ಚಿತ್ರ: ಅಮೆರಿಕಾ ಅಮೆರಿಕಾ 2
ತಾರಾಗಣ: ಶಾನ್ವಿ ಶ್ರೀವಾಸ್ತವ, ಪೃಥ್ವಿ ಅಂಬಾರ್, ನಿರೂಪ್ ಭಂಡಾರಿ, ಮಂಡ್ಯ ರಮೇಶ್, ಮಾನಸಿ ಸುಧೀರ್ ಮುಂತಾದವರು ಇತರರು
ನಿರ್ದೇಶನ: ನಾಗತಿಹಳ್ಳಿ ಚಂದ್ರಶೇಖರ್
ಅವಧಿ: 2 ಗಂಟೆ 22 ನಿಮಿಷ
ರೇಟಿಂಗ್: 3/5
1997ರ ಕಲ್ಟ್ ಕ್ಲಾಸಿಕ್ 'ಅಮೆರಿಕಾ! ಅಮೆರಿಕಾ!!' ಚಿತ್ರ ತೆರೆಕಂಡು 29 ವರ್ಷಗಳ ನಂತರ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ 'ಕ್ಷಮೆ' ಕಾದಂಬರಿ ಆಧರಿಸಿ ಇಂದಿನ ತಲೆಮಾರಿಗೆ ಸರಿಹೊಂದುವಂತೆ 'ಅಮೆರಿಕಾ ಅಮೆರಿಕಾ 2' ಸಿನಿಮಾವನ್ನು ಮಾಡಿದ್ದಾರೆ. ಪ್ರೀತಿ, ದಾಂಪತ್ಯ ಮತ್ತು ಸಂಬಂಧಗಳಲ್ಲಿನ ಸಂಕೀರ್ಣತೆಗಳನ್ನು ತೆರೆಯ ಮೇಲೆ ತರುವುದು ಯಾವಾಗಲೂ ಸವಾಲಿನ ಕೆಲಸವೇ ಸರಿ. ಈ ಬಾರಿ ಇಂಥದ್ದೊಂದು ಸವಾಲಿನ ಕೆಲಸಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಕೈಹಾಕಿದ್ದಾರೆ.
'ಅಮೆರಿಕಾ ಅಮೆರಿಕಾ 2' ಚಿತ್ರದ ಕಥೆ ಏನು?
ಈ ಸಿನಿಮಾದ ಕೇಂದ್ರಬಿಂದು ನುಡಿ (ಶಾನ್ವಿ ಶ್ರೀವಾಸ್ತವ). ಆಕೆಗೆ ಕೆಲಸವೇ ಬದುಕು. ಉನ್ನತ ಹುದ್ದೆಯಲ್ಲಿರುವ ಈ ಎಐ (AI) ಎಂಜಿನಿಯರ್‌ಗೆ ಬಾಲ್ಯದ ಆಘಾತಗಳು ಹಾಗೂ ಪ್ರೀತಿಯೇ ಇಲ್ಲದ ದಾಂಪತ್ಯ ಜೀವನದ ಬೇಗುದಿ ನೋವು ತಂದಿರುತ್ತದೆ. ಆಫೀಸ್ ಕೆಲಸದ ನಿಮಿತ್ತ ಆಕೆ ಅಮೆರಿಕಾಕ್ಕೆ ತೆರಳುತ್ತಾಳೆ.
ಅಲ್ಲಿ ಆಕೆಗೆ ಮಾಜಿ ಪ್ರಿಯಕರ ನೀಲ್ (ಪೃಥ್ವಿ ಅಂಬಾರ್) ಎದುರಾಗುತ್ತಾನೆ. ಒಂದೆಡೆ ಹಳೆಯ ಪ್ರೀತಿಯ ನೆನಪು, ಇನ್ನೊಂದೆಡೆ ಒರಟು ಪತಿ ನಿನಾದ್ (ನಿರೂಪ್ ಭಂಡಾರಿ) ಮತ್ತು ಮಗಳು ಸಿರಿ. ನುದಿ ಮತ್ತು ನಿನಾದ್ ದಾಂಪತ್ಯ ಸದ್ಯ ಮಗಳು ಸಿರಿಗಾಗಿ ಉಳಿದುಕೊಂಡಿದೆ. ಈ ಇಬ್ಬಂದಿ ಭಾವನೆಗಳ ಸುಳಿಯಲ್ಲಿ ಸಿಲುಕುವ ನುಡಿ ಅಂತಿಮವಾಗಿ ಯಾವ ಹಾದಿ ತುಳಿಯುತ್ತಾಳೆ ಎಂಬುದೇ ಚಿತ್ರದ ಕೌತುಕ!
ಈ ಸಿನಿಮಾ ಹೇಗಿದೆ?
‘ಅಮೆರಿಕಾ! ಅಮೆರಿಕಾ!!’ ಸಿನಿಮಾದಲ್ಲಿ ಪ್ರೀತಿ ಎಂಬುದು ಸುಂದರವೂ ಹೌದು, ಗೊಂದಲವೂ ಹೌದು ಎಂಬುದನ್ನು ನಾಗತಿಹಳ್ಳಿ ಚಂದ್ರಶೇಖರ್ ಬಹಳ ಅದ್ಭುತವಾಗಿ ತೋರಿಸಿದ್ದರು. ಈ ಬಾರಿ ದಾಂಪತ್ಯ ಬದುಕಿನ ಸಂಕೀರ್ಣತೆಗಳನ್ನು ಬಿಡಿಸಿಡಲು ಹೊರಟಿದ್ದಾರೆ. ಇಲ್ಲಿ ನಟಿ ಶಾನ್ವಿಗೆ ಮಹತ್ವದ ಪಾತ್ರವೇ ಸಿಕ್ಕಿದ್ದು, ನುಡಿ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಆ ಪಾತ್ರದಲ್ಲಿನ ಗೊಂದಲ, ನೋವು ಮತ್ತು ಒಂಟಿತನವನ್ನು ಮುಗ್ಧತೆಯಿಂದ ತೆರೆಯ ಮೇಲೆ ತಂದು ಪ್ರೇಕ್ಷಕರ ಅನುಕಂಪ ಗಳಿಸುತ್ತಾರೆ. ಇದು ಅವರ ವೃತ್ತಿಜೀವನದಲ್ಲೇ ಅತ್ಯಂತ ಕ್ಲಿಷ್ಟಕರ ಪಾತ್ರ ಎನ್ನಬಹುದು; ಅದನ್ನು ಅವರು ಸಮರ್ಥವಾಗಿ ನಿಭಾಯಿಸಲು ಪ್ರಯತ್ನಿಸಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ 2' ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ 'ಡಾಲಿ' ಧನಂಜಯ
ಇನ್ನು ನಟ ನಿರೂಪ್ ಭಂಡಾರಿ ಒರಟು ಗಂಡನಾಗಿ ಹಾಗೂ ಕ್ಲೈಮ್ಯಾಕ್ಸ್‌ನಲ್ಲಿ ಕೊಂಚ ಹಾಸ್ಯದ ಸ್ಪರ್ಶ ನೀಡಿ ಗಮನ ಸೆಳೆಯುತ್ತಾರೆ. ಹಾಗೆ ನೋಡಿದರೆ, ನಟ ಪೃಥ್ವಿ ಅಂಬಾರ್‌ಗೆ ತುಸು ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ಭಾವನಾತ್ಮಕ ದೃಶ್ಯಗಳಿಗೆ ಅವರು ತಮ್ಮ ನಟನೆಯ ಮೂಲಕ ತೂಕ ತಂದಿದ್ದಾರೆ.
ದ್ವಿತೀಯಾರ್ಧದ ಕಾವ್ಯಾತ್ಮಕ ಸಂಭಾಷಣೆಗಳು ಹಾಗೂ ಕ್ಲೈಮ್ಯಾಕ್ಸ್ ದೃಶ್ಯಗಳಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರ ಸೂಕ್ಷ್ಮ ಭಾವನೆಗಳ ಹಿಡಿತ ಸ್ಪಷ್ಟವಾಗಿ ಕಾಣುತ್ತದೆ. ಎಸ್.ಕೆ. ರಾವ್ ಅವರ ಛಾಯಾಗ್ರಹಣದಲ್ಲಿ ಸಿಯಾಟಲ್ ನಗರದ ನಯನಮನೋಹರ ತಾಣಗಳು ಮತ್ತು ಸನ್ನಿವೇಶಗಳು ಅತ್ಯಂತ ಸುಂದರವಾಗಿ ಮೂಡಿಬಂದಿವೆ.
ಆದರೆ ಚಿತ್ರಕಥೆಯಲ್ಲಿ ಹಳೆಯ ಕಾಲದ ನಿರೂಪಣಾ ಶೈಲಿ ಎದ್ದು ಕಾಣುತ್ತದೆ. ಮೊದಲಾರ್ಧದ ಸನ್ನಿವೇಶಗಳು ಆಕರ್ಷಕವಾಗಿರದೆ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡುತ್ತವೆ. ನುಡಿಯ ಖಿನ್ನತೆಯನ್ನು ಸಮರ್ಥಿಸುವ ಫ್ಲ್ಯಾಶ್‌ಬ್ಯಾಕ್ ದೃಶ್ಯಗಳು ಇನ್ನಷ್ಟು ಪರಿಣಾಮಕಾರಿಯಾಗಿ ಇರಬೇಕಿತ್ತು. ನೀಲ್‌ನ ಪ್ರೀತಿ ಎಷ್ಟು ಗಟ್ಟಿ ಎಂಬುದಕ್ಕೂ ಸೂಕ್ತ ಚಿತ್ರಣ ಸಿಕ್ಕಿಲ್ಲ. ನಿನಾದ್ ಪಾತ್ರಕ್ಕೂ ಚಿತ್ರಕಥೆಯಲ್ಲಿ ಮತ್ತಷ್ಟು ಬಲವಾದ ಅಡಿಪಾಯದ ಅಗತ್ಯವಿತ್ತು.
ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಮನೋಮೂರ್ತಿ ಜೋಡಿಯ ಹಾಡುಗಳು ಹಿಟ್ ಆಗಿಯೇ ಆಗುತ್ತವೆ ಎಂಬ ನಿರೀಕ್ಷೆ ಸಹಜ; ಆದರೆ ಇಲ್ಲಿ ಹಾಡುಗಳಲ್ಲಿ ಆ ಮ್ಯಾಜಿಕ್ ಕೊಂಚ ಮಿಸ್ ಆಗಿದೆ. ನಕುಲ್ ಅಭ್ಯಂಕರ್ ಅವರ ಹಿನ್ನೆಲೆ ಸಂಗೀತ ಕೆಲವೆಡೆ ಗಮನ ಸೆಳೆಯುತ್ತದೆ.
'ಅಮೆರಿಕಾ ಅಮೆರಿಕಾ 2' ಚಿತ್ರದಲ್ಲಿ ಕೆಲವು ಸುಂದರ ಭಾವನಾತ್ಮಕ ಕ್ಷಣಗಳು ಹಾಗೂ ಉತ್ತಮ ಕಲಾವಿದರ ನಟನೆಯಿದೆ. ಆದರೆ, ಚಿತ್ರಕಥೆ ಇನ್ನಷ್ಟು ಪ್ರಭಾವಶಾಲಿಯಾಗಿ ಇರಬೇಕಿತ್ತು. ನಾಗತಿಹಳ್ಳಿ ಚಂದ್ರಶೇಖರ್ ಅವರ ಶೈಲಿಯ ಸಿನಿಮಾಗಳ ಅಭಿಮಾನಿಯಾಗಿದ್ದರೆ, ಖಂಡಿತ ಒಮ್ಮೆ ಈ ಚಿತ್ರವನ್ನು ನೋಡಬಹುದು.