ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಬದಲಾವಣೆಯ ಪರ್ವ ನಡೆದಿತ್ತು. ಟಿಆರ್ಪಿ ಇಲ್ಲದ ಹಾಗೂ ಕತೆ ಚೆನ್ನಾಗಿಲ್ಲದ ಧಾರಾವಾಹಿಗೆ ಗೇಟ್ ಪಾಸ್ ನೀಡಲಾಗಿತ್ತು. ಒಂದು ಧಾರಾವಾಹಿಯಂತು 100 ಸಂಚಿಕೆಯನ್ನೂ ಪೂರೈಸದೆ ಅಂತ್ಯ ಕಂಡಿತು. ಇದೀಗ ಝೀ ಕನ್ನಡದ ಸರದಿ. ಹೌದು, ಝೀ ಕನ್ನಡದಲ್ಲೂ ಒಂದೊಂದೆ ಧಾರಾವಾಹಿ ಕೊನೆಯಾಗುತ್ತಿದೆ. ಇತ್ತೀಚೆಗಷ್ಟೆ ಸೀತಾ ರಾಮ ಧಾರಾವಾಹಿಯನ್ನು ಅಂತ್ಯ ಮಾಡಲಾಗಿತ್ತು. ಇದೀಗ ಅಕ್ಟೋಬರ್ 31, 2022 ರಿಂದ ಆರಂಭವಾದ ಶ್ರೀರಸ್ತು ಶುಭಮಸ್ತು (Shrirasthu Shubhamasthu) ಧಾರಾವಾಹಿ ಕೊನೆಯಾಗಿದೆ.
ಈ ಸೀರಿಯಲ್ ಮುಕ್ತಾಯವಾಗಲಿದೆ ಎಂದು ಆರು ತಿಂಗಳು ಮುಂಚೆಯೇ ಪ್ರೇಕ್ಷಕರು ನಿರೀಕ್ಷೆ ಮಾಡಿದ್ದರು. ಅದಕ್ಕೆ ಮುಖ್ಯ ಕಾರಣ ಈ ಸೀರಿಯಲ್‌ನಲ್ಲಿನ ಕಥೆ. ಕಥೆ ಮುಂದಕ್ಕೆ ಹೋಗದೆ ಸುತ್ತಿದಲ್ಲೇ ಸುತ್ತುತ್ತಿದೆ ಎಂದು ಈಚೆಗೆ ಈ ಸೀರಿಯಲ್‌ನ ಪ್ರೇಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದರಂತೆ ಈಗ ದಿಢೀರ್ ಆಗಿ ಶ್ರೀರಸ್ತು ಶುಭಮಸ್ತು ಧಾರಾವಾಹಿಯನ್ನು ಮುಗಿಸಲಾಗಿದೆ.
ಪ್ರತಿದಿನ ಸಂಜೆ 6ಗಂಟೆಗೆ ಪ್ರಸಾರ ಆಗುತ್ತಿದ್ದ ಶ್ರೀರಸ್ತು ಶುಭಮಸ್ತು ಧಾರಾವಾಹಿ ಒಲವಿಗೆ-ಪ್ರೀತಿಗೆ ವಯಸ್ಸು ಮುಖ್ಯವಲ್ಲ ಎಂಬುದನ್ನು ತೋರಿಸಿತ್ತು. ಇದರಲ್ಲಿ ಕನ್ನಡದ ಖ್ಯಾತ ನಟಿ ಸುಧಾರಾಣಿ ನಟಿಸಿದ್ದು ವಿಶೇಷವಾಗಿತ್ತು. ಇವರ ಜೊತೆಗೆ ಅಜಿತ್ ಹಂದೆ ಮತ್ತು ವೆಂಕಟ್ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇನ್ನುಳಿದಂತೆ ದೀಪಕ್ ಗೌಡ, ಚಂದನಾ ರಾಘವೇಂದ್ರ, ಅರ್ಫತ್, ಲಾವಣ್ಯ, ನೇತ್ರಾ ಜಾಧವ್, ಲಾವಣ್ಯ ಮೋಹನ್, ನಕುಲ್ ಸ್ವಪ್ನಾ ದೀಕ್ಷಿತ್, ಶ್ರೀನಾಥ್ ವಸಿಷ್ಠ ಮತ್ತಿತರರು ಇದ್ದರು. ಇತ್ತೀಚೆಗೆ ಗಾಯಕಿ ಅರ್ಚನಾ ಉಡುಪ ಕೂಡ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದರು.
ಶ್ರೀರಸ್ತು ಶುಭಮಸ್ತು ಧಾರಾವಾಹಿ ಆರಂಭದಿಂದ ಅನೇಕರಿಗೆ ಮೆಚ್ಚುಗೆಯಾಗಿತ್ತು. ಆದರೆ ಇನ್ನೂ ಅನೇಕರಿಗೆ ಧಾರಾವಾಹಿ ಇಷ್ಟವಾಗಿರಲಿಲ್ಲ. ತುಳಸಿ-ಮಾಧವ ಇಷ್ಟು ವಯಸ್ಸಾದ್ಮೇಲೆ ಪ್ರೀತಿ ಮಾಡೋದು, ಮದುವೆಯಾಗೋದು ಹಾಸ್ಯಾಸ್ಪದ ಎಂದು ಹೇಳಿದವರೂ ಇದ್ದಾರೆ. ಅದರಲ್ಲೂ ಈ ಸೀರಿಯಲ್‌ಗೆ ತೀವ್ರ ಟೀಕೆ ವ್ಯಕ್ತವಾಗಿದ್ದು ತುಳಸಿ ಗರ್ಭಿಣಿಯಾದಾಗ. ಆಸರೆಗಾಗಿ ವಯಸ್ಸು ಮೀರಿದ ಮೇಲೆ ಮದುವೆಯಾಗೋದು ತಪ್ಪಲ್ಲ. ಆದರೆ ಹೀಗೆ ಮಕ್ಕಳಾಗುವ ಕಥೆಯೆಲ್ಲ ಬೇಕಿತ್ತಾ? ಎಂಬಿತ್ಯಾದಿ ಟೀಕೆಗಳು ತುಂಬ ಬಂದಿವೆ.
ಇದೀಗ ಅಂತಿಮವಾಗಿ 859 ಸಂಚಿಕೆಗಳಿಗೆ ಶ್ರೀರಸ್ತು ಶುಭಮಸ್ತು ಧಾರಾವಾಹಿ ಶುಭಾಂತ್ಯಗೊಂಡಿದೆ. ಸೀರಿಯಲ್ ಮುಗಿದಿದ್ದಕ್ಕೆ ತಂಡ ಫೇರ್‌ವೆಲ್ ಪಾರ್ಟಿ ಆಯೋಜಿಸಿತ್ತು. ಈ ಪಾರ್ಟಿಯಲ್ಲಿ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ಪಾಲ್ಗೊಂಡಿದ್ದರು.
BBK 12: ಬಿಗ್ ಬಾಸ್ ಕನ್ನಡ ಸೀಸನ್ 12ರ ಪ್ರೋಮೋ ಬಿಡುಗಡೆ: ಹೊಸ ಹೇರ್ ಸ್ಟೈಲ್ನಲ್ಲಿ ಕಿಚ್ಚ ಮಿಂಚಿಂಗ್