ಕಿರುತೆರೆಯ ಲೋಕದಲ್ಲಿ ಸದಾ ಹೊಸತನದ ಕಥೆಗಳ ಮೂಲಕ ವೀಕ್ಷಕರನ್ನು ರಂಜಿಸುವ 'ಕಲರ್ಸ್ ಕನ್ನಡ' ವಾಹಿನಿ, ಇದೀಗ ತನ್ನೆರಡು ಪ್ರಮುಖ ಧಾರಾವಾಹಿಗಳ (Kannada Serial) ಮೂಲಕ ಮಹತ್ವದ ತಿರುವೊಂದಕ್ಕೆ ಸಾಕ್ಷಿಯಾಗಿದೆ. ವಾಹಿನಿಯ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮೀ' ಹಾಗೂ ಇತ್ತೀಚೆಗಷ್ಟೇ ಮನೆಮಾತಾಗಿರುವ 'ಪವಿತ್ರ ಬಂಧನ'(Pavithra Bdandhana) ಧಾರಾವಾಹಿಗಳಲ್ಲಿ ಏಕಕಾಲಕ್ಕೆ (Colors Kannada Serials) ಮದುವೆಯ ಸಂಭ್ರಮ ಮನೆಮಾಡಿದೆ. ಆದರೆ ಈ ಮದುವೆಗಳು ಕೇವಲ ಸಂಭ್ರಮಕ್ಕೆ ಸೀಮಿತವಾಗದೆ, ರೋಚಕ ತಿರುವುಗಳು ಹಾಗೂ ಅನಿರೀಕ್ಷಿತ ಘಟನೆಗಳಿಂದಾಗಿ ವೀಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸಿವೆ.
ಭಾಗ್ಯ ಬದುಕಿನ ಅತ್ಯಂತ ಕಠಿಣ ಹಾಗೂ ದಿಟ್ಟ ನಿರ್ಧಾರ!
ಮೊದಲಿಗೆ 'ಭಾಗ್ಯಲಕ್ಷ್ಮೀ' ಧಾರಾವಾಹಿಯತ್ತ ನೋಡುವುದಾದರೆ, ಇಲ್ಲಿ ಕಥೆಯು ಇಡೀ ಕಿರುತೆರೆಯೇ ಬೆರಗಾಗುವಂತಹ ಘಟ್ಟಕ್ಕೆ ಬಂದು ತಲುಪಿದೆ. ಈವರೆಗೆ ಮನೆಯವರ ವಿರೋಧದ ನಡುವೆಯೂ ಭಾಗ್ಯ ಮತ್ತು ಆದಿ ಅವರ ಮದುವೆ ನಡೆಯಲಿದೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಮದುವೆಯ ಮಂಟಪದಲ್ಲಿ ನಡೆದ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಇಡೀ ಕಥೆಯೇ ಓಟವೇ ಬದಲಾಗಿದೆ. ಭಾಗ್ಯ ಈಗ ತನ್ನ ಬದುಕಿನ ಅತ್ಯಂತ ಕಠಿಣ ಹಾಗೂ ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಇದು ವೀಕ್ಷಕರಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ: Amruthadhaare Serial : ತಂಗಿಗಾಗಿ ಅಣ್ಣನ ಉಡುಗೊರೆ; ಅಮ್ಮನಿಂದಲೇ ಕೇಡಿ ಮಗನಿಗೆ ಮಾತಿನ ಬರೆ!
ಭಾಗ್ಯ ಪತಿ ತಾಂಡವ್‌ನಿಂದ ಅವಮಾನಕ್ಕೊಳಗಾಗಿ ದೂರವಾಗಿದ್ದಳು. ಆದರೆ ಈಗಿನ ಬೆಳವಣಿಗೆಯಲ್ಲಿ ಅವಳು ಮಗದೊಮ್ಮೆ ತಾಂಡವ್ ಜೊತೆಗೇ ಹಸೆಮಣೆ ಏರಲು ಸಜ್ಜಾಗುತ್ತಿದ್ದಾಳೆ. ಅಚ್ಚರಿಯ ವಿಷಯವೆಂದರೆ, ಭಾಗ್ಯ ಈ ನಿರ್ಧಾರ ತೆಗೆದುಕೊಂಡಿರುವುದು ಪ್ರೀತಿಯಿಂದಲ್ಲ, ಬದಲಾಗಿ ತಾಂಡವ್‌ಗೆ ಪಾಠ ಕಲಿಸಲು ಎಂಬುದು ಕಥೆಯ ರೋಚಕತೆಯನ್ನು ಹೆಚ್ಚಿಸಿದೆ. ತಾಂಡವ್ ಮಾಡಿದ ತಪ್ಪುಗಳನ್ನು ಅವನಿಗೆ ಮನವರಿಕೆ ಮಾಡಿಕೊಟ್ಟು, ಅವನ ಅಹಂಕಾರವನ್ನು ಅಡಗಿಸಲು ಭಾಗ್ಯ ಹೂಡಿರುವ ಈ ಹೊಸ ಪ್ಲಾನ್ ಮುಂದಿನ ಸಂಚಿಕೆಗಳಲ್ಲಿ ಹೇಗೆ ಅನಾವರಣಗೊಳ್ಳಲಿದೆ ಎಂಬ ಕೌತುಕ ಮನೆಮಾಡಿದೆ.
ವಿಧಿಯಾಟವೇ ಬೇರೆ
ಇನ್ನೊಂದೆಡೆ, 'ಪವಿತ್ರ ಬಂಧನ' ಧಾರಾವಾಹಿಯಲ್ಲಿ ಕಥೆಯು ಅತ್ಯಂತ ಭಾವುಕ ಹಾಗೂ ನಾಟಕೀಯ ತಿರುವು ಪಡೆದುಕೊಂಡಿದೆ. ಪವಿತ್ರಾ ತಾನು ಮನಸಾರೆ ಇಷ್ಟಪಟ್ಟಿದ್ದ ತಿಲಕ್‌ನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧವಾಗಿದ್ದಳು. ಇವರಿಬ್ಬರ ಪ್ರೀತಿಯನ್ನು ಗೌರವಿಸಿದ ದೇವ್, ಸ್ವತಃ ಮುಂದೆ ನಿಂತು ಮದುವೆ ನಿಶ್ಚಯ ಮಾಡಿದ್ದನು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಸಂಭ್ರಮದ ಮದುವೆ ಮನೆಯಲ್ಲಿ ಅಚಾನಕ್ ಆಗಿ ತಿಲಕ್ ಸಾವನ್ನಪ್ಪುವ ಮೂಲಕ ಇಡೀ ಕಥೆಯೇ ದುರಂತ ಅಂತ್ಯದತ್ತ ಸಾಗಿತ್ತು.
ತಿಲಕ್‌ನ ಸಾವಿನ ಬೆನ್ನಲ್ಲೇ ಕಥೆಯಲ್ಲಿ ಮತ್ತೊಂದು ಸಂಚಲನ ಸೃಷ್ಟಿಯಾಗಿದೆ. ತಿಲಕ್ ಇಲ್ಲದ ಸಮಯದಲ್ಲಿ ಮನೋಜ್ ಎಂಬಾತ ಪವಿತ್ರಾಳನ್ನು ಒತ್ತಾಯಪೂರ್ವಕವಾಗಿ ಮದುವೆಯಾಗಲು ಹವಣಿಸುತ್ತಾನೆ. ಆ ಸಂಕಷ್ಟದ ಸಮಯದಲ್ಲಿ ಸಾಯುವ ಮುನ್ನ ತಿಲಕ್ ನೀಡಿದ್ದ "ಪವಿತ್ರಾಳನ್ನು ನೀನೇ ಚೆನ್ನಾಗಿ ನೋಡಿಕೋ" ಎಂಬ ಭರವಸೆಯನ್ನು ಈಡೇರಿಸಲು ದೇವ್ ಮುಂದಾಗುತ್ತಾನೆ. ಅನಿವಾರ್ಯವಾಗಿ ಮನೋಜ್‌ನಿಂದ ಪವಿತ್ರಾಳನ್ನು ರಕ್ಷಿಸಲು ದೇವ್ ಅವಳ ಕೊರಳಿಗೆ ತಾಳಿ ಕಟ್ಟುತ್ತಾನೆ.
ತಾನು ಪ್ರೀತಿಸಿದ ಹುಡುಗನ ಮನೆಗೇ ಸೊಸೆಯಾಗಿ ಹೋದರೂ, ಪವಿತ್ರಾಳಿಗೆ ದೇವ್ ಕಂಡರೆ ಕಿಂಚಿತ್ತೂ ಇಷ್ಟವಿಲ್ಲ. ಅತ್ತ ದೇವ್ ಮನೆಯವರಿಗೂ ಪವಿತ್ರಾಳ ಪ್ರವೇಶ ಇಷ್ಟವಾಗಿಲ್ಲ. ತಾನು ಪ್ರೀತಿಸಿದವನ ನೆನಪುಗಳು ಹಾಗೂ ಇಷ್ಟಪಡದ ವ್ಯಕ್ತಿಯ ಜೊತೆಗಿನ ಜೀವನದ ನಡುವೆ ಪವಿತ್ರಾ ಸಿಲುಕಿಕೊಂಡಿದ್ದಾಳೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪವಿತ್ರಾ ಆ ಮನೆಯಲ್ಲಿ ಹೇಗೆ ದಿನ ಕಳೆಯುತ್ತಾಳೆ? ದೇವ್ ಜೊತೆಗಿನ ಅವಳ ಸಂಬಂಧ ಯಾವ ಹಾದಿ ಹಿಡಿಯುತ್ತದೆ? ಎಂಬುದು ಮುಂದಿನ ಸಂಚಿಕೆಗಳ ಸಸ್ಪೆನ್ಸ್.
ಒಟ್ಟಾರೆಯಾಗಿ ಕಲರ್ಸ್ ಕನ್ನಡದ ಈ ಎರಡು ಧಾರಾವಾಹಿಗಳು ಮದುವೆಯ ಹೆಸರಿನಲ್ಲಿ ಒಂದು ದೊಡ್ಡ ಮನರಂಜನೆಯ ಹಬ್ಬವನ್ನೇ ವೀಕ್ಷಕರ ಮುಂದೆ ಇಟ್ಟಿವೆ. ಭಾಗ್ಯಳ ಬುದ್ಧಿವಂತಿಕೆಯ ನಡೆ ಒಂದೆಡೆಯಾದರೆ, ದೇವ್-ಪವಿತ್ರಾ ನಡುವಿನ ಅನಿವಾರ್ಯದ ಬಂಧನ ಇನ್ನೊಂದೆಡೆ ವೀಕ್ಷಕರನ್ನು ಕಟ್ಟಿಹಾಕಲಿವೆ. ಈ ರೋಚಕ ಸಂಚಿಕೆಗಳು ಈಗಾಗಲೇ ಪ್ರಸಾರ ಕಾಣುತ್ತಿವೆ.
ಇದನ್ನೂ ಓದಿ: Actress Meena: ತಮ್ಮ ಬಂಗಲೆಯನ್ನ 100 ಕೋಟಿ ರೂ.ಗೆ ಮಾರಾಟ ಮಾಡಿದ್ರಾ ನಟಿ ಮೀನಾ?
ಭಾಗ್ಯಲಕ್ಷ್ಮೀ ಪ್ರತಿದಿನ ಸಂಜೆ 7 ಗಂಟೆಗೆ ಹಾಗೂ ಪವಿತ್ರ ಬಂಧನ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10 ಗಂಟೆಗೆ ಪ್ರಸಾರವಾಗಲಿವೆ.