Bigg Boss Kannada 11: ಬಿಗ್ ಬಾಸ್ ಚಾಂಪಿಯನ್ ಹನುಮಂತನ ಮನೆಯಲ್ಲಿ ಸೂತಕದ ಛಾಯೆ; ಚಿಕ್ಕಪ್ಪ ಸಾವು
ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ತೆರೆ ಬಿದ್ದಿದೆ. ಹಾವೇರಿಯ ಹಳ್ಳಿಹೈದ ಹನುಮಂತ ಚಾಂಪಿಯನ್ ಆಗಿದ್ದಾರೆ. ಈ ಶುಭ ಸುದ್ದಿಯ ನಡುವೆ ಅವರ ಮನೆಯಲ್ಲಿ ಸೂತಕ ಛಾಯೆ ಆವರಿಸಿದೆ. ಹನುಮಂತ ಅವರ ಚಿಕ್ಕಪ್ಪ ದೇವಪ್ಪ ಮೃತಪಟ್ಟಿದ್ದಾರೆ.

ದೇವಪ್ಪ ಮತ್ತು ಹನುಮಂತ.

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11)ಕ್ಕೆ ತೆರೆ ಬಿದ್ದಿದೆ. ಹಾವೇರಿ ಮೂಲದ ಹಳ್ಳಿ ಹೈದ ಹನುಮಂತ (Hanumantha) ಬಿಗ್ ಬಾಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಆದರೆ ಅವರ ಮನೆಯಲ್ಲಿ ಸೂತಕ ಛಾಯೆ ಅವರಿಸಿದೆ. ಹನುಮಂತ ಅವರ ಚಿಕ್ಕಪ್ಪ ದೇವಪ್ಪ ಮೃತಪಟ್ಟಿದ್ದು, ಮೌನ ಆವರಿಸಿದೆ. ಹನುಮಂತ ಹೆಸರನ್ನು ಸುದೀಪ್ (Sudeepa) ಘೋಷಿಸುತ್ತಿದ್ದಂತೆ ಅವರ ಹುಟ್ಟೂರು ಹಾವೇರಿ ಜಿಲ್ಲೆ ಸವಣೂರು ತಾಲೂಕಿನಲ್ಲಿ ಚಿಲ್ಲೂರುಬಡ್ನಿ ಗ್ರಾಮದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು. ಇದೀಗ ಹನುಮಂತ ಮನೆಯಲ್ಲಿ ಮೌನ ನೆಲೆಸಿದೆ.
ಹನುಮಂತನನ್ನು ನೋಡಲು ಅವರ ಊರಿಗೆ ಬಂದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ವಯೋಸಹಜ ಕಾಯಿಲೆಯಿಂದ ಭಾನುವಾರ (ಜ. 26) ಹನುಮಂತ ಅವರ ಚಿಕ್ಕಪ್ಪ ದೇವಪ್ಪ ನಿಧನ ಹೊಂದಿದ್ದರು. ಹೀಗಾಗಿ ಯಾವುದೇ ಸಂಭ್ರಮಾಚರಣೆ ಮಾಡದಿರಲು ನಿರ್ಧರಿಸಲಾಗಿದೆ.
3 ದಿನದ ಕಾರ್ಯ ಮುಗಿದ ನಂತರ ಸಂಭ್ರಮಾಚರಣೆ ಮಾಡಲು ಹನುಮಂತನ ಮನೆಯವರು ನಿರ್ಧರಿಸಿದ್ದಾರೆ. ಸದ್ಯ ಹನುಮಂತನ ಕುಟುಂಬಸ್ಥರು ಬೆಂಗಳೂರಿನಲ್ಲಿದ್ದಾರೆ. ಇದರಿಂದ ಹನುಮಂತನಿಗಾಗಿ ಕಾದು ಕುಳಿತ ಹನುಮಂತನ ಸ್ನೇಹಿತರು ಮತ್ತು ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.
ಹನುಮಂತ ಹೇಳಿದ್ದೇನು?
ಸದಾ ಸೀದ ಹಳ್ಳಿ ಹೈದ ಹನುಮಂತ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತರಾಗಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಸೈಲೆಂಟ್ ಆಗಿ ಎಂಟ್ರಿ ಕೊಟ್ಟ ಹನುಮಂತ ದೊಡ್ಮನೆಯಲ್ಲಿ ಘಟಾನುಘಟಿ ಸ್ಪರ್ಧಿಗಳಿಗೇ ಚಳ್ಳೆ ಹಣ್ಣು ತಿನ್ನಿಸಿ 50 ಲಕ್ಷ ರೂಪಾಯಿ ಹಾಗೂ ಬಿಗ್ ಬಾಸ್ ಟ್ರೋಫಿಯನ್ನು ಬಾಚಿಕೊಂಡಿದ್ದಾರೆ. ಜತೆಗೆ ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವೈಲ್ಡ್ ಕಾರ್ಡ್ ಸ್ಪರ್ಧಿಯೊಬ್ಬ ಟ್ರೋಫಿ ಎತ್ತಿಹಿಡಿದಿದ್ದಾರೆ. ಆ ಮೂಲಕ 5 ಕೋಟಿ ಕನ್ನಡಿಗರ ಮನಗೆದ್ದಿದ್ದಾರೆ.
ಈ ಸುದ್ದಿಯನ್ನೂ ಓದಿ: Bigg Boss 11 Grand Finale Winner: ಬಿಗ್ ಬಾಸ್ ಕನ್ನಡ ಸೀಸನ್ 11ರ ಟ್ರೋಫಿ ಎತ್ತಿ ಹಿಡಿದ ಹನುಮಂತ: ತ್ರಿವಿಕ್ರಮ್ ರನ್ನರ್-ಅಪ್
ಟ್ರೋಫಿ ಎತ್ತಿ ಹಿಡಿದ ಹನುಮಂತ ಮಾತನಾಡಿ, ʼʼದೇವರಾಣೆಗೂ ನಾನು ಟ್ರೋಫಿ ಗೆಲ್ಲುತ್ತೇನೆ ಎಂದು ನಾನು ಬಂದಿರಲಿಲ್ಲ. ಕರೆದಿದ್ದಾರಾ, ಹೋಗಿ ಮಜಾ ಮಾಡಿ ಬರೋಣ ಅಂತ ಬಂದಿದ್ದೆ. ದೇವರ ಆಶೀರ್ವಾದ ಹಾಗೂ ಸುದೀಪ್ ಸರ್ ಆಶೀರ್ವಾದ ಹಾಗೂ ಇಡೀ ಕರ್ನಾಟಕದ ಜನರ ಆಶೀರ್ವಾದದಿಂದ ಇವತ್ತು ನಾನು ಗೆದ್ದೀನಿ ರೀ’’ ಎಂದಿದ್ದಾರೆ.