ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Rang Kesari: ಟೀಕೆಗಳಿಗೆ ಹಾಡಿನ ಮೂಲಕವೇ ಉತ್ತರ ಕೊಟ್ಟ ಸಲ್ಮಾನ್ ಖಾನ್! ‘ರಂಗ್ ಕೇಸರಿ’ ಸಾಂಗ್‌ ಔಟ್‌

Rang Kesari: ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಸಿನಿಮಾ ಸದ್ಯ ಸಾಕಷ್ಟು ಚರ್ಚೆಯಲ್ಲಿದೆ. ಈ ಚಿತ್ರದ ‘ತೇರಿ ಸೆಕ್ಸಿ ಬ್ಯೂಟಿ’ ಮತ್ತು ‘ಮದಿರಾಪನ್’ ಹಾಡುಗಳು ಬಿಡುಗಡೆಯಾದಾಗಿನಿಂದಲೂ ವಿವಾದಕ್ಕೆ ಕಾರಣವಾಗಿದ್ದವು. ಯುದ್ಧದ ಹಿನ್ನೆಲೆಯುಳ್ಳ ಸಿನಿಮಾದಲ್ಲಿ ಇಂತಹ ಹಾಡುಗಳ ಅಗತ್ಯವೇನಿತ್ತು ಎಂದು ಹಲವರು ಪ್ರಶ್ನಿಸಿದ್ದರು. ಇದೀಗ ಈ ಟೀಕೆಗಳ ನಡುವೆಯೇ ಸಲ್ಮಾನ್ ಖಾನ್ ಹೊಸ ದೇಶಭಕ್ತಿ ಗೀತೆಯನ್ನು ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಸಲ್ಮಾನ್‌ ಖಾನ್‌

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅಭಿನಯದ ಬಹುನಿರೀಕ್ಷಿತ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಸಿನಿಮಾ ಸದ್ಯ ಸಾಕಷ್ಟು ಚರ್ಚೆಯಲ್ಲಿದೆ. ಈ ಚಿತ್ರದ ‘ತೇರಿ ಸೆಕ್ಸಿ ಬ್ಯೂಟಿ’ ಮತ್ತು ‘ಮದಿರಾಪನ್’ (Madi Rapan) ಹಾಡುಗಳು ಬಿಡುಗಡೆಯಾದಾಗಿನಿಂದಲೂ ವಿವಾದಕ್ಕೆ ಕಾರಣವಾಗಿದ್ದವು. ಯುದ್ಧದ ಹಿನ್ನೆಲೆಯುಳ್ಳ ಸಿನಿಮಾದಲ್ಲಿ ಇಂತಹ ಹಾಡುಗಳ ಅಗತ್ಯವೇನಿತ್ತು ಎಂದು ಹಲವರು ಪ್ರಶ್ನಿಸಿದ್ದರು. ಇದೀಗ ಈ ಟೀಕೆಗಳ ನಡುವೆಯೇ ಸಲ್ಮಾನ್ ಖಾನ್ ಹೊಸ ದೇಶಭಕ್ತಿ ಗೀತೆಯನ್ನು ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

‘ಮಾತೃಭೂಮಿ’ಯಿಂದ ‘ರಂಗ್ ಕೇಸರಿ’ ಹಾಡು ಬಿಡುಗಡೆ

ಭಾನುವಾರ ಸಲ್ಮಾನ್ ಖಾನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ‘ರಂಗ್ ಕೇಸರಿ’ ಎಂಬ ಹೊಸ ಹಾಡನ್ನು ಹಂಚಿಕೊಂಡಿದ್ದಾರೆ. ಈ ಹಾಡಿನಲ್ಲಿ ಸಲ್ಮಾನ್ ಖಾನ್ ಜೊತೆಗೆ ಅವರ ಸೈನಿಕರ ತಂಡ ಯುದ್ಧಭೂಮಿಯತ್ತ ಸಾಗುವ ದೃಶ್ಯಗಳಿವೆ. ಭಾರತೀಯ ಸೇನೆಯ ಶೌರ್ಯ, ತ್ಯಾಗ, ಧೈರ್ಯ ಮತ್ತು ದೇಶಕ್ಕಾಗಿ ಪ್ರಾಣವನ್ನೂ ಲೆಕ್ಕಿಸದೆ ಹೋರಾಡುವ ಸೈನಿಕರ ಅಚಲ ಮನೋಭಾವವನ್ನು ಹಾಡು ಸಾರುತ್ತದೆ.

ಇದನ್ನೂ ಓದಿ: Rishab Shetty: ರಿಷಬ್ ಶೆಟ್ಟಿ ಹೊಸ ಸಿನಿಮಾ ಘೋಷಣೆ; ಪೋಸ್ಟರ್‌ ಔಟ್‌!

ಈ ದೇಶಭಕ್ತಿ ಗೀತೆಗೆ ಸುಖ್‌ವಿಂದರ್ ಸಿಂಗ್ ಮತ್ತು ಮೀಟ್ ಬ್ರದರ್ಸ್ ಧ್ವನಿಯಾಗಿದ್ದಾರೆ. ಶಾಯರ್ ಮೀಟ್ ಹಾಡಿನ ಸಾಹಿತ್ಯ ರಚಿಸಿದ್ದಾರೆ.ಹಾಡನ್ನು ಹಂಚಿಕೊಂಡ ಸಲ್ಮಾನ್ ಖಾನ್, "ಮಾತೃಭೂಮಿಯಲ್ಲಿ ದೇಶಭಕ್ತಿ ಗೀತೆ ಕೇಳಬೇಕು ಎಂದು ಕೇಳುತ್ತಿದ್ದಿರಲ್ಲವೇ?" ಎಂಬ ಅರ್ಥ ಬರುವಂತೆ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಚಿತ್ರದ ಹಿಂದಿನ ಹಾಡುಗಳ ಬಗ್ಗೆ ವ್ಯಕ್ತವಾಗಿದ್ದ ಟೀಕೆಗಳಿಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಅಭಿಮಾನಿಗಳಿಂದ ಮೆಚ್ಚುಗೆಯ ಸುರಿಮಳೆ

‘ರಂಗ್ ಕೇಸರಿ’ ಹಾಡು ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವರು ಹಾಡನ್ನು ಅದ್ಭುತ ಎಂದು ಕೊಂಡಾಡಿದ್ದರೆ, ಇನ್ನೂ ಕೆಲವರು ಸುಖ್‌ವಿಂದರ್ ಸಿಂಗ್ ಅವರ ಗಾಯನಕ್ಕೆ ಫಿದಾ ಆಗಿದ್ದಾರೆ.

"ಟ್ರೋಲ್ ಮಾಡುವವರಿಗೆ ಉತ್ತರ ನೀಡುವ ಹಾಡು ಇದು", "ಸುಖ್‌ವಿಂದರ್ ಸಿಂಗ್ ಅವರ ಧ್ವನಿ ಅದ್ಭುತವಾಗಿದೆ", "ಇದೊಂದು ಅತ್ಯುತ್ತಮ ಹಾಡು" ಎಂಬಂತಹ ಕಾಮೆಂಟ್‌ಗಳು ಹರಿದುಬಂದಿವೆ. ಸಲ್ಮಾನ್ ಖಾನ್ ಅವರ ಅಭಿಮಾನಿಗಳಂತೂ ಈ ಹಾಡು ಅವರ ಕಮ್‌ಬ್ಯಾಕ್‌ಗೆ ಮುನ್ನುಡಿ ಬರೆಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿಂದಿನ ಹಾಡುಗಳ ಬಗ್ಗೆ ಏಕೆ ವಿವಾದವಾಗಿತ್ತು?

‘ಮಾತೃಭೂಮಿ’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ಚಿತ್ರಾಂಗದಾ ಸಿಂಗ್ ಕಾಣಿಸಿಕೊಂಡಿರುವ ‘ತೇರಿ ಸೆಕ್ಸಿ ಬ್ಯೂಟಿ’ ಹಾಡು ಬಿಡುಗಡೆಯಾದಾಗಿನಿಂದ ಟೀಕೆಗೆ ಗುರಿಯಾಗಿತ್ತು. ಹಾಡಿನಲ್ಲಿರುವ ಫ್ಲರ್ಟಿಂಗ್ ಸಾಹಿತ್ಯ ಮತ್ತು ಮದ್ಯಪಾನದ ಉಲ್ಲೇಖಗಳು ಹಲವರ ಅಸಮಾಧಾನಕ್ಕೆ ಕಾರಣವಾಗಿದ್ದವು.

2020ರ ಗಲ್ವಾನ್ ಕಣಿವೆಯಲ್ಲಿ ನಡೆದ ಭಾರತ ಮತ್ತು ಚೀನಾ ಸೈನಿಕರ ಸಂಘರ್ಷದ ಹಿನ್ನೆಲೆಯಿಂದ ಸ್ಫೂರ್ತಿ ಪಡೆದಿರುವ ಸಿನಿಮಾದಲ್ಲಿ ಇಂತಹ ಹಾಡುಗಳು ಹೇಗೆ ಹೊಂದಿಕೊಳ್ಳುತ್ತವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಲಾಗಿತ್ತು.

ಇನ್ನೊಂದೆಡೆ, ‘ಮದಿರಾಪನ್’ ಹಾಡಿನಲ್ಲೂ ಸೈನಿಕರು ಮದ್ಯಪಾನ ಮಾಡುತ್ತಾ ಬೆಂಕಿಯ ಸುತ್ತ ನೃತ್ಯ ಮಾಡುವ ದೃಶ್ಯಗಳಿದ್ದವು. ಸೇನೆಯಂತಹ ಗೌರವಾನ್ವಿತ ವ್ಯವಸ್ಥೆಯನ್ನು ತೋರಿಸುವಾಗ ಮದ್ಯಪಾನವನ್ನು ವೈಭವೀಕರಿಸುವ ಅಗತ್ಯವೇನಿತ್ತು ಎಂದು ನೆಟ್ಟಿಗರು ಚಿತ್ರತಂಡವನ್ನು ಪ್ರಶ್ನಿಸಿದ್ದರು.

ಟೀಕೆಗಳಿಗೆ ಸಲ್ಮಾನ್ ಖಾನ್ ಕೊಟ್ಟ ಉತ್ತರವೇನು?

ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಈ ವಿವಾದದ ಬಗ್ಗೆ ಸಲ್ಮಾನ್ ಖಾನ್ ಮಾತನಾಡಿದ್ದರು. ‘ತೇರಿ ಸೆಕ್ಸಿ ಬ್ಯೂಟಿ’ ಹಾಡು ಸಿನಿಮಾದಲ್ಲಿ ಹೇಗೆ ಹೊಂದಿಕೊಳ್ಳುತ್ತದೆ ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿದೆ ಎಂಬುದು ನನಗೆ ಗೊತ್ತು. ಆದರೆ ಸಿನಿಮಾ ನೋಡಿದಾಗ ನಿಮಗೆ ಅದರ ಹಿನ್ನೆಲೆ ಅರ್ಥವಾಗುತ್ತದೆ. ಒಬ್ಬ ಅಧಿಕಾರಿ ಮತ್ತು ಕೆಲವು ಸೈನಿಕರು ತಮ್ಮ ಪತ್ನಿಯರನ್ನು ಹೊಗಳುವ ಸಂದರ್ಭದಲ್ಲಿ ಈ ಹಾಡು ಬರುತ್ತದೆ. ನಾವು ತೋರಿಸಿರುವ ಹಾಡುಗಳ ದೃಶ್ಯಗಳು ಸಿನಿಮಾದಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿರುತ್ತವೆ ಎಂದು ಅವರು ಸ್ಪಷ್ಟಪಡಿಸಿದ್ದರು.

ಡಿಸೆಂಬರ್ 4ಕ್ಕೆ ಚಿತ್ರಮಂದಿರಕ್ಕೆ ‘ಮಾತೃಭೂಮಿ’

ಅಪೂರ್ವ ಲಖಿಯಾ ನಿರ್ದೇಶನದ ಈ ಯುದ್ಧಾಧಾರಿತ ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ಚಿತ್ರಾಂಗದಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರ ಜೊತೆಗೆ ಮುಕೇಶ್ ರಿಷಿ, ಅಂಕುರ್ ಭಾಟಿಯಾ, ಅಭಿಲಾಷ್ ಚೌಧರಿ, ಅಭಿಶ್ರೀ ಸೇನ್, ಝೇನ್ ಶಾ, ಜಾವೇದ್ ಖಾನ್, ಜೈಸನ್ ಥಾಮ್ ಮತ್ತು ವಿಪಿನ್ ಭಾರದ್ವಾಜ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಇದನ್ನೂ ಓದಿ: Bigg Boss kannada 13: ಗಗನ್ ಮಾತಿನಿಂದ ನೊಂದ ಗೆಳೆಯ; ಸುದೀಪ್‌ ಮುಂದೆ ತಾಂಡವ್‌ ರಾಮ್‌ ಕಣ್ಣೀರು

2020ರ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನೀ ಸೈನಿಕರ ನಡುವೆ ನಡೆದ ಸಂಘರ್ಷದಿಂದ ಸ್ಫೂರ್ತಿ ಪಡೆದು ಈ ಸಿನಿಮಾ ರೂಪುಗೊಂಡಿದೆ. ಡಿಸೆಂಬರ್ 4ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ‘ಮಾತೃಭೂಮಿ’ಗೆ ಶ್ರದ್ಧಾ ಕಪೂರ್ ಅಭಿನಯದ ‘ಈಥಾ’ ಸಿನಿಮಾದಿಂದ ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ಎದುರಾಗಲಿದೆ.

Yashaswi Devadiga

View all posts by this author