Salman Khan: ರಶ್ಮಿಕಾಗೆ ಮಗಳಾದರೆ ಆಕೆಯ ಜತೆಗೂ ನಟಿಸುವೆ; ಏಜ್ ಗ್ಯಾಪ್ ಪ್ರಶ್ನಿಸಿದವರಿಗೆ ತಿರುಗೇಟು ಕೊಟ್ಟ ಸಲ್ಮಾನ್ ಖಾನ್
Sikandar Trailer: ಈ ವರ್ಷದ ಬಹು ನಿರೀಕ್ಷಿತ ಬಾಲಿವುಡ್ ಚಿತ್ರ ʼಸಿಕಂದರ್ʼನ ಟ್ರೈಲರ್ ರಿಲೀಸ್ ಆಗಿದೆ. ಸಲ್ಮಾನ್ ಖಾನ್-ರಶ್ಮಿಕಾ ಮಂದಣ್ಣ ನಟನೆಯ ಈ ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮ ಮುಂಬೈಯಲ್ಲಿ ನಡೆಯಿತು. ಈ ವೇಳೆ ಏಜ್ ಗ್ಯಾಪ್ ಬಗ್ಗೆ ಟ್ರೋಲ್ ಮಾಡುತ್ತಿರುವವರಿಗೆ ಸಲ್ಮಾನ್ ಖಾನ್ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಅವರೇನು ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.

ಸಲ್ಮಾನ್ ಖಾನ್-ರಶ್ಮಿಕಾ ಮಂದಣ್ಣ.

ಮುಂಬೈ: ʼʼಸಿಕಂದರ್ʼ (Sikandar) ಚಿತ್ರದಲ್ಲಿ ನನ್ನೊಂದಿಗೆ ನಟಿಸಿದ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ನನಗೆ 31 ವರ್ಷಗಳ ಅಂತರವಿದೆ ಎಂದು ಹಲವರು ಟೀಕಿಸುತ್ತಿದ್ದಾರೆ. ಆದರೆ ರಶ್ಮಿಕಾಗೆ ಈ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಆಕೆಯ ತಂದೆಯೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಅವರಿಗೆ ಇಲ್ಲದ ಸಮಸ್ಯೆ ನಿಮಗ್ಯಾಕೆ? ರಶ್ಮಿಕಾಗೆ ಮದುವೆಯಾಗಿ ಆಕೆಗೆ ಮಗಳಾದರೆ, ಅನುಮತಿ ನೀಡಿದರೆ ಮಗಳ ಜತೆಗೂ ನಟಿಸುತ್ತೇನೆʼʼ- ಇದು ಸಲ್ಮಾನ್ ಖಾನ್ (Salman Khan) ಏಜ್ ಗ್ಯಾಪ್ ಬಗ್ಗೆ ಟ್ರೋಲ್ ಮಾಡುತ್ತಿರುವವರಿಗೆ ನೀಡಿದ ಖಡಕ್ ಪ್ರತಿಕ್ರಿಯೆ. ಮುಂಬೈಯಲ್ಲಿ ನಡೆದ ಈ ವರ್ಷದ ಬಹುನಿರೀಕ್ಷಿತ ʼಸಿಕಂದರ್ʼ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಕೊಂಚ ಖಾರವಾಗಿಯೇ ಮಾತನಾಡಿದರು. ಈ ವೇಳೆ ವೇದಿಕೆಯಲ್ಲಿದ್ದ ರಶ್ಮಿಕಾ ಮಂದಣ್ಣ ನಗುತ್ತಾ ಈ ಮಾತಿಗೆ ಬೆಂಬಲ ಸೂಚಿಸಿದರು.
ಸದ್ಯ ಸಲ್ಮಾನ್ ಖಾನ್ ಅವರಿಗೆ 59 ವರ್ಷ ಮತ್ತು ರಶ್ಮಿಕಾ ಮಂದಣ್ಣ ಅವರಿಗೆ 28 ವರ್ಷ. ಇವರಿಬ್ಬರು ಎ.ಆರ್.ಮುರುಗದಾಸ್ ನಿರ್ದೇಶನದ ʼಸಿಕಂದರ್ʼ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದಾರೆ.
ಏಜ್ ಗ್ಯಾಪ್ ಬಗ್ಗೆ ಸಲ್ಮಾನ್ ಮಾತನಾಡಿರುವ ವಿಡಿಯೊ ಇಲ್ಲಿದೆ:
Megastar #SalmanKhan giving a reply to trollers in his own way at the #SikandarTrailer launch event:
— 𝑺ᴀʟᴍᴀɴᴏᴘʜɪʟᴇ 🚩 (@katarsalmanfan) March 23, 2025
They say there’s a 31-year difference between the heroine and me. If the heroine has no problem with it and her father has no problem, why do you have 😂🔥. #Sikandar pic.twitter.com/scb9t2NfrF
ಈ ಸುದ್ದಿಯನ್ನೂ ಓದಿ: Sikandar Trailer Out: ʼಸಿಕಂದರ್ʼ ಚಿತ್ರದ ಟ್ರೈಲರ್ ಔಟ್; ಸಲ್ಮಾನ್ ಖಾನ್ ಜತೆ ಮಿಂಚಿದ ರಶ್ಮಿಕಾ, ಕಿಶೋರ್
ಟ್ರೋಲಿಗರ ಬಾಯಿ ಮುಚ್ಚಿಸಿದ ಸಲ್ಮಾನ್
ʼಸಿಕಂದರ್ʼ ಚಿತ್ರ ಘೋಷಣೆಯಾದಾಗಿನಿಂದ ಸಲ್ಮಾನ್ ಖಾನ್ ಟ್ರೋಲಿಗರಿಗೆ ಆಹಾರವಾಗುತ್ತಲೇ ಬಂದಿದ್ದಾರೆ. ಸಲ್ಮಾನ್ ಮತ್ತು ರಶ್ಮಿಕಾಗೆ 31 ವರ್ಷ ಅಂತರವಿರುವ ಕಾರಣ ಹಲವರು ಈ ವಿಚಾರ ಪ್ರಸ್ತಾವಿಸುತ್ತಲೇ ಇದ್ದಾರೆ. ತಮಗಿಂತ 2 ಪಟ್ಟು ಕಡಿಮೆ ವಯಸ್ಸಿನ ನಾಯಕಿ ಜತೆ ತೆರೆಮೇಲೆ ರೊಮ್ಯಾನ್ಸ್ ಮಾಡುತ್ತಿರುವ ಬಗ್ಗೆ ವಿವಿಧ ಮೀಮ್ಸ್ ಹರಿಯಬಿಟ್ಟು ಟ್ರೋಲ್ ಮಾಡುತ್ತಿದ್ದಾರೆ. ಇದುವರೆಗೆ ಈ ಬಗ್ಗೆ ಮೌನ ವಹಿಸಿದ್ದ ಸಲ್ಮಾನ್ ಇದೀಗ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸದ್ಯ ಸಲ್ಮಾನ್ ಖಾನ್ ಅವರ ಈ ಪ್ರತಿಕ್ರಿಯೆಗೆ ಫ್ಯಾನ್ಸ್ ಸಂತಸ ವ್ಯಕ್ತಪಡಿಸಿದ್ದಾರೆ. ಸರಿಯಾಗಿಯೇ ಟ್ರೋಲಿಗರ ಬೆಂಡೆತ್ತಿದ್ದಾರೆ ಎಂದು ಹೇಳಿದ್ದಾರೆ. ಈ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೈ ಹಿಡಿದು ತಂದೆಯನ್ನು ಕರೆತಂದ ಸಲ್ಮಾನ್
ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ 89 ವರ್ಷದ ತಮ್ಮ ತಂದೆ ಸಲೀಂ ಖಾನ್ ಅವರನ್ನು ಸಲ್ಮಾನ್ ಎಚ್ಚರಿಕೆಯಿಂದ ಕರೆ ತಂದರು. ಮೆಟ್ಟಿಲು ಹತ್ತಲು ತಂದೆಗೆ ಸಲ್ಮಾನ್ ನೆರವಾಗಿದ್ದು ನೆಟ್ಟಿಗರ ಗಮನ ಸೆಳೆದಿದೆ. ತಂದೆಯ ಜತೆಗೆ ಹೆಜ್ಜೆ ಹಾಕಿದ ಸಲ್ಮಾನ್ ಸ್ಟಾರ್‌ಗಿರಿ ಪಕ್ಕಕ್ಕಿಟ್ಟು ಮಗನಾಗಿ ಅವರಿಗೆ ನೆರವಾದರು. ಕೈಯನ್ನು ಗಟ್ಟಿಯಾಗಿ ಹಿಡಿದು ಮೆಟ್ಟಿಲು ಹತ್ತಿಸಿದರು. ಸದ್ಯ ಈ ವಿಡಿಯೊ ನೋಡಿದ ಹಲವರು ಸಲ್ಮಾನ್ ಖಾನ್ ನಡೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಎಷ್ಟೇ ದೊಡ್ಡ ಸ್ಟಾರ್ ಆದರೂ ತಂದೆಯ ವಿಷಯಕ್ಕೆ ಬಂದಾಗ ಆತ ಮಗನೇ ಆಗಿರುತ್ತಾನೆ ಎನ್ನುವುದಕ್ಕೆ ಇದು ಉದಾಹರಣೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಮಾ. 30ರಂದು ʼಸಿಕಂದರ್ʼ ರಿಲೀಸ್
ಮೊದಲಿನಿಂದಲೂ ತೀವ್ರ ಕುತೂಹಲ ಕೆರಳಿಸಿರುವ ʼಸಿಕಂದರ್ʼ ಚಿತ್ರ ಮಾ. 30ರಂದು ತೆರೆಗೆ ಅಪ್ಪಳಿಸಲಿದೆ. ಸಲ್ಮಾನ್ ಖಾನ್-ರಶ್ಮಿಕಾ ಮಂದಣ್ಣ ಜತೆಗೆ ಸ್ಯಾಂಡಲ್‌ವುಡ್ ನಟ ಕಿಶೋರ್, ಕಾಜಲ್ ಅಗರ್‌ವಾಲ್, ಸತ್ಯರಾಜ್ ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.