Yash: ʻಟಾಕ್ಸಿಕ್ʼ ಸಿನಿಮಾಗೆ ಸಿಕ್ತು ʻಎʼ ಸರ್ಟಿಫಿಕೇಟ್! 3.14 ಗಂಟೆ ಅವಧಿಯ ಈ ಚಿತ್ರದ ಒಂದೆಳೆ ಏನು?
ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾಗೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ 'A' (ವಯಸ್ಕರಿಗೆ ಮಾತ್ರ) ಪ್ರಮಾಣಪತ್ರ ದೊರೆತಿದೆ. 3 ಗಂಟೆ 14 ನಿಮಿಷಗಳ ಸುದೀರ್ಘ ಅವಧಿಯ ಈ ಚಿತ್ರದಲ್ಲಿ 'ರಾಯ' ಮತ್ತು 'ಟಿಕೆಟ್' ಎಂಬ ದ್ವಿಪಾತ್ರಗಳಲ್ಲಿ ತಂದೆ-ಮಗನಾಗಿ ಯಶ್ ಅಭಿನಯಿಸಿದ್ದಾರೆ.
-
ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಬಿಗ್ ಬಜೆಟ್ ಸಿನಿಮಾ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' (Toxic: A Fairy Tale for Grown-ups) ತೆರೆಗೆ ಬರಲು ಸಜ್ಜಾಗಿದೆ. ಈ ಬೆನ್ನಲ್ಲೇ ಬಿಡುಗಡೆಗೂ ಮುನ್ನವೇ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'A' (ವಯಸ್ಕರಿಗೆ ಮಾತ್ರ) ಪ್ರಮಾಣಪತ್ರ ದೊರೆತಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರಕ್ಕೆ ಬೆಂಗಳೂರಿನ ಪ್ರಾದೇಶಿಕ ಸೆನ್ಸಾರ್ ಕಚೇರಿಯು 2026ರ ಆಗಸ್ಟ್ 13ರಂದು ಅಧಿಕೃತವಾಗಿ ಅನುಮತಿ ನೀಡಿದ್ದು, ಮೂಲ ಭಾಷೆಯನ್ನು 'ಕನ್ನಡ' ಎಂದು ನಮೂದಿಸಿದೆ.
3 ಗಂಟೆ 14 ನಿಮಿಷಗಳ ಅವಧಿಯ ಸಿನಿಮಾ!
ಸೆನ್ಸಾರ್ ಪ್ರಮಾಣಪತ್ರದ ಪ್ರಕಾರ, ಈ ಚಿತ್ರವು ಒಟ್ಟು 194 ನಿಮಿಷ 12 ಸೆಕೆಂಡುಗಳ (ಅಂದರೆ 3 ಗಂಟೆ 14 ನಿಮಿಷ 12 ಸೆಕೆಂಡುಗಳ) ಬೃಹತ್ ಅವಧಿಯನ್ನು ಹೊಂದಿದೆ. ಸಿನಿಮಾದಲ್ಲಿನ ಆಕ್ಷನ್ ಮತ್ತು ಬೋಲ್ಡ್ ಸೀನ್‌ಗಳಿಂದಾಗಿ ಸೆನ್ಸಾರ್ ಮಂಡಳಿಯು 'A' ಪ್ರಮಾಣಪತ್ರವನ್ನು ನೀಡಿದೆ ಎಂದು ಹೇಳಲಾಗುತ್ತಿದೆ.
'ಟಾಕ್ಸಿಕ್' ಕಥಾಹಂದರ ಏನು?
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರದ ಕಾಲಘಟ್ಟದಲ್ಲಿ ಗೋವಾದಲ್ಲಿ ನಡೆಯುವ ಕಥೆ ಇದಾಗಿದೆ. ಹಿಂಸೆ ಮತ್ತು ಅಸೂಯೆಯೇ ತುಂಬಿರುವ ಈ ಪರಿಸರದಲ್ಲಿ ಗ್ಯಾಂಗ್‌ಸ್ಟರ್ ಒಬ್ಬ ತನ್ನ ನಿಷ್ಠೆ, ನೈತಿಕತೆ ಮತ್ತು ವೈಯಕ್ತಿಕ ಪ್ರಾಯಶ್ಚಿತ್ತದ ನಡುವಿನ ಸಂಕೀರ್ಣತೆಯನ್ನು ಹೇಗೆ ನಿಭಾಯಿಸುತ್ತಾನೆ ಎಂಬುದೇ ಸಿನಿಮಾದ ಪ್ರಮುಖ ಕಥಾವಸ್ತು. ಪ್ರೀತಿಗಾಗಿ ಮತ್ತು ಕತ್ತಲೆಯ ನಡುವೆ ಪ್ರಾಯಶ್ಚಿತ್ತವನ್ನು ಹುಡುಕಿಕೊಳ್ಳಲು ಒಬ್ಬ ವ್ಯಕ್ತಿ ತೆರಬೇಕಾದ ದೊಡ್ಡ ಬೆಲೆಯನ್ನು ಈ ಸಿನಿಮಾವು ಹೇಳಲಿದೆಯಂತೆ.
ದ್ವಿಪಾತ್ರದಲ್ಲಿ ಯಶ್ ಅಬ್ಬರ
ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ನಲ್ಲಿ ಅಪ್ಪ- ಮಗನ ನಡುವಿನ ಟಾಕ್ಸಿಕ್ ಸಂಬಂಧವನ್ನು ಪ್ರಮುಖವಾಗಿ ತೋರಿಸಲಾಗಿದೆ. ಈ ಚಿತ್ರದಲ್ಲಿ ಯಶ್ ಅವರು 'ರಾಯ' (ತಂದೆ) ಹಾಗೂ 'ಟಿಕೆಟ್' (ಮಗ) ಎಂಬ ಎರಡು ಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಟ್ರೇಲರ್‌ನಲ್ಲಿ ತಂದೆ ಮತ್ತು ಮಗನ ಸಿದ್ಧಾಂತಗಳ ನಡುವಿನ ಘರ್ಷಣೆಯನ್ನು ತೋರಿಸಲಾಗಿದೆ. ಜೊತೆಗೆ ಯಶ್, ಕಿಯಾರಾ ಅಡ್ವಾಣಿ ಹಾಗೂ ತಾರಾ ಸುತಾರಿಯಾ ಅವರ ಪಾತ್ರಗಳ ನಡುವಿನ ಸಂಬಂಧಗಳ ಬಗ್ಗೆಯೂ ಇದೆ. 'ರಾಯ' ಮತ್ತು 'ಟಿಕೆಟ್' ಪಾತ್ರಗಳು ಪರಸ್ಪರ ಕಾದಾಡುವ ದೃಶ್ಯವು ಕುತೂಹಲವನ್ನು ದುಪ್ಪಟ್ಟು ಮಾಡಿದೆ.
ರಾಕಿಂಗ್ ಸ್ಟಾರ್ ಯಶ್ ಜೊತೆಗೆ ನಯನತಾರಾ, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಕೆವಿಎನ್ ಪ್ರೊಡಕ್ಷನ್ಸ್' ಹಾಗೂ 'ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್' ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಮತ್ತು ಯಶ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಚಿತ್ರವನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನೇರವಾಗಿ ಚಿತ್ರೀಕರಿಸಲಾಗಿದ್ದು, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಮಾಡಲಾಗಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ 'ಟಾಕ್ಸಿಕ್ʼ ಸಿನಿಮಾವನ್ನು ಆಗಸ್ಟ್ 26 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ರಿಲೀಸ್ ಮಾಡಲಾಗುತ್ತಿದೆ.