ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತುಳುನಾಡಿನ ‘ಸೂಪರ್‌ ಸ್ಟಾರ್‌’ ಅರ್ಜುನ್‌ ದೇವ್‌ ಚಿತ್ರಕ್ಕೆ ಶಿವಣ್ಣ ಆಶೀರ್ವಾದ; ‘ಟಾಸ್‌’ ಚಿತ್ರಕ್ಕೆ ಸಾಥ್‌ ನೀಡಿದ ʻಗೋಲ್ಡನ್ ಸ್ಟಾರ್ʼ ಗಣೇಶ್‌ ದಂಪತಿ

‘ಟಾಸ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ತುಳು ಚಿತ್ರರಂಗದ ಖ್ಯಾತ ನಟ ಅರ್ಜುನ್ ದೇವ್ ನಿರ್ದೇಶಿಸಿ ನಟಿಸಿರುವ ಈ ಚಿತ್ರಕ್ಕೆ ಶಿವರಾಜ್‌ಕುಮಾರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ಸಾಥ್ ನೀಡಿದ್ದಾರೆ. ಡಾ. ದೇವದಾಸ್ ಕಾಪಿಕಾಡ್ ಕಥೆ ಹೆಣೆದಿರುವ ಈ ಭಾವನಾತ್ಮಕ ಕೌಟುಂಬಿಕ ಚಿತ್ರವು ಕನ್ನಡ ಮತ್ತು ತುಳು ಭಾಷೆಗಳಲ್ಲಿ ಏಕಕಾಲಕ್ಕೆ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ತುಳು ಚಿತ್ರರಂಗದ ಜನಪ್ರಿಯ ನಟ ಅರ್ಜುನ್‌ದೇವ್ ನಟಿಸಿ, ನಿರ್ದೇಶಿಸಿರುವ ಬಹುನಿರೀಕ್ಷಿತ ‘ಟಾಸ್’ ಸಿನಿಮಾ ಸೆಪ್ಟೆಂಬರ್ 18ರಂದು ಕನ್ನಡ ಮತ್ತು ತುಳು ಭಾಷೆಗಳಲ್ಲಿ ಏಕಕಾಲಕ್ಕೆ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲು ಸಜ್ಜಾಗಿದೆ. ಅವಿಕಾ ಪ್ರೊಡಕ್ಷನ್ಸ್, ಬಿ.ಆರ್.ಬಿ ಪ್ರೊಡಕ್ಷನ್ಸ್ ಹಾಗೂ ಪಿ & ವೈ ವರ್ಲ್ಡ್‌ ಟೂರಿಸ್ಟ್‌ ಸಂಸ್ಥೆಗಳ ಜಂಟಿ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬಂದಿದೆ.

ಚಿತ್ರದ ಮೇಕಿಂಗ್ ಮತ್ತು ಗುಣಮಟ್ಟವನ್ನು ಮೆಚ್ಚಿರುವ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ದಂಪತಿ, ತಮ್ಮ ‘ಗೋಲ್ಡನ್ ಮೂವೀಸ್’ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದಾರೆ. ತುಳು ರಂಗಭೂಮಿಯ ದಿಗ್ಗಜ ಡಾ. ದೇವದಾಸ್ ಕಾಪಿಕಾಡ್ ಅವರ ಮೇಲಿನ ಅಪಾರ ಗೌರವದಿಂದ ಶಿಲ್ಪಾ ಗಣೇಶ್ ಅವರು ಅರ್ಜುನ್ ದೇವ್ ಅವರನ್ನು ಈ ಚಿತ್ರದ ಮೂಲಕ ಚಂದನವನಕ್ಕೆ ನಾಯಕನನ್ನಾಗಿ ಪರಿಚಯಿಸುತ್ತಿದ್ದಾರೆ.

ʻಟಾಸ್‌ʼ ಚಿತ್ರಕ್ಕೆ ಶಿವಣ್ಣ ಮೆಚ್ಚುಗೆ

ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿದ ಚಿತ್ರದ 2ನೇ ಹಾಡಿನ ಬಿಡುಗಡೆ ಸಮಾರಂಭಕ್ಕೆ ʻಕರುನಾಡ ಚಕ್ರವರ್ತಿʼ ಡಾ. ಶಿವರಾಜ್‌ಕುಮಾರ್ ಸಾಕ್ಷಿಯಾದರು. ಈ ಚಿತ್ರದ ಹಾಡನ್ನು ಲೋಕಾರ್ಪಣೆಗೊಳಿಸಿದ ಶಿವಣ್ಣ, ಇಡೀ ತಂಡದ ಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿ ಶುಭ ಕೋರಿದರು.

ನಾಯಕ ಹಾಗೂ ನಿರ್ದೇಶಕ ಅರ್ಜುನ್‌ದೇವ್, "ಇದೊಂದು ರೊಮ್ಯಾಂಟಿಕ್-ಕಾಮಿಡಿ ಹಾಗೂ ಆ್ಯಕ್ಷನ್ ಅಂಶಗಳನ್ನೊಳಗೊಂಡ ಭಾವನಾತ್ಮಕ ಕೌಟುಂಬಿಕ ಚಿತ್ರ. ಕನ್ನಡ ಮತ್ತು ತುಳು ಭಾಷೆಗಳಿಗೆ ಪ್ರತಿ ದೃಶ್ಯವನ್ನೂ ಪ್ರತ್ಯೇಕವಾಗಿ ಎರಡು ಬಾರಿ ಚಿತ್ರೀಕರಿಸಿದ್ದರಿಂದ 40 ದಿನಗಳ ಕಾಲಮಿತಿ 60 ದಿನಗಳಿಗೆ ವಿಸ್ತರಿಸಿತು. ಕಳೆದ 14 ವರ್ಷಗಳಿಂದ ತಂದೆಯ ಮಾರ್ಗದರ್ಶನದಲ್ಲಿ ಕಲಿತ ಸಿನಿಮೀಯ ಅನುಭವವನ್ನು ಇಲ್ಲಿ ಧಾರೆ ಎರೆದಿದ್ದೇನೆ. ಗಣೇಶ್ ಹಾಗೂ ಶಿಲ್ಪಾ ಅವರ ಬೆಂಬಲ ನಮಗೆ ಆನೆಬಲ ತಂದಿದೆ" ಎಂದು ಹರ್ಷ ವ್ಯಕ್ತಪಡಿಸಿದರು.

ಹಾಡು ಬರೆದ ಯೋಗರಾಜ್ ಭಟ್

ಹಿರಿಯ ರಂಗಕರ್ಮಿ ಡಾ. ದೇವದಾಸ್ ಕಾಪಿಕಾಡ್ ಅವರು ಮಾತನಾಡಿ, "ಸಿನಿಮಾ ರಂಗದಲ್ಲಿ ಅರ್ಜುನ್ ಒಬ್ಬ ಪರಿಪೂರ್ಣ ತಂತ್ರಜ್ಞ ಹಾಗೂ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾನೆ. 37 ವರ್ಷಗಳ ರಂಗಭೂಮಿ ಅನುಭವದೊಂದಿಗೆ ಹೇಳುವುದಾದರೆ, ಸಾರ್ವತ್ರಿಕ ಕಥಾಹಂದರ ಹೊಂದಿರುವ ‘ಟಾಸ್’ ಚಿತ್ರದಲ್ಲಿ ಕಥಾವಸ್ತುವೇ ನಿಜವಾದ ಹೀರೋ" ಎಂದು ಅಭಿಪ್ರಾಯಪಟ್ಟರು. ಡಾ. ದೇವದಾಸ್ ಕಾಪಿಕಾಡ್ ಅವರ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಈ ಚಿತ್ರಕ್ಕಿದ್ದು, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಯೋಗರಾಜ್ ಭಟ್ ಅವರ ‘ಹಲೋ ಹಲೋ ನೀಲಾಂಬರಿ’ ಹಾಗೂ ನಾಗಾರ್ಜುನ್ ಶರ್ಮಾ ಅವರ ‘ಮಿರ ಮಿರ ಮಿಂಚುತ್ತಾ’ ಹಾಡುಗಳು ಈಗಾಗಲೇ ಅಪಾರ ಮೆಚ್ಚುಗೆ ಗಳಿಸಿವೆ.

ʻಕೆಲವೊಂದು ಶಾಕಿಂಗ್‌ ಘಟನೆಗಳನ್ನ ಹೇಳೋದಕ್ಕೆ ಆಗಲ್ಲʼ; 18 ವರ್ಷಗಳ ಹಿಂದಿನ ವಿಚಾರಗಳನ್ನು ಬಿಚ್ಚಿಟ್ಟ ಗಣೇಶ್‌ ಪತ್ನಿ ಶಿಲ್ಪಾ!

ಸೆಪ್ಟೆಂಬರ್ 18ರಂದು ಬಿಡುಗಡೆ

ಜೋಯೆಲ್ ಶರ್ಮನ್ ಡಿಸೋಜಾ ಅವರ ಛಾಯಾಗ್ರಹಣ, ಯಾಶ್ವಿನ್ ಕೆ. ಶೆಟ್ಟಿಗಾರ್ ಅವರ ಸಂಕಲನ ಹಾಗೂ ಶನೀಲ್ ಗೌತಮ್ ಅವರ ಕ್ರಿಯೇಟಿವ್ ಹೆಡ್ ಜವಾಬ್ದಾರಿಯಲ್ಲಿ ಈ ಚಿತ್ರ ಮೂಡಿಬಂದಿದೆ. ಅರ್ಜುನ್ ದೇವ್ ಜೊತೆಗೆ ಸುತೇಜ್ ಶೆಟ್ಟಿ, ಗರುಡ ರಾಮ್, ಬಾಲಾಜಿ ಮನೋಹರ್ ಹಾಗೂ ಕೃತಿ ಶೆಟ್ಟಿ ಪ್ರಮುಖ ತಾರಾಗಣದಲ್ಲಿದ್ದಾರೆ. ಕರಾವಳಿ ಭಾಗ ಸೇರಿದಂತೆ ರಾಜ್ಯದ ಸಿನಿಪ್ರಿಯರಲ್ಲಿ ನಿರೀಕ್ಷೆ ಹುಟ್ಟುಹಾಕಿರುವ ‘ಟಾಸ್’ ಸಿನಿಮಾ ಸೆಪ್ಟೆಂಬರ್ 18ರಂದು ಬಿಡುಗಡೆ ಆಗಲಿದೆ.