ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indian Army: ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಕ. ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್- ಕಾರ್ಯಕ್ರಮ ಹೇಗಿತ್ತು?

ಕೌನ್ ಬನೇಗಾ ಕರೋಡ್‌ಪತಿಯ ವಿಶೇಷ ಸಂಚಿಕೆಯಲ್ಲಿ ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕಮಾಂಡರ್ ಪ್ರೇರಣಾ ದೇವಸ್ಥಲಿ ಎಂಬ ಅಧಿಕಾರಿಗಳು ಭಾಗವಹಿಸಿದ್ದು, ಆಪರೇಷನ್ ಸಿಂದೂರ್‌ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ನವದೆಹಲಿ: ಕೌನ್ ಬನೇಗಾ ಕರೋಡ್‌ಪತಿಯ ವಿಶೇಷ ಸಂಚಿಕೆಯಲ್ಲಿ, ಕರ್ನಲ್ ಸೋಫಿಯಾ ಖುರೇಷಿ (Colonel Sofiya Qureshi), ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ (Wing Commander Vyomika Singh), ಮತ್ತು ಕಮಾಂಡರ್ ಪ್ರೇರಣಾ ದೇವಸ್ಥಲಿ (Prerna Deosthalee) ಅವರು ಏಪ್ರಿಲ್ 22, 2025ರ ಪಹಲ್ಗಾಮ್ ದಾಳಿಯ (Pahalgam Attack) ನಂತರ ಭಾರತದ ಭಯೋತ್ಪಾದನೆ-ನಿಗ್ರಹ ಕಾರ್ಯಾಚರಣೆಯಾದ ಆಪರೇಷನ್ ಸಿಂಧೂರ್ (Operation Sindoor) ಕುರಿತ ಕತೆಯನ್ನು ಬಿಚ್ಚಿಟ್ಟರು.

ನಾವು ಶತ್ರುವಿನ ಪ್ರದೇಶದ ಒಳಗೆ ದಾಳಿ ಮಾಡಿ ಭಯೋತ್ಪಾದಕರ ಹೆಡೆಮುರಿ ಕಟ್ಟಿದ್ದೇವೆ. 21 ಭಯೋತ್ಪಾದಕ ಶಿಬಿರಗಳನ್ನು ಗುರುತಿಸಿ, 9 ಶಿಬಿರಗಳ ಮೇಲೆ 25 ನಿಮಿಷಗಳಲ್ಲಿ ದಾಳಿ ನಡೆಸಿದ್ದೇವೆ ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ವಿವರಿಸಿದರು. ಮೇ 7, 2025ರಂದು ಆರಂಭವಾದ ಈ ಕಾರ್ಯಾಚರಣೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ 9 ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಟ್ಟುಕೊಂಡು ನಿಖರ ದಾಳಿ ನಡೆಸಿ ಹಲವಾರು ಭಯೋತ್ಪಾದಕರನ್ನು ಮಟ್ಟ ಹಾಕಲಾಯಿತು.

ಕರ್ನಲ್ ಖುರೇಷಿ, “ಬಹವಾಲ್ಪುರ್ ಜೈಶ್-ಎ-ಮೊಹಮ್ಮದ್‌ನ ಕೇಂದ್ರವಾಗಿತ್ತು, ಅಲ್ಲಿ ಪಠಾಣ್‌ಕೋಟ್ ಮತ್ತು ಪಹಲ್ಗಾಮ್ ದಾಳಿಯ ಭಯೋತ್ಪಾದಕರಿಗೆ ತರಬೇತಿ ನೀಡಲಾಗಿತ್ತು. ಮುರಿದ್ಕೆಯಲ್ಲಿ ಲಷ್ಕರ್-ಎ-ತೊಯ್ಬಾದ ಕೇಂದ್ರವಿದ್ದು, ಅಜ್ಮಲ್ ಕಸಾಬ್ ಮತ್ತು ಡೇವಿಡ್ ಹೆಡ್ಲಿಯಂತಹವರಿಗೆ ತರಬೇತಿ ನೀಡಲಾಗಿತ್ತು. ಆದ್ದರಿಂದ ಈ ಸ್ಥಳಗಳನ್ನು ಧ್ವಂಸಗೊಳಿಸಬೇಕಿತ್ತು” ಎಂದರು. ಪಾಕಿಸ್ತಾನವು 300-400 ಸಶಸ್ತ್ರ ಮತ್ತು ಅಸ್ತ್ರರಹಿತ ಡ್ರೋನ್‌ಗಳನ್ನು ಕಳುಹಿಸಿತ್ತು ಎಂದು ಖುರೇಷಿ ಬಹಿರಂಗಪಡಿಸಿದರು, ಆದರೆ ಭಾರತೀಯ ಸೇನೆಯ ವಾಯು ರಕ್ಷಣಾ ವ್ಯವಸ್ಥೆ ಇವುಗಳನ್ನು ಯಶಸ್ವಿಯಾಗಿ ತಡೆಯಿತು.

ಈ ಸುದ್ದಿಯನ್ನೂ ಓದಿ:Colonel Sofiya Qureshi: ಆಪರೇಷನ್‌ ಸಿಂದೂರ್‌ ಖ್ಯಾತಿಯ ಕ.ಸೋಫಿಯಾ ಖುರೇಷಿಗೂ ಝಾನ್ಸಿ ರಾಣಿ ಲಕ್ಷ್ಮೀ ಭಾಯಿಗೂ ಇದ್ಯಾ ನಂಟು?!

ನೌಕಾಪಡೆಯ ಪಾತ್ರ:

ಪ್ರೇರಣಾ ದೇವಸ್ಥಲಿ, “ನೌಕಾಪಡೆ ಯುದ್ಧಕ್ಕೆ ಸನ್ನದ್ಧವಾಗಿತ್ತು. ವಾಣಿಜ್ಯ ಮಾರ್ಗಗಳನ್ನು ಸ್ಥಿರಗೊಳಿಸಿ ಆರ್ಥಿಕತೆಯನ್ನು ರಕ್ಷಿಸಿದೆವು ಮತ್ತು ಸಮುದ್ರ ಗಡಿಗಳಲ್ಲಿ ರಾಷ್ಟ್ರವಿರೋಧಿ ಶಕ್ತಿಗಳನ್ನು ತಡೆಯುವ ಜೊತೆಗೆ ಭಯೋತ್ಪಾದಕರಿಗೆ ಎಚ್ಚರಿಕೆ ನೀಡಿದೆವು” ಎಂದರು. ಗಡಿ ರಹಿತ ಸಮುದ್ರದಲ್ಲಿ 360 ಡಿಗ್ರಿಯ ಅನಿಶ್ಚಿತತೆಯ ನಡುವೆ ಯಾವುದೇ ತಪ್ಪಿಗೆ ಅವಕಾಶವಿಲ್ಲ. ನಾವು ದಾಳಿ ಮಾಡಿದಾಗ, ಶತ್ರು ಎಂದಿಗೂ ಮರೆಯದಂತೆ ಮಾಡುತ್ತೇವೆ” ಎಂದು ಅವರು ಹೇಳಿದರು.

ಮಹಿಳೆಯರ ಕೊಡುಗೆ

ಖುರೇಷಿ, “100ಕ್ಕೂ ಹೆಚ್ಚು ಮಹಿಳೆಯರು ಪುರುಷರಿಗೆ ಸಮನಾದ ತರಬೇತಿಯನ್ನು ಪಡೆದಿದ್ದಾರೆ, ಇದರಿಂದ ಕಾರ್ಯಾಚರಣೆಯನ್ನು ಸುಗಮವಾಗಿ ನಿರ್ವಹಿಸಲಾಯಿತು” ಎಂದರು. “ಶಸ್ತ್ರಾಸ್ತ್ರಗಳು ಅಥವಾ ಯುದ್ಧವಿಮಾನಗಳು ಲಿಂಗ ಭೇದವನ್ನು ಮಾಡುವುದಿಲ್ಲ” ಎಂದು ವ್ಯೋಮಿಕಾ ಸಿಂಗ್ ಸ್ಪಷ್ಟಪಡಿಸಿದರು.