ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಲಿಂಗ ಕಾಮಿಗಳ ಪಾತ್ರದಲ್ಲಿ ನಟಿಸಿದ್ದಾರಾ ರಶ್ಮಿಕಾ ಮಂದಣ್ಣ - ಕೃತಿ ಸನೋನ್‌?‌ ಇಂಥದ್ದೊಂದು ವದಂತಿ ಹುಟ್ಟಿಕೊಂಡಿದ್ದೇಗೆ?

ಬಾಲಿವುಡ್‌ನ ಬಹುನಿರೀಕ್ಷಿತ 'ಕಾಕ್‌ಟೇಲ್ 2' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನಟಿಯರಾದ ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ಸಲಿಂಗಕಾಮಿಗಳಾಗಿ ನಟಿಸಿದ್ದಾರೆಂಬ ವದಂತಿಗಳಿಗೆ ತೆರೆ ಬಿದ್ದಿದೆ. ಸೆಟ್‌ನಲ್ಲಿ ಇವರಿಬ್ಬರ ಆಪ್ತ ಗೆಳೆತನವನ್ನು ನೋಡಿ ನಿರ್ದೇಶಕ ಹೋಮಿ ಅದಾಜಾನಿಯಾ ತಮಾಷೆಯಾಗಿ ಆಡಿದ ಮಾತೇ ಗಾಸಿಪ್‌ಗೆ ಕಾರಣವಾಗಿತ್ತಂತೆ!

ಬಹುನಿರೀಕ್ಷಿತ 'ಕಾಕ್‌ಟೇಲ್ 2' (Cocktail 2) ಚಿತ್ರದಲ್ಲಿ ಬಾಲಿವುಡ್ ನಟ ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇದೊಂದು ಹೊಸ ತಲೆಮಾರಿನ ಪ್ರೇಮ ತ್ರಿಕೋನ ಕಥೆ ಎಂದು ಹೇಳಲಾಗಿದೆ. ಈಗಾಗಲೇ ಪ್ರೇಕ್ಷಕರಲ್ಲಿ ಈ ಸಿನಿಮಾದ ಕಥೆ ಏನಿರಬಹುದು ಎಂಬ ಕುತೂಹಲ ಮೂಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಊಹಾಪೋಹಗಳು ಹರಿದಾಡುತ್ತಿದ್ದವು. ಅದರಲ್ಲೂ ಮುಖ್ಯವಾಗಿ, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ಚಿತ್ರದಲ್ಲಿ 'ಲೆಸ್ಬಿಯನ್' (ಸಲಿಂಗಕಾಮಿಗಳು) ಜೋಡಿಯಾಗಿ ನಟಿಸುತ್ತಿದ್ದಾರೆ ಎಂಬ ಮಾತು ಜೋರಾಗಿ ಕೇಳಿಬಂದಿತ್ತು.

ಈ ಗಾಸಿಪ್‌ ಹುಟ್ಟಿಕೊಂಡಿದ್ದೆಲ್ಲಿ?

ಸಲಿಂಗಕಾಮಿಗಳಾಗಿರುವ ಇಬ್ಬರು ಯುವತಿಯರ ಮಧ್ಯೆ ಒಬ್ಬ ಯುವಕ ಎಂಟ್ರಿ ಕೊಟ್ಟರೆ ಏನಾಗಬಹುದು ಎಂಬುದರ ಮೇಲೆ ಈ ಸಿನಿಮಾ ಸಾಗಲಿದೆ ಎಂಬ ವದಂತಿ ಜೋರಾಗಿತ್ತು. ಆದರೆ ಇದು ನಿಜವೇ? ಖಂಡಿತಾ ಇಲ್ಲ! ಇಂದು (ಜೂನ್‌ 2) 'ಕಾಕ್‌ಟೇಲ್ 2' ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದೆ. ಕೃತಿ ಸನೋನ್ ಮತ್ತು ರಶ್ಮಿಕಾ ಅವರ ಪಾತ್ರಗಳ ನಡುವಿನ ಸಂಬಂಧದ ಬಗ್ಗೆ ಪ್ರಶ್ನಿಸಿದಾಗ, ಕೃತಿ ಸನೋನ್ ನಗುತ್ತಲೇ ಶಾಹಿದ್ ಕಪೂರ್ ಕಡೆಗೆ ನೋಡಿ, "ಈ ವದಂತಿಗಳು ಒಂದೇ ಒಂದು ಜಾಗದಿಂದ ಹುಟ್ಟಿಕೊಳ್ಳುತ್ತಿವೆ ಎಂದು ನನಗನ್ನಿಸುತ್ತದೆ" ಎಂದು ಹೇಳಿದ್ದಾರೆ!

ವೃತ್ತಿ ಜೀವನದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ರಶ್ಮಿಕಾ ಮಂದಣ್ಣ; ಇಷ್ಟೊಂದು ದುಡ್ಡು ಕೊಟ್ಟ ಆ ಚಿತ್ರತಂಡ ಯಾವುದು?

ನಾನೇ ಕಾರಣ ಎಂದ ಡೈರೆಕ್ಟರ್!

ಇದಕ್ಕೆ ಪ್ರತಿಕ್ರಿಯಿಸಿದ ಶಾಹಿದ್ ಕಪೂರ್, "ನಾನು ಏನನ್ನೂ ಹೇಳಿಲ್ಲ. ಕಥೆ ಆ ರೀತಿ ಇರಲಿ ಎಂದು ನಾನೇಕೆ ಬಯಸಲಿ? ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಈ ವದಂತಿಗಳು ಎಲ್ಲಿಂದ ಬರುತ್ತಿವೆ" ಎಂದು ತಮಾಷೆ ಮಾಡಿದ್ದಾರೆ.

ಅಂತಿಮವಾಗಿ ಈ ಎಲ್ಲಾ ವದಂತಿಗಳಿಗೂ ಪೂರ್ಣವಿರಾಮ ಇಟ್ಟ ನಿರ್ದೇಶಕ ಹೋಮಿ ಅದಾಜಾನಿಯಾ, "ನಾನೇ ಇದನ್ನು ಸ್ಪಷ್ಟಪಡಿಸುತ್ತೇನೆ. ವದಂತಿ ಶುರುವಾಗಿದ್ದು ಇಲ್ಲಿಂದಲೇ... ನಾವೆಲ್ಲರೂ ಸೆಟ್‌ನಲ್ಲಿ ಕುಳಿತಿದ್ದೆವು. ಅವರಿಬ್ಬರೂ ಆತ್ಮೀಯ ಸ್ನೇಹಿತರಾಗಿರುವ ಕಾರಣ ಸೆಟ್‌ನಲ್ಲಿ ಸ್ವಲ್ಪ ಹೆಚ್ಚು ತಬ್ಬಿಕೊಂಡು ಮುದ್ದಾಟ ಮಾಡುತ್ತಿರುತ್ತಾರೆ. ಆಗ ನಾವು ಸುಮ್ಮನೆ ಕಲ್ಪನೆ ಮಾಡಿಕೊಂಡೆವು- ‘ಒಂದು ವೇಳೆ ಕಥೆ ಇವರಿಬ್ಬರ ನಡುವಿನ ಪ್ರೀತಿಯದ್ದಾಗಿದ್ದು, ಶಾಹಿದ್ ಅದರಲ್ಲಿ ಮೂರನೇ ವ್ಯಕ್ತಿಯಾಗಿದ್ದರೆ ಹೇಗಿರುತ್ತೆ?’ ಎಂದು. ಆಗ ನಾನು ಆ ತರಹದ ಸಿನಿಮಾ ಮಾಡಲೂ ನನಗೇನು ಅಭ್ಯಂತರವಿಲ್ಲ ಎಂದಿದ್ದೆ" ಅಂತ ಹೇಳಿದ್ದಾರೆ.‌

Rashmika Mandanna: ವೇದಿಕೆ ಮೇಲೆ ಇದೊಂದು ಕಾರಣಕ್ಕೆ ಕ್ಷಮೆಯಾಚಿಸಿದ ರಶ್ಮಿಕಾ ಮಂದಣ್ಣ!

ರಶ್ಮಿಕಾ-ಕೃತಿಗೆ ಕಾಲೆಳೆದ ಶಾಹಿದ್

"ನಾವು ಇದನ್ನು ಸ್ಪಷ್ಟಪಡಿಸಲೇಬೇಕಿದೆ. ಟ್ರೇಲರ್‌ನಲ್ಲಿ ತೋರಿಸಿರುವಂತೆ ಇಲ್ಲಿ ಎರಡು ಪ್ರೇಮಕಥೆಗಳಿವೆ. ಒಂದು ಹಳೇ ಪ್ರೀತಿ, ಮತ್ತೊಂದು ಹೊಸ ಪ್ರೀತಿ, ಇದನ್ನು ಬಿಟ್ಟು ಬೇರೆ ಯಾರದ್ದೂ ಯಾವುದೇ ಪ್ರೀತಿ ಈ ಸಿನಿಮಾದಲ್ಲಿ ಇಲ್ಲ" ಎಂದು ನಿರ್ಮಾಪಕ ದಿನೇಶ್ ವಿಜನ್ ಹೇಳಿದ್ದಾರೆ. ಇನ್ನು, ಇದೇ ವೇದಿಕೆ ಮೇಲೆ ರಶ್ಮಿಕಾ ಮತ್ತು ಕೃತಿ ಅವರನ್ನು ಕಾಲೆಳೆದ ನಟ ಶಾಹಿದ್‌ ಕಪೂರ್‌, "ನಿಮ್ಮಿಬ್ಬರ ನಡುವಿನ ಈ ನ್ಯಾಚುರಲ್ ಕೆಮಿಸ್ಟ್ರಿಯೇ ಎಲ್ರೂ ಇದನ್ನು ಲೆಸ್ಬಿಯನ್ ಲವ್ ಸ್ಟೋರಿ ಎಂದು ಅಂದುಕೊಳ್ಳಲು ಕಾರಣ ಇರಬಹುದೇ" ಎಂದು ಪ್ರಶ್ನಿಸಿದ್ದಾರೆ.

ಕೃತಿ ಸನೋನ್‌ ಕೊಟ್ಟ ಕ್ಲಾರಿಟಿ ಏನು?

"ನಾವು ಬೇಸರಪಡುವಂತಹ ನಮ್ಮ ಸಮಾಜದ ಒಂದು ದೃಷ್ಟಿಕೋನ ಇದು. ಇಬ್ಬರು ಹುಡುಗರಿದ್ದರೆ ಅದನ್ನು 'ಬ್ರೋಮ್ಯಾನ್ಸ್' (Bromance) ಎನ್ನುತ್ತಾರೆ. ಅದೇ ಇಬ್ಬರು ಹುಡುಗಿಯರಿದ್ದರೆ, ಅವರು ಕೇವಲ ಸ್ನೇಹಿತರಾಗಿರಲು ಸಾಧ್ಯವೇ ಇಲ್ಲ ಎಂದು ಜನರು ನಂಬುತ್ತಾರೆ. ಅವರ ನಡುವೆ ಒಂದೋ ವೈಷಮ್ಯ ಇರಬೇಕು ಅಥವಾ ಬೇರೇನೋ ನಡೆದಿರಬೇಕು ಎಂದೇ ಭಾವಿಸುತ್ತಾರೆ" ಎಂದು ನಟಿ ಕೃತಿ ಸನೋನ್‌ ಬೇಸರ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, 'ಕಾಕ್‌ಟೇಲ್ 2' ಸಿನಿಮಾವು ಜೂನ್ 19 ರಂದು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಲಿದೆ.