ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

OTT Release: ವಾರಾಂತ್ಯದ ಮನರಂಜನೆಗೆ ಒಟಿಟಿಗೆ ಲಗ್ಗೆಯಿಟ್ಟ ದಕ್ಷಿಣ ಭಾರತದ 8 ಹೊಸ ಸಿನಿಮಾಗಳು; ಇಲ್ಲಿದೆ ಸಂಪೂರ್ಣ ವಿವರ!

OTT Release updates: ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ವಾರಾಂತ್ಯಕ್ಕೆ 8 ಹೊಸ ಸಿನಿಮಾಗಳು ಬಿಡುಗಡೆಯಾಗಿವೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳ ಈ ಚಿತ್ರಗಳಲ್ಲಿ ಆ್ಯಕ್ಷನ್, ಥ್ರಿಲ್ಲರ್, ಪ್ರೇಮಕಥೆ ಮತ್ತು ಸ್ಪೂರ್ತಿದಾಯಕ ಕಥೆಗಳ ವೈವಿಧ್ಯತೆಯಿದೆ. ಕಾರ್ತಿ ನಟನೆಯ 'ಸರ್ದಾರ್ 2', ಧನಂಜಯ ಅಭಿನಯದ 'ಮದರ್ ಪ್ರಾಮಿಸ್' ಸೇರಿದಂತೆ ಪ್ರಮುಖ ಚಿತ್ರಗಳು ರಿಲೀಸ್‌ ಆಗುತ್ತಿವೆ.

ವಾರಾಂತ್ಯ ಬಂತೆಂದರೆ ಸಿನಿಮಾ ಪ್ರೇಮಿಗಳು ಮನೆಯಲ್ಲೇ ಕುಳಿತು ಹೊಸ ಸಿನಿಮಾಗಳನ್ನು ವೀಕ್ಷಿಸಲು ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳತ್ತ ಮುಖ ಮಾಡುವುದು ಸಹಜ. ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಈ ವಾರವೂ ಕೂಡ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳ ಸಾಲು ಸಾಲು ಭಿನ್ನ ಕಥಾಹಂದರದ ಚಿತ್ರಗಳು ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಬಿಡುಗಡೆಯಾಗಿವೆ. ಆ್ಯಕ್ಷನ್, ಥ್ರಿಲ್ಲರ್, ಪ್ರೇಮಕಥೆ ಹಾಗೂ ಸ್ಫೂರ್ತಿದಾಯಕ ಕಥೆಗಳನ್ನು ಒಳಗೊಂಡಿರುವ ಪ್ರಮುಖ ಸಿನಿಮಾಗಳ ಪಟ್ಟಿ ಇಲ್ಲಿದೆ.

1.ಸರ್ದಾರ್ 2 (ತಮಿಳು)

ಪ್ಲಾಟ್‌ಫಾರ್ಮ್: ಅಮೆಜಾನ್ ಪ್ರೈಮ್ ವಿಡಿಯೋ

ತಾರಾಗಣ: ಕಾರ್ತಿ, ಎಸ್.ಜೆ. ಸೂರ್ಯ

ನಿರ್ದೇಶನ: ಪಿ.ಎಸ್. ಮಿತ್ರನ್

ಹೊಸ ಜಾಗತಿಕ ಸಂಚೊಂದು ಇಡೀ ದೇಶಕ್ಕೆ ಕಂಟಕವಾಗಿ ಪರಿಣಮಿಸಿದಾಗ, ನಿವೃತ್ತ ಅನುಭವಿ ಗೂಢಚಾರನೊಬ್ಬ ಅನಿವಾರ್ಯವಾಗಿ ಮತ್ತೆ ಕಾರ್ಯಾಚರಣೆಗೆ ಇಳಿಯಬೇಕಾಗುತ್ತದೆ. ಒಂದು ಸಣ್ಣ ತಪ್ಪು ಹೆಜ್ಜೆಯೂ ಜೀವಕ್ಕೆ ಅಪಾಯ ತಂದೊಡ್ಡಬಲ್ಲ ಹೈ-ರಿಸ್ಕ್ ಮಿಷನ್ ಇದಾಗಿದ್ದು, ಬಲಿಷ್ಠ ಶತ್ರುಗಳನ್ನು ನಾಯಕ ಹೇಗೆ ಮೆಟ್ಟಿ ನಿಲ್ಲುತ್ತಾನೆ ಎಂಬುದೇ ಚಿತ್ರದ ರೋಚಕ ಆ್ಯಕ್ಷನ್ ಕಥಾಹಂದರ.

2.ಮದರ್ ಪ್ರಾಮಿಸ್ (ಕನ್ನಡ)

ಪ್ಲಾಟ್‌ಫಾರ್ಮ್: ಜೀ5 (ZEE5)

ತಾರಾಗಣ: ಧನಂಜಯ, ಪೂರ್ಣಚಂದ್ರ ಮೈಸೂರು, ನಾಗಭೂಷಣ ಎನ್.ಎಸ್, ಚಿ. ಗುರುದತ್, ವಿನಯಾ ಪ್ರಸಾದ್

ನಿರ್ದೇಶನ: ಪೂರ್ಣಚಂದ್ರ ಮೈಸೂರು

ತನ್ನ ತಾಯಿಗೆ ನೀಡಿದ ಒಂದು ಭರವಸೆ ಜೂಜುಕೋರನೊಬ್ಬನ ಜೀವನದ ದಿಕ್ಕನ್ನೇ ಸಂಪೂರ್ಣವಾಗಿ ಬದಲಾಯಿಸುತ್ತದೆ. ಅನಿರೀಕ್ಷಿತ ಹಾದಿ ಹಿಡಿಯುವ ಆತ ಅಪರಾಧ ಲೋಕ, ನಗೆಯುಕ್ಕಿಸುವ ಪ್ರಸಂಗಗಳು ಮತ್ತು ಗೊಂದಲಗಳ ಸುಳಿಗೆ ಹೇಗೆ ಸಿಲುಕಿಕೊಳ್ಳುತ್ತಾನೆ ಎಂಬುದನ್ನು ಹಾಸ್ಯ ಹಾಗೂ ಡ್ರಾಮಾದ ಮಿಶ್ರಣದೊಂದಿಗೆ ತೆರೆಮೇಲೆ ತರಲಾಗಿದೆ.

3.ರೋಮಾಂಚಕಂ (ತೆಲುಗು)

ಪ್ಲಾಟ್‌ಫಾರ್ಮ್: ನೆಟ್‌ಫ್ಲಿಕ್ಸ್

ತಾರಾಗಣ: ಸುಮಂತ್ ಪ್ರಭಾಸ್, ಅನಂತಿಕಾ ಸನಿಲ್ ಕುಮಾರ್

ನಿರ್ದೇಶನ: ವೇಣು ಗೋಪಾಲ್ ರೆಡ್ಡಿ

ಯುವ ಉದ್ಯಮಿಯೊಬ್ಬ ವಿಭಿನ್ನವಾದ ಡೇಟಿಂಗ್ ಸ್ಟಾರ್ಟಪ್ ಆರಂಭಿಸಿ ಯಶಸ್ಸು ಕಾಣಲು ಪ್ರಯತ್ನಿಸುತ್ತಾನೆ. ಆದರೆ ಅನಿರೀಕ್ಷಿತವಾಗಿ ಆತನೇ ಯುವತಿಯೊಬ್ಬಳ ಪ್ರೇಮಪಾಶದಲ್ಲಿ ಬಿದ್ದಾಗ, ವ್ಯವಹಾರ ಮತ್ತು ಬದುಕಿನಲ್ಲಿ ಪ್ರೀತಿ, ಹಾಸ್ಯ ಹಾಗೂ ಸಸ್ಪೆನ್ಸ್‌ಗಳಿಂದ ಕೂಡಿದ ಅನಿರೀಕ್ಷಿತ ತಿರುವುಗಳು ಎದುರಾಗುತ್ತವೆ.

4.ಬೆತ್ಲೆಹೆಮ್ ಕುಟುಂಬ ಯೂನಿಟ್ (ಮಲಯಾಳಂ)

ಪ್ಲಾಟ್‌‌ಫಾರ್ಮ್: ಜಿಯೋಹಾಟ್‌ಸ್ಟಾರ್

ತಾರಾಗಣ: ನಿವಿನ್ ಪೌಲಿ, ಮಮಿತಾ ಬೈಜು

ನಿರ್ದೇಶನ: ಗಿರೀಶ್ ಎ.ಡಿ.

ವಿದೇಶದಿಂದ ಸ್ವಂತ ಊರಿಗೆ ಮರಳುವ ಆಶ್ಲೆ ಎಂಬ ಯುವತಿಗೆ, ಅಕ್ಕಪಕ್ಕದಲ್ಲೇ ನಡೆಯುವ ಮದುವೆಯ ಸಮಾರಂಭವೊಂದು ತನ್ನ ಮೊದಲ ಪ್ರೇಮಿ ಜಸ್ಟಿನ್‌ನ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ. ಮಲಯಾಳಂ ಶೈಲಿಯ ಭಾವನಾತ್ಮಕ ಸನ್ನಿವೇಶಗಳು ಮತ್ತು ನವಿರಾದ ನಿರೂಪಣೆ ಈ ಚಿತ್ರದ ಮುಖ್ಯ ಆಕರ್ಷಣೆ.

5.ಪಂಥಡಿಕಾಮ್ (ಮಲಯಾಳಂ)

ಪ್ಲಾಟ್‌ಫಾರ್ಮ್: ಜೀ5 (ZEE5)

ತಾರಾಗಣ: ವೈಶಾಖ್ ಪೇರಂಬ್ರಾ, ಮಮ್ಮುಟ್ಟಿ

ಚಿಕ್ಕ ವಯಸ್ಸಿನಲ್ಲೇ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದರಲ್ಲಿ ಬಲಗಾಲನ್ನೇ ಕಳೆದುಕೊಂಡರೂ, ಛಲ ಬಿಡದೆ ಭಾರತೀಯ ಆಂಪ್ಯೂಟಿ ಫುಟ್‌ಬಾಲ್ ತಂಡದ ನಾಯಕನಾಗಿ ಹೊರಹೊಮ್ಮಿದ ವೈಶಾಖ್ ಪೇರಂಬ್ರಾ ಅವರ ಸ್ಪೂರ್ತಿದಾಯಕ ನೈಜ ಜೀವನದ ಯಶೋಗಾಥೆಯನ್ನು ಈ ಸಿನಿಮಾ ಒಳಗೊಂಡಿದೆ.

ಮಕ್ಕಳ ಪ್ರಾರ್ಥನಾ ಗೀತೆ ಬರೆದ ʻಡಾಲಿʼ ಧನಂಜಯ; ಸಿದ್ದಗಂಗಾ ಮಠದ ಅಂಗಳದಲ್ಲಿ ನಡೆಯಿತು ‘ಮದರ್‌ ಪ್ರಾಮಿಸ್‌’ ಚಿತ್ರೀಕರಣ

6.#ಲವ್ (ತಮಿಳು)

ಪ್ಲಾಟ್‌ಫಾರ್ಮ್: ನೆಟ್‌ಫ್ಲಿಕ್ಸ್

ತಾರಾಗಣ: ಐಶ್ವರ್ಯ ಲಕ್ಷ್ಮಿ, ಅರ್ಜುನ್ ದಾಸ್, ಅರ್ಜುನ್ ಚಿದಂಬರಂ, ಗಾಯತ್ರಿ ಹರಿಹರನ್

ನಿರ್ದೇಶನ: ಬಾಲಾಜಿ ಮೋಹನ್

ಪ್ರೀತಿ ಹುಟ್ಟಲು ಇಬ್ಬರ ನಡುವಿನ ಹೊಂದಾಣಿಕೆ ಮುಖ್ಯವೋ ಅಥವಾ ಕೆಮಿಸ್ಟ್ರಿ ಮುಖ್ಯವೋ ಎಂಬ ವಿಷಯದಲ್ಲಿ ಭಿನ್ನ ನಿಲುವು ಹೊಂದಿರುವ ಎದುರಾಳಿ ಡೇಟಿಂಗ್ ಆ್ಯಪ್‌ಗಳ ಸಂಸ್ಥಾಪಕರಾದ ತಾರಾ ಮತ್ತು ಮ್ಯಾಥ್ಯೂ, 60 ದಿನಗಳ ಕಾಲ ಚಾಲೆಂಜ್ ಒಂದನ್ನು ಕೈಗೊಳ್ಳುತ್ತಾರೆ. ಈ ಸ್ಪರ್ಧಾತ್ಮಕ ಪಯಣ ಇಬ್ಬರ ನಡುವೆ ಪ್ರೀತಿಯನ್ನು ಹೇಗೆ ಚಿಗುರಿಸುತ್ತದೆ ಎಂಬುದೇ ಈ ರೊಮ್ಯಾಂಟಿಕ್ ಕಾಮಿಡಿ ಚಿತ್ರ.

7.ಮಹೇಂದ್ರಗಿರಿ ವಾರಾಹಿ (ತೆಲುಗು)

ಪ್ಲಾಟ್‌ಫಾರ್ಮ್: ಅಮೆಜಾನ್ ಪ್ರೈಮ್ ವಿಡಿಯೋ

ತಾರಾಗಣ: ಸುಮಂತ್, ಸಿಧು ಜೊನ್ನಲಗಡ್ಡ, ಮೀನಾಕ್ಷಿ ಗೋಸ್ವಾಮಿ, ಬ್ರಹ್ಮಾನಂದಂ, ವೆನ್ನೆಲ ಕಿಶೋರ್

ನಿರ್ದೇಶನ: ಸಂತೋಷ್ ಜಾಗರ್ಲಪುಡಿ

ಪುರಾತತ್ವಶಾಸ್ತ್ರಜ್ಞ ರುದ್ರ, ಪವಿತ್ರ ವಾರಾಹಿ ದೇವಾಲಯದ ಸುತ್ತಲಿನ ರಹಸ್ಯಗಳನ್ನು ಭೇದಿಸಲು ಹೊರಡುತ್ತಾನೆ. ಅಪಾರ ಶಕ್ತಿಯುಳ್ಳ ಪ್ರಾಚೀನ ಕಲಾಕೃತಿಯನ್ನು ವಶಪಡಿಸಿಕೊಳ್ಳಲು ಹವಣಿಸುವ ನಿಧಿ ಶೋಧಕರು, ಕಳ್ಳಸಾಗಣೆದಾರರು ಮತ್ತು ತಾಂತ್ರಿಕ ಪಂಥದವರ ಷಡ್ಯಂತ್ರಗಳನ್ನು ಆತ ಹೇಗೆ ಹಿಮ್ಮೆಟ್ಟಿಸುತ್ತಾನೆ ಎಂಬುದು ಈ ಮಿಸ್ಟರಿ-ಥ್ರಿಲ್ಲರ್ ಚಿತ್ರದ ಕಥೆ.

8.ಅಮೀರ್ ಲೋಗ್ (ತೆಲುಗು)

ಪ್ಲಾಟ್‌ಫಾರ್ಮ್: ಸನ್ ನೆಕ್ಸ್ಟ್

ತಾರಾಗಣ: ಹರಿ ಮುನ್ನಂಗಿ, ಶಶಿಧರ್ ಕೊಚರ್ಲಕೋಟ, ಮನೋಜ್ ಆವುಲ, ವೇಧಾ ಜಲಂಧರ್

ನಿರ್ದೇಶನ: ಸೋಮ ರಮಣ ರೆಡ್ಡಿ

ಉತ್ತಮ ಬದುಕು ರೂಪಿಸಿಕೊಳ್ಳುವ ತವಕದಲ್ಲಿರುವ ಸಾಮಾನ್ಯ ಜನರ ಗುಂಪೊಂದು, ಹಣ ಮತ್ತು ಸಂಬಂಧಗಳ ನಡುವೆ ಸಿಲುಕಿ ಪಡುವ ಪಾಡು, ಅವರು ಎದುರಿಸುವ ದೈನಂದಿನ ಹಾಸ್ಯಮಯ ಹಾಗೂ ನಾಟಕೀಯ ಸಂಕಷ್ಟಗಳನ್ನು ಈ ಚಿತ್ರ ನೈಜವಾಗಿ ಕಟ್ಟಿಕೊಡುತ್ತದೆ.