ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Valmiki Corporation scam: ಮಾಜಿ ಸಚಿವ ನಾಗೇಂದ್ರಗೆ ಸೇರಿದ 8.07 ಕೋಟಿ ಮೌಲ್ಯದ ಸ್ಥಿರಾಸ್ತಿ ಜಪ್ತಿ ಮಾಡಿದ ಇಡಿ

former minister B Nagendra: ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್​ಗಳಡಿಯಲ್ಲಿ ವಸತಿ ಮತ್ತು ವಾಣಿಜ್ಯ ಆಸ್ತಿ ಸೇರಿ 4 ಸ್ಥಿರಾಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಇದರಿಂದ ಈ ಪ್ರಕರಣದಲ್ಲಿ ಈವರೆಗೆ ಜಪ್ತಿ ಮಾಡಿದ ಒಟ್ಟು ಮೊತ್ತ 13.01 ಕೋಟಿ ರೂ.ಗಳಾಗಿದೆ.

ಮಾಜಿ ಸಚಿವ ನಾಗೇಂದ್ರಗೆ ಸೇರಿದ 8.07 ಕೋಟಿ ಮೌಲ್ಯದ ಸ್ಥಿರಾಸ್ತಿ ಜಪ್ತಿ

ಮಾಜಿ ಸಚಿವ ಬಿ.ನಾಗೇಂದ್ರ -

Prabhakara R
Prabhakara R Dec 19, 2025 9:59 PM

ಬೆಂಗಳೂರು, ಡಿ.19: ವಾಲ್ಮೀಕಿ ನಿಗಮ ಹಗರಣಕ್ಕೆ (Valmiki Corporation scam) ಸಂಬಂಧಿಸಿ ಜಾರಿ ನಿರ್ದೇಶನಾಲಯವು ಮಾಜಿ‌ ಸಚಿವ ಬಿ.ನಾಗೇಂದ್ರ‌ಗೆ (B Nagendra) ಸೇರಿದ 8.07 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಜಪ್ತಿ ಮಾಡಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್​ಗಳಡಿಯಲ್ಲಿ ವಸತಿ ಮತ್ತು ವಾಣಿಜ್ಯ ಆಸ್ತಿ ಸೇರಿ 4 ಸ್ಥಿರಾಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಇದರಿಂದ ಈ ಪ್ರಕರಣದಲ್ಲಿ ಈವರೆಗೆ ಜಪ್ತಿ ಮಾಡಿದ ಒಟ್ಟು ಮೊತ್ತ 13.01 ಕೋಟಿ ರೂ.ಗಳಾಗಿದೆ.

ವಾಲ್ಮೀಕಿ ನಿಗಮದ ಹಣ ದುರುಪಯೋಗ ಹಾಗೂ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿ ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ರಾಜ್ಯದ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಆಧಾರದ ಮೇಲೆ ಇ.ಡಿ ತನಿಖೆ ಆರಂಭಿಸಿತ್ತು. ಮೊದಲು ಕರ್ನಾಟಕ ಹಾಗೂ ಇತರೆ ರಾಜ್ಯಗಳ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಪ್ರಕರಣದಲ್ಲಿ ಬಿ.ನಾಗೇಂದ್ರ ಸೇರಿ 6 ಮಂದಿಯನ್ನು ಬಂಧಿಸಿತ್ತು. ನಂತರ ನಾಗೇಂದ್ರ ಸೇರಿ 25 ಮಂದಿ ವಿರುದ್ಧ 2024ರ ಸೆಪ್ಟೆಂಬರ್ 9ರಂದು ನಗರ ಪ್ರಧಾನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು. 2025ರ ಆಗಸ್ಟ್ 26ರಂದು ಆರೋಪಿಗಳಿಗೆ ಸೇರಿದ 4.94 ಕೋಟಿ ಮೌಲ್ಯದ ಚರ ಹಾಗೂ ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಲಾಗಿತ್ತು.

ನಾಗೇಂದ್ರ ಅವರು ಅಕ್ರಮವಾಗಿ ಗಳಿಸಿರುವ ಹಣವನ್ನು ಪತ್ತೆ ಮಾಡಲು ಎಲ್ಲ ರೀತಿಯ ಪ್ರಯತ್ನ ಮಾಡಲಾಯಿತು. ಅವರು ಬಹತೇಕ ಹಣವನ್ನು ಖರ್ಚು ಮಾಡಿರಬಹುದು ಅಥವಾ ಬಚ್ಚಿಟ್ಟಿರಬಹುದು. ಹಾಗಾಗಿ ಅಪರಾಧ ಕೃತ್ಯದಿಂದ ಸಂಪಾದಿಸಿದ್ದ ಅಷ್ಟೇ ಮೊತ್ತದ ಇತರೆ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಇಡಿ ಹೇಳಿದೆ.

ಏನಿದು ಪ್ರಕರಣ?

ವಾಲ್ಮೀಕಿ ನಿಗಮದ ಸುಮಾರು 187 ಕೋಟಿ ರೂ. ಹಣವನ್ನು ಅನಧಿಕೃತವಾಗಿ ಖಾಸಗಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಪೈಕಿ ಸುಮಾರು 88 ಕೋಟಿ ರೂ.ಗಳನ್ನು ನಕಲಿ ಖಾತೆಗಳ ಮೂಲಕ ತೆಲಂಗಾಣ ಮತ್ತು ಕರ್ನಾಟಕದ ವಿವಿಧ ಶೆಲ್ ಕಂಪನಿಗಳಿಗೆ ವರ್ಗಾಯಿಸಿ, ನಂತರ ಅದನ್ನು ಚುನಾವಣಾ ಉದ್ದೇಶಕ್ಕೆ ಮತ್ತು ವೈಯಕ್ತಿಕ ಲಾಭಕ್ಕೆ ಬಳಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.

ಜಮೀನು ಅಕ್ರಮ ಪ್ರಕರಣದಲ್ಲಿ ಆರ್‌ ಅಶೋಕ್‌ಗೆ ಸುಪ್ರೀಂ ಕೋರ್ಟ್‌ ಬಿಗ್ ರಿಲೀಫ್‌

ವಾಲ್ಮೀಕಿ ನಿಗಮ ಅಧೀಕ್ಷಕ ಚಂದ್ರಶೇಖರ್ ಅವರು ಶಿವಮೊಗ್ಗ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ನಂತರ ಈ ಹಗರಣವು ಬೆಳಕಿಗೆ ಬಂದಿತ್ತು. ಅವರ ಡೆತ್ ನೋಟ್‌ನಲ್ಲಿ ಸಚಿವರ ಮೌಖಿಕ ಆದೇಶದಂತೆ ಹಣ ವರ್ಗಾವಣೆಯಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಇದರಿಂದ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಇಡಿ ಅಧಿಕಾರಿಗಳು ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಇಡಿಯಿಂದ ಬಂಧನಕ್ಕೊಳಗಾಗಿ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.