‘ರಂಗಿತರಂಗ’ ಖ್ಯಾತಿಯ ನಟ ನಿರೂಪ್ ಭಂಡಾರಿ ನಾಯಕರಾಗಿ ನಟಿಸುತ್ತಿರುವ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಸಿನಿಮಾಗೆ ಇದೀಗ ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಅವರು ಎಂಟ್ರಿ ನೀಡಿದ್ದಾರೆ. ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ವಿಶೇಷ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಅವರ ಈ ಗ್ರ್ಯಾಂಡ್ ಎಂಟ್ರಿಯು ಸಿನಿಪ್ರಿಯರಲ್ಲಿ ಚಿತ್ರದ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟುಗೊಳಿಸಿದೆ.
ನಿರೂಪ್ಗಾಗಿ ಈ ಸಿನಿಮಾ ಒಪ್ಪಿಕೊಂಡ ಶಿವಣ್ಣ
ತಮ್ಮ ಪಾತ್ರದ ಕುರಿತು ಮಾತನಾಡಿದ ಶಿವರಾಜ್ಕುಮಾರ್, ಪ್ರಮುಖವಾಗಿ ನಿರೂಪ್ ಭಂಡಾರಿ, ಸಾಯಿಕುಮಾರ್ ಹಾಗೂ ಆ ವಿಶಿಷ್ಟ ಪಾತ್ರಕ್ಕಾಗಿಯೇ ಈ ಚಿತ್ರವನ್ನು ಒಪ್ಪಿಕೊಂಡಿದ್ದಾಗಿ ತಿಳಿಸಿದ್ದಾರೆ. ಅತ್ಯಂತ ವಿಭಿನ್ನವಾಗಿರುವ ಈ ಪಾತ್ರದಲ್ಲಿ ತುಂಬಾ ಖುಷಿಪಟ್ಟು ನಟಿಸಿದ್ದು, ಚಿತ್ರದಲ್ಲಿನ ತಮ್ಮ ಲುಕ್ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂದು ಶಿವಣ್ಣ ಸಂತಸ ಹಂಚಿಕೊಂಡಿದ್ದಾರೆ.
ಇತ್ತ ನಾಯಕ ನಿರೂಪ್ ಭಂಡಾರಿ ಕೂಡ ಶಿವಣ್ಣ ಅವರ ಜೊತೆಗಿನ ಚಿತ್ರೀಕರಣದ ಕ್ಷಣಗಳನ್ನು ನೆನೆದು ಕೃತಜ್ಞತೆ ಸಲ್ಲಿಸಿದ್ದು, ಚಿತ್ರತಂಡ ನಿರ್ಮಿಸಿದ್ದ ಸೆಟ್ ಹಾಗೂ ಕಥೆಯ ಬರವಣಿಗೆ ಶಿವಣ್ಣ ಅವರಿಗೆ ಅಪಾರವಾಗಿ ಮೆಚ್ಚುಗೆಯಾಗಿತ್ತು ಎಂದು ಹೇಳಿದ್ದಾರೆ. ಜತೆಗೆ ಚಿತ್ರೀಕರಣದುದ್ದಕ್ಕೂ ಶಿವರಾಜ್ಕುಮಾರ್ ಅವರ ಅದ್ಭುತ ಎನರ್ಜಿ ಮತ್ತು ಸಹಕಾರ ಇಡೀ ತಂಡಕ್ಕೆ ದೊಡ್ಡ ಸ್ಫೂರ್ತಿ ನೀಡಿದ್ದು, ಅತ್ಯಂತ ಸರಳತೆಯಿಂದಲೇ ವೇಗವಾಗಿ ಅವರು ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದಾರೆ ಎಂದು ನಿರೂಪ್ ತಿಳಿಸಿದ್ದಾರೆ.
ತಂದೆಯಾಗಿ ಸಾಯಿಕುಮಾರ್
ಯುವ ಪ್ರತಿಭೆ ಸಚಿನ್ ಆಕ್ಷನ್-ಕಟ್ ಹೇಳುತ್ತಿರುವ ಈ ಫ್ಯಾಮಿಲಿ ಎಂಟರ್ಟೇನರ್ ಸಿನಿಮಾದಲ್ಲಿ ನಿರೂಪ್ ಭಂಡಾರಿಗೆ ಜೋಡಿಯಾಗಿ ನಟಿಯರಾದ ಬೃಂದಾ ಆಚಾರ್ಯ ಮತ್ತು ಅಂಕಿತಾ ಅಮರ್ ಕಾಣಿಸಿಕೊಂಡಿದ್ದಾರೆ. ವಿಚಿತ್ರವಾಗಿ ಯೋಚಿಸಿ ಎಂತಹದ್ದೇ ಸಂಕಷ್ಟವನ್ನೂ ಬಗೆಹರಿಸುವ ‘ಸತ್ಯ’ ಎಂಬ ಬುದ್ಧಿವಂತ ಯುವಕನ ಪಾತ್ರದಲ್ಲಿ ನಿರೂಪ್ ಕಾಣಿಸಿಕೊಂಡರೆ, ಅವರ ತಂದೆ ‘ಹರಿಶ್ಚಂದ್ರ’ನ ಪಾತ್ರಕ್ಕೆ ಹಿರಿಯ ನಟ ಸಾಯಿಕುಮಾರ್ ಜೀವ ತುಂಬಿದ್ದಾರೆ.
ʻಅತಿಕಾಯʼ ಚಿತ್ರಕ್ಕಾಗಿ ನಿರೂಪ್ ಭಂಡಾರಿಗೆ ಜೋಡಿಯಾದ ಸ್ವಾದಿಷ್ಟ ಕೃಷ್ಣನ್; ರಗಡ್ ಲುಕ್ನಲ್ಲಿ ʻರಂಗಿತರಂಗʼ ಹೀರೋ
ತೀರ್ಥಹಳ್ಳಿ, ಚನ್ನಗಿರಿ ಸೇರಿದಂತೆ ಮಲೆನಾಡಿನ ರಮಣೀಯ ತಾಣಗಳಲ್ಲಿ ಚಿತ್ರೀಕರಣ ನಡೆಸಿರುವ ಈ ಚಿತ್ರದ ಮೊದಲಾರ್ಧ ಸಂಪೂರ್ಣ ಹಾಸ್ಯಮಯವಾಗಿದ್ದು, ದ್ವಿತೀಯಾರ್ಧದಲ್ಲಿ ಪ್ರಮುಖ ಸಾಮಾಜಿಕ ಕಳಕಳಿಯ ವಿಷಯದ ಜೊತೆಗೆ ರೋಚಕ ಕೋರ್ಟ್ರೂಮ್ ಡ್ರಾಮಾ ಕೂಡ ಇರಲಿದೆಯಂತೆ.
ವಿಶೇಷವೆಂದರೆ ನಟ ನಿರೂಪ್ ಭಂಡಾರಿ ಅವರೇ ಸ್ವತಃ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ‘ಅಂಕಿತ್ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ಅಂಕಿತ್ ಸೋನಿಗಾರ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದು, ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ, ಸಂದೀಪ್ ವಲ್ಲೂರಿ ಛಾಯಾಗ್ರಹಣ ಹಾಗೂ ಉಜ್ವಲ್ ಚಂದ್ರ ಅವರ ಸಂಕಲನವಿದೆ. ಸ್ವಾತಿ ಗುರುದತ್, ಎಂ.ಕೆ. ಮಠ, ಚೇತನ್ ದುರ್ಗಾ ಸೇರಿದಂತೆ ದೊಡ್ಡ ತಾರಾಬಳಗ ಹೊಂದಿರುವ ಈ ಚಿತ್ರ ಸದ್ಯ ಸ್ಯಾಂಡಲ್ವುಡ್ನಲ್ಲಿ ಭಾರಿ ಸದ್ದು ಮಾಡುತ್ತಿದೆ.