Pathaan 2: ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡಲು ಶಾರುಖ್ ಖಾನ್-ದೀಪಿಕಾ ಸಜ್ಜು; ಬರಲಿದೆ 'ಪಠಾಣ್ 2'
ʼಓಂ ಶಾಂತಿ ಓಂʼ, ʼಚೆನ್ನೈ ಎಕ್ಸ್‌ಪ್ರೆಸ್ʼ, ʼಹ್ಯಾಪಿ ನ್ಯೂ ಇಯರ್ʼ, ʼಪಠಾಣ್ʼ ಚಿತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದ ಬಾಲಿವುಡ್‌ನ ಹಿಡ್ ಜೋಡಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಇದೀಗ ಮತ್ತೊಂದು ಚಿತ್ರದಲ್ಲಿ ಒಂದಾಗಲಿದ್ದಾರೆ. 2023ರ ಹಿಟ್ ಚಿತ್ರ ʼಪಠಾಣ್ʼ ಮುಂದುವರಿದ ಭಾಗದಲ್ಲಿ ಇವರು ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ.

ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್.

ಮುಂಬೈ: ಕನ್ನಡತಿ ದೀಪಿಕಾ ಪಡುಕೋಣೆ (Deepika Padukone) ಮತ್ತು ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ (Shah Rukh Khan) ಸಿನಿಪ್ರಿಯರ ನೆಚ್ಚಿನ ಜೋಡಿ. ಈಗಾಗಲೇ 4 ಚಿತ್ರಗಳಲ್ಲಿ ಜೋಡಿಯಾಗಿ ಕಾಣಿಸಿಕೊಂಡು ಮೋಡಿ ಮಾಡಿದ ಇವರು ಇದೀಗ ಮತ್ತೊಮ್ಮೆ ಜತೆಯಾಗುತ್ತಿದ್ದಾರೆ. ಹೌದು, ಈ ಬಹು ಜನಪ್ರಿಯ ಜೋಡಿ ಮತ್ತೊಮ್ಮೆ ತೆರೆ ಮೇಲೆ ಒಂದಾಗಲಿದೆ. 2023ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಆ್ಯಕ್ಷನ್ ಥ್ರಿಲ್ಲರ್ ʼಪಠಾಣ್ʼ (Pathaan) ಚಿತ್ರದ ಮುಂದುವರಿದ ಭಾಗದಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಮತ್ತೊಮ್ಮೆ ಜತೆಯಾಗಲಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ (Pathaan 2). ಅದಾಗಲೇ ನಿರೀಕ್ಷೆ ಗರಿಗೆದರಿದೆ.
2023ರಲ್ಲಿ ತೆರೆಕಂಡ ಬಾಲಿವುಡ್‌ನ ಸ್ಪೈ ಆ್ಯಕ್ಷನ್ ಚಿತ್ರ ʼಪಠಾಣ್ʼ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್ ಖಾನ್ ರಾ ಏಜೆಂಟ್ ಪಠಾಣ್ ಮತ್ತು ದೀಪಿಕಾ ಪಡುಕೋಣೆ ರುಬಿನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸುಮಾರು 250 ಕೋಟಿ ರೂ. ವೆಚ್ಚದಲ್ಲಿ ತಯಾರಾದ ಈ ಚಿತ್ರ 1,050 ಕೋಟಿ ರೂ. ಗಳಿಸಿತ್ತು. ಮೈ ನವಿರೇಳಿಸುವ ಸಾಹಸ ದೃಶ್ಯಗಳಿಂದ ಕೂಡಿದ ಈ ಸಿನಿಮಾದ ಮುಂದಿನ ಭಾಗಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಇದೀಗ ಕೊನೆಗೂ ಗುಡ್‌ನ್ಯೂಸ್ ಹೊರ ಬಿದ್ದಿದೆ.
ಯಶ್ ರಾಜ್ ಫಿಲ್ಮ್ಸ್‌ನ ಸ್ಪೈ ಯೂನಿವರ್ಸ್‌ನ ಭಾಗವಾಗಿ ಈ ಚಿತ್ರ ತಾಯಾರಾಗಲಿದೆ. ಸದ್ಯ ಚಿತ್ರತಂಡ ಸ್ಕ್ರಿಪ್ಟ್ ಕೆಲಸದಲ್ಲಿ ನಿರತವಾಗಿದೆ. ಅಬ್ಬಾಸ್ ಟೈರ್ವಾಲಾ ಚಿತ್ರಕಥೆ ಬರೆಯುತ್ತಿದ್ದು, ಬಹುತೇಕ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ. ಎಲ್ಲವನ್ನೂ ಸಿದ್ಧವಾಗಿಸಿಕೊಂಡು ಸಿನಿತಂಡ ಚಿತ್ರೀಕರಣಕ್ಕೆ ಇಳಿಯಲಿದೆ ಎಂದು ಮೂಲಗಳು ತಿಳಿಸಿವೆ.
ಯಾವಾಗ ಆರಂಭ?
ಸದ್ಯಕ್ಕಂತೂ ಚಿತ್ರ ಆರಂಭವಾಗುವ ಲಕ್ಷಣಗಳಿಲ್ಲ. ಪ್ರಸ್ತುತ ಶಾರುಖ್ ಖಾನ್ ʼಕಿಂಗ್ʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಪುತ್ರಿ ಸುಹಾನಾ ಖಾನ್ ಕೂಡ ಅಭಿನಯಿಸುತ್ತಿದ್ದಾರೆ. 2026ರ ಮಧ್ಯ ಭಾಗದಲ್ಲಿ ಈ ಬಹು ನಿರೀಕ್ಷಿತ ಚಿತ್ರ ತೆರೆ ಕಾಣಲಿದೆ. ಈ ಸಿನಿಮಾದ ಬಳಿಕವಷ್ಟೇ ಶಾರುಖ್ ʼಪಠಾಣ್ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ದೀಪಿಕಾ ಸದ್ಯ ನಟನೆಗೆ ಬ್ರೇಕ್ ತೆಗೆದುಕೊಂಡಿದ್ದಾರೆ. ವಿಶೇಷ ಎಂದರೆ ಕತ್ರಿನಾ ಕೈಫ್ ಬಳಿಕ ಸ್ಪೈ ಯೂನಿವರ್ಸ್‌ನಲ್ಲಿ ಕಾಣಿಸಿಕೊಳ್ಳುವ 2ನೇ ನಾಯಕಿ ಎನಿಸಿಕೊಳ್ಳಲಿದ್ದಾರೆ ದೀಪಿಕಾ. ಕತ್ರಿನಾ ಈ ಹಿಂದೆ ʼಟೈಗರ್ʼ ಸೀರಿಸ್‌ನಲ್ಲಿ ನಾಯಕಿಯಾಗಿ ಮುಂದುವರಿದಿದ್ದರು.
ಈ ಸುದ್ದಿಯನ್ನೂ ಓದಿ: Katrina Kaif: ಮಹಾ ಕುಂಭಮೇಳದಲ್ಲಿ ಪಾಲ್ಗೊಂಡ ಬಾಲಿವುಡ್ ನಟಿ ಕತ್ರಿನಾ ಕೈಫ್ ಭಾವುಕ
ʼಏಕ್ ಥಾ ಟೈಗರ್ʼ, ʼಟೈಗರ್ ಜಿಂದಾ ಹೆʼ, ʼವಾರ್ʼ, ʼಪಠಾಣ್ʼ ಮುಂತಾದ ವೈಆರ್‌ಎಫ್ ಸ್ಪೈ ಯೂನಿವರ್ಸ್ ಚಿತ್ರಗಳನ್ನು ನಿರ್ಮಿಸಿರುವ ಆದಿತ್ಯ ಚೋಪ್ರಾ ʼಪಠಾಣ್ 2ʼ ಕೈಗೆತ್ತಿಕೊಳ್ಳಲಿದ್ದಾರೆ. ಇದರ ಜತೆಗೆ ಆಲಿಯಾ ಭಟ್ ಅಭಿನಯದ ʼಆಲ್ಫಾʼ, ಹೃತಿಕ್ ರೋಷನ್ ಮತ್ತು ಜೂ.ಎನ್‌ಟಿಆರ್ ಅಭಿನಯದ ʼವಾರ್ 2ʼ ಸಿನಿಮಾಗಳನ್ನೂ ಅವರು ನಿರ್ಮಿಸುತ್ತಿದ್ದಾರೆ. ಮತ್ತೊಂದು ವಿಶೇಷ ಎಂದರೆ ʼಪಠಾಣ್ 2ʼ ಚಿತ್ರಕ್ಕೆ ಸಿದ್ಧಾರ್ಥ್ ಆನಂದ್ ಬದಲು ಹೊಸ ನಿರ್ದೇಶಕರೊಬ್ಬರು ಆ್ಯಕ್ಷನ್ ಕಟ್ ಹೇಳಲಿದ್ದಾರೆ.