ಕಳೆದ ವರ್ಷದಂತೆಯೇ 2026ರಲ್ಲಿಯೂ ಕನ್ನಡ ಚಿತ್ರರಂಗ ಆರಂಭಿಕ ಹಿನ್ನಡೆ ಅನುಭವಿಸಿದೆ. ಅದು ಎಲ್ಲಿಯವರೆಗೆ ಎಂದರೆ, ವರ್ಷದ ಮೊದಲ ಆರು ತಿಂಗಳು ಕಳೆದರೂ ಕನ್ನಡ ಸಿನಿಮಾಗಳ ಒಟ್ಟು ಗಳಿಕೆ 100 ಕೋಟಿ ರೂಪಾಯಿಗಳ ಗಡಿಯನ್ನು ದಾಟಿಲ್ಲ! ಆದರೆ ತೆರೆಕಂಡ ಸಿನಿಮಾಗಳ ಸಂಖ್ಯೆ ಮಾತ್ರ ಶತಕ ದಾಟಿದೆ. ರಿಲೀಸ್ ಆಗಿರುವ ಸಿನಿಮಾಗಳ ಸಂಖ್ಯೆಗೆ ಹೋಲಿಸಿದರೆ ಗೆಲುವಿನ ಪ್ರಮಾಣ ಮಾತ್ರ ತೀರಾ ಕಮ್ಮಿ. ಇದು ಸದ್ಯ ಕನ್ನಡ ಚಿತ್ರರಂಗದಲ್ಲಿ ಆತಂಕದ ಮೋಡಗಳನ್ನು ಸೃಷ್ಟಿಸಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಿರ್ಮಾಪಕರ ಗತಿಯೇನು ಎಂಬ ಪ್ರಶ್ನೆ ಎದುರಾಗಿದೆ.
ಆರು ತಿಂಗಳಲ್ಲಿ ತೆರೆಕಂಡ ಸಿನಿಮಾಗಳೆಷ್ಟು?
ಜನವರಿಯಿಂದ ಜೂನ್‌ವರೆಗೂ ಅಂದಾಜು 100ಕ್ಕೂ ಹೆಚ್ಚು ಸಿನಿಮಾಗಳು ತೆರೆಕಂಡಿವೆ. ಅದರಲ್ಲೂ ಫೆಬ್ರವರಿ ಒಂದೇ ತಿಂಗಳಿನಲ್ಲಿ ಅತಿ ಹೆಚ್ಚು ಅಂದರೆ 23 ಸಿನಿಮಾಗಳು ಬಿಡುಗಡೆಯಾಗಿವೆ. ಜನವರಿಯಲ್ಲಿ 13 ಸಿನಿಮಾಗಳು ತೆರೆಕಂಡರೆ, ಉಳಿದಂತೆ ಮಾರ್ಚ್‌ನಲ್ಲಿ 15, ಏಪ್ರಿಲ್‌ನಲ್ಲಿ 17, ಮೇನಲ್ಲಿ 15 ಹಾಗೂ ಜೂನ್‌ನಲ್ಲಿ 17 ಸಿನಿಮಾಗಳು ಪ್ರದರ್ಶನಗೊಂಡಿವೆ. ವಿಪರ್ಯಾಸವೆಂದರೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕನ್ನಡ ಸಿನಿಮಾಗಳು ತೆರೆಕಂಡಿದ್ದರೂ ಗಲ್ಲಾಪೆಟ್ಟಿಗೆಯ ಫಲಿತಾಂಶ ಮಾತ್ರ ತೀರಾ ನೀರಸವಾಗಿದೆ. ಈ ಎಲ್ಲಾ ಸಿನಿಮಾಗಳ ಒಟ್ಟು ಗಳಿಕೆಯನ್ನು ಲೆಕ್ಕ ಹಾಕಿದರೂ ಅದು 85 ಕೋಟಿ ರೂ. ಕೂಡ ದಾಟಿಲ್ಲ ಎಂಬುದು ಬೇಸರದ ಸಂಗತಿ.
ನೂರರಲ್ಲಿ ಗೆದ್ದವರು ಎಷ್ಟು?
ಈ ವರ್ಷ ಬಂದ ಸಿನಿಮಾಗಳಲ್ಲಿ ದೊಡ್ಡ ಲಾಭ ಮಾಡಿದ ಸಿನಿಮಾವೆಂದರೆ, ಅದು ಡಾರ್ಲಿಂಗ್ ಕೃಷ್ಣ ನಟನೆಯ ʻಲವ್ ಮಾಕ್ಟೇಲ್ 3ʼ. ಕನಿಷ್ಠ ಬಜೆಟ್‌ನಲ್ಲಿ ತಯಾರಾದ ಈ ಚಿತ್ರದ ಗಳಿಕೆಯು 18 ಕೋಟಿ ರೂ. ತಲುಪಿ, ನಿರ್ಮಾಪಕರಿಗೆ ದೊಡ್ಡ ಲಾಭ ತಂದುಕೊಟ್ಟಿತು. ಮತ್ತೊಂದೆಡೆ, ಈ ಆರು ತಿಂಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂದರೆ ʻಕೆಡಿʼ. ಇದರ ಒಟ್ಟು ಗಳಿಕೆ 25 ಕೋಟಿ ರೂ. ಎನ್ನಲಾಗಿದೆ. ಆದರೆ, ಇದರ ಬಜೆಟ್ 100 ಕೋಟಿ ರೂ. ಸಮೀಪ ಇದ್ದಿದ್ದರಿಂದ, ಈ ಕಲೆಕ್ಷನ್‌ನಿಂದ ನಿರ್ಮಾಪಕರಿಗೆ ಯಾವುದೇ ಲಾಭವಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ದೊಡ್ಡ ನಿರೀಕ್ಷೆ ಮೂಡಿಸಿದ್ದ ʻದಿ ರೈಸ್ ಆಫ್ ಅಶೋಕʼ ಸೇರಿದಂತೆ ಕೆಲ ಸಿನಿಮಾಗಳು ಪ್ರೇಕ್ಷಕರ ಪ್ರೀತಿ ಗೆಲ್ಲುವಲ್ಲಿ ವಿಫಲವಾದವು. ಇದ್ದುದರಲ್ಲೇ ʻಲ್ಯಾಂಡ್‌ಲಾರ್ಡ್ʼ, ʻರಕ್ಕಸಪುರದೋಳ್ʼ, ʻಲೋ ನವೀನʼ, ʻಸೆಕೆಂಡ್ ಕೇಸ್ ಆಫ್ ಸೀತಾರಾಮ್ʼ, ʻವಲವಾರʼ ಮತ್ತು ʻಬಲರಾಮನ ದಿನಗಳುʼ ಮುಂತಾದ ಕೆಲ ಸಿನಿಮಾಗಳು ಪ್ರೇಕ್ಷಕರಿಂದ ಸಾಧಾರಣ ಪ್ರತಿಕ್ರಿಯೆ ಪಡೆದುಕೊಂಡವು. ʻಕೆಡಿʼ ಮತ್ತು ʻಲವ್ ಮಾಕ್‌ಟೇಲ್ 3ʼ ಬಿಟ್ಟರೆ ಬೇರಾವ ಸಿನಿಮಾಗಳೂ 10 ಕೋಟಿ ರೂ. ಗಡಿ ದಾಟಲು ಸಾಧ್ಯವಾಗಿಲ್ಲ.
Actor Suriya: ಸೂರ್ಯ-ತ್ರಿಶಾ ಕೃಷ್ಣನ್ 'ಕರುಪ್ಪು' ಸಿನಿಮಾ ಬಗ್ಗೆ ಬಂದೇ ಬಿಡ್ತು ಬಿಗ್ ಅಪ್‌ಡೇಟ್!
ಪರಭಾಷೆಯ ಸಿನಿಮಾಗಳಿಗೆ ಚಿನ್ನದ ಗಣಿ!
ಕರ್ನಾಟಕದ ಮಾರುಕಟ್ಟೆಯು ಪರಭಾಷೆಯ ಸಿನಿಮಾಗಳಿಗೆ ಚಿನ್ನದ ಗಣಿಯಾಗಿ ಮಾರ್ಪಟ್ಟು ಹಲವು ವರ್ಷಗಳೇ ಕಳೆದಿವೆ. ಅದರಲ್ಲೂ ಈ ವರ್ಷವಂತೂ ದಾಖಲೆ ಪ್ರಮಾಣದ ಹಣವನ್ನು ಪರಭಾಷೆಯ ಸಿನಿಮಾಗಳು ಬಾಚಿಕೊಂಡಿವೆ. ಆ ಗಳಿಕೆಯ ಮುಂದೆ ಕನ್ನಡ ಸಿನಿಮಾಗಳಿಗೆ ಸಿಕ್ಕಿರುವ ಕಲೆಕ್ಷನ್ ಏನೇನೂ ಅಲ್ಲ. ಹಾಲಿವುಡ್‌ನ ʻಅಬ್ಸೇಷನ್ʼ ಒಂದೇ ಸಿನಿಮಾ ಕರ್ನಾಟಕದಲ್ಲಿ 25+ ಕೋಟಿ ರೂ. ಕಮಾಯಿ ಮಾಡಿದೆ. ಇನ್ನು ʻಕರುಪ್ಪುʼ, ʻದೃಶ್ಯಂ 3ʼ ಮತ್ತು ʻಪೆದ್ದಿʼ ಸಿನಿಮಾಗಳಿಗೆ ಸಾಧಾರಣ (Average) ರಿಪೋರ್ಟ್ ಸಿಕ್ಕರೂ, ಈ ಮೂರು ಸಿನಿಮಾಗಳಿಂದಲೇ ಕರ್ನಾಟಕದಲ್ಲಿ ಸುಮಾರು 70 ಕೋಟಿ ರೂ. ಕಲೆಕ್ಷನ್ ಆಗಿದೆ!
ಈ ವರದಿಗಳನ್ನು ನೋಡಿದರೆ ಕರ್ನಾಟಕದಲ್ಲಿ ಸಿನಿಮಾ ನೋಡುವವರ ಸಂಖ್ಯೆ ಕಡಿಮೆಯಾಗಿಲ್ಲ; ಬದಲಿಗೆ ಕನ್ನಡ ಸಿನಿಮಾಗಳ ಮೇಲಿನ ಪ್ರೇಕ್ಷಕರ ನಂಬಿಕೆ ಕಮ್ಮಿ ಆಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇದನ್ನು ಸ್ಯಾಂಡಲ್‌ವುಡ್ ಮಂದಿ ಆದಷ್ಟು ಬೇಗ ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಮುಂದಿನ ಆರು ತಿಂಗಳ ಕಥೆ ಏನು?
ಮೊದಲ ಆರು ತಿಂಗಳೇನೋ ನೀರಸವಾಗಿ ಕಳೆದುಹೋಗಿದೆ. ಆದರೆ ಮುಂದಿನ ಆರು ತಿಂಗಳೂ ಹೀಗೆಯೇ ಇರಲಿದೆಯೇ? ಖಂಡಿತ ಇಲ್ಲ, ಏಕೆಂದರೆ ಒಂದಷ್ಟು ಭರವಸೆ ಮೂಡಿಸಿರುವ ಸಿನಿಮಾಗಳು ದ್ವಿತಿಯಾರ್ಧದಲ್ಲಿ ತೆರೆಗೆ ಬರಲು ಸಜ್ಜಾಗಿವೆ. ಅದರಲ್ಲಿ ಮೊದಲ ಸ್ಥಾನದಲ್ಲಿ ಇರುವುದು ರಾಕಿಂಗ್ ಸ್ಟಾರ್ ಯಶ್ ನಟನೆಯ ʻಟಾಕ್ಸಿಕ್ʼ ಸಿನಿಮಾ. ಆದರೆ, ಇದು ಬರೀ ಕನ್ನಡ ಸಿನಿಮಾವಲ್ಲ, ಗ್ಲೋಬಲ್ ಸಿನಿಮಾ ಎಂಬುದನ್ನು ನೆನಪಿನಲ್ಲಿಡಬೇಕು.
Peddi Review: ಕ್ರಾಸ್‌ಓವರ್ ಅಥ್ಲೀಟ್ ಪೆದ್ದಿಯ ಸಾಧಾರಣ ಆಟ; ಬದುಕಿನ ಗುರುತಿಗಾಗಿ ನಡೆಯುವ ಅಸಾಧಾರಣ ಹೋರಾಟ!
ಉಳಿದಂತೆ ಶಿವರಾಜ್‌ಕುಮಾರ್ ಅವರ ʻಬೇಲ್ʼ, ʻ666 ಆಪರೇಷನ್ ಡ್ರೀಮ್ ಥಿಯೇಟರ್ʼ, ವಿನಯ್ ರಾಜ್‌ಕುಮಾರ್ ಅವರ ʻಗ್ರಾಮಾಯಣʼ, ʻಸಿಟಿ ಲೈಟ್ಸ್ʼ, ಧನಂಜಯ ನಟನೆಯ ʻಅಣ್ಣಾ ಫ್ರಮ್ ಮೆಕ್ಸಿಕೋʼ, ʻಮದರ್ ಪ್ರಾಮಿಸ್ʼ, ಪ್ರಜ್ವಲ್ ದೇವರಾಜ್ ನಟನೆಯ ʻಕರಾವಳಿʼ ಹಾಗೂ ಗಣೇಶ್ ಅವರ ʻಬೃಂದಾವಿಹಾರಿʼ ಮುಂತಾದ ಚಿತ್ರಗಳು ಸಾಲಿನಲ್ಲಿವೆ. ಇದರ ಜೊತೆಗೆ ಒಂದಷ್ಟು ಹೊಸಬರ ಸಿನಿಮಾಗಳು ಕೂಡ ಜಾದೂ ಮಾಡುವ ನಿರೀಕ್ಷೆ ಇದೆ. ವರ್ಷದ ಉಳಿದ ಆರು ತಿಂಗಳಿನಲ್ಲಾದರೂ ಕನ್ನಡ ಸಿನಿಮಾಗಳಿಗೆ ಜಾಕ್‌ಪಾಟ್ ಹೊಡೆಯಲಿ ಎಂಬುದೇ ಸಿನಿಪ್ರಿಯರ ಆಶಯ.