‘ಸರಿಗಮಪʼ ಖ್ಯಾತಿಯ ಗಾಯಕ ರಜತ್ ಹೆಗಡೆ ಅವರು ಇಂಡಿಪೆಂಡೆಂಟ್ ಆಲ್ಬಂವೊಂದನ್ನು ರಿಲೀಸ್ ಮಾಡಿದ್ದಾರೆ. ಕನ್ನಡದ ಸ್ವತಂತ್ರ ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆ ಮೂಡಿಸುವ ಉದ್ದೇಶದಿಂದ 'ಆಹನ' ಎಂಬ ವಿಭಿನ್ನ ಆಲ್ಬಂ ಹಾಡನ್ನು ಸಿದ್ಧಪಡಿಸಿದ್ದಾರೆ.
ವೈಷ್ಣವಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಲೋಹಿತ್ ನಿರ್ಮಾಣ ಮಾಡಿದ್ದು, ಸಹ ನಿರ್ಮಾಣವನ್ನು ಸತೀಶ್ ಹೆಚ್ ಗೌಡ ಮಾಡಿದ್ದಾರೆ. ಈ ಆಲ್ಬಂಗೆ ರಜತ್ ಹೆಗಡೆ ಅವರೇ ಸಂಗೀತ ಸಂಯೋಜಿಸಿದ್ದಾರೆ.
'ಆಹನ' ಎಂದರೇನು?
ರಜತ್ ಹೆಗಡೆ ಅವರು ಈ ಹಾಡಿಗೆ ಕೇವಲ ಸಂಗೀತ ಸಂಯೋಜನೆ ಮಾಡಿರುವುದ್ದಲ್ಲದೆ, ಅವರೇ ಗಾಯಕರಾಗಿ ಧ್ವನಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ವಿಡಿಯೋದಲ್ಲಿ ನಾಯಕ ನಟನಾಗಿಯೂ ಕಾಣಿಸಿಕೊಳ್ಳುವ ಮೂಲಕ ಈ ಭಾವನಾತ್ಮಕ ಪ್ರಯಾಣಕ್ಕೆ ಜೀವ ತುಂಬಿದ್ದಾರೆ. 'ಆಹನ' ಒಬ್ಬ ಕಲಾವಿದ ಮತ್ತು ಸಂಗೀತದ ನಡುವಿನ ಸಂಬಂಧವನ್ನು ಅನಾವರಣಗೊಳಿಸುತ್ತದೆಯಂತೆ.
Saregamapa Promo : ಬಡವರಿಗೆ ‘ಸರಿಗಮಪ’ ವೇದಿಕೆ ಅಂತ ಟ್ರೋಲ್ ಮಾಡೋರಿಗೆ ಪ್ರೋಮೋದಲ್ಲೇ ಖಡಕ್ ಉತ್ತರ
"ಒಬ್ಬ ಕಲಾವಿದ ಸಂಗೀತವನ್ನು ತಲುಪಲು ಹಾತೊರೆಯುತ್ತಿರುವಾಗ, ಸಂಗೀತವೇ ಅವನನ್ನು ನಿರಾಕರಿಸಿದರೆ ಏನಾಗಬಹುದು" ಎನ್ನುವ ಆಳವಾದ ಪ್ರಶ್ನೆಯೇ ಈ ಹಾಡಿನ ಜೀವಾಳವಾಗಿದ್ದು, ಈ ಕಥೆಯು ರಜತ್ ಹೆಗಡೆ ಅವರ ಸ್ವಂತ ಅನುಭವಗಳಿಂದ ಮೂಡಿಬಂದಿದೆ. ಅವರ ಅಭಿನಯ ಮತ್ತು ಸಂಗೀತದಲ್ಲಿ ಒಂದು ವಿಶೇಷವಾದ ಆಪ್ತತೆ ಇದೆ. 'ಆಹನ' ಎಂದರೆ "ಸೂರ್ಯನ ಮೊದಲ ಕಿರಣ". ಇದು ಜಾಗೃತಿ, ಭರವಸೆ ಮತ್ತು ಹೊಸ ಆರಂಭವನ್ನು ಸೂಚಿಸುತ್ತದೆ.
"ಪ್ರಸ್ತುತ ಕನ್ನಡದಲ್ಲಿ ಸ್ವತಂತ್ರ ಸಂಗೀತ ಆಲ್ಬಂಗಳು ಬರುತ್ತಿರುವುದು ಕಡಿಮೆ. ರಜತ್ ಹೆಗಡೆ ಅವರಂತಹ ಬಹುಮುಖ ಪ್ರತಿಭೆಗಳ ಮೂಲಕ ನಾವು ಹೊಸ ಆಲೋಚನೆಗಳನ್ನು ಪ್ರೇಕ್ಷಕರಿಗೆ ತಲುಪಿಸಲು ಬಯಸಿದ್ದೇವೆ. ಹೊಸಬರಿಗೆ ವೇದಿಕೆ ಕಲ್ಪಿಸುವುದೇ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ" ಎಂದು ವೈಷ್ಣವಿ ಫಿಲಂಸ್‌ನ ವಿಜಯ್ ಲೋಹಿತ್ ಹೇಳಿಕೊಂಡಿದ್ದಾರೆ.
ನಾರಾಯಣ ಶರ್ಮ ಅವರು ಈ ಹಾಡಿಗೆ ವಿಶಿಷ್ಟವಾದ 'ರೆಟ್ರೋ-ಮೋಡರ್ನ್' ಶಬ್ದ ನೀಡಿದ್ದಾರೆ. ಆಲ್ಬಂನ ವಿಶೇಷವೆಂದರೆ, ಭಾರತೀಯ ಶಾಸ್ತ್ರೀಯ ಸಂಗೀತದ ತಂಬೂರಿಯನ್ನು ಆಧುನಿಕ ಸಿಂತ್ ಮ್ಯೂಸಿಕ್ ಜೊತೆ ಸಮರ್ಥವಾಗಿ ಬೆರೆಸಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಕೇವಲ 14 ಗಂಟೆಗಳ ಅವಧಿಯಲ್ಲಿ ಬೃಹತ್ ಸೆಟ್‌ಗಳನ್ನು ನಿರ್ಮಿಸಿ ಈ ಹಾಡನ್ನು ಚಿತ್ರೀಕರಿಸಿರುವುದು ಮತ್ತೊಂದು ವಿಶೇಷ. ನಟಿ ರೋಶಿನಿ ಪ್ರಕಾಶ್ ಅವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.