ʻಅತಿಕಾಯʼ ಚಿತ್ರಕ್ಕಾಗಿ ನಿರೂಪ್ ಭಂಡಾರಿಗೆ ಜೋಡಿಯಾದ ಸ್ವಾದಿಷ್ಟ ಕೃಷ್ಣನ್; ರಗಡ್ ಲುಕ್‌ನಲ್ಲಿ ʻರಂಗಿತರಂಗʼ ಹೀರೋ
'ರಂಗಿತರಂಗ' ಖ್ಯಾತಿಯ ನಟ ನಿರೂಪ್ ಭಂಡಾರಿ 'ಅತಿಕಾಯ' ಚಿತ್ರದ ಮೂಲಕ ಪಕ್ಕಾ ರಗಡ್ ಶೈಲಿಯಲ್ಲಿ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ನಾಗರಾಜ್ ಪೀಣ್ಯ ನಿರ್ದೇಶನದ ಈ ಹೈ-ವೋಲ್ಟೇಜ್ ಆಕ್ಷನ್ ಚಿತ್ರಕ್ಕೆ ಬಹುಭಾಷಾ ನಟಿ, ಧಾರವಾಡದ ಮೂಲದ ಸ್ವಾದಿಷ್ಟ ಕೃಷ್ಣನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
-
'ರಂಗಿತರಂಗ' ಸಿನಿಮಾ ಖ್ಯಾತಿಯ ನಟ ನಿರೂಪ್ ಭಂಡಾರಿ ತಮ್ಮ ಮುಂಬರುವ ಹೊಸ ಚಿತ್ರ ‘ಅತಿಕಾಯ’ ಮೂಲಕ ಮಾಸ್ ಅವತಾರದಲ್ಲಿ ಚಿತ್ರಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ. ನಾಗರಾಜ್ ಪೀಣ್ಯ ನಿರ್ದೇಶಿಸುತ್ತಿರುವ ಈ ಆಕ್ಷನ್ ಪ್ರಧಾನ ಸಿನಿಮಾಗೆ ಇದೀಗ ಬಹುಭಾಷಾ ನಟಿ ಸ್ವಾದಿಷ್ಟ ಕೃಷ್ಣನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ʻಅತಿಕಾಯʼ ಅಡ್ಡಕ್ಕೆ ಸ್ವಾದಿಷ್ಟ ಎಂಟ್ರಿ
ಮೂಲತಃ ಧಾರವಾಡದವರಾದ ಸ್ವಾದಿಷ್ಟ ಕೃಷ್ಣನ್ ಈಗಾಗಲೇ ಕನ್ನಡ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ತಮಿಳಿನ 'ಸವರಕತ್ತಿ', 'ವಿಕ್ರಮ್', ತೆಲುಗಿನ 'ಗುಂಡೇ ಕಥಾ ವಿಂಟಾರ' ಹಾಗೂ ಕನ್ನಡದ 'ಒಂದು ಸರಳ ಪ್ರೇಮಕಥೆ' ಮತ್ತು 'ರಕ್ಕಸಪುರದೋಳ್' ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಅವರು, ಇದೀಗ ‘ಅತಿಕಾಯ’ ಚಿತ್ರದ ಮೂಲಕ ನಿರೂಪ್ ಭಂಡಾರಿಗೆ ಜೋಡಿಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಕೇವಲ ನಾಯಕಿಯಾಗಿಷ್ಟೇ ಇರದೆ, ಕಥೆಯ ಪ್ರಮುಖ ಭಾಗವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
8 Kannada Movie: ಬಾಲಿವುಡ್‌ನ ಅನುರಾಗ್ ಕಶ್ಯಪ್ ನಟನೆಯ ಮೊದಲ ಕನ್ನಡ ಸಿನಿಮಾದ ಟೀಸರ್ ರಿಲೀಸ್
ಚಾಕೋಲೇಟ್ ಬಾಯ್ ಟು ರಗಡ್ ಹೀರೋ
ಈವರೆಗಿನ ಸಿನಿಮಾಗಳಲ್ಲಿ ಚಾಕೋಲೆಟ್ ಬಾಯ್ ಹಾಗೂ ಲವರ್ ಬಾಯ್ ಗೆಟಪ್‌ಗಳಲ್ಲಿ ಕಂಗೊಳಿಸುತ್ತಿದ್ದ ನಿರೂಪ್ ಭಂಡಾರಿ, ಈ ಚಿತ್ರದಲ್ಲಿ ಪಕ್ಕಾ ಮಾಸ್ ಮತ್ತು ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ತಸಿಕ್ತ ಧಿರಿಸಿನಲ್ಲಿ ಸಖತ್ ರಗಡ್ ಆಗಿ ಕ್ಯಾಮೆರಾ ಎದುರಿಸಿರುವ ಅವರು, ಈ ಪಾತ್ರಕ್ಕಾಗಿ ದೇಹ ದಂಡಿಸಿ ವಿಶೇಷ ತಯಾರಿ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ಅವರ ಗೆಟಪ್ ಹಾಗೂ ಡೈಲಾಗ್ ಡೆಲಿವರಿ ಕೂಡ ಈ ಹಿಂದಿನ ಸಿನಿಮಾಗಳಿಗಿಂತ ಸಂಪೂರ್ಣ ಭಿನ್ನವಾಗಿರಲಿದೆಯಂತೆ.
ಕೊನೆಯ ಹಂತದ ಚಿತ್ರೀಕರಣ
ಈ ಹಿಂದೆ 'ಪದೇ ಪದೇ' ಹಾಗೂ 'ನಮಕ್‌ಹರಾಮ್' ನಂತಹ ಸಿನಿಮಾಗಳನ್ನು ನೀಡಿದ್ದ ನಾಗರಾಜ್ ಪೀಣ್ಯ, ಸಣ್ಣ ಬಿಡುವಿನ ನಂತರ ‘ಅತಿಕಾಯ’ನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನೈಜವಾಗಿ ಮೂಡಿಬರಬೇಕೆಂಬ ಕಾರಣಕ್ಕಾಗಿ ಬೆಂಗಳೂರಿನ ಜನಜಂಗುಳಿ ಪ್ರದೇಶಗಳಲ್ಲೇ ಬಹುತೇಕ ಚಿತ್ರೀಕರಣವನ್ನು ರಿಯಲಿಸ್ಟಿಕ್ ಆಗಿ ನಡೆಸಲಾಗಿದೆಯಂತೆ.
ಭರ್ಜರಿ ತಾರಾಗಣ ಹಾಗೂ ತಾಂತ್ರಿಕ ವರ್ಗ
ಎ. ಎನ್. ಮೂವೀ ಮೇಕರ್ಸ್ ಹಾಗೂ ನಿಹಾಲ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ ಈ ಹೈ-ವೋಲ್ಟೇಜ್ ಸಿನಿಮಾವನ್ನು ಜೆ. ಮಹೇಶ್ ಕುಮಾರ್ ಅರ್ಪಿಸುತ್ತಿದ್ದಾರೆ. ಚಿತ್ರದಲ್ಲಿ ಹರೀಶ್ ರಾಯ್, ದಿನೇಶ್ ಮಂಗ್ಳೂರು, ಬಿ. ಸುರೇಶ, ಕಾಕ್ರೋಚ್ ಸುಧೀ, ವಜ್ರಧೀರ್ ಜೈನ್, ವರ್ಧನ್ ತೀರ್ಥಹಳ್ಳಿ, ಮಹಾಂತೇಶ್ ಹಾಗೂ ಜಾಲಿ ಜಾಕ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ಉದಯಲೀಲಾ ಅವರ ಛಾಯಾಗ್ರಹಣವಿದ್ದು, ಶ್ರೀನಿವಾಸ್ ಪಿ. ಬಾಬು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಸಚಿನ್ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.