ಕಿರುತೆರೆ ನಟಿ ವೈಷ್ಣವಿ ಗೌಡ (Vaishnavi Gowda) ಅವರು ಉದಯ ಟಿವಿಯ ಹೊಸ ಸೀರಿಯಲ್ 'ಗೆಳತಿ ಗಾಯತ್ರಿ' ಮೂಲಕ ಮರಳುತ್ತಿದ್ದಾರೆ. ಸದ್ಯ ವೈಷ್ಣವಿ ಅವರ ಅಭಿಮಾನಿಗಳು ಕಾಯುವಿಕೆಗೆ ಬ್ರೇಕ್ ಬಿದ್ದಿದೆ. ಪ್ರೋಮೋ ರಿಲೀಸ್ ಆಗಿದೆ. ‘ಪಾರ್ವತಿ’ (Parvathi) ಎಂಬ ಪಾತ್ರ ಮಾಡುತ್ತಿದ್ದು, ಶ್ರೀಮಂತ ಮನೆಯ ಹೆಣ್ಮಗಳಾಗಿ ಕಾಣಿಸಿಕೊಂಡಿದ್ದಾರೆ.
ಇದೊಂದು ಭಾವನಾತ್ಮಕ ಸ್ನೇಹದ ಕಥೆಯಾಗಿದ್ದು, ಇದರಲ್ಲಿ ವೈಷ್ಣವಿ ಅವರು ಎಲ್ಲಾ ಸುಖ-ಸೌಲಭ್ಯಗಳಿದ್ದರೂ ಬಾಲ್ಯದ ಗೆಳತಿಯನ್ನು ಹುಡುಕುವ ಶ್ರೀಮಂತ ಗೃಹಿಣಿ ಪಾರ್ವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರೋಮೋದಲ್ಲಿ ಪಾರ್ವತಿ ತನ್ನ ಶಾಲಾ ದಿನಗಳ ಫೋಟೋವನ್ನು ನೋಡುತ್ತಾ ಬಾಲ್ಯದ ಗೆಳತಿಯನ್ನು ನೆನಪಿಸಿಕೊಳ್ಳುತ್ತಾಳೆ. ರನ್ನಿಂಗ್ ರೇಸ್‌ನಲ್ಲಿ ತಾನು ಗೆಲ್ಲಲಿ ಎಂದು ತನಗಾಗಿ ಸೋಲುತ್ತಿದ್ದ ಗೆಳತಿಯ ಅಪಾರ ಪ್ರೀತಿಯನ್ನು ನೆನೆದು ಭಾವುಕಳಾಗುತ್ತಾಳೆ. ಪ್ರೋಮೋ ನೋಡಿದರೆ ಇದು ಇಬ್ಬರು ಜೀವದ ಗೆಳತಿಯರ ಸುತ್ತ ಸಾಗುವ ಅತ್ಯಂತ ಭಾವನಾತ್ಮಕ ಮತ್ತು ಕುತೂಹಲಕಾರಿ ಕಥೆ ಎಂಬುದು ಸ್ಪಷ್ಟವಾಗುತ್ತದೆ.
ಇದನ್ನೂ ಓದಿ: LCU: ಲೋಕೇಶ್ ಕನಕರಾಜ್ ಬಗ್ಗೆ ಹೀಗೊಂದು ವದಂತಿ! ಕೊನೆಗೂ ಸ್ಪಷ್ಟನೆ ಕೊಟ್ಟ ನಿರ್ದೇಶಕ
ವೈಷ್ಣವಿ ಗೌಡ ಅವರ ಮುದ್ದಾದ ನಟನೆ ಮತ್ತು ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರಾವಾಹಿ ಶೀಘ್ರದಲ್ಲೇ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ‘
‘ದೇವಿ’, ‘ಅಗ್ನಿಸಾಕ್ಷಿ’, ‘ಸೀತಾರಾಮ’ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಾಯಕಿಯಾಗಿದ್ದ ನಟಿ, ಇದೇ ಮೊದಲ ಬಾರಿಗೆ ಧಾರಾವಾಹಿಯ ಶುರುವಿನಲ್ಲೇ ಮದುವೆ ಆಗಿದ್ದಾರೆ. ಇದೊಂದು ಸಂಪೂರ್ಣ ವಿಭಿನ್ನ ಪಾತ್ರ ಮತ್ತು ಕಥೆಯಾಗಿದೆ. ಇದೇ ಧಾರಾವಾಹಿಯಲ್ಲಿ ಗೆಳತಿ ಗಾಯತ್ರಿ ಪಾತ್ರ ಮಾಡುತ್ತಿದ್ದಾರೆ ನಟಿ ಕೃತಿಕಾ ರವೀಂದ್ರ. ‘ರಾಧಾ ಕಲ್ಯಾಣ’, ‘ಭೂಮಿಗೆ ಬಂದ ಭಗವಂತ’ ಸೇರಿದಂತೆ ಜನಪ್ರಿಯತೆ ಪಡೆದ ನಟಿ ಇವರು. ಹಲವಾರು ಸಿನಿಮಾಗಳಲ್ಲೂ ನಟಿಸಿದ್ದಾರೆ.
'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ತೇಜಸ್ ಅಲಿಯಾಸ್ ಕೌಶಿಕ್ ಎಂಬ ಪಾತ್ರ ಮಾಡುತ್ತಿದ್ದ ನಟ ನಾಗಾರ್ಜುನ್.ಬಿ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ‘ಲಕ್ಷ್ಮೀ ಬಾರಮ್ಮ’, ‘ನಮ್ಮ ಲಚ್ಚಿ’, ‘ನಿನಗಾಗಿ’ ‘ಭಾಗ್ಯಲಕ್ಷ್ಮೀ’ ಸೇರಿದಂತೆ ಅನೇಕ ಧಾರಾವಾಹಿಗಳನ್ನ ನಿರ್ಮಾಣ ಮಾಡಿರುವ ‘ಶ್ರೀ ಜೈಮಾತಾ ಕಂಬೈನ್ಸ್ ಸಂಸ್ಥೆ’ ವತಿಯಿಂದ ‘ಗೆಳತಿ ಗಾಯತ್ರಿ’ ಧಾರಾವಾಹಿ ಮೂಡಿಬರುತ್ತಿದೆ.
ಇದನ್ನೂ ಓದಿ: Rishab Shetty: ಡಿವೈನ್ ಸ್ಟಾರ್ ಹುಟ್ಟುಹಬ್ಬ; ಎಷ್ಟೆಲ್ಲಾ ಬದಲಾಯ್ತು ನಟನ ಲೈಫು?
ವೈಷ್ಣವಿ ಗೌಡ ಮತ್ತು ಕೃತಿಕಾ ರವೀಂದ್ರ ಅವರು ಒಂದೇ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ವೀಕ್ಷಕರ ನಿರೀಕ್ಷೆ ಹೆಚ್ಚಿಸಿದ್ದು, ಸನ್ ಉದಯ ವಾಹಿನಿಯಲ್ಲಿ ಶೀಘ್ರದಲ್ಲಿ 'ಗೆಳತಿ ಗಾಯತ್ರಿ' ಪ್ರಸಾರವಾಗಲಿದೆ.