ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಮೊದಲ ವಾರವೇ ಡಬಲ್ ಎಲಿಮಿನೇಷನ್ ಆಗಿದೆ. ಸಾಮಾನ್ಯವಾಗಿ ಹಿಂದಿನ ಸೀಸನ್ಗಳಲ್ಲೆಲ್ಲ ಮೊದಲ ವಾರವೇ ಸ್ಪರ್ಧಿಗಳು ಎಲಿಮಿನೇಟ್ ಆಗಿರುವುದು ಬೆರಳಣಿಕಯಷ್ಟು ಮಾತ್ರ. ಸ್ಪರ್ಧಿಗಳು ಮನೆಗೆ ಹೊಂದಿಕೊಂಡು ಸೆಟ್ ಆಗಲಿ ಎಂದು ಮೊದಲ ವಾರ ಎಲಿಮಿನೇಟ್ ಮಾಡುವುದಿಲ್ಲ.. ಆದರೆ ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಇದೇ ಮೊದಲ ಬಾರಿ ಮೊದಲ ವಾರವೇ ಡಬಲ್ ಎಲಿಮಿನೇಷನ್ ನಡೆದಿದೆ. ಆರ್ಜೆ ಅಮಿತ್ ಹಾಗೂ ಬಾಡಿ ಬಿಲ್ಡರ್ ಕರಿಬಸಪ್ಪ ಎಲಿಮಿನೇಟ್ ಆಗಿದ್ದಾರೆ.
ಈ ವಾರ ಮನೆಯಿಂದ ಹೊರಹೋಗಲು ಒಟ್ಟು 8 ಮಂದಿ ನಾಮಿನೇಟ್ ಆಗಿದ್ದರು. ಧನುಷ್, ಮಲ್ಲಮ್ಮ, ಆರ್ಜೆ ಅಮಿತ್, ಕರಿಬಸಪ್ಪ, ಕಾವ್ಯಾ ಶೈವ, ಗಿಲ್ಲಿ ನಟ, ಅಶ್ವಿನಿ, ಅಭಿಷೇಕ್ ನಾಮಿನೇಟ್ ಆಗಿದ್ದರು. ಈ ಪೈಕಿ ಮಲ್ಲಮ್ಮ ಶನಿವಾರದ ಎಪಿಸೋಡ್ನಲ್ಲಿ ಸೇವ್ ಆಗಿದ್ದರು. ಬಳಿಕ ಭಾನುವಾರದ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಅವರು ಉಳಿದ ಸ್ಪರ್ಧಿಗಳನ್ನು ಸೇವ್ ಮಾಡಿ ಜಂಟಿ ಸದಸ್ಯರಾದ ಆರ್ಜೆ ಅಮಿತ್ ಹಾಗೂ ಕರಿಬಸಪ್ಪ ಅವರನ್ನು ಮನೆಯಿಂದ ಹೊರಕರೆದರು.
ಆರ್‌ಜೆ ಅಮಿತ್, ಮನೆಯೊಳಗೆ ಎಂಟ್ರಿ ಕೊಡುವ ಮುನ್ನವೇ "ಬಿಗ್‌ಬಾಸ್ ಒಂದು ಕ್ರಿಂಜ್ ಶೋ" ಎನ್ನುವ ಮೂಲಕ ಪ್ರೇಕ್ಷಕರ ಕೋಪಕ್ಕೆ ಗುರಿಯಾಗಿದ್ದರು, ಅಮಿತ್‌ನ ಹೇಳಿಕೆಗೆ ಸುದೀಪ್ ಕೂಡ ಕೌಂಟರ್ ಕೊಟ್ಟಿದ್ದರು. ಅತ್ತ ಕರಿಬಸಪ್ಪ 15ನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೆ, ಇವರು ಮೊದಲ ವಾರ ಅಷ್ಟೇನು ಕಾಣಿಸಿಕೊಂಡಿಲ್ಲ. ಕರಿಬಸಪ್ಪ ಅವರು ಬಿಗ್ ಬಾಸ್ ಮನೆಯಲ್ಲಿ ಒಂದಿಷ್ಟು ಫಿಲಾಸಫಿ ಹೇಳಿದ್ದರಷ್ಟೆ. ಆದರೆ, ಅದೆಲ್ಲ ತಮಾಷೆಯಂತಿತ್ತು.. ಕೇಳುಗರಿಗೆ ಹಾಗೂ ನೋಡುಗರಿಗೆ ಅದು ನಗು ತರಿಸುವಂತಿತ್ತು. ಇದೇ ಅವರಿಗೆ ಮುಳುವಾಗಿರಬಹುದು.
ಇನ್ನು ಅಮಿತ್ ಅವರು ಮಾತನಾಡಿದ್ದು ತುಂಬ ಕಡಿಮೆಯೋ ಅಥವಾ ಒಂದೂವರೆ ಗಂಟೆಯ ಎಪಿಸೋಡ್‌ನಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೋ ಎಂದು ಅವರೇ ಹೇಳಬಹುದು. ಹೀಗಾಗಿ ಮೊದಲ ವಾರ ಇಬ್ಬರು ದೊಡ್ಮನೆಯಿಂದ ಆಚೆ ಬಂದಿದ್ದಾರೆ. ಮತ್ತೊಂದೆಡೆ ಮೊದಲ ದಿನ ಎಪಿಮಿನೇಟ್ ಎಂದು ಘೋಷಿಸಿದ್ದ ರಕ್ಷಿತಾ ಶೆಟ್ಟಿ ಮನೆಯೊಳಗೆ ಪುನಃ ಎಂಟ್ರಿ ಕೊಟ್ಟು ಧೂಳೆಬ್ಬಿಸಿದ್ದಾರೆ.