ವಿಜಯ್ ರಾಘವೇಂದ್ರ ನಟನೆಯ 'ಮಹಾನ್' ಚಿತ್ರದ ಕುರಿತು ಮತ್ತೊಂದು ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ 'ಕರುನಾಡ ಚಕ್ರವರ್ತಿ' ಡಾ. ಶಿವರಾಜ್‌ಕುಮಾರ್ ಅವರು ವಿಶೇಷ, ಅತ್ಯಂತ ಪ್ರಮುಖ ಪಾತ್ರವೊಂದರಲ್ಲಿ ಬಣ್ಣ ಹಚ್ಚಿದ್ದಾರೆ. ವಿಜಯ್ ರಾಘವೇಂದ್ರಗೆ ಶಿವಣ್ಣ ಸಾಥ್ ನೀಡಿರುವುದು ಕುತೂಹಲ ಮೂಡಿಸಿದೆ. ಈ ಮೂಲಕ ಬಹಳ ವರ್ಷಗಳ ನಂತರ ಶಿವರಾಜ್‌ಕುಮಾರ್ ಹಾಗೂ ವಿಜಯ ರಾಘವೇಂದ್ರ ಒಟ್ಟಿಗೆ ಬೆಳ್ಳಿಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ವಕೀಲರಾಗಿ ಶಿವಣ್ಣ ಎಂಟ್ರಿ
'ಮಹಾನ್' ಸಂಪೂರ್ಣವಾಗಿ ರೈತರ ಜೀವನಾಧಾರಿತ ಹಾಗೂ ಅವರ ಸಮಸ್ಯೆಗಳ ಸುತ್ತ ಸಾಗುವ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಪಿ. ಸಿ. ಶೇಖರ್, "ಮನೆಯಲ್ಲಿ ನಾವೇನಾದರೂ ತಪ್ಪು ಮಾಡಿದರೆ ನಮ್ಮನ್ನು ತಿದ್ದಲು ತಂದೆ-ತಾಯಿ ಇರುತ್ತಾರೆ. ಆದರೆ ಇಡೀ ಸಮಾಜದಲ್ಲೇ ವ್ಯವಸ್ಥೆ ಹದಗೆಟ್ಟಾಗ, ಅಲ್ಲಿನ ತೊಂದರೆಗಳನ್ನು ಸರಿಪಡಿಸಲು ಒಬ್ಬ 'ಮಹಾನ್' ವ್ಯಕ್ತಿಯ ಅಗತ್ಯವಿರುತ್ತದೆ. ಚಿತ್ರದಲ್ಲಿ ಅಂತಹದ್ದೇ ಒಂದು ಶಕ್ತಿಶಾಲಿ ಹಿರಿಯ ವಕೀಲರ ಪಾತ್ರದಲ್ಲಿ ಶಿವರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ" ಎಂದು ತಿಳಿಸಿದ್ದಾರೆ.
ಶೇಖರ್ ಆಸೆ ಈಡೇರಿತು
"ಪ್ರತಿಯೊಬ್ಬ ನಿರ್ದೇಶಕನಿಗೂ ಶಿವಣ್ಣ ಅವರಿಗೆ ಆಕ್ಷನ್ ಕಟ್ ಹೇಳಬೇಕೆಂಬ ಆಸೆ ಇರುತ್ತದೆ. ನನ್ನ ಬಹಳ ದಿನಗಳ ಆಸೆ ಈ ಚಿತ್ರದ ಮೂಲಕ ಈಡೇರಿದೆ. ಅವರ ಅದ್ಭುತ ಅಭಿನಯ ನಮಗೆಲ್ಲಾ ಅಪಾರ ಸಂತೋಷ ತಂದಿದೆ" ಎಂದು ನಿರ್ದೇಶಕ ಶೇಖರ್ ಹರ್ಷ ವ್ಯಕ್ತಪಡಿಸಿದ್ದು, ಇಡೀ ಚಿತ್ರತಂಡದ ಪರವಾಗಿ ಹ್ಯಾಟ್ರಿಕ್ ಹೀರೋಗೆ ಧನ್ಯವಾದ ಅರ್ಪಿಸಿದ್ದಾರೆ. ಚಿತ್ರವನ್ನು ಪ್ರಕಾಶ್ ಬುದ್ದೂರು ಅವರು ಅದ್ದೂರಿಯಾಗಿ ನಿರ್ಮಿಸುತ್ತಿದ್ದಾರೆ.
'ಮಹಾನ್' ಚಿತ್ರದಲ್ಲಿ ಕೇವಲ ಸ್ಟಾರ್ ನಟರಷ್ಟೇ ಅಲ್ಲದೇ ದೊಡ್ಡ ತಾರಾಬಳಗವೇ ಇದೆ. ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರಿಗೆ ಜೋಡಿಯಾಗಿ ರಾಧಿಕಾ ನಾರಾಯಣ್ ನಟಿಸಿದ್ದು, ಉಳಿದಂತೆ ಮಿತ್ರ, ನಮ್ರತಾ ಗೌಡ, ವರ್ಷ ಬೊಳ್ಳಮ್ಮ ಹಾಗೂ ಕಿರಣ್ ಶ್ರೀನಿವಾಸ್ ಸೇರಿದಂತೆ ಪ್ರಮುಖ ಕಲಾವಿದರು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಕಥೆಗೆ ಪೂರಕವಾಗಿ ಮೂಡಿಬಂದಿರುವ ಪ್ರತಿಯೊಂದು ಪಾತ್ರವೂ ಚಿತ್ರದಲ್ಲಿ ಹೈಲೈಟ್ ಆಗಿರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಮೂರನೇ ಬಾರಿಗೆ ಒಂದಾದ ಶಿವಣ್ಣ - ರಾಘು
ಶಿವರಾಜ್‌ಕುಮಾರ್ ಮತ್ತು ವಿಜಯ್ ರಾಘವೇಂದ್ರ ಅವರ ಕಾಂಬಿನೇಷನ್‌ನಲ್ಲಿ 'ರಿಷಿ' (೨೦೦೫) ಸಿನಿಮಾ ಬಂದಿತ್ತು. ಆನಂತರ 2017ರಲ್ಲಿ 'ಮಾಸ್ ಲೀಡರ್' ಸಿನಿಮಾ ತೆರೆಕಂಡಿತ್ತು. ನರಸಿಂಹ ನಿರ್ದೇಶನದ ಈ ದೇಶಭಕ್ತಿ ಪ್ರಧಾನ ಆಕ್ಷನ್ ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರು ಭಾರತೀಯ ಸೇನೆಯ ಅಧಿಕಾರಿಯಾಗಿ ಅಬ್ಬರಿಸಿದರೆ, ವಿಜಯ್ ರಾಘವೇಂದ್ರ ಅವರು ಕೂಡ ಪ್ರಮುಖ ಪಾತ್ರದಲ್ಲಿ ಸಾಥ್ ನೀಡಿದ್ದರು. ಇದೀಗ ಮೂರನೇ ಬಾರಿಗೆ ಮಹಾನ್ ಸಿನಿಮಾಕ್ಕಾಗಿ ಇಬ್ಬರು ಒಂದಾಗಿದ್ದಾರೆ.