ಗಾಸಿಪ್ ಕಾಲಂಗಳಲ್ಲಿ ಬಹುದಿನಗಳಿಂದ ಓಡಾಡುತ್ತಿದ್ದ ವದಂತಿಯೊಂದು ಕೊನೆಗೂ ನಿಜವಾಗಿದೆ. ಹೌದು, ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಮತ್ತು ʻದಿ ಫ್ಯಾಮಿಲಿ ಮ್ಯಾನ್ʼ ಡೈರೆಕ್ಟರ್ ರಾಜ್ ನಿಡಿಮೋರು ಅವರು ಒಟ್ಟಿಗೆ ಓಡಾಡುತ್ತಿದ್ದು, ಇವರಿಬ್ಬರು ಲವ್ ಮಾಡುತ್ತಿದ್ದಾರೆ, ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಎಂಬ ವದಂತಿ ಕೇಳಿಬಂದಿತ್ತು. ಆದರೆ ಈ ಬಗ್ಗೆ ಈ ಜೋಡಿ ಏನೊಂದು ಪ್ರತಿಕ್ರಿಯೆ ನೀಡಿರಲಿಲ್ಲ. ಆದರೀಗ ಇವರಿಬ್ಬರು ಸದ್ದಿಲ್ಲದೇ ಸಪ್ತಪದಿ ತುಳಿದು, ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಇವರಿಬ್ಬರಿಗೂ ಇದು ಎರಡನೇ ಮದುವೆ ಅನ್ನೋದು ವಿಶೇಷ.
ಮದುವೆ ನಡೆದಿದ್ದು ಎಲ್ಲಿ?
ಕೊಯಮತ್ತೂರಿನ ಇಶಾ ಯೋಗ ಫೌಂಡೇಶನ್‌ನಲ್ಲಿ ಇರುವ ಲಿಂಗ ಭೈರವಿ ದೇವಿ ದೇವಸ್ಥಾನದಲ್ಲಿ ರಾಜ್ ನಿಡಮೋರು ಮತ್ತು ಸಮಂತಾ ಅವರ ಮದುವೆಯು ನಡೆದಿದೆ. ದೇವಸ್ಥಾನದಲ್ಲಿ ಇಬ್ಬರು ಉಂಗುರ ಬದಲಾಯಿಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ. ಮದುವೆಯನ್ನು ಖಚಿತ ಪಡಿಸಿರುವ ಸಮಂತಾ ಅವರು, ತಮ್ಮ ಇನ್‌ಸ್ಟಾಗ್ರಮ್ ಖಾತೆಯಲ್ಲಿ ಮದುವೆಯ ಒಂದಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಕ್ಯಾಪ್ಷನ್ ಬಾಕ್ಸ್‌ನಲ್ಲಿ ಇಂದಿನ (01.12.2025) ದಿನಾಂಕವನ್ನು ಮೆನ್ಷನ್ ಮಾಡಿದ್ದಾರೆ.
Samantha Ruth Prabhu: ಸಮಂತಾ-ನೀಡಿಮೋರ್ ಡೇಟಿಂಗ್ ಮಾಡುತ್ತಿರುವುದು ನಿಜವೇ? ಏನು ಹೇಳುತ್ತಿವೆ ಈ ಚಿತ್ರಗಳು?
ಸಮಂತಾಗೆ ಇದು ಎರಡನೇ ಮದುವೆ
ನಟಿ ಸಮಂತಾ ಅವರು 2010ರಲ್ಲಿ ನಟ ನಾಗ ಚೈತನ್ಯ ಜೊತೆಗೆ 'ಯೇ ಮಾಯಾ ಚೇಸಾವೆ' ಸಿನಿಮಾದಲ್ಲಿ ನಟಿಸಿದ್ದರು. ಆ ನಂತರ ಅವರಿಬ್ಬರ ನಡುವೆ ಉತ್ತಮ ಆತ್ಮೀಯತೆ ಬೆಳೆದು ಅದು ಪ್ರೀತಿಯಾಗಿ ಮಾರ್ಪಟ್ಟಿತ್ತು. ಕುಟುಂಬದವರ ಒಪ್ಪಿಗೆ ಮೇರೆಗೆ 2017ರ ಅಕ್ಟೋಬರ್‌ನಲ್ಲಿ ಈ ಜೋಡಿಯು ಅದ್ದೂರಿಯಾಗಿ ದಾಂಪತ್ಯ ಬದುಕಿಗೆ ಕಾಲಿಟ್ಟಿತ್ತು. ಆದರೆ 2021ರ ಅಕ್ಟೋಬರ್ 2ರಂದು ಅಧಿಕೃತವಾಗಿ ಈ ಜೋಡಿ ದೂರವಾಗಿತ್ತು. ಆನಂತರ ಒಂಟಿಯಾಗಿದ್ದ ಸಮಂತಾಗೆ ರಾಜ್ ನಿಡಿಮೋರು ಜೊತೆಯಾಗಿದ್ದಾರೆ.
ನಟಿ ಸಮಂತಾ ಅವರ ಮದುವೆ ಫೋಟೋಗಳು
ಅಂದಹಾಗೆ, 2021ರಲ್ಲಿ ಬಿಡುಗಡೆಯಾದ ರಾಜ್ ನಿಡಿಮೋರು ಮತ್ತು ಡಿ ಕೆ ನಿರ್ದೇಶನದ ಸೂಪರ್ ಹಿಟ್ ವೆಬ್ ಸರಣಿ 'ದಿ ಫ್ಯಾಮಿಲಿ ಮ್ಯಾನ್ ಸೀಸನ್ 2'ರಲ್ಲಿ ಸಮಂತಾ ನಟಿಸಿದ್ದರು. ಅಲ್ಲಿಂದ ಇಬ್ಬರ ವೃತ್ತಿಪರ ಒಡನಾಟಕ್ಕೆ ನಾಂದಿ ಹಾಡಿತು. ನಂತರ 'ಸಿಟಾಡೆಲ್: ಹನಿ ಬನಿ' ಸೀರಿಸ್‌ಗಾಗಿ ಮತ್ತೊಮ್ಮೆ ರಾಜ್ ಮತ್ತು ಸಮಂತಾ ಒಂದಾಗಿದ್ದರು. ಆ ಬಳಿಕ ಇಬ್ಬರು ಆಗಾಗ್ಗೆ ಕಾಣಿಸಿಕೊಳ್ಳಲು ಪ್ರಾರಂಭಿಸಿದರು. ಈ ಕಾರಣದಿಂದಾಗಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಡಲು ಪ್ರಾರಂಭಿಸಿದವು. ಇನ್ನು, ರಾಜ್ ಬಗ್ಗೆ ಹೇಳುವುದಾದರೆ, 2015ರಲ್ಲಿಯೇ ಶ್ಯಾಮಿಲಿ ಎಂಬುವವರ ಜೊತೆಗೆ ಮದುವೆಯಾಗಿದ್ದ ರಾಜ್, 2022ರಲ್ಲಿ ಡಿವೋರ್ಸ್ ನೀಡಿದ್ದರು. ಇದೀಗ ಸಮಂತಾ ಮತ್ತು ರಾಜ್ ಅವರು ಹೊಸ ಫ್ಯಾಮಿಲಿ ಶುರು ಮಾಡಿದ್ದಾರೆ.
ಸದ್ಯ ಮದುವೆ ಫೋಟೋಗಳು ಸಖತ್ ವೈರಲ್ ಆಗುತ್ತಿದ್ದು, ಸಮಂತಾ ಮತ್ತು ರಾಜ್ ನಿಡಿಮೋರು ಜೋಡಿಗೆ ಎಲ್ಲರೂ ಶುಭ ಹಾರೈಸುತ್ತಿದ್ದಾರೆ.