ಸಾ ರಾ ಮಹೇಶ್ ಅವರು ರಾಜಕೀಯರಂಗದಲ್ಲಿಯೇ ಹೆಚ್ಚು ಸಕ್ರಿಯವಾಗಿದ್ದರೆ, ಅವರ ಪತ್ನಿ ಅನಿತಾ ಸಾರಾ ಮಹೇಶ್ ಅವರು ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಹೌದು, ಅನಿತಾ ಅವರು ಇದೀಗ ತಾವೇ ಹಾಡಿದ ಒಂದು ಆಲ್ಬಂ ಸಾಂಗ್ ಅನ್ನು ರಿಲೀಸ್ ಮಾಡಿದ್ದಾರೆ. ತಮ್ಮೊಳಗಿನ ಗಾಯನ ಕಲೆಯನ್ನು ಸಿನಿಮಾ, ಆಲ್ಬಂ ಹಾಡುಗಳ ಮೂಲಕ ಹೊರ ಜಗತ್ತಿಗೆ ಪರಿಚಯಿಸಿದ್ದಾರೆ.
ಹೊಸ ಸಾಂಗ್ ರಿಲೀಸ್ ಮಾಡಿದ ಅನಿತಾ
ʻಏನಾಗಿದೆ ನನಗೇನಾಗಿದೆʼ ಎಂಬ ಆಲ್ಬಂ ಸಾಂಗ್ ಅನ್ನು ರಿಲೀಸ್ ಮಾಡಿರುವ ಅನಿತಾ ಸಾ ರಾ ಮಹೇಶ್, ಈಚೆಗೆ ವಿ. ಮನೋಹರ್, ಸಾಧುಕೋಕಿಲ ಅವರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಈ ಹಾಡಿಗೆ ಅಭಿಮಾನ್ ರಾವ್ ಸಂಗೀತ ನೀಡಿದ್ದು, ಗೌಸ್ ಪೀರ್ ಅವರ ಸಾಹಿತ್ಯದಲ್ಲಿ ಈ ಹಾಡು ಮೂಡಿಬಂದಿದೆ.
ಕೃಷಿ ಸಚಿವ ಬಿ.ಸಿ. ಪಾಟೀಲ್ ನಿಜವಾದ ಊಸರವಳ್ಳಿ: ಸಾರಾ ಮಹೇಶ್ ತಿರುಗೇಟು
ಆಡಿಯೋ ಕಂಪನಿ ಆರಂಭಿಸಿ ಎಂದ ಸಾಧು
"ಈ ಹಾಡು ಯಾವ ಸಿನಿಮಾ ಹಾಡಿಗೂ ಕಡಿಮೆ ಇಲ್ಲದಂತೆ ಮೂಡಿಬಂದಿದೆ, ಇದು ಅನಿತಾ ಸಾ ರಾ ಮಹೇಶ್ ಅವರೊಳಗೆ ಇರುವ ಹಿನ್ನೆಲೆ ಗಾಯಕಿಯನ್ನು ಪರಿಚಯಿಸಿದೆ. ಅನಿತಾ ಅವರ ಈ ಸಾಂಗ್, ಯಾವ ಸಿನಿಮಾ ಹಾಡಿಗೂ ಕಡಿಮೆ ಇಲ್ಲ. ಅವರ ಪತಿ ಸಾ ರಾ ಮಹೇಶ್ ಅವರ ಬೆಂಬಲದಿಂದ ಈ ಮಟ್ಟಕ್ಕೆ ಬಂದಿದ್ಧಾರೆ. ತಮಗೂ ಒಂದು ಆಲ್ಬಂ ಸಾಂಗ್ ಹಾಡಿ ಕೊಡುವಂತೆ ಕೇಳಿದ್ದಾರೆ. ಇಡೀ ನಾಡೇ ತಿರುಗಿ ನೋಡುವಂತೆ ಅವರಿಗಾಗಿ ಮ್ಯೂಸಿಕ್ ಮಾಡಿಕೊಡುವೆ. ಈಗ ಇರುವ ಆಡಿಯೋ ಕಂಪನಿಗಳು ಆಕಾಶದಲ್ಲಿವೆ, ಅವರಾರೂ ಸಣ್ಣ ಪುಟ್ಟ ಚಿತ್ರ ನಿರ್ಮಾಪಕರಿಗೆ, ನಿರ್ದೇಶಕರಿಗೆ ಸಿಗುತ್ತಿಲ್ಲ, ಆದ್ದರಿಂದ ನೀವು ಆಡಿಯೋ ಕಂಪನಿ ಆರಂಭಿಸಿ ಕನ್ನಡ ಚಿತ್ರರಂಗಕ್ಕೆ ನೆರವಾಗಿ, ಮತ್ತಷ್ಟು ಎತ್ತರಕ್ಕೆ ಬೆಳೆಯಿರಿ" ಎಂದು ಅನಿತಾ ಅವರಿಗೆ ಸಾಧುಕೋಕಿಲ ಹಾರೈಸಿದರು.
"ಅನಿತಾ ಅವರ ಹಾಡು ಕೇಳುತ್ತಿದ್ದರೆ, ವೃತ್ತಿಪರ ಹಿನ್ನೆಲೆ ಗಾಯಕಿ ಹಾಡಿದ ರೀತಿ ಇದೆ. ಅವರು ಈಗಾಗಲೇ ಕನ್ನಡದಲ್ಲಿ ಕೆಲ ಸಿನಿಮಾಗಳಿಗೆ ಹಾಡಿದ್ದಾರೆ. ಮುಂದೆಯೂ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಚಿತ್ರವನ್ನೂ ನಿರ್ಮಾಣ ಮಾಡಲಿ" ಎಂದು ವಿ ಮನೋಹರ್ ಹಾರೈಸಿದ್ದಾರೆ.
ಸಂಗೀತದ ಬಗ್ಗೆ ಅತೀವ ಆಸಕ್ತಿ ಇದೆ
ತಮ್ಮ ಹಾಡಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನಿತಾ ಸಾ ರಾ ಮಹೇಶ್ ಅವರು, "ನಮ್ಮದೇ ಅನು ಸಾರ ಆಡಿಯೋ ಮೂಲಕ ಈ ಹಾಡನ್ನು ಹೊರತಂದಿದ್ದೇವೆ. ನನಗೆ ಚಿಕ್ಕ ವಯಸ್ಸಿನಿಂದಲೇ ಸಂಗೀತದ ಬಗ್ಗೆ ಅತೀವ ಆಸಕ್ತಿ ಇತ್ತು. ಮದುವೆಯಾದ ನಂತರ ಮಕ್ಕಳ ಜವಾಬ್ದಾರಿ ನಿಭಾಯಿಸಬೇಕಾಗಿತ್ತು. ಪತಿ ಸಾ ರಾ ಮಹೇಶ್ ಅವರು ರಾಜಕಾರಣದಲ್ಲಿರುವ ಹಿನ್ನೆಲೆಯಲ್ಲಿ, ಅವರ ಕೆಲಸದಲ್ಲೂ ಜೊತೆಯಾಗಬೇಕಾಗಿತ್ತು. ನನ್ನ ಒಬ್ಬ ಮಗ ಡಾಕ್ಟರ್ ಮತ್ತೊಬ್ಬ ಮಗ ಉದ್ಯಮಿ. ಈಗ ನನಗೂ ಸಮಯ ಸಿಕ್ಕಿದೆ, ಹಾಗಾಗಿ, ಗಾಯನದಲ್ಲಿ ಹೆಚ್ಚು ತೊಡಗಿಕೊಳ್ಳಲು ಸಾಧ್ಯವಾಯಿತು" ಎನ್ನುತ್ತಾರೆ.