ʻಸೂಪರ್ ಸ್ಟಾರ್ʼ ರಜನಿಕಾಂತ್ ಅವರ ʻಜೈಲರ್ 2ʼ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. 2026ರ ಬಹುನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ ʻಜೈಲರ್ 2ʼ ಪ್ರಮುಖ ಸ್ಥಾನದಲ್ಲಿದೆ. ಪಾರ್ಟ್ 1ರಲ್ಲಿ ಶಿವರಾಜ್‌ಕುಮಾರ್, ಮೋಹನ್‌ಲಾಲ್ ಅವರ ಅತಿಥಿ ಪಾತ್ರಗಳು ಮಾಡಿದ್ದ ಇಂಪ್ಯಾಕ್ಟ್ ಎಲ್ಲರಿಗೂ ಗೊತ್ತೇ ಇದೆ. ಸದ್ಯ ಪಾರ್ಟ್ 2ರಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅತಿಥಿ ಪಾತ್ರ ಮಾಡಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಈಗ ಅವರು ಈ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂಬ ಮಾತು ಕೇಳಿಬಂದಿದ್ದು, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ʻಜೈಲರ್ 2ʼ ಚಿತ್ರದ ಕೆಲಸಗಳು ಬಿರುಸಿನಿಂದ ಸಾಗುತ್ತಿದ್ದು, ಸಿನಿಮಾ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಪ್ರಮುಖ ಭಾಗಗಳ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಪೋಸ್ಟ್-ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿದೆ. ಇದರ ನಡುವೆ ಜೈಲರ್ 2 ಸಿನಿಮಾಕ್ಕಾಗಿ ಐದು ದಿನಗಳ ಕಾಲ್ ಶೀಟ್ ಅನ್ನು ಶಾರುಖ್ ಖಾನ್ ಅವರು ನೀಡಿದ್ದು, ಅದು ಮುಗಿದರೆ, ಇಡೀ ಚಿತ್ರದ ಚಿತ್ರೀಕರಣ ಮುಕ್ತಾಯವಾಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಒಂದೇ ಸೀನ್‌ನಲ್ಲಿ ರಜನಿಕಾಂತ್, ಶಿವರಾಜ್‌ಕುಮಾರ್, ಮೋಹನ್‌ಲಾಲ್ ಮತ್ತು ಶಾರುಖ್ ಖಾನ್ ಅವರನ್ನು ನೋಡಲು ಫ್ಯಾನ್ಸ್ ಕುತೂಹಲದಿಂದ ಕಾಯುತ್ತಿದ್ದರು. ಆದರೆ ಅದ್ಯಾಕೋ ನೆರವೇರುವಂತೆ ಕಾಣುತ್ತಿಲ್ಲ.
ಕಿಂಗ್‌ನಲ್ಲಿ ಬ್ಯುಸಿ ಆಗಿರುವ ನಟ ಶಾರುಖ್
ಶಾರುಖ್ ಖಾನ್ ಪ್ರಸ್ತುತ ತಮ್ಮ ಬಹುನಿರೀಕ್ಷಿತ ಚಿತ್ರ 'ಕಿಂಗ್' ಕೆಲಸಗಳಲ್ಲಿ ಮುಳುಗಿದ್ದಾರೆ. ಇದು ಅವರ ವೃತ್ತಿಜೀವನದ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರಗಳಲ್ಲಿ ಒಂದಾಗಿದ್ದು, ಈ ಚಿತ್ರದ ಮೂಲಕ ಅವರ ಮಗಳು ಸುಹಾನಾ ಖಾನ್ ಮೊದಲ ಬಾರಿಗೆ ಬೆಳ್ಳಿಪರದೆಗೆ ಪಾದಾರ್ಪಣೆ ಮಾಡುತ್ತಿರುವುದು ವಿಶೇಷ. ತಮ್ಮ ಮಗಳ ಚೊಚ್ಚಲ ಚಿತ್ರ ಎಂಬ ವಿಶೇಷತೆ ಮತ್ತು ತಮ್ಮ ಲುಕ್ ಈ ಚಿತ್ರಕ್ಕಷ್ಟೇ ಸೀಮಿತವಾಗಿರಲಿ ಎಂಬ ಕಾರಣಕ್ಕಾಗಿ ಶಾರುಖ್ ಖಾನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
Jailer 2 Movie: ಮತ್ತೊಮ್ಮೆ ಆ್ಯಕ್ಷನ್ ಅವತಾರದಲ್ಲಿ ರಜನಿಕಾಂತ್; 'ಜೈಲರ್ 2' ಚಿತ್ರದ ಟೀಸರ್ ಔಟ್
ʻಜೈಲರ್ 2ʼ ಚಿತ್ರದ ಐದು ದಿನಗಳ ಚಿತ್ರೀಕರಣದ ಅತಿಥಿ ಪಾತ್ರಕ್ಕಾಗಿ ಶಾರುಖ್ ಖಾನ್ ಅವರನ್ನು ಸಂಪರ್ಕಿಸಲಾಗಿತ್ತು. ಆರಂಭದಲ್ಲಿ ಶಾರುಖ್ ಕಡೆಯಿಂದ ಸಮ್ಮತಿಯೂ ಸಿಕ್ಕಿತ್ತು. ಆದರೆ 'ಕಿಂಗ್' ಚಿತ್ರದ ನಂತರ ʻಜೈಲರ್ 2ʼ ಸಿನಿಮಾ ಬಿಡುಗಡೆಯಾಗಬೇಕು ಎಂಬುದು ಶಾರುಖ್ ನೀಡಿದ್ದ ಸಲಹೆ ಆಗಿತ್ತು. 'ಕಿಂಗ್' ಚಿತ್ರದಲ್ಲಿ ಎಸ್‌ಆರ್‌ಕೆ ವಿಭಿನ್ನ ಲುಕ್ ಹೊಂದಿದ್ದು, ಆ ಚಿತ್ರಕ್ಕಿಂತ ಮೊದಲು ಬೇರೆ ಯಾವುದೇ ಸಿನಿಮಾದಲ್ಲೂ ಆ ಲುಕ್ ರಿವೀಲ್ ಆಗುವುದು ಶಾರುಖ್‌ಗೆ ಇಷ್ಟವಿರಲಿಲ್ಲ ಎನ್ನಲಾಗಿದೆ.
ಅಂತಿಮವಾಗಿ ಮಾತುಕತೆಗಳ ಫಲಪ್ರದವಾಗದೇ ಇರುವ ಕಾರಣ, ಶಾರುಖ್ ಖಾನ್ ಅವರು ಜೈಲರ್ 2 ಸಿನಿಮಾದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಈ ಕುರಿತು ರಜನಿಕಾಂತ್ ಜೊತೆಗೂ ಮಾತನಾಡಿರುವ ಶಾರುಖ್ ಖಾನ್, "ಮೊಂದೊಂದು ದಿನ ಮತ್ತೊಂದು ಪ್ರಾಜೆಕ್ಟ್‌ನಲ್ಲಿ ಜೊತೆಯಾಗಿ ಕೆಲಸ ಮಾಡೋಣ" ಎಂದು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.