ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ 2' ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ 'ಡಾಲಿ' ಧನಂಜಯ
ಮೈಸೂರಿನಲ್ಲಿ ನಟ ಧನಂಜಯ ಸಮ್ಮುಖದಲ್ಲಿ 'ಅಮೆರಿಕಾ ಅಮೆರಿಕಾ 2' ಚಿತ್ರದ ಟ್ರೇಲರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಾರಥ್ಯದ ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್ ಮತ್ತು ಶಾನ್ವಿ ಶ್ರೀವಾಸ್ತವ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ.
-
'ಅಮೆರಿಕಾ ಅಮೆರಿಕಾ', 'ನನ್ನ ಪ್ರೀತಿಯ ಹುಡುಗಿ', 'ಅಮೃತಧಾರೆ', 'ಮಾತಾಡ್ ಮಾತಾಡ್ ಮಲ್ಲಿಗೆ' ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ಕನ್ನಡಿಗರಿಗೆ ನೀಡಿರುವ ಡಾ. ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ ಮತ್ತೊಂದು ಚಿತ್ರ 'ಅಮೆರಿಕಾ ಅಮೆರಿಕಾ 2' ಬಿಡುಗಡೆಗೆ ಸಿದ್ಧವಾಗಿದೆ. ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್ ಹಾಗೂ ಶಾನ್ವಿ ಶ್ರೀವಾಸ್ತವ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಮೈಸೂರಿನಲ್ಲಿ ನಡೆಯಿತು. ನಟ 'ಡಾಲಿ' ಧನಂಜಯ ಟ್ರೇಲರ್ ಬಿಡುಗಡೆ ಮಾಡಿದರು.
ಇದು 'ಅಮೆರಿಕಾ ಅಮೆರಿಕಾ' ಚಿತ್ರದ ನೇರ ಮುಂದುವರಿದ ಭಾಗವಲ್ಲ; ನುಡಿ, ನಿನಾದ್ ಮತ್ತು ನೀಲ್ ಪಾತ್ರಗಳು ಹಿಂದಿನ ಮೂರು ಪಾತ್ರಗಳನ್ನು ಪ್ರತಿಬಿಂಬಿಸುತ್ತವೆ. ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎ.ಪಿ. ಜ್ಞಾನಪ್ರಕಾಶ್ ಅವರು, "ಈ ಚಿತ್ರ ಮತ್ತೊಮ್ಮೆ ಯಶಸ್ಸಿನ ಕೀರ್ತಿಪತಾಕೆ ಹಾರಿಸಲಿ" ಎಂದು ಹಾರೈಸಿದರು.
ನಾಗತಿಹಳ್ಳಿ ಚಿತ್ರರಂಗದ ದೊಡ್ಡ ಬೇರು
ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಡಾಲಿ ಧನಂಜಯ, "ಮೈಸೂರಿನಲ್ಲಿ ಟ್ರೇಲರ್ ಬಿಡುಗಡೆಯಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನಾಗತಿಹಳ್ಳಿ ಚಂದ್ರಶೇಖರ್ ಅವರು ಚಿತ್ರರಂಗದ ದೊಡ್ಡ ಬೇರು. ಅಂದಿನಿಂದ ಇಂದಿನವರೆಗೂ ಉತ್ತಮ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ. ನಾವಿಂದು ಇಲ್ಲಿ ನಿಂತಿದ್ದೇವೆ ಎಂದರೆ ಇಂಥವರ ಕೊಡುಗೆ ಅಪಾರವಾಗಿದೆ. ಚಿತ್ರರಂಗದ ಇಂದಿನ ಸಂದರ್ಭದಲ್ಲಿ ಒಳ್ಳೆಯ ಕೌಟುಂಬಿಕ ಕಥೆಯ ಅಗತ್ಯವಿದೆ; ಆ ಕೊರತೆಯನ್ನು ಈ ಸಿನಿಮಾ ನೀಗಿಸಲಿ. ಈ ಮೂವರ ಕಾಂಬಿನೇಶನ್ ತೆರೆಯ ಮೇಲೆ ಮ್ಯಾಜಿಕ್ ಮಾಡಲಿ" ಎಂದರು.
ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೆ
ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, "ಇನ್ನು 10-11 ದಿನಗಳಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ನನಗೆ ಹೆರಿಗೆಯ ನೋವು, ಭಯ, ಆತಂಕ ಎಲ್ಲವೂ ಶುರುವಾಗಿದೆ. 30 ವರ್ಷಗಳ ಸಿನಿಪಯಣದಲ್ಲಿ ಈ ಚಿತ್ರ ಮಾಡಲು ಸಾಕಷ್ಟು ಬೇಡಿಕೆಗಳಿದ್ದವು; ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೆ, ಅದು ಈಗ ಕೂಡಿಬಂದಿದೆ. ಪ್ರೇಕ್ಷಕರು ನನಗಿಂತ ಹೆಚ್ಚು ಬುದ್ಧಿವಂತರು ಎಂದು ನಂಬಿ ನಾನು ಸಿನಿಮಾ ಮಾಡುತ್ತೇನೆ. ಕನ್ನಡ ಪ್ರೇಕ್ಷಕರ ಮೇಲೆ ನನಗೆ ಅಪಾರ ನಂಬಿಕೆ ಮತ್ತು ಗೌರವವಿದೆ. ಒಬ್ಬ ಸಾಧಾರಣ ಮೇಷ್ಟ್ರಿಗೆ ಇಷ್ಟು ದೊಡ್ಡ ಗೌರವ ನೀಡಿದ್ದಾರೆ. ಧನಂಜಯ ನನ್ನ ಒಂದು ಸಂದೇಶಕ್ಕೆ ಬೆಲೆಕೊಟ್ಟು ಬಂದಿದ್ದಾರೆ. ನನ್ನ ಪತ್ನಿ ಶೋಭಾ ಈ ಕಾದಂಬರಿ ಓದಿ ಸಿನಿಮಾ ಮಾಡಲು ಸಲಹೆ ನೀಡಿದರು; ಅಲ್ಲಿಂದ ಈ ಸಿನಿಮಾದ ಪಯಣ ಆರಂಭವಾಯಿತು. ನಕುಲ್ ಅಭಯಂಕರ್ ಟ್ರೇಲರ್ ಹಾಗೂ ಚಿತ್ರಕ್ಕೆ ಅದ್ಭುತವಾಗಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರವನ್ನು ಎಲ್ಲರೂ ಚಿತ್ರಮಂದಿರಗಳಲ್ಲೇ ನೋಡಿ ಕಲೆಯ ಭವ್ಯತೆಯನ್ನು ಆನಂದಿಸಿ. ಬಿಡುಗಡೆಗೆ 3 ದಿನ ಮುಂಚಿತವಾಗಿಯೇ ಪ್ರೀಮಿಯರ್ ಶೋಗಳು ಪ್ರಾರಂಭವಾಗಲಿವೆ" ಎಂದು ವಿವರಿಸಿದರು.
ನಾಗತಿಹಳ್ಳಿ ಅವರೂ ಒಂದು ಭಾಗವಾಗಿದ್ದಾರೆ
ನಾಯಕ ನಟ ನಿರೂಪ್ ಭಂಡಾರಿ, "ನಾನು ಓದಿ ಬೆಳೆದ ಊರಲ್ಲೇ ನನ್ನ ಸಿನಿಮಾದ ಟ್ರೇಲರ್ ಮೊದಲ ಬಾರಿಗೆ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಮೈಸೂರು, ಅಮೆರಿಕದ ಜೊತೆಗೆ ನಾಗತಿಹಳ್ಳಿ ಅವರೂ ಒಂದು ಭಾಗವಾಗಿದ್ದಾರೆ. ಹಳೆಯ 'ಅಮೆರಿಕಾ ಅಮೆರಿಕಾ' ಸಿನಿಮಾ ನೋಡಿದವರು ನಿಮ್ಮ ಮಕ್ಕಳನ್ನೂ ಕರೆದುಕೊಂಡು ಬಂದು ಈ ಚಿತ್ರ ನೋಡಿ. ಅಂದಿನ ಭೂಮಿ, ಶಶಾಂಕ್, ಸೂರ್ಯ ಪಾತ್ರಗಳ ಅನುಭವವನ್ನೇ ನಮ್ಮ ಚಿತ್ರವೂ ನೀಡುತ್ತದೆ. ಒಳ್ಳೆಯ ಸಿನಿಮಾವನ್ನು ಪ್ರೇಕ್ಷಕರು ಎಂದಿಗೂ ಕೈಬಿಟ್ಟಿಲ್ಲ" ಎಂದರು.
BBK 12 Contestant: ಈ ಬಾರಿ ಬಿಗ್ ಬಾಸ್ಗೆ ಹೋಗಲಿದ್ದಾರೆ ಮಾಸ್ಟರ್ಪೀಸ್ ಬೆಡಗಿ ಶಾನ್ವಿ ಶ್ರೀವಾಸ್ತವ
ಶಾನ್ವಿ ಅವರ ಅತ್ಯುತ್ತಮ ಅಭಿನಯ ಈ ಚಿತ್ರದಲ್ಲಿದೆ
ನಾಯಕಿ ಶಾನ್ವಿ ಶ್ರೀವಾಸ್ತವ, "ನನ್ನ ಸಿನಿಪಯಣದಲ್ಲೇ ಇಂಥ ಪಾತ್ರ ಮಾಡಿಲ್ಲ. ಇದು ಕೇವಲ ಗಂಡು-ಹೆಣ್ಣಿನ ಕಥೆಯಲ್ಲ; ಎಲ್ಲರಿಗೂ ಇಷ್ಟವಾಗುವ ಸಿನಿಮಾ. ಕಥೆ ಮೈಸೂರಿನಿಂದ ಆರಂಭವಾಗಿ ಅಮೆರಿಕದವರೆಗೂ ಸಾಗುತ್ತದೆ" ಎಂದರು. ಮತ್ತೊಬ್ಬ ನಾಯಕ ಪೃಥ್ವಿ ಅಂಬಾರ್, "ಕನ್ನಡದ ಕೆಲವೇ ಶ್ರೇಷ್ಠ ಪ್ರೇಮಕಾವ್ಯಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಚಿತ್ರವಿದು. ಪಾತ್ರಗಳು ಅಮೆರಿಕ, ಯುರೋಪ್‌ಗೆ ಹೋದರೂ ಆ ಮೂವರ ಆತ್ಮ ಮೈಸೂರಿನಲ್ಲೇ ಇರುತ್ತದೆ; ಅದೇ ಈ ಸಿನಿಮಾದ ಜೀವಾಳ. ಶಾನ್ವಿ ಅವರ ಅತ್ಯುತ್ತಮ ಅಭಿನಯ ಈ ಚಿತ್ರದಲ್ಲಿದೆ. ನನ್ನ ಜೀವನದಲ್ಲೇ ಇದು ವಿಶೇಷವಾದ ಸಿನಿಮಾ" ಎಂದು ತಿಳಿಸಿದರು.
ಚಿತ್ರವನ್ನು 'ಕೆವಿಎನ್ ಪ್ರೊಡಕ್ಷನ್ಸ್' ಸಂಸ್ಥೆ ವಿತರಣೆ ಮಾಡುತ್ತಿದೆ. ಮನೋಮೂರ್ತಿ ಅವರ ಸಂಗೀತ ಸಂಯೋಜನೆ, ಎಸ್.ಕೆ. ರಾವ್ ಅವರ ಛಾಯಾಗ್ರಹಣ ಹಾಗೂ ಶ್ರೀ ಕ್ರೇಜಿಮೈಂಡ್ಸ್ ಅವರ ಸಂಕಲನ ಈ ಚಿತ್ರಕ್ಕಿದೆ.