ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Peddi Review: ಕ್ರಾಸ್‌ಓವರ್ ಅಥ್ಲೀಟ್ ಪೆದ್ದಿಯ ಸಾಧಾರಣ ಆಟ; ಬದುಕಿನ ಗುರುತಿಗಾಗಿ ನಡೆಯುವ ಅಸಾಧಾರಣ ಹೋರಾಟ!

Peddi Movie Review: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಹಾಗೂ ಬುಚ್ಚಿ ಬಾಬು ಸನಾ ಕಾಂಬಿನೇಷನ್‌ನ 'ಪೆದ್ದಿ' ಸಿನಿಮಾ ಇಂದು (ಜೂನ್‌ 4) ಜಾಗತಿಕವಾಗಿ ಬಿಡುಗಡೆಯಾಗಿದೆ. ಕ್ರಾಸ್‌ಓವರ್ ಅಥ್ಲೀಟ್ ಆಗಿ ರಾಮ್ ಚರಣ್ ಮತ್ತು ಕುಸ್ತಿ ಕಲಿಸುವ ಗುರುವಿನ ಪಾತ್ರದಲ್ಲಿ ಶಿವರಾಜ್‌ಕುಮಾರ್ ನಟಿಸಿದ್ದಾರೆ.

Peddi Review: ರಾಮ್‌ ಚರಣ್‌ ನಟನೆಯ ‌ʻಪೆದ್ದಿʼ ಹೇಗಿದೆ? ರೇಟಿಂಗ್‌ ಎಷ್ಟು?

-

Avinash GR
Avinash GR Jun 4, 2026 3:23 PM

ನಟ ರಾಮ್‌ ಚರಣ್‌ ಈಚೆಗೆ ತಮ್ಮ ಪೆದ್ದಿ ಸಿನಿಮಾ ಇವೆಂಟ್‌ನಲ್ಲಿ ಮಾತನಾಡುತ್ತಾ, "ನನ್ನ ವೃತ್ತಿ ಬದುಕಿನಲ್ಲೇ ಪೆದ್ದಿ ನಂಬರ್‌ 1 ಸಿನಿಮಾ ಆಗಲಿದೆ" ಎಂದು ಹೇಳಿದ್ದರು. ಅಷ್ಟೊಂದು ಕಾನ್ಫಿಡೆನ್ಸ್‌ ಆ ಸಿನಿಮಾದ ಮೇಲೆ ರಾಮ್‌ ಚರಣ್‌ಗೆ ಇದೆ. ‘ಉಪ್ಪೇನ’ ಖ್ಯಾತಿಯ ಬುಚ್ಚಿ ಬಾಬು ಸಾನಾ ಅವರ ಎರಡನೇ ಸಿನಿಮಾ ಇದಾಗಿದ್ದು, ರಾಮ್‌ ಚರಣ್‌ ಇಲ್ಲಿ ಕ್ರಾಸ್‌ ಓವರ್‌ ಅಥ್ಲೀಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಭಾರಿ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾ ಈಗ ತೆರೆಕಂಡಿದೆ. ಹಾಗಾದರೆ, ʻಪೆದ್ದಿʼ ಹೇಗಿದೆ? ರಾಮ್‌ ಚರಣ್‌ ವೃತ್ತಿ ಬದುಕಿನ ನಂಬರ್‌ 1 ಸಿನಿಮಾ ಇದಾಗಲಿದೆಯಾ? ಮುಂದೆ ಓದಿ.

ಪೆದ್ದಿಯ ಕಥೆ ಏನು?

ಇದು 90ರ ದಶಕದ ಹಿನ್ನೆಲೆಯಲ್ಲಿ ಸಾಗುವ ಕಥೆ. ಹೆಸರೇ ಇಲ್ಲದ ಒಂದು ಗುಡ್ಡಗಾಡು ಹಳ್ಳಿಯ ಜನರು ಹೊಟ್ಟೆಪಾಡಿಗಾಗಿ ವಿಜಯನಗರಕ್ಕೆ ವಲಸೆ ಹೋಗಿ ಕೂಲಿ ಕೆಲಸ ಮಾಡುತ್ತಿರುತ್ತಾರೆ. ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಇವರು ತಮ್ಮೂರಿಗೆ ತಲುಪಲು ಒಂದು ದಿನವೇ ಬೇಕಾಗುತ್ತದೆ. ಈ ಊರಿನ ಜನರಿಗೆ ಯಾವುದೇ ಗುರುತಿನ ಚೀಟಿಯೂ ಇಲ್ಲ. ಹಳ್ಳಿಯ ಪಕ್ಕದಲ್ಲೇ ರೈಲು ಹಳಿ ಹಾದುಹೋಗುತ್ತಿದ್ದರೂ ಅಲ್ಲಿ ರೈಲು ನಿಲ್ಲುವುದಿಲ್ಲ. ಒಂದೇ ಒಂದು ನಿಮಿಷ ಆ ರೈಲು ತಮ್ಮೂರಿನಲ್ಲಿ ನಿಂತರೆ ತಮ್ಮ ಬದುಕು ಬದಲಾಗುತ್ತದೆ ಎಂಬುದು ಇವರ ದಶಕಗಳ ಹೋರಾಟ.

ಇದೇ ಊರಿನಲ್ಲಿ ಬೆಳೆದ ಪೆದ್ದಿ (ರಾಮ್ ಚರಣ್) ಅದ್ಭುತ ಕ್ರಿಕೆಟ್ ಆಟಗಾರ. ಬೆಟ್ಟಿಂಗ್ ದಂಧೆಕೋರರು ಇವನನ್ನು ಹರಾಜಿನಲ್ಲಿ ಕೂಗಿ ತಮ್ಮ ಪರ ಆಡಿಸಿಕೊಳ್ಳುತ್ತಿರುತ್ತಾರೆ. ಆದರೆ, ಅನಿವಾರ್ಯ ಕಾರಣಗಳಿಂದ ಕ್ರಿಕೆಟ್‌ನಿಂದ ದೂರವಾಗುವ ಪೆದ್ದಿ, ಕೊನೆಗೆ ಗೌರ್ನಾನಾಯ್ಡು (ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್) ಅವರ ಶಿಷ್ಯನಾಗಿ ಕುಸ್ತಿ ಅಖಾಡಕ್ಕಿಳಿಯುತ್ತಾನೆ. ಅಲ್ಲಿಂದ ಅವನ ಬದುಕು ಎತ್ತ ಸಾಗುತ್ತದೆ? ಆಟದ ಮೂಲಕ ತನ್ನ ಹಳ್ಳಿಗೆ ಪೆದ್ದಿ ಗುರುತು ತಂದುಕೊಡುತ್ತಾನಾ?. ಅಷ್ಟಕ್ಕೂ ಕ್ರಿಕೆಟ್‌ನಿಂದ ಪೆದ್ದಿ ದೂರವಾಗಿದ್ದೇಕೆ? ಕುಸ್ತಿಯಿಂದ ಅವನ ಬದುಕಿನಲ್ಲಾದ ಬದಲಾವಣೆಗಳೇನು? ಆ ಊರಿನಲ್ಲಿ ರೈಲು ನಿಲುಗಡೆ ಆಗುತ್ತದಾ ಎಂಬ ಪ್ರಶ್ನೆಗಳ ಸುತ್ತ ಸಿನಿಮಾದ ಕುತೂಹಲ ಸಾಗುತ್ತದೆ.

ಇದೊಂದು ಎಮೋಷನಲ್‌ ಸ್ಪೋರ್ಟ್ಸ್‌ ಡ್ರಾಮಾ

ಸಾಮಾನ್ಯವಾಗಿ ಸ್ಪೋರ್ಟ್ಸ್‌ ಡ್ರಾಮಾದಲ್ಲಿ ಬಹುತೇಕ ಒಂದೇ ಮಾದರಿಯಲ್ಲಿರುತ್ತವೆ. ಸಿನಿಮಾದಲ್ಲಿ ಸಾಕಷ್ಟು ಅಡೆತಡೆಗಳ ನಡುವೆ ಹೀರೋ ಸ್ಪೋರ್ಟ್ಸ್‌ನಲ್ಲಿ ಗೆದ್ದು ಬರುವುದೇ ಬಹುತೇಕ ಸಿನಿಮಾಗಳ ಕ್ಲೈಮ್ಯಾಕ್ಸ್.‌ ಪೆದ್ದಿ ಕೂಡ ಅದಕ್ಕೆ ಹೊರತಲ್ಲ. ಆದರೆ ಇಲ್ಲೊಂದಿಷ್ಟು ವಿಶೇಷತೆಗಳನ್ನು ಜೋಡಿಸಲಾಗಿದೆ. ಆಕ್ಷನ್‌ ಸಿನಿಮಾದ ಜೊತೆಗೆ ಎಮೋಷನಲ್‌ ಫ್ಯಾಕ್ಟರ್‌ ಅನ್ನು ಕೊಂಚೇ ಹೆಚ್ಚೆ ಸೇರಿಸಲಾಗಿದೆ. ಒಂದು ಹಳ್ಳಿಯ ಸಮಸ್ಯೆಯನ್ನು ಕ್ರೀಡೆಯೊಂದಿಗೆ ತಳುಕು ಹಾಕಿರುವುದು ಹಾಗೂ ‘ಕ್ರಾಸ್ ಓವರ್ ಅಥ್ಲೀಟ್’ ಎಂಬ ಕಾನ್ಸೆಪ್ಟ್ ಈ ಚಿತ್ರದಲ್ಲಿ ತೋರಿಸಿರುವುದು ವಿಶೇಷ. ನಿರ್ದೇಶಕರು ಅತ್ಯಂತ ಪ್ರಾಮಾಣಿಕತೆಯಿಂದ ಈ ಕಥೆಯನ್ನು ಬರೆದು, ಅದನ್ನು ತೆರೆಗೆ ತಂದಿದ್ದಾರೆ. ಕಥೆಯ ಪ್ರಮುಖ ತಿರುವುಗಳನ್ನು ಮೊದಲೇ ಊಹಿಸುವಂತಿದ್ದರೂ, ಪಾತ್ರಗಳನ್ನು ಬರೆದುಕೊಂಡಿರುವ ಶೈಲಿ ಆಸಕ್ತಿ ಮೂಡಿಸುತ್ತದೆ.

ಬೆಂಗಳೂರಿಗೆ ಬಂದಿದ್ದ ರಾಮ್‌ ಚರಣ್‌ ಜೊತೆ ಹೈಲೈಟ್‌ ಆದ ಬಾಡಿಗಾರ್ಡ್;‌ ಯಾರೀತ? ʻಮೆಗಾ ಪವರ್‌ ಸ್ಟಾರ್‌ʼ ಕೊಡ್ತಿರುವ ಸಂಬಳ ಎಷ್ಟು?

ಆದರೆ ವಿಭಿನ್ನವಾದ ಸ್ಪೋರ್ಟ್ಸ್‌ ಆಕ್ಷನ್‌ ಡ್ರಾಮಾವನ್ನು ಹೇಳಿದರೂ, ಕಮರ್ಷಿಯಲ್‌ ಸಿನಿಮಾಗಳ ಸಿದ್ಧಸೂತ್ರಗಳಿಂದ ಆಚೆ ಬರಲು ನಿರ್ದೇಶಕರು ಸಿದ್ಧರಿಲ್ಲ! ಹಳೆಯ ಫಾರ್ಮ್ಯಾಟ್ ಅನ್ನೇ ಬಳಸಿದ್ದಾರೆ. ಹೀರೋ ಇಂಟ್ರೋಡಕ್ಷನ್‌ ಮಾಡಿರುವ ರೀತಿ, ಬಳಿಕ ಒಂದು ಮಾಸ್‌ ಹಾಡು, ನಾಯಕಿಯ ದೇಹ ಸೌಂದರ್ಯದ ಮೇಲೆ ಕ್ಯಾಮೆರಾ ಕಣ್ಣು, ಅವಶ್ಯಕತೆ ಇಲ್ಲದಿದ್ದರೂ, ಒಂದು ಐಟಂ ಸಾಂಗ್..‌ ಇವೆಲ್ಲವೂ ಮಾಮೂಲಿನಂತೆ ಸಿನಿಮಾದೊಳಗೆ ತೂರಿಕೊಂಡು ಬಂದಿವೆ ಮತ್ತು ಪ್ರೇಕ್ಷಕರಿಗೆ ಇದರಿಂದ ಹೊಸತೇನೂ ಸಿಕ್ಕಂತೆ ಆಗೋದಿಲ್ಲ.

ಕ್ಲೈಮ್ಯಾಕ್ಸ್‌ನಲ್ಲಿ ಹೀರೋ ಹೇಳುವ ಮಾತುಗಳು ಮನಮುಟ್ಟುವಂತಿವೆ. ಎ. ಆರ್. ರೆಹಮಾನ್ ಅವರ ಹಾಡುಗಳು ಮತ್ತು ಕಥೆಯ ಆಶಯಕ್ಕೆ ತಕ್ಕಂತಹ ಹಿನ್ನೆಲೆ ಸಂಗೀತ ಉನ್ನತ ಮಟ್ಟದಲ್ಲಿವೆ. ‘ಚಿಕಿರಿ ಚಿಕಿರಿ’ ಹಾಡು ಮಜಾ ನೀಡುತ್ತದೆ. ‘ರೈ ರೈ ರಾಮಾ’, ‘ಹಲೋ ಹಲ್ಲಲ್ಲೋ’ ಹಾಡುಗಳು ಇಷ್ಟವಾಗುತ್ತವೆ. ‘ಮಸ್ಸ ಮಸ್ಸಾ’ ಸಾಂಗ್ ಫ್ಯಾನ್ಸ್‌ಗೆ ಇಷ್ಟವಾಗಲಿದೆ. ರತ್ನವೇಲು ಛಾಯಾಗ್ರಹಣ ಚೆನ್ನಾಗಿದೆ. ಆದರೆ ವಿಫಎಕ್ಸ್‌ ಕೆಲಸಗಳು ಇನ್ನಷ್ಟು ನ್ಯಾಚುರಲ್‌ ಆಗಿರಬೇಕಿತ್ತು. ಪೆದ್ದಿ ಊರಿನಲ್ಲಿ ಬರುವ ರೈಲು, ಆ ಸ್ಟೇಷನ್‌ ವಿಎಫ್‌ಎಕ್ಸ್‌ ವಾಸ್ತವಕ್ಕೆ ಹತ್ತಿರ ಎನಿಸುವುದಿಲ್ಲ.

ನಿರ್ದೇಶಕರು ಲಾಜಿಕ್‌ ಮರೆತರೇಕೆ?

ನಿರ್ದೇಶಕ ಬುಚ್ಚಿ ಬಾಬು ಅವರು ಹೀರೋ ಪಾತ್ರವನ್ನು ಎಲಿವೇಟ್‌ ಮಾಡೋದ್ರಲ್ಲಿಯೇ ಹೆಚ್ಚು ಯೋಚಿಸಿದ್ದರಿಂದಲೋ ಏನೋ ಅನೇಕ ಕಡೆಗಳಲ್ಲಿ ಲಾಜಿಕ್‌ ಮಿಸ್‌ ಆಗಿದೆ. ವಿಲನ್‌ಗಳನ್ನು ಪೆದ್ದಿ ಹೊಡೆದರೂ, ಅವರು ಪೆದ್ದಿ ಮೇಲೆ ತಿರುಗಿಬೀಳುವುದಿಲ್ಲ. ರಾಷ್ಟ್ರಮಟ್ಟದ ಪ್ರತಿಭಾವಂತ ಆಟಗಾರ ಪೆದ್ದಿಯನ್ನು ಹುಡುಕಿಕೊಂಡು ಬರುವ ಕೇಂದ್ರ ಕ್ರೀಡಾ ಇಲಾಖೆಯ ಉನ್ನತ ಅಧಿಕಾರಿಗೆ, ಪೆದ್ದಿ ಬಗ್ಗೆಯೇ ಗೊತ್ತಿರುವುದಿಲ್ಲ. ಇಡೀ ಕಥೆಯನ್ನು ಒಬ್ಬ ಹಳ್ಳಿಯ ಸಾಮಾನ್ಯ ವ್ಯಕ್ತಿಯಿಂದ ತಿಳಿದುಕೊಳ್ಳುವುದು ಕ್ಲೀಷೆ ಎನಿಸುತ್ತದೆ. ಈಚೆಗೆ ತೆಲುಗು ಸಿನಿಮಾಗಳಲ್ಲಿ ನಾಯಕಿ ಪಾತ್ರವನ್ನು ಇಷ್ಟೊಂದು ಜಾಳುಜಾಳಾಗಿ ಅದೇಕೆ ಬರೆಯುತ್ತಾರೋ, ದೇವರೇ ಬಲ್ಲ! ಇಲ್ಲೂ ಅದು ಮುಂದುವರಿದಿದೆ. ಇಂತಹ ಇನ್ನೂ ಹಲವು ಲಾಜಿಕ್‌ ಇಲ್ಲದ ದೃಶ್ಯಗಳು ಈ ಸಿನಿಮಾದಲ್ಲಿವೆ. ಮೇಕಿಂಗ್‌ ಬಗ್ಗೆ ಅತಿಯಾದ ಕಾಳಜಿವಹಿಸಿರುವ ನಿರ್ದೇಶಕರು ಸ್ಕ್ರಿಪ್ಟ್‌ ವಿಚಾರದಲ್ಲಿ ಇನ್ನಷ್ಟು ಕೆಲಸ ಮಾಡಬಹುದಿತ್ತು. ಕೆಲ ನೀರಸವಾದ ದೃಶ್ಯಗಳಿಂದಾಗಿ ಸಿನಿಮಾದ ಅವಧಿ 180 ನಿಮಿಷ ದಾಟಿದೆ ಮತ್ತು ಪ್ರೇಕ್ಷಕರಿಗೆ ಆಕಳಿಕೆ ಬರಿಸುತ್ತದೆ.

ರಾಮ್‌ ಚರಣ್‌ ಬಳಿ ʻಪೆದ್ದಿʼ ಸಿನಿಮಾದ ಬಗ್ಗೆ ವಿಚಾರಿಸಿದ್ದ ಪ್ರಧಾನಿ ನರೇಂದ್ರ ಮೋದಿ; ʻಮೆಗಾ ಪವರ್‌ ಸ್ಟಾರ್‌ʼ ಹೇಳಿದ್ದೇನು?

ಇಡೀ ಸಿನಿಮಾದಲ್ಲಿ ರಾಮ್‌ ಚರಣ್‌ ಹೈಲೈಟ್‌

ಇಲ್ಲಿ ಪೆದ್ದಿಯ ಜರ್ನಿ ಮೂರು ಹಂತಗಳಲ್ಲಿದೆ. ಪ್ರತಿಯೊಂದು ಹಂತಕ್ಕೂ ಒಂದೊಂದು ಕ್ಯಾರೆಕ್ಟರೈಸೇಶನ್, ವಿಭಿನ್ನ ಗೆಟಪ್‌ಗಳಿವೆ. ಒಂದು ಪಾತ್ರವನ್ನು ಮೀರಿಸುವಂತೆ ಮತ್ತೊಂದು ಪಾತ್ರದಂತೆ ಮೂರು ವೇರಿಯೇಷನ್‌ಗಳನ್ನು ತೋರಿಸುತ್ತಾ, ಮೈಂಡ್ ಬ್ಲೋಯಿಂಗ್ ಟ್ರಾನ್ಸ್‌ಫಾರ್ಮೇಶನ್‌ನಲ್ಲಿ ರಾಮ್ ಚರಣ್ ಮಿಂಚಿದ್ದಾರೆ. ಕ್ರಿಕೆಟ್‌ ಆಟಗಾರನಾಗಿ, ಕುಸ್ತಿಪಟುವಾಗಿ, ಓಟಗಾರನಾಗಿ ರಾಮ್‌ ಚರಣ್‌ರದ್ದು ಮಸ್ತ್‌ ನಟನೆ. ಅದಕ್ಕೆ ತಕ್ಕಂತೆ ದೇಹವನ್ನು ಅವರು ದಂಡಿಸಿರುವ ರೀತಿಯೂ ಬೆರಗು ಮೂಡಿಸುತ್ತದೆ. ಆಕ್ಷನ್ ಜೊತೆಗೆ ಎಮೋಷನ್ ಸೀನ್‌ಗಳಲ್ಲೂ ಚರಣ್‌ ಹೈಕ್ಲಾಸ್‌ ನಟನೆ ನೀಡಿದ್ದಾರೆ. ಜಾನ್ವಿ ಕಪೂರ್‌ಗೆ ಹೆಚ್ಚಿನ ಕೆಲಸವಿಲ್ಲ. ಇರುವ ಮೂರ್ನಾಲ್ಕು ದೃಶ್ಯಗಳು ಕೂಡ ಮೈಮಾಟ ಪ್ರದರ್ಶನಕ್ಕೆ ಮೀಸಲು.

ಗೌರ್ನಾನಾಯ್ಡು ಪಾತ್ರವನ್ನು ನಟ ಶಿವರಾಜ್‌ಕುಮಾರ್‌ ಅದ್ಭುತವಾಗಿ ನಿಭಾಯಿಸಿದ್ದಾರೆ. ಕುಸ್ತಿ ಕಲಿಸುವ ಉಸ್ತಾದ್‌ ಆಗಿ ಶಿವಣ್ಣ ಗಂಭೀರವಾದ ನಟನೆಯನ್ನು ನೀಡಿದ್ದಾರೆ. ʻಮಿರ್ಜಾಪುರ್‌ʼ ಖ್ಯಾತಿಯ ದಿವ್ಯೇಂದು ಶರ್ಮಾ ಅವರ ಪಾತ್ರದ ಮೇಲೆ ಜಾಸ್ತಿ ನಿರೀಕ್ಷೆ ಇಟ್ಟುಕೊಳ್ಳದಿರುವುದೇ ಉತ್ತಮ. ಕೆಲ ಸಮಯ ಮಾತ್ರ ಕಾಣಿಸಿಕೊಂಡರೂ, ಜಗಪತಿ ಬಾಬು ನೆನಪಿನಲ್ಲಿ ಉಳಿಯುತ್ತಾರೆ. ಇನ್ನುಳಿಂದಂತೆ ಈ ಸಿನಿಮಾದಲ್ಲಿ ಅನೇಕ ಮಂದಿ ಕಲಾವಿದರಿದ್ದರೂ, ಯಾರೂ ಅಷ್ಟಾಗಿ ಹೈಲೈಟ್‌ ಆಗೋದಿಲ್ಲ.

ಒಟ್ಟಾರೆ, ಮೇಕಿಂಗ್ ಬಗ್ಗೆ ಅತಿಯಾದ ಕಾಳಜಿವಹಿಸಿರುವ ನಿರ್ದೇಶಕರು ಸ್ಕ್ರಿಪ್ಟ್ ಹಾಗೂ ಎಡಿಟಿಂಗ್ ವಿಚಾರದಲ್ಲಿ ಇನ್ನಷ್ಟು ಕೆಲಸ ಮಾಡಬೇಕಿತ್ತು. ಲಾಜಿಕ್ ಪಕ್ಕಕ್ಕಿಟ್ಟು ನೋಡಿದರೆ, ಮಾಸ್ ಮತ್ತು ಎಮೋಷನಲ್ ಸ್ಪೋರ್ಟ್ಸ್ ಡ್ರಾಮಾ ಇಷ್ಟಪಡುವವರಿಗೆ ‘ಪೆದ್ದಿ’ ಒಂದು ಬಾರಿ ನೋಡಬಹುದಾದ ಚಿತ್ರ!

Movie: ಪೆದ್ದಿ
Release Date: ಜೂ.4 2026
Language: ತೆಲುಗು, ಕನ್ನಡ,
Genre: ಆಕ್ಷನ್, ಡ್ರಾಮಾ,
Director: ಬುಚ್ಚಿಬಾಬು ಸಾನ
Cast: ರಾಮ್ ಚರಣ್, ಜಾನ್ವಿ ಕಪೂರ್, ಶಿವರಾಜ್‌ಕುಮಾರ್, ಜಗಪತಿ ಬಾಬು, ದಿವ್ಯೇಂದು ಶರ್ಮಾ, ಬೊಮನ್ ಇರಾನಿ, ರವಿ ಕಿಶನ್, ಶ್ರುತಿ ಹಾಸನ್, ಸತ್ಯ, ರಾವ್‌ ರಮೇಶ್‌ |
Duration: 185 ನಿಮಿಷ
Rating: 3/5