ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಕೆಲವೊಂದು ಶಾಕಿಂಗ್‌ ಘಟನೆಗಳನ್ನ ಹೇಳೋದಕ್ಕೆ ಆಗಲ್ಲʼ; 18 ವರ್ಷಗಳ ಹಿಂದಿನ ವಿಚಾರಗಳನ್ನು ಬಿಚ್ಚಿಟ್ಟ ಗಣೇಶ್‌ ಪತ್ನಿ ಶಿಲ್ಪಾ!

'ಗೋಲ್ಡನ್ ಸ್ಟಾರ್' ಗಣೇಶ್ ಮತ್ತು ಪತ್ನಿ ಶಿಲ್ಪಾ ಮದುವೆಯಾಗ 18 ವರ್ಷಗಳಾಗಿವೆ. ಇವರ ಮದುವೆಯ ಆರಂಭಿಕ ದಿನಗಳಲ್ಲಿ ವಿಚಿತ್ರ ಮತ್ತು ಆಘಾತಕಾರಿ ಅಭಿಮಾನದ ಘಟನೆಗಳು ನಡೆದಿದ್ದವು. ವಿಶ್ವವಾಣಿ ಟಿವಿ ಜೊತೆಗಿನ ಸಂದರ್ಶನದಲ್ಲಿ ಅವುಗಳನ್ನು ಶಿಲ್ಪಾ ಗಣೇಶ್‌ ಹಂಚಿಕೊಂಡಿದ್ದಾರೆ.

ʻಮನೆ ಬಾಗಿಲು ತಟ್ಟುತ್ತಿದ್ದರುʼ; ಹಳೇ ದಿನಗಳನ್ನು ನೆನೆದ ಶಿಲ್ಪಾ ಗಣೇಶ್‌

-

Avinash GR
Avinash GR Jul 2, 2026 6:26 PM

'ಗೋಲ್ಡನ್ ಸ್ಟಾರ್' ಗಣೇಶ್ ಮತ್ತು ಶಿಲ್ಪಾ ದಂಪತಿಯ ಮದುವೆ ಜೀವನಕ್ಕೆ ಈಗ ಯಶಸ್ವಿ 18 ವರ್ಷಗಳ ಸಂಭ್ರಮ. ಆ ಹಿನ್ನೆಲೆಯಲ್ಲಿ ವಿಶ್ವವಾಣಿ ಟಿವಿ ಜೊತೆ ಮಾತನಾಡಿರುವ ಶಿಲ್ಪಾ ಅವರು ತಮ್ಮ ಮದುವೆಯ ಆರಂಭದ ದಿನಗಳ ಅಪರೂಪದ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ನಟರನ್ನು ಜನ ಇಷ್ಟಪಡ್ತಾರೆ ಎಂಬುದು ತಿಳಿದಿತ್ತು

ಗಣೇಶ್ ಮತ್ತು ಶಿಲ್ಪಾ ಅವರು 2008ರಲ್ಲಿ ಮದುವೆಯಾದರಯ. ಆಗ ಗಣೇಶ್ ಅವರ ಅಸಂಖ್ಯಾತ ಮಹಿಳಾ ಅಭಿಮಾನಿಗಳಿಗೆ ತೀವ್ರ ನಿರಾಶೆಯಾಗಿತ್ತು. ಅಂದಿನ ಪರಿಸ್ಥಿತಿ ಹಾಗೂ ಪತಿಯ ಜನಪ್ರಿಯತೆಯ ಕುರಿತು ಮಾತನಾಡಿರುವ ಶಿಲ್ಪಾ ಗಣೇಶ್‌, "ನನಗೆ ಮದುವೆಯಾಗುವಾಗ ಖುಷಿಯಿತ್ತು. ಸಿನಿಮಾ ನಟರನ್ನು ಜನ ಇಷ್ಟಪಡುತ್ತಾರೆ ಎಂಬುದು ನನಗೆ ತಿಳಿದಿತ್ತು. ಆದರೆ, ಗಣೇಶ್ ಅವರಿಗೆ ಇದ್ದಂತಹ ಅಭಿಮಾನಿ ಬಳಗ ಎಂಥದ್ದು ಎಂಬುದು ಆನಂತರ ಅರ್ಥವಾಯಿತು" ಎಂದು ಹೇಳಿದ್ದಾರೆ.

15 ದಿವಸಗಳ ಅಂತರದಲ್ಲಿ ಗಣೇಶ್‌ ನಟನೆಯ 2 ಸಿನಿಮಾ ರಿಲೀಸ್‌; ʻಗೋಲ್ಡನ್‌ ಸ್ಟಾರ್‌ʼ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್!‌

ವಿಚಿತ್ರ ಅಭಿಮಾನದ ಕ್ಷಣಗಳನ್ನು ಎದುರಿಸಿದ್ದೇನೆ

"ಹಗಲು-ರಾತ್ರಿ ಎನ್ನದೆ ಅವರ ಅಭಿಮಾನಿಗಳು ನಮ್ಮ ಮನೆಗೆ ಬಂದು ಬಾಗಿಲು ತಟ್ಟುತ್ತಿದ್ದರು. ಆರಂಭದಲ್ಲಿ ನನಗೆ ಏನು ನಡೆಯುತ್ತಿದೆ ಎಂದೇ ತಿಳಿಯುತ್ತಿರಲಿಲ್ಲ. ಕೆಲವು ಆಘಾತಕಾರಿ ಘಟನೆಗಳೂ ನಡೆದಿವೆ, ಅವುಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಿಲ್ಲ. ಅಂತಹ ವಿಚಿತ್ರ ಅಭಿಮಾನದ ಕ್ಷಣಗಳನ್ನು ನಾನು ಎದುರಿಸಿದ್ದೇನೆ" ಎಂದು ನೆನಪಿಸಿಕೊಂಡಿದ್ದಾರೆ ಶಿಲ್ಪಾ.

ಅಂದಹಾಗೆ, ಇಷ್ಟು ದಿವಸ ಗಣೇಶ್‌ ಅವರ ಯಶಸ್ಸಿನ ಹಿಂದೆ ಬೆನ್ನೆಲುಬಾಗಿ ನಿಲ್ಲುತ್ತಿದ್ದ ಶಿಲ್ಪಾ ಗಣೇಶ್, ಇದೀಗ ಕನ್ನಡ ಚಿತ್ರರಂಗದಲ್ಲಿ ಗಾಯಕಿಯಾಗಿ ಹೊಸ ಪಯಣ ಆರಂಭಿಸಿದ್ದಾರೆ. ಕನ್ನಡ ಹಾಗೂ ತುಳು ಎರಡೂ ಭಾಷೆಗಳಲ್ಲಿ ಮೂಡಿಬರುತ್ತಿರುವ 'ಪಿಚ್ಚರ್' ಚಿತ್ರದ "ಗೋಕುಲದ ರಾಧೆ..." ಎಂಬ ಹಾಡಿನ ಮೂಲಕ ಅವರು ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಅದರ ಬಗ್ಗೆಯೂ ಮಾತನಾಡಿದ್ದಾರೆ.

ಮನೆ ಹತ್ರ ಬಂದು ರಾತ್ರಿ ಹಗಲು ಬಾಗಿಲು ತಟ್ಟೋರು- ಶಿಲ್ಪಾ



ಹೇಗಿತ್ತು ಮೊದಲ ಬಾರಿ ಹಾಡಿದ ಅನುಭವ?

"ಮೊದಲ ಬಾರಿಗೆ ಹಿನ್ನೆಲೆ ಗಾಯಕಿಯಾಗಿ ಹಾಡಿರುವುದಕ್ಕೆ ತುಂಬ ಹೆಮ್ಮೆಯಿದೆ, ಅದೂ ಕೂಡ ಖ್ಯಾತ ಗಾಯಕ ಜಸ್ಕರಣ್ ಸಿಂಗ್ ಅವರೊಂದಿಗೆ ಹಾಡಿರುವುದು ವಿಶೇಷ. ನಮ್ಮದೇ ಸ್ವಂತ ಸಂಸ್ಥೆಯಿಂದ ನಿರ್ಮಾಣವಾಗುವ ಚಿತ್ರದಲ್ಲಿ ಹಾಡಬೇಕೆಂಬ ಹಂಬಲ ನನಗಿತ್ತು, ಅದು ಈಗ ಈಡೇರಿದೆ. ನಾನು ಹಾಡುತ್ತೇನೆ ಎಂಬುದು ಗಣೇಶ್‌ಗೆ ಮೊದಲೇ ತಿಳಿದಿತ್ತು. ನಮ್ಮದೇ ಸಿನಿಮಾ ಆಗಿರುವುದರಿಂದ ಇದರಲ್ಲೇ ಹಾಡು ಎಂದು ಅವರು ಪ್ರೋತ್ಸಾಹಿಸಿದರು" ಎಂದು ಶಿಲ್ಪಾ ಸಂತಸ ಹಂಚಿಕೊಂಡಿದ್ದಾರೆ.

ಸಿನಿಮಾಗಳ ಮೇಲೆ ಅಪಾರ ಒಲವಿತ್ತು

"ನನಗೆ ಬಾಲ್ಯದಿಂದಲೂ ಸಿನಿಮಾಗಳ ಮೇಲೆ ಅಪಾರ ಒಲವಿತ್ತು. ನನ್ನ ಶಾಲಾ ದಿನಗಳು ಮುಂಬೈನಲ್ಲಿ ಕಳೆದಿದ್ದರಿಂದ ಆ ದಿನಗಳಲ್ಲಿ ಹಿಂದಿ ಚಿತ್ರಗಳ ಪ್ರಭಾವ ಹೆಚ್ಚಾಗಿತ್ತು. ನಮ್ಮೂರಿನ ಕಡೆ ನಾವು ಹೆಚ್ಚಾಗಿ ಸಿನಿಮಾಗಳನ್ನು ವೀಕ್ಷಿಸುತ್ತಿರಲಿಲ್ಲ. ಆದರೆ, ಗಣೇಶ್ ಅವರನ್ನು ಮದುವೆಯಾದ ಒಂದೇ ವರ್ಷದಲ್ಲಿ ನಾವು ಚಿತ್ರನಿರ್ಮಾಣ ಸಂಸ್ಥೆ ಆರಂಭಿಸಿದೆವು. ನಾವು ನಿರ್ಮಿಸಿದ ‘ಮಳೆಯಲಿ ಜೊತೆಯಲಿ’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡು, ಹಾಡುಗಳೂ ಜನಪ್ರಿಯವಾದವು. ಆ ಗೆಲುವು ನಮಗೆ ಮತ್ತಷ್ಟು ಚಿತ್ರಗಳನ್ನು ನಿರ್ಮಿಸಲು ಸ್ಫೂರ್ತಿ ನೀಡಿತು" ಎಂದಿದ್ದಾರೆ ಶಿಲ್ಪಾ ಗಣೇಶ್‌.

ತುಳು ಚಿತ್ರರಂಗಕ್ಕೆ ಲಗ್ಗೆ ಇಟ್ಟ ಶಿಲ್ಪಾ ಗಣೇಶ್‌

"ನಮ್ಮ ಮಾತೃಭಾಷೆಯಾದ ತುಳು ಚಿತ್ರರಂಗವೂ ಕೂಡ ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎಂಬುದು ನನ್ನ ಆಸೆ ಮತ್ತು ಪ್ರೀತಿ. ಇತ್ತೀಚಿನ ದಿನಗಳಲ್ಲಿ ಕರಾವಳಿ ಚಿತ್ರರಂಗ ತುಂಬಾ ಚೆನ್ನಾಗಿ ಬೆಳೆಯುತ್ತಿದೆ. ತುಳು ಸಿನಿಮಾಗಳಲ್ಲಿ ಹಾಸ್ಯಕ್ಕೆ ನಾವು ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ. ಮನರಂಜನೆಯನ್ನು ಮನರಂಜನೆಯಾಗಿಯೇ ನೋಡಬೇಕು. ಎಷ್ಟೇ ಒತ್ತಡಗಳಿದ್ದರೂ ಥಿಯೇಟರ್‌ಗೆ ಬಂದು ಎರಡು ಗಂಟೆ ಸಿನಿಮಾ ನೋಡಿದಾಗ ವೀಕ್ಷಕರು ನಿರಾಳರಾಗಬೇಕು. ಆ ಎಲ್ಲಾ ಅಂಶಗಳನ್ನು ಮನದಲ್ಲಿಟ್ಟುಕೊಂಡು ಈ ಚಿತ್ರವನ್ನು ಸಿದ್ಧಪಡಿಸಿದ್ದೇವೆ" ಎಂದು ಶಿಲ್ಪಾ ಗಣೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.