Shiva Rajakumar: ಕಮಲ್ ಹಾಸನ್ ತಬ್ಬಿಕೊಂಡ ಕಾರಣಕ್ಕೆ 3 ದಿನ ಸ್ನಾನ ಮಾಡದ ಶಿವಣ್ಣ; ಏನಿದು ಫ್ಯಾನ್ ಬಾಯ್ ಮೂಮೆಂಟ್?
Kamal Haasan: ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಡಾ. ಶಿವ ರಾಜ್‌ಕುಮಾರ್ ಇನ್ನೊಬ್ಬ ಸೂಪರ್ ಸ್ಟಾರ್‌ನ ಡೈ ಹಾರ್ಡ್ ಫ್ಯಾನ್ ಎನ್ನುವ ವಿಚಾರ ನಿಮಗೆ ಗೊತ್ತೆ? ಹೌದು ಕಾಲಿವುಡ್ ಸ್ಟಾರ್ ಕಮಲ್ ಹಾಸನ್ ಎಂದರೆ ಶಿವಣ್ಣ ಅವರಿಗೆ ಅಚ್ಚುಮೆಚ್ಚು. ಈ ಬಗ್ಗೆ ಸ್ವತಃ ಅವರೇ ವಿವರಿಸಿದ್ದಾರೆ.


ಚೆನ್ನೈ: ಕರುನಾಡ ಚಕ್ರವರ್ತಿ ಡಾ.ಶಿವ ರಾಜ್‌ಕುಮಾರ್ (Shiva Rajakumar) ಸ್ಯಾಂಡಲ್‌ವುಡ್ ಚಿತ್ರಪ್ರೇಮಿಗಳ ನೆಚ್ಚಿನ ನಾಯಕ. 62 ವರ್ಷವಾದರೂ ಇನ್ನೂ ಯುವಕರನ್ನು ನಾಚಿಸುವಂತೆ ಆ್ಯಕ್ಟಿವ್ ಆಗಿರುವ ಶಿವಣ್ಣ ಕೈಯಲ್ಲಿ ಈಗ ಹಲವು ಚಿತ್ರಗಳಿವೆ. ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದ ಬಳಿಕ ಸ್ವಲ್ಪ ದಿನ ನಟನೆಗೆ ಬ್ರೇಕ್ ಕೊಟ್ಟಿದ್ದ ಅವರು ಇದೀಗ ಶೂಟಿಂಗ್‌ನಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಕನ್ನಡ ಮಾತ್ರವಲ್ಲ ತಮಿಳು, ತೆಲುಗು ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ. ಈ ಮೂಲಕ ಅಲ್ಲಿಯೂ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಹೀಗೆ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಶಿವಣ್ಣ ಅವರಿಗೆ ಇನ್ನೊಬ್ಬ ನಟನನ್ನು ಕಂಡರೆ ಸಿಕ್ಕಾಪಟ್ಟೆ ಇಷ್ಟ ಎನ್ನುವ ವಿಚಾರ ನಿಮಗೆ ಗೊತ್ತೆ? ಹೌದು, ಶಿವ ರಾಜ್‌ಕುಮಾರ್ ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ (Kamal Haasan) ಅವರ ಬಹುದೊಡ್ಡ ಫ್ಯಾನ್. ಈ ವಿಚಾರವನ್ನು ಸ್ವತಃ ಶಿವಣ್ಣ ಅವರೇ ಹೇಳಿದ್ದಾರೆ. ಕಮಲ್ ಹಾಸನ್ ಅಂದರೆ ಎಷ್ಟು ಇಷ್ಟ ಎಂದರೆ ಅವರು ತಬ್ಬಿಕೊಂಡ ಕಾರಣಕ್ಕೆ 3 ದಿನ ಸ್ನಾನವನ್ನೇ ಮಾಡಿರಲಿಲ್ಲವಂತೆ! ಈ ಕುತೂಹಲಕಾರಿ ಘಟನೆಯ ವಿವರ ಇಲ್ಲಿದೆ.
ಶಿವಣ್ಣ 2023ರಲ್ಲಿ ತೆರೆಕಂಡ ರಜನಿಕಾಂತ್ ಅಭಿನಯದ ʼಜೈಲರ್ʼ ಚಿತ್ರದ ಮೂಲಕ ಕಾಲಿವುಡ್‌ಗೆ ಕಾಲಿಟ್ಟರು. ಅದು 5-10 ನಿಮಿಷಗಳ ಅತಿಥಿ ಪಾತ್ರವಾಗಿದ್ದರೂ ತಮಿಳು ಪ್ರೇಕ್ಷಕರ ಗಮನ ಸೆಳೆದಿದ್ದರು. ಅದಾದ ಬಳಿಕ ಧನುಷ್ ನಟನೆಯ ʼಕ್ಯಾಪ್ಟನ್ ಮಿಲ್ಲರ್ʼ ಸಿನಿಮಾದಲ್ಲಿ ನಟಿಸಿ ತಮಿಳು ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾದರು. ಹೀಗೆ ತಮಿಳುನಾಡಿನಲ್ಲಿ ಜನಪ್ರಿಯರಾದ ಶಿವಣ್ಣ ಇದೀಗ ಕಾಲಿವುಡ್‌ನ ಕಾರ್ಯಕ್ರಮಗಳಿಗೆ ಅತಿಥಿಯಾಗಿ ತೆರಳುತ್ತಿರುತ್ತಾರೆ. ಹೀಗೆ ಕಮಲ್ ಹಾಸನ್ ನಟನೆಯ ʼಥಗ್ ಲೈಫ್ʼ (Thug Life) ತಮಿಳು ಚಿತ್ರದ ಆಡಿಯೊ ಲಾಂಚ್‌ನಲ್ಲಿ ಭಾಗವಹಿಸಿದ ಅವರು ಕಮಲ್ ಕುರಿತಾದ ಕುತೂಹಲಕಾರಿ ಸಂಗತಿಯನ್ನು ತಮಿಳಿನಲ್ಲೇ ಬಿಚ್ಚಿಟ್ಟಿದ್ದಾರೆ.
ʼಥಗ್ ಲೈಫ್ʼ ಚಿತ್ರದ ಟ್ರೈಲರ್ ಇಲ್ಲಿದೆ:
#ThuglifeTrailer Out Now
— Kamal Haasan (@ikamalhaasan) May 17, 2025
WATCH NOW - https://t.co/ELllM2r0Yr #Thugfluencers#ThuglifeAudioLaunch from May 24#Thuglife#ThuglifeFromJune5 #KamalHaasan #SilambarasanTR #IMAX
A #ManiRatnam Film
An @arrahman Musical@ikamalhaasan @SilambarasanTR_ #Mahendran @bagapath… pic.twitter.com/nXSzK6WyFJ
ಶಿವಣ್ಣ ಹೇಳಿದ್ದೇನು?
''ನಿಮ್ಮೆಲ್ಲರಂತೆ ನನಗೂ ಇದು ಫ್ಯಾನ್ ಮೂಮೆಂಟ್ ಕ್ಷಣ. ಕಮಲ್ ಹಾಸನ್ ಅವರ ಚಿತ್ರಗಳನ್ನು ಮೊದಲ ದಿನ ನೋಡುವ ಅಭಿಮಾನಿಗಳಲ್ಲಿ ನಾನೂ ಒಬ್ಬ. ನನಗೆ ಅವರ ಸ್ಟೈಲ್, ಕಣ್ಣು ಹೀಗೆ ಪ್ರತಿಯೊಂದೂ ಇಷ್ಟ. ನಾನು ಅವರ ಡೈ ಹಾರ್ಡ್ ಫ್ಯಾನ್ʼʼ ಎಂದು ಮಾತು ಆರಂಭಿಸಿದರು.
ಕಮಲ್ ಹಾಸನ್ ಎಂದರೆ ತಮಗೆ ಇಷ್ಟ ಎನ್ನುವುದನ್ನು ಶಿವಣ್ಣ ಉದಾಹರಣೆ ಸಹಿತ ವಿವರಿಸಿದರು. ʼʼಕಮಲ್ ಹಾಸನ್ ಅವರನ್ನು ಹಲವು ಬಾರಿ ಭೇಟಿಯಾಗಿದ್ದಾನೆ. ಆದರೆ ಇದೊಂದು ವಿಶೇಷ ಮುಖಾಮುಖಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು. ಒಂದು ದಿನ ಕಮಲ್ ಅಪ್ಪಾಜಿ ಡಾ.ರಾಜ್ ಕುಮಾರ್ ಅವರನ್ನು ಭೇಟಿಯಾಗಲು ನಮ್ಮ ಮನೆಗೆ ಆಗಮಿಸಿದರು. ನಾನು ಅಲ್ಲೇ ನಿಂತಿದ್ದೆ. ಈ ವೇಳೆ ಅವರು ತಂದೆಯ ಬಳಿ ನನ್ನ ಬಗ್ಗೆ ಕೇಳಿದರು. ನಾನು ಪರಿಚಯ ಹೇಳಿಕೊಂಡೆ. ಕಮಲ್ ಶೇಕ್ ಹ್ಯಾಂಡ್ ಮಾಡಿದರು. ಈ ವೇಳೆ ನಾನು ಹಗ್ ಮಾಡಬಹುದಾ ಎಂದು ಕೇಳಿದೆ. ಅವರು ಖುಷಿಯಿಂದ ತಬ್ಬಿಕೊಂಡರು. ಈ ಅಪೂರ್ವ ಅನುಭವ ಕಳೆದುಹೋಗಬಾರದು ಎನ್ನುವ ಉದ್ದೇಶದಿಂದ 3 ದಿನ ಸ್ನಾನ ಮಾಡಿರಲಿಲ್ಲ. ನಾನು ಅವರ ಅಷ್ಟು ದೊಡ್ಡ ಅಭಿಮಾನಿʼʼ ಎಂದು ಶಿವಣ್ಣ ತಿಳಿಸಿದರು.
ಕಮಲ್ ಜತೆಗಿನ ಮತ್ತೊಂದು ಕ್ಷಣವನ್ನೂ ಶಿವಣ್ಣ ಈ ವೇಳೆ ಹಂಚಿಕೊಂಡರು. ʼʼಕಳೆದ ಡಿಸೆಂಬರ್‌ನಲ್ಲಿ ನಾನು ಚಿಕಿತ್ಸೆಗಾಗಿ ಮಿಯಾಮಿಯಲ್ಲಿದ್ದೆ. ಈ ವೇಳೆ ಚಿಕಾಗೊದಲ್ಲಿದ್ದ ಕಮಲ್ ನನಗೆ ಕರೆ ಮಾಡಿದರು. ನಿಮ್ಮ ಜತೆ ಮಾತನಾಡುವಾಗ ನನ್ನ ಕಣ್ತುಂಬಿ ಬಂತು ಶಿವಣ್ಣ ಎಂದು ಅವರು ಈ ವೇಳೆ ತಿಳಿಸಿದ್ದರು. ಈ ಘಟನೆಯನ್ನು ಮರೆಯಲು ಸಾಧ್ಯವಿಲ್ಲ. ನನಗೆ ತಂದೆಯೊಂದಿಗೆ ಮಾತನಾಡುದ ಅನುಭವವಾಯ್ತುʼʼ ಎಂದು ಶಿವ ರಾಜ್‌ಕುಮಾರ್ ಭಾವುಕರಾಗಿ ನುಡಿದರು.
ಈ ವೇಳೆ ಶಿವ ರಾಜ್‌ಕುಮಾರ್ ಅವರಿಗೆ ಕಮಲ್ ಹಾಸನ್ ಧನ್ಯವಾದ ಹೇಳಿದರು. ʼʼನಾನು ಅವರ ಚಿಕ್ಕಪ್ಪ ಇದ್ದಂತೆ. ಆದರೆ ಅವರ ಹೆಸರು ಶಿವಣ್ಣ. ಹೀಗಾಗಿ ನನಗೆ ಅವರು ಸಹೋದರ. ನನ್ನ ಜತೆ ಹಲವು ವರ್ಷಗಳಿಂದ ಹೆಜ್ಜೆ ಹಾಕುತ್ತಿರುವುದಕ್ಕೆ ಧನ್ಯವಾದಗಳುʼʼ ಎಂದು ತಿಳಿಸಿದರು.