Katrina Kaif: ಮಹಾ ಕುಂಭಮೇಳದಲ್ಲಿ ಪಾಲ್ಗೊಂಡ ಬಾಲಿವುಡ್ ನಟಿ ಕತ್ರಿನಾ ಕೈಫ್ ಭಾವುಕ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಪಾಲ್ಗೊಂಡಿದ್ದಾರೆ. "ಈ ಬಾರಿ ಇಲ್ಲಿಗೆ ಬರಲು ಸಾಧ್ಯವಾಗಿರುವುದು ನನ್ನ ಅದೃಷ್ಟ. ನನಗೆ ನಿಜವಾಗಿಯೂ ಸಂತಸವಾಗುತ್ತಿದೆʼʼ ಎಂದು ಅವರು ಹೇಳಿದ್ದಾರೆ. ಫೆ. 26ರಂದು ಮಹಾ ಕುಂಭಮೇಳಕ್ಕೆ ತೆರೆ ಬೀಳಲಿದೆ.

ಕುಂಭಮೇಳದಲ್ಲಿ ಭಾಗವಹಿಸಿದ ನಟಿ ಕತ್ರಿನಾ ಕೈಫ್.

ಲಖನೌ: ಬಾಲಿವುಡ್ ನಟಿ ಕತ್ರಿನಾ ಕೈಫ್ (Katrina Kaif) ಉತ್ತರ ಪ್ರದೇಶದ ಪ್ರಯಾಗ್‌ರಾಜ್ (Prayagraj)ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸೋಮವಾರ (ಫೆ. 24) ಭಾಗವಹಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಇದೇ ವೇಳೆ ಅವರು ಪರಮಾರ್ಥ ನಿಕೇತನ ಆಶ್ರಮದ ಅಧ್ಯಕ್ಷ ಸ್ವಾಮಿ ಚಿದಾನಂದ ಸರಸ್ವತಿ (Swami Chidanand Saraswati) ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಎಎನ್‌ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಕತ್ರಿನಾ ಕೈಫ್, ಈ ಧಾರ್ಮಿಕ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಕತ್ರಿನಾ ಕೈಫ್ ಹೇಳಿದ್ದೇನು?
"ಈ ಬಾರಿ ಇಲ್ಲಿಗೆ ಬರಲು ಸಾಧ್ಯವಾಗಿರುವುದು ನನ್ನ ಅದೃಷ್ಟ. ನನಗೆ ನಿಜವಾಗಿಯೂ ಸಂತಸವಾಗುತ್ತಿದೆ. ಇದು ಬಹಳ ಸುಂದರವಾದ ಸ್ಥಳ. ಕುಂಭಮೇಳದ ಅನುಭವ ಪಡೆಯಲು ಈಗಷ್ಟೇ ಆರಂಭಿಸಿದ್ದೇನೆ. ನಾನು ಪುಣ್ಯವಂತೆ. ಇಡೀ ದಿನವನ್ನು ಇಲ್ಲಿ ಕಳೆಯಲು ನಾನು ಉತ್ಸುಕಳಾಗಿದ್ದೇನೆʼʼ ಎಂದು ಅವರು ಭಾವುಕರಾಗಿ ಹೇಳಿದ್ದಾರೆ. ಈ ವೇಳೆ ಅವರೊಂದಿಗೆ ಅತ್ತೆಯೂ ಇದ್ದರು.
ಪವಿತ್ರ ಸ್ನಾನ ಮಾಡಿದ್ದ ವಿಕ್ಕಿ ಕೌಶಲ್, ಅಕ್ಷಯ್ ಕುಮಾರ್
ವಿಶೇಷ ಎಂದರೆ ಕತ್ರಿನಾ ಕೈಫ್ ಅವರ ಪತಿ, ಬಾಲಿವುಡ್ ನಟ ವಿಕ್ಕಿ ಕೌಶಲ್ ಈಗಾಗಲೇ ಕುಂಭಮೇಳಕ್ಕೆ ತೆರಳಿ ಪವಿತ್ರ ಸ್ನಾನಗೈದಿದ್ದರು. ತಮ್ಮ ಬಾಲಿವುಡ್ ಚಿತ್ರ ʼಛಾವಾʼದ ಬಿಡುಗಡೆ ಮುನ್ನ ಫೆ. 13ರಂದು ಪ್ರಯಾಗ್‌ರಾಜ್‌ಗೆ ತೆರಳಿ ಅವರು ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದು ಬಂದಿದ್ದರು. ಗಂಗಾ-ಯಮುನಾ-ಗುಪ್ತಗಾಮಿನಿ ಸರಸ್ವತಿ ನದಿಗಳ ತ್ರಿವೇಣಿ ಸಂಗಮ ದೇಶ-ವಿದೇಶಗಳ ಕೋಟ್ಯಂತರ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಜನ ಸಾಮಾನ್ಯರು, ಸೆಲೆಬ್ರಿಟಿಗಳು, ಉದ್ಯಮಿಗಳು, ರಾಜಕಾರಣಿಗಳು ಈಗಾಗಲೇ ಪವಿತ್ರ ಸ್ನಾನ ಮಾಡಿದ್ದಾರೆ.
ಇತ್ತೀಚೆಗೆ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಕೂಡ ಪ್ರಯಾಗ್‌ರಾಜ್‌ಗೆ ಆಗಮಿಸಿದ್ದರು. ಇದೇ ವೇಳೆ ಅವರು ಇಲ್ಲಿನ ಸಿದ್ಧತೆ ಮತ್ತು ಸುವ್ಯವಸ್ಥೆಗೆ ಮೆಚ್ಚುಗೆ ಸೂಚಿಸಿದ್ದರು. ʼʼಉತ್ತಮ ವ್ಯವಸ್ಥೆಗಾಗಿ ನಾನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇಲ್ಲಿನ ವ್ಯವಸ್ಥೆಗಳು ಉತ್ತಮವಾಗಿದೆʼʼ ಎಂದಿದ್ದರು. ಜತೆಗೆ ಎಲ್ಲ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದರು.
ಮಹಾ ಕುಂಭಮೇಳ ಮುಕ್ತಾಯಕ್ಕೆ ದಿನಗಣನೆ ಆರಂಭವಾಗಿದ್ದು, ಮಹಾ ಶಿವರಾತ್ರಿಯ ಫೆ. 26ರಂದು ಅಧಿಕೃತವಾಗಿ ತೆರೆ ಬೀಳಲಿದೆ. ಇದುವರೆಗೆ ಸುಮಾರು 62 ಕೋಟಿ ಭಕ್ತರು ಈ ಬೃಹತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಸದ್ಯ ಕತ್ರಿನಾ ಕೈಫ್ ಯಾವುದೇ ಚಿತ್ರವನ್ನು ಒಪ್ಪಿಕೊಂಡಿಲ್ಲ. ಕಳೆದ ವರ್ಷ ತೆರೆಕಂಡ ವಿಜಯ್ ಸೇತುಪತಿ-ಕತ್ರಿನಾ ಕೈಫ್ ಅಭಿನಯದ ʼಮೆರ‍್ರಿ ಕಿಸ್‌ಮಸ್ʼ ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡಿಲ್ಲ. 2023ರಲ್ಲಿ ರಿಲೀಸ್ ಆದ ಸಲ್ಮಾನ್ ಖಾನ್ ಜತೆಗಿನ ಕತ್ರಿನಾ ಚಿತ್ರ ʼಟೈಗರ್ 3ʼ ಕೂಡ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಸದ್ಯ ಅವರು ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Vijay Sethupathi: ಕಾರ್ಮಿಕರ ಮನೆ ನಿರ್ಮಾಣಕ್ಕೆ 1.30 ಕೋಟಿ ರೂ. ದೇಣಿಗೆ ನೀಡಿದ ವಿಜಯ್ ಸೇತುಪತಿ
ಇನ್ನು ವಿಕ್ಕಿ ಕೌಶಲ್ ಅಭಿನಯದ ʼಛಾವಾʼ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಫೆ. 23ರಂದು 40 ಕೋಟಿ ರೂ. ದೋಚಿಕೊಂಡ ʼಛಾವಾʼ ಇದುವರೆಗೆ ಜಾಗತಿಕವಾಗಿ 326.75 ಕೋಟಿ ರೂ. ಗಳಿಸಿದೆ. ಇದರಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ಸ್ಯಾಂಡಲ್‌ವುಡ್ ನಟ ಬಾಲಾಜಿ ಮನೋಹರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.