಯುವಜನತೆಗೆ ಕಿವಿಮಾತು ಹೇಳಿದ ಯಶ್, "ಯಾರಾದರೂ 'ನಾನು ಜೀವನದಲ್ಲಿ ಏನನ್ನಾದರೂ ಸಾಧಿಸುತ್ತೇನೆ, ಆಗ ಯಶ್ ನನ್ನ ಬಳಿ ಬರಬೇಕು' ಎಂದು ಹೇಳಿದರೆ, ನಾನು ಖಂಡಿತವಾಗಿಯೂ ಅವರ ಬಳಿಗೆ ಹೋಗಲು ಪ್ರಯತ್ನಿಸುತ್ತೇನೆ. ಯಾರಾದರೂ ಉತ್ತಮ ಸಾಧನೆ ಮಾಡಿ ನನ್ನನ್ನು ಕರೆದರೆ ನಾನು ಖುಷಿಯಿಂದ ಹೋಗುವೆ. ಆದರೆ ಆತ್ಮಹತ್ಯೆಯಂತಹ ಘಟನೆಗಳಿಗೆ ಹಾಜರಾಗುವುದು ತಪ್ಪು ಸಂಪ್ರದಾಯಕ್ಕೆ ದಾರಿ ಮಾಡಿಕೊಡುತ್ತದೆ. ಇದೇ ಕಾರಣಕ್ಕಾಗಿ ನಾನು ಅಂದು ಹೋಗಲಿಲ್ಲ" ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಬಿಡುಗಡೆಗೆ ಸಜ್ಜಾಗಿದೆ ‘ಟಾಕ್ಸಿಕ್’ ಸಿನಿಮಾ
ಸದ್ಯ ನಟ ಯಶ್ ಅವರು ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' (Toxic: A Fairy Tale for Grown-Ups) ಬಿಡುಗಡೆಯ ತಯಾರಿಯಲ್ಲಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ತಾರಾಗಣದಲ್ಲಿದ್ದಾರೆ. ಈ ಚಿತ್ರವು ಆಗಸ್ಟ್ 26 ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.