Rohit Shetty: ಮತ್ತೊಮ್ಮೆ ಪೊಲೀಸ್ ಕಥೆ ಹೇಳಲು ರೋಹಿತ್ ಶೆಟ್ಟಿ ರೆಡಿ; ರಾಕೇಶ್ ಮಾರಿಯಾ ಬಯೋಪಿಕ್‌ನಲ್ಲಿ ಜಾನ್ ಅಬ್ರಾಹಾಂ ನಾಯಕ
ಜಾನ್ ಅಬ್ರಾಹಂ ಅವರ ಮುಂಬರುವ ಚಿತ್ರವನ್ನು ರೋಹಿತ್ ಶೆಟ್ಟಿ ನಿರ್ದೇಶಿಸಲಿದ್ದಾರೆ. ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಅವರ ಆತ್ಮಚರಿತ್ರೆ ಆಧಾರಿತ ಚಿತ್ರ ಇದಾಗಿದ್ದು, ಬಾಂದ್ರಾ ಹುಡುಗನೊಬ್ಬ ಪೊಲೀಸ್ ಉನ್ನತ ಅಧಿಕಾರಿ ಆಗುವುದನ್ನು ತೆರೆಗೆ ತರಲಾಗುತ್ತದೆ.


ಹೊಸದಿಲ್ಲಿ: ಬಾಲಿವುಡ್‌ನ ಜನಪ್ರಿಯ ನಟ ಜಾನ್ ಅಬ್ರಾಹಂ (John Abraham) ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್‌ನಲ್ಲಿ ಹೀರೋ ಆಗಿ, ವಿಲನ್ ಆಗಿ ಗುರುತಿಸಿಕೊಂಡಿದ್ದ ಜಾನ್ ಅಬ್ರಾಹಂಗೆ ಉತ್ತಮ ಸಿನಿಮಾ ಆಫರ್ ಸಿಗುತ್ತಲೇ ಇದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಅವರು ಹೀರೋಗಿಂತ ವಿಲನ್ ಆಗಿ ತೆರೆ ಮೇಲೆ ಗಮನ ಸೆಳೆದಿದ್ದೆ ಹೆಚ್ಚು. ಇದೀಗ ಜಾನ್ ಅಬ್ರಾಹಂ ಅವರು ರೋಹಿತ್ ಶೆಟ್ಟಿ (Rohit Shetty) ನಿರ್ದೇಶನದ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇದು ನೈಜ ಘಟನೆಯ ಆ್ಯಕ್ಷನ್ ಥ್ರಿಲ್ಲಿಂಗ್ ಸಿನಿಮಾವಾಗಿದ್ದು, ರೋಹಿತ್ ಶೆಟ್ಟಿ ಮತ್ತೊಮ್ಮೆ ಪೊಲೀಸ್ ಅಧಿಕಾರಿಯೊಬ್ಬರ ಕಥೆಯನ್ನು ಹೇಳಲಿದ್ದಾರೆ.
ನಿರ್ದೇಶಕ ರೋಹಿತ್ ಮತ್ತು ಜಾನ್ ಅಬ್ರಾಹಂ ಇದೀಗ ನೈಜ ಕಥೆಗೆ ಜೀವ ತುಂಬಿ ಸಿನಿಮಾ ಮಾಡಲು ಹೊರಟಿದ್ದಾರೆ. ತಮ್ಮ ಚಿತ್ರಕ್ಕಾಗಿ ರೋಹಿತ್ ಶೆಟ್ಟಿ ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಅವರ ಆತ್ಮಚರಿತ್ರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬಾಂದ್ರಾ ಹುಡುಗನೊಬ್ಬ ಪೊಲೀಸ್ ಉನ್ನತ ಅಧಿಕಾರಿ ಆಗುವ ಸ್ಫೂರ್ತಿ ತುಂಬುವ ಕಥೆ ಇದಾಗಿದೆ. ಮಾರಿಯ ಅವರ ಪಾತ್ರದಲ್ಲಿ ಜಾನ್ ಅಬ್ರಾಹಂ ಅಭಿನಯಿಸಲಿದ್ದಾರೆ. ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಈ ಸಿನಿಮಾ ತಯಾರಾಗಲಿದೆ.
ರೋಹಿತ್ ಶೆಟ್ಟಿ ಮೊದಲಿಂದಲೂ ನೈಜ ಕಥೆ ಆಧರಿತ ಸಿನಿಮಾ ಮಾಡಲು ಬಹಳಷ್ಟು ಆಸಕ್ತಿ ವಹಿಸುತ್ತಾ ಬಂದಿದ್ದಾರೆ. ಇದೀಗ ರಾಕೇಶ್ ಮಾರಿಯಾ ಆತ್ಮಚರಿತ್ರೆಯಲ್ಲಿ ಮುಂಬೈಯ ಭಯೋತ್ಪಾದಕ ದಾಳಿ, ಭೂಗತ ಜಗತ್ತಿನ ಅನಾವರಣ ಇತ್ಯಾದಿ ವಿಚಾರವನ್ನು ಸಿನಿಮಾ ಮೂಲಕ ತರುವ ಪ್ರಯತ್ನಕ್ಕೆ ರೋಹಿತ್ ಮುಂದಾಗಿದ್ದಾರೆ. ಬಿಗ್ ಬಜೆಟ್‌ನ ಈ ಸಿನಿಮಾದಲ್ಲಿ 150 ಟೆಕ್ನಿಶಿಯನ್ ಕೆಲಸ ಮಾಡಲಿದ್ದಾರೆ.
ಇದನ್ನು ಓದಿ: Suthradhari Movie: ಚಂದನ್ ಶೆಟ್ಟಿ ಅಭಿನಯದ ʼಸೂತ್ರಧಾರಿʼ ಚಿತ್ರ ಮೇ 9 ಕ್ಕೆ ರಿಲೀಸ್
ಮುಂಬೈ ಸುತ್ತಮುತ್ತಲಿನ 40 ಪ್ರತಿಷ್ಠಿತ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ಇದರಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಡೋಂಗ್ರಿ, ತಾಜ್ ಹೋಟೆಲ್‌ನಂತಹ ಸ್ಥಳದಲ್ಲಿ ಶೂಟಿಂಗ್ ನಡೆಸಲು ಯೋಜನೆ ರೂಪಿಸಲಾಗಿದೆ. ಏಪ್ರಿಲ್ 18ರಂದು ಟ್ರೋಂಬೆಯ ಎಸೆಲ್ ಸ್ಟುಡಿಯೋದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, ಕೆಲವೇ ತಿಂಗಳಲ್ಲಿ ಚಿತ್ರದ ಪ್ರಮುಖ ಭಾಗವನ್ನು ಪೂರ್ಣಗೊಳಿಸುವ ಗುರಿಯನ್ನು ಸಿನಿಮಾ ತಂಡ ಹೊಂದಿದೆ. ಅದಾಗ್ಯೂ ಸಿನಿಮಾ ಹೆಸರು ಮತ್ತು ಪಾತ್ರ ವರ್ಗಗಳ ಬಗ್ಗೆ ಚಿತ್ರತಂಡ ಗೌಪ್ಯತೆ ಕಾಯ್ದಿಟ್ಟುಕೊಂಡಿದೆ.