ಬಾಲಿವುಡ್ ನಟ ಮತ್ತು ಸಲ್ಮಾನ್ ಖಾನ್ ಅವರ ಸಹೋದರ ಸೋಹೈಲ್ ಖಾನ್ ತಮ್ಮ ಹಿರಿಯ ಮಗ ನಿರ್ವಾಣ್ ಖಾನ್ ಹೆಸರಿನ ಹಿಂದಿನ ಸ್ವಾರಸ್ಯಕರ ಗುಟ್ಟೊಂದನ್ನು ಬಿಚ್ಚಿಟ್ಟಿದ್ದಾರೆ. ತಮಗೆ ಮೊದಲ ಮಗನಿಗೆ 'ರಾಮ್ ಖಾನ್' ಎಂದು ಹೆಸರಿಡಲು ಬಯಸಿದ್ದೆ ಎಂದು ಅವರು ತಿಳಿಸಿದ್ದಾರೆ. 'ಅಲಯನ್ಸ್' (Alliance) ರಿಯಾಲಿಟಿ ಶೋನಲ್ಲಿ ಸಹ-ಸ್ಪರ್ಧಿ ಅಲಿ ಗೋನಿ ಅವರೊಂದಿಗೆ ನಡೆಸಿದ ಸಂಭಾಷಣೆಯ ವೇಳೆ ಸೋಹೈಲ್ ಈ ಇಂಟರೆಸ್ಟಿಂಗ್ ವಿಷಯವನ್ನು ಹಂಚಿಕೊಂಡಿದ್ದಾರೆ.
'ರಾಮ್ ಖಾನ್' ಹೆಸರಿನ ಹಿಂದಿನ ಒಪ್ಪಂದ
ಶೋನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸೋಹೈಲ್ ಮಾಜಿ ಪತ್ನಿ ಸೀಮಾ ಸಜ್ದೇಹ್ ಮತ್ತು ಸೋಹೈಲ್ ಖಾನ್ ಅವರ ಪೋಷಣೆಯ ಶೈಲಿಯನ್ನು ಅಲಿ ಗೋನಿ ಶ್ಲಾಘಿಸಿದರು. "ನಾನು ನಿಮ್ಮ ಮಕ್ಕಳನ್ನು ಭೇಟಿಯಾಗಿದ್ದೇನೆ, ಅವರು ತುಂಬಾ ಸುಸಂಸ್ಕೃತರಾಗಿದ್ದಾರೆ ಮತ್ತು ನಿಮ್ಮದೇ ಪ್ರತಿರೂಪವಾಗಿದ್ದಾರೆ" ಎಂದು ಅಲಿ ಗೋನಿ ಹೇಳಿದರು.
ಇದಕ್ಕೆ ಉತ್ತರಿಸಿದ ಸೋಹೈಲ್ ಖಾನ್, "ಸೀಮಾ ಗರ್ಭಿಣಿಯಾಗಿದ್ದಾಗ ನಾವಿಬ್ಬರೂ ತಮಾಷೆಯ ಒಪ್ಪಂದ ಮಾಡಿಕೊಂಡಿದ್ದೆವು. ಗಂಡು ಮಗು ಹುಟ್ಟಿದರೆ ನಾನು ಹೆಸರಿಡುವುದು, ಹೆಣ್ಣು ಮಗು ಹುಟ್ಟಿದರೆ ಸೀಮಾ ಹೆಸರಿಡುವುದು ಎಂದು ನಿರ್ಧರಿಸಲಾಗಿತ್ತು. ಆ ಸಮಯದಲ್ಲಿ ನನ್ನ ಮಗನಿಗೆ 'ರಾಮ್ ಖಾನ್' ಎಂದು ಹೆಸರಿಡಬೇಕು ಎಂಬುದು ನನ್ನ ಆಸೆಯಾಗಿತ್ತು. ನಾವು ಆ ವಿಷಯದಲ್ಲಿ ತುಂಬಾ ಜಾತ್ಯತೀತರಾಗಿದ್ದೇವೆ" ಎಂದು ನೆನಪಿಸಿಕೊಂಡರು.
Salman Khan: ಆಮೀರ್ ಖಾನ್ ಕಾಲೆಳೆದ ಸಲ್ಮಾನ್ ಖಾನ್; ಫುಲ್ ವೈರಲ್ ಆಗ್ತಿದೆ ಈ ವಿಡಿಯೊ
ಕೊನೆ ಕ್ಷಣದಲ್ಲಿ ಬದಲಾದ ಪ್ಲ್ಯಾನ್
ಆದರೆ ಹೆರಿಗೆಯ ನಂತರ ಸೀಮಾ ಪ್ರಜ್ಞೆಗೆ ಬಂದಾಗ ಎಲ್ಲವೂ ಬದಲಾಯಿತು. ಡಾಕ್ಟರ್ ಗಂಡು ಮಗು ಎಂದು ಹೇಳಿದಾಗ ಸೋಹೈಲ್ ರೂಮ್ ಒಳಗೆ ಹೋದರು. ಆಗ ಅರೆಪ್ರಜ್ಞೆಯಲ್ಲೇ ಇದ್ದ ಸೀಮಾ, ಸೋಹೈಲ್ ಅವರತ್ತ ನೋಡಿ, 'ನಿರ್ವಾಣ್ ಹೇಗಿದ್ದಾನೆ?' ಎಂದು ಕೇಳಿದ್ದಳು. ಸೀಮಾ ಆ ಹೆಸರನ್ನು ಹೇಳಿದ ರೀತಿ ಇಷ್ಟವಾದ ಕಾರಣ ಸೋಹೈಲ್ ಅದನ್ನೇ ಫೈನಲ್ ಮಾಡಿದರು. ನಿರ್ವಾಣ್ ಬೆಳೆಯುತ್ತಾ ತನ್ನ ಹೆಸರಿನಂತೆಯೇ ತುಂಬಾ ಶಾಂತ ಸ್ವಭಾವವನ್ನು ಹೊಂದಿದ್ದಾನೆ ಎಂದು ಸೋಹೈಲ್ ತಮಾಷೆ ಮಾಡಿದ್ದಾರೆ.
ವಿಚ್ಛೇದನದ ಬಳಿಕವೂ ಮುಂದುವರಿದ ಗೌರವ
ಸೋಹೈಲ್ ಖಾನ್ ಮತ್ತು ಸೀಮಾ ಸಜ್ದೇಹ್ 1998ರಲ್ಲಿ ಪ್ರೇಮ ವಿವಾಹವಾಗಿದ್ದರು. ಸುಮಾರು 24 ವರ್ಷಗಳ ದಾಂಪತ್ಯ ಜೀವನದ ನಂತರ 2022ರಲ್ಲಿ ಬೇರ್ಪಟ್ಟ ಈ ಮಾಜಿ ದಂಪತಿ, ಸದ್ಯ ತಮ್ಮ ಮಕ್ಕಳಾದ ನಿರ್ವಾಣ್ ಮತ್ತು ಯೋಹಾನ್ ಅವರ ಜವಾಬ್ದಾರಿಯನ್ನು ಜಂಟಿಯಾಗಿ ನಿಭಾಯಿಸುತ್ತಿದ್ದಾರೆ. ಸೀಮಾ ಪ್ರಸ್ತುತ ವಿಕ್ರಮ್ ಅಹುಜಾ ಅವರೊಂದಿಗೆ ರಿಲೇಶನ್‌ಶಿಪ್‌ನಲ್ಲಿದ್ದಾರೆ.
Salman Khan : ಗೆಳತಿ ನಿಧನದಿಂದ ತೀವ್ರ ದುಃಖಿತರಾದ ಸಲ್ಮಾನ್ ಖಾನ್; ಯಾರು ಈ ಕುಮುದ್ ರಾಣೆ ?
ತಪ್ಪುಗಳಾಗಿದ್ದರೆ ಅದರ ಸಂಪೂರ್ಣ ಹೊಣೆ ನನ್ನದು
ಶೋನಲ್ಲಿ ಸೀಮಾ ಅವರನ್ನು ಸ್ವಾಗತಿಸುತ್ತಾ ಸೋಹೈಲ್, "ನಮ್ಮ ನಡುವೆ ಏನಾದರೂ ತಪ್ಪುಗಳಾಗಿದ್ದರೆ ಅದರ ಸಂಪೂರ್ಣ ಹೊಣೆ ನಾನೇ ಹೊರತ್ತೇನೆ" ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಮತ್ತೊಂದು ಎಪಿಸೋಡ್‌ನಲ್ಲಿ ತಮ್ಮ ವೈವಾಹಿಕ ಜೀವನ ಮುರಿದುಬಿದ್ದಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದ ಸೋಹೈಲ್, "ಆ ಸಮಯದಲ್ಲಿ ನನ್ನ ಕೆಲಸ ಮತ್ತು ಮನಸ್ಥಿತಿ ಸರಿಯಿರಲಿಲ್ಲ, ನನ್ನ ವರ್ತನೆಯಿಂದಾಗಿ ನಾನು ನಿಜವಾಗಿಯೂ ಪ್ರೀತಿಸಿದ ವ್ಯಕ್ತಿಯನ್ನು ಕಳೆದುಕೊಂಡೆ. ಅವಳು ನನ್ನ ಇಬ್ಬರು ಮಕ್ಕಳ ತಾಯಿ, ಹಾಗಾಗಿ ಪ್ರೀತಿಗಿಂತ ಹೆಚ್ಚಾಗಿ ನನಗೆ ಸೀಮಾ ಮೇಲೆ ಅಪಾರ ಗೌರವವಿದೆ" ಎಂದಿದ್ದಾರೆ.
ಈ ರಿಯಾಲಿಟಿ ಶೋ ತಮಗೆ ನೆನಪಿನಲ್ಲಿ ಉಳಿಯುತ್ತದೆ ಎಂದಿರುವ ಸೋಹೈಲ್, ಬೇರ್ಪಟ್ಟಿದ್ದ ತಮಗೆ ಈ ಶೋ ಮನಸ್ಸು ಬಿಚ್ಚಿ ಮಾತನಾಡಲು ಮತ್ತು ಕಳೆದುಹೋಗಿದ್ದ ಕೊಂಡಿಯನ್ನು ಮತ್ತೆ ಜೋಡಿಸಲು ಸಹಾಯ ಮಾಡಿದೆ ಎಂದು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ.