ʻಸೂಪರ್ ಸ್ಟಾರ್ʼ ರಜನಿಕಾಂತ್ ಅವರ ಬಹುನಿರೀಕ್ಷಿತ್ ʻಜೈಲರ್ 2ʼ ಸಿನಿಮಾಗೆ ಬಿರುಸಿನ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದಲ್ಲಿ ಕಲಾವಿದರ ಸಮಾಗಮವೇ ಇದೆ. ವಿವಿಧ ಭಾಷೆಯ ಸ್ಟಾರ್ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯದ ಲೇಟೆಸ್ಟ್ ಮಾಹಿತಿ ಏನೆಂದರೆ, ಬಾಲಿವುಡ್ ನಟ ಶಾರುಖ್ ಖಾನ್ ಅವರು ʻಜೈಲರ್ 2ʼ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರಂತೆ! ಈ ಬಗ್ಗೆ ಮಾಹಿತಿಯೊಂದು ಕೇಳಿಬಂದಿದೆ.
ಮಿಥುನ್ ಚಕ್ರವರ್ತಿ ಹೇಳಿದ್ರಾ ಸತ್ಯ?
ಜೈಲರ್ 2 ಸಿನಿಮಾದಲ್ಲಿ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ನಟಿಸುತ್ತಿದ್ದು, ಅವರಿಂದಲೇ ಶಾರುಖ್ ಖಾನ್ ಅತಿಥಿ ಪಾತ್ರ ಮಾಡುವ ರಹಸ್ಯ ಹೊರಬಿದ್ದಿದೆ ಎನ್ನಲಾಗಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡುತ್ತ ಮಿಥುನ್ ಚಕ್ರವರ್ತಿ "ಶಾರುಖ್ ಖಾನ್ ಕೂಡ 'ಜೈಲರ್ 2' ಚಿತ್ರದ ಭಾಗವಾಗಲಿದ್ದಾರೆ" ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಹೌದು, ತಮಗೆ ಇತ್ತೀಚೆಗೆ ಇಷ್ಟವಾದ ಸಿನಿಮಾಗಳ ಬಗ್ಗೆ ಮಾತನಾಡುತ್ತಾ ಮಿಥುನ್, ಜೈಲರ್ 2 ಬಗ್ಗೆ ಹೇಳಿದ್ದಾರೆ. ಅದರಲ್ಲಿರುವ ಅನುಭವಿ ಕಲಾವಿದರ ಬೃಹತ್ ತಾರಾಗಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, "ಮೋಹನ್ ಲಾಲ್, ಶಾರುಖ್ ಖಾನ್, ರಮ್ಯಾ ಕೃಷ್ಣನ್, ಶಿವರಾಜ್‌ಕುಮಾರ್.." ಎಂದು ಹೇಳುವ ಮೂಲಕ ಕಿಂಗ್ ಖಾನ್ ಕೂಡ ಜೈಲರ್ 2ರಲ್ಲಿ ಇದ್ದಾರೆ ಎಂಬುದನ್ನು ಖಚಿತಪಡಿಸಿದ್ದಾರೆ.
ಆದರೆ, ಈ ಚಿತ್ರದಲ್ಲಿ ಶಾರುಖ್ ಖಾನ್ ಅವರ ಉಪಸ್ಥಿತಿಯ ಬಗ್ಗೆ ಚಿತ್ರದ ನಿರ್ಮಾಪಕರು ಇನ್ನೂ ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ. ಈ ಚಿತ್ರಕ್ಕೆ ಬೃಹತ್ ತಾರಾಗಣವಿರುವುದು ಅಭಿಮಾನಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ವರದಿಗಳ ಪ್ರಕಾರ, ಮೋಹನ್ ಲಾಲ್, ಶಿವರಾಜ್‌ಕುಮಾರ್, ವಿಜಯ್ ಸೇತುಪತಿ, ಎಸ್.ಜೆ. ಸೂರ್ಯ, ಸಂತಾನಂ, ಸೂರಜ್ ವೆಂಜಾರಮೂಡು ಮತ್ತು ವಿದ್ಯಾ ಬಾಲನ್ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಇದೀಗ ಶಾರುಖ್ ಖಾನ್ ಹೆಸರು ಸೇರ್ಪಡೆಗೊಂಡಿದೆ.
Jailer 2 Movie: ಮತ್ತೊಮ್ಮೆ ಆ್ಯಕ್ಷನ್ ಅವತಾರದಲ್ಲಿ ರಜನಿಕಾಂತ್; 'ಜೈಲರ್ 2' ಚಿತ್ರದ ಟೀಸರ್ ಔಟ್
ಎಸ್‌ಆರ್‌ಕೆ ವರ್ಸಸ್ ಎಸ್‌ಆರ್‌ಕೆ
ಸ್ಯಾಂಡಲ್‌ವುಡ್‌ನಲ್ಲಿ ನಟ ಶಿವರಾಜ್‌ಕುಮಾರ್ ಅವರನ್ನು ಎಸ್‌ಆರ್‌ಕೆ ಎಂದು ಕರೆಯಲಾಗುತ್ತದೆ. ಅದೇ ರೀತಿ ಬಾಲಿವುಡ್‌ನಲ್ಲಿ ಶಾರುಖ್ ಖಾನ್ ಅವರನ್ನು ಎಸ್‌ಆರ್‌ಕೆ ಎನ್ನಲಾಗುತ್ತದೆ. ಇದೀಗ ಅವರಿಬ್ಬರು ಜೈಲರ್ 2ರಲ್ಲಿ ನಟಿಸಲಿದ್ದಾರೆ ಎಂದಾಗ, ಇಬ್ಬರ ನಡುವೆ ಮುಖಾಮುಖಿ ದೃಶ್ಯಗಳು ಇರಬಹುದಾ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ.
ಈ ಸಿನಿಮಾವನ್ನು ನೆಲ್ಸನ್ ದಿಲೀಪ್ ಕುಮಾರ್ ಅವರು ನಿರ್ದೇಶಿಸುತ್ತಿದ್ದು, 2026ರ ಆಗಸ್ಟ್ ವೇಳೆಗೆ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆಗಳಿವೆ.