ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

1980ರ ರೆಟ್ರೋ ಕಾಲದ ‘ಬೊಮ್ ಭಾಯ್’ ಚಿತ್ರಕ್ಕಾಗಿ ಒಂದಾದ ಶರಣ್, ದಿಗಂತ್, ನಿಶ್ವಿಕಾ ನಾಯ್ಡು

Bom Bhai Movie: 1980ರ ದಶಕದ ರೆಟ್ರೋ ಕಾಲಘಟ್ಟದ ಹಿನ್ನೆಲೆಯುಳ್ಳ ‘ಬೊಮ್ ಭಾಯ್’ ಚಿತ್ರದಲ್ಲಿ ಶರಣ್, ದಿಗಂತ್ ಹಾಗೂ ನಿಶ್ವಿಕಾ ನಾಯ್ಡು ಪ್ರಮುಖ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಶಶಿಧರ್ ನಿರ್ದೇಶನದ ಈ ಸಿನಿಮಾಕ್ಕೆ ಪಿ.ಆರ್.ಎಫ್ ಸ್ಟುಡಿಯೋಸ್ ಬಂಡವಾಳ ಹೂಡಿದ್ದು, ದೀಪಕ್ ಛಾಯಾಗ್ರಹಣವಿದೆ.

1980ರ ದಶಕದ ರೆಟ್ರೋ ಕಥೆಗಳ ಹವಾ ಜೋರಾಗಿರುವ ಹೊತ್ತಲ್ಲೇ, ಅದೇ ಕಾಲಘಟ್ಟದ ಹಿನ್ನೆಲೆಯುಳ್ಳ ‘ಬೊಮ್ ಭಾಯ್’ ಸಿನಿಮಾ ಆರಂಭವಾಗಿದೆ. ಪ್ರತಿಷ್ಠಿತ ಪಿ.ಆರ್.ಎಫ್ ಸ್ಟುಡಿಯೋಸ್ ನಿರ್ಮಾಣದಲ್ಲಿ, ಶಶಿಧರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಅದ್ಧೂರಿ ಮುಹೂರ್ತ ಸಮಾರಂಭವು ಗಣೇಶ ಚತುರ್ಥಿಯ ಶುಭದಿನದಂದು ನೆರವೇರಿತು. ನಟ ಶರಣ್, ದೂದ್‌ಪೇಡ ದಿಗಂತ್ ಹಾಗೂ ನಟಿ ನಿಶ್ವಿಕಾ ನಾಯ್ಡು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದು, ನಿರೀಕ್ಷೆ ಮೂಡಿಸಿದೆ.

ವಿಶಿಷ್ಟ ಪಾತ್ರದಲ್ಲಿ ಶರಣ್

ಚಿತ್ರದ ಕುರಿತು ಮಾತನಾಡಿದ ನಟ ಶರಣ್, "ಗಣೇಶನ ಹಬ್ಬದ ದಿನದಂದು ನಮ್ಮ ಚಿತ್ರಕ್ಕೆ ಚಾಲನೆ ಸಿಕ್ಕಿರುವುದು ಸಂತಸ ತಂದಿದೆ. ‘ಬೊಮ್ ಭಾಯ್’ ಫಸ್ಟ್ ಲುಕ್ ಪೋಸ್ಟರ್ ಅತ್ಯದ್ಭುತವಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ನನ್ನ ಹಿಂದಿನ ಯಾವುದೇ ಸಿನಿಮಾಗಳಲ್ಲಿ ಕಾಣಿಸದ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಿರ್ದೇಶಕ ಶಶಿಧರ್ ಅವರೊಂದಿಗೆ ಬಹಳ ದಿನಗಳಿಂದ ಈ ಕಥೆಯ ಬಗ್ಗೆ ಚರ್ಚೆ ನಡೆಯುತ್ತಿತ್ತು. ಸದ್ಯ 1980ರ ಟ್ರೆಂಡ್ ಎಲ್ಲೆಡೆ ಶುರುವಾಗಿದೆ, ಆದರೆ ಈ ಟ್ರೆಂಡ್ ಆರಂಭವಾಗುವುದಕ್ಕೂ ಮೊದಲೇ ಶಶಿಧರ್ ಈ ರೋಚಕ ಕಥೆಯನ್ನು ಸಿದ್ಧಪಡಿಸಿದ್ದರು. ಇಡೀ ಸಿನಿಮಾದಲ್ಲಿ ಹಾಸ್ಯವೇ ಪ್ರಮುಖ ಆಕರ್ಷಣೆಯಾಗಿದ್ದು, ನಿರ್ಮಾಪಕರಿಗೆ ಇದು ಮೊದಲ ಯತ್ನ. ದಿಗಂತ್ ಹಾಗೂ ನಿಶ್ವಿಕಾ ಜೊತೆ ಕೆಲಸ ಮಾಡುತ್ತಿರುವುದು ಖುಷಿ ತಂದಿದೆ" ಎಂದರು.

Kannada New Movie: ಚಂದ್ರಹಾಸ ಸಿನಿಮಾಗಾಗಿ ಜೊತೆಯಾಗಿ ಹಾಡಿದ ನಟ ಶರಣ್‌, ನವೀನ್‌ ಸಜ್ಜು!

ಸಂಪೂರ್ಣ ರೆಟ್ರೋ ಶೈಲಿಯ ಕಥೆ

ದಿಗಂತ್ ಮಾತನಾಡಿ, "ಬೊಮ್ ಭಾಯ್ ಸಂಪೂರ್ಣ ರೆಟ್ರೋ ಶೈಲಿಯ ಕಥಾಹಂದರವನ್ನು ಹೊಂದಿದೆ. ಈ ಚಿತ್ರದಲ್ಲಿನ ನನ್ನ ಪಾತ್ರ ಬಹಳ ವಿಭಿನ್ನವಾಗಿದ್ದು, ನಾನಿಲ್ಲಿಯವರೆಗೆ ಇಂತಹ ಪಾತ್ರದಲ್ಲಿ ನಟಿಸಿಲ್ಲ. ಶಶಿಧರ್ ಕಥೆ ಹೇಳಿದ ತಕ್ಷಣವೇ ನನಗೆ ತುಂಬಾ ಇಷ್ಟವಾಯಿತು, ಪ್ರೇಕ್ಷಕರಿಗೂ ಈ ಸಿನಿಮಾ ಖಂಡಿತ ಮೆಚ್ಚುಗೆಯಾಗಲಿದೆ" ಎಂಬ ವಿಶ್ವಾಸ ವ್ಯಕ್ತಪಡಿಸಿದರು.‌

ನಾಯಕಿ ನಿಶ್ವಿಕಾ ನಾಯ್ಡು ಮಾತನಾಡಿ, "ಗಣೇಶನ ಹಬ್ಬದ ದಿನವೇ ಹೊಸ ಚಿತ್ರದ ಮುಹೂರ್ತ ಆಗಿರುವುದು ಡಬಲ್ ಖುಷಿ ತಂದಿದೆ. ‘ಗುರು ಶಿಷ್ಯರು’ ಚಿತ್ರದ ಯಶಸ್ಸಿನ ನಂತರ ಮತ್ತೊಮ್ಮೆ ಶರಣ್ ಅವರ ಜೊತೆ ನಟಿಸುತ್ತಿದ್ದೇನೆ. ಶರಣ್ ಮತ್ತು ದಿಗಂತ್ ಅವರೊಂದಿಗೆ ಒಂದೇ ಪರದೆಯನ್ನು ಹಂಚಿಕೊಳ್ಳುತ್ತಿರುವುದು ರೋಮಾಂಚನಕಾರಿ ಅನುಭವ" ಎಂದು ಹರ್ಷ ಹಂಚಿಕೊಂಡರು.

ನಿರ್ದೇಶಕ ಶಶಿಧರ್ ಮಾತನಾಡಿ, "ಇದು ನನ್ನ ನಿರ್ದೇಶನದ ಮೂರನೇ ಸಿನಿಮಾವಾಗಿದ್ದು, ಶರಣ್, ದಿಗಂತ್ ಹಾಗೂ ನಿಶ್ವಿಕಾ ನಾಯ್ಡು ಅವರ ಪಾತ್ರಗಳ ಸುತ್ತ ಇಡೀ ಕಥೆ ಸಾಗಲಿದೆ. 1980ರ ದಶಕದ ರೆಟ್ರೋ ಕಾಲಘಟ್ಟವನ್ನು ಹಿನ್ನೆಲೆಯಾಗಿಟ್ಟುಕೊಂಡು, ಸಂಪೂರ್ಣ ಮನರಂಜನೆ ಮತ್ತು ಕಾಮಿಡಿ ಜಾನರ್‌ನಲ್ಲಿ ಈ ಚಿತ್ರವನ್ನು ರೂಪಿಸಲಾಗುತ್ತಿದೆ. ಇಂತಹ ಅದ್ಧೂರಿ ಕಥೆಯನ್ನು ತೆರೆಗೆ ತರುವ ನನ್ನ ಕನಸಿಗೆ ಪಿ.ಆರ್.ಎಫ್ ಸ್ಟುಡಿಯೋಸ್ ಸಂಸ್ಥೆಯ ವಿಂಧ್ಯಾ ಬಾಲಾಜಿ ಪೋತರಾಜ್ ಹಾಗೂ ಕಾಂತರಾಜ್ ಅವರು ಬೆನ್ನೆಲುಬಾಗಿ ನಿಂತಿದ್ದಾರೆ. ದೀಪಕ್ ಅವರು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದು, ಸದ್ಯದಲ್ಲೇ ನಿಯಮಿತ ಚಿತ್ರೀಕರಣ ಆರಂಭವಾಗಲಿದೆ" ಎಂದು ಮಾಹಿತಿ ನೀಡಿದರು. ಈ ಚಿತ್ರದ ಮೂಲಕ ಪಿ.ಆರ್.ಎಫ್ ಸ್ಟುಡಿಯೋಸ್ ಅದ್ಧೂರಿಯಾಗಿ ಚಂದನವನಕ್ಕೆ ಕಾಲಿಟ್ಟಿದೆ.