ಜೀ ಕನ್ನಡ ವಾಹಿನಿಯಲ್ಲಿ ಕಳೆದ ಹಲವು ವಾರಗಳಿಂದ ಅದ್ಧೂರಿಯಾಗಿ ನಡೆಯುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ 'ಡಾನ್ಸ್ ಕರ್ನಾಟಕ ಡಾನ್ಸ್' ಈಗ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಕಿರುತೆರೆ ವೀಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿರುವ ಈ ಶೋನ ಗ್ರ್ಯಾಂಡ್ ಫಿನಾಲೆ ಏಪ್ರಿಲ್ 11 ಶನಿವಾರ ಸಂಜೆ 7 ರಿಂದ 9 ಗಂಟೆಯವರೆಗೆ ಮತ್ತು ಏಪ್ರಿಲ್ 12ರ ಭಾನುವಾರ ಸಂಜೆ 7 ರಿಂದ ರಾತ್ರಿ 9.30 ರವರೆಗೆ ಪ್ರಸಾರವಾಗಲಿದೆ. ಈ ಬಾರಿಯ ವಿಜೇತರು ಯಾರು ಎಂಬ ಕುತೂಹಲ ಕಿರುತೆರೆ ವೀಕ್ಷಕರಲ್ಲಿದೆ.
ಕನ್ನಡಿಗರ ಮನೆಮಾತಾದ ಸೀಸನ್
ಈ ಬಾರಿಯ ಡಾನ್ಸ್ ಕರ್ನಾಕಟ ಡಾನ್ಸ್ ಸೀಸನ್‌ನ ವಿಶೇಷತೆಯೆಂದರೆ ಸೆಲೆಬ್ರಿಟಿ ಸ್ಪರ್ಧಿಗಳು ಮತ್ತು ನುರಿತ ಡ್ಯಾನ್ಸರ್‌ಗಳು ಜೋಡಿಯಾಗಿ ಪ್ರದರ್ಶನ ನೀಡಿದ್ದು. ಕೇವಲ ನೃತ್ಯವಷ್ಟೇ ಅಲ್ಲದೆ, ಪ್ರತಿಯೊಂದು ಪರ್ಫಾರ್ಮೆನ್ಸ್‌ನಲ್ಲಿಯೂ ಒಂದು ವಿಶಿಷ್ಟ ಥೀಮ್ ಅಥವಾ ಕಥೆಯನ್ನು ಹೇಳುವ ಪ್ರಯತ್ನ ಮಾಡಲಾಗಿತ್ತು. ಶಾಸ್ತ್ರೀಯ ನೃತ್ಯದ ಗಾಂಭೀರ್ಯ, ಜಾನಪದ ಸೊಗಡು ಹಾಗೂ ಸಿನಿಮೀಯ ಶೈಲಿಯ ಎನರ್ಜಿಟಿಕ್ ಸ್ಟೆಪ್ಸ್‌ಗಳು ವೀಕ್ಷಕರಿಗೆ ಭಾವನಾತ್ಮಕವಾಗಿ ಹತ್ತಿರವಾಗಿದ್ದವು. ವಾರಾಂತ್ಯದ ಅವಿಭಾಜ್ಯ ಅಂಗವಾಗಿದ್ದ ಈ ಕಾರ್ಯಕ್ರಮ ಈಗ ಕನ್ನಡಿಗರ ಮನೆಮಾತಾಗಿದೆ.
ಮತ್ತೆ ಬರ್ತಿದೆ ಜೀ ಕನ್ನಡದ ಜನಪ್ರಿಯ 'ಜೋಡಿ ನಂ.1' ಶೋ; ಜಡ್ಜ್ ಟೀಮ್‌ಗೆ ʻಅಮೃತಧಾರೆʼ ಭೂಮಿ - ಗೌತಮ್ ಎಂಟ್ರಿ
ಶೋಗೆ ಮೆರುಗು ತಂದ ಜಡ್ಜ್‌ಗಳು
ಈ ಬಾರಿಯ ಸೀಸನ್‌ಗೆ ಮೆರುಗು ತಂದಿರುವುದು ದಿಗ್ಗಜ ತೀರ್ಪುಗಾರರು. ಸ್ಯಾಂಡಲ್‌ವುಡ್‌ನ ಹ್ಯಾಟ್ರಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರ ಹುರುಪು, ನಟಿ ರಚಿತಾ ರಾಮ್ ಅವರ ಪ್ರೋತ್ಸಾಹ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಲವಲವಿಕೆ ಮತ್ತು ನಟ ವಿಜಯ್ ರಾಘವೇಂದ್ರ ಅವರ ತಾಂತ್ರಿಕ ವಿಶ್ಲೇಷಣೆ ಸ್ಪರ್ಧಿಗಳಿಗೆ ವರದಾನವಾಯಿತು. ಸ್ಪರ್ಧಿಗಳ ಹಾವ-ಭಾವ, ಸಮನ್ವಯತೆ ಮತ್ತು ಒಟ್ಟಾರೆ ಪ್ರಸ್ತುತಿಯನ್ನು ಸೂಕ್ಷ್ಮವಾಗಿ ಗಮನಿಸಿ ತೀರ್ಪುಗಾರರು ನೀಡುತ್ತಿದ್ದ ಸಲಹೆಗಳು ಸ್ಪರ್ಧಿಗಳ ಪ್ರತಿಭೆಯನ್ನು ಮತ್ತಷ್ಟು ಹರಿತಗೊಳಿಸಿದವು. ಇನ್ನು ಎಲ್ಲರ ಅಚ್ಚುಮೆಚ್ಚಿನ ನಿರೂಪಕಿ ಅನುಶ್ರೀ ಅವರ ಪಟಾಕಿಯಂತಹ ಮಾತುಗಳು ಶೋನ ಕಳೆಯನ್ನು ಹೆಚ್ಚಿಸಿತ್ತು ಎಂದರೆ ಅದು ಅತಿಶಯೋಕ್ತಿ ಅಲ್ಲ.
ಫಿನಾಲೆ ತಲುಪಿದ ಟಾಪ್ 5 ಜೋಡಿಗಳು
ಪೂಜಾ - ಅನೂಪ್
ಸಿದ್ದೇಗೌಡ್ರು - ದೀಶಲ್
ಮೋಹಿತ್ - ಅನನ್ಯ
ಹರ್ಷ - ನಂದು
ಶಿಕ್ಷಿತ್ ತಾಪಾ - ಸಂಜನಾ
- ಈ ಐದೂ ಜೋಡಿಗಳು ಫಿನಾಲೆ ವೇದಿಕೆಯಲ್ಲಿ ಅಗ್ನಿಪರೀಕ್ಷೆಗೆ ಒಳಗಾಗಲಿವೆ. ಪ್ರತಿಯೊಬ್ಬರೂ ಭಿನ್ನ ಶೈಲಿಯ ನೃತ್ಯಗಳಲ್ಲಿ ಪರಿಣಿತರಾಗಿರುವುದರಿಂದ ಯಾರಿಗೆ ಗೆಲುವಿನ ಕಿರೀಟ ನೀಡಬೇಕು ಎಂಬುದು ತೀರ್ಪುಗಾರರಿಗೂ ಕಷ್ಟದ ಕೆಲಸವಾಗಿದೆ. ಸ್ಪರ್ಧೆ ಈಗ ಅಂತಿಮ ಹಂತಕ್ಕೆ ಬಂದಿರುವುದರಿಂದ ಪೈಪೋಟಿ ಮತ್ತಷ್ಟು ಬಿಗಿಯಾಗಿದೆ. ಪ್ರತಿಯೊಂದು ಹೆಜ್ಜೆಯೂ ನಿರ್ಣಾಯಕವಾಗಿದ್ದು, ಸಣ್ಣ ತಪ್ಪು ಕೂಡ ವಿಜೇತರ ಪಟ್ಟಿಯಿಂದ ಸ್ಪರ್ಧಿಗಳನ್ನು ದೂರ ಮಾಡಬಹುದು. ಈ ಸೀಸನ್‌ನ ವಿನ್ನರ್ ಯಾರಾಗಲಿದ್ದಾರೆ ಎಂಬ ಕುತೂಹಲ ಈಗ ಮನೆ ಮಾಡಿದೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ. ಈಗಾಗಲೇ ಫಿನಾಲೆಗೆ ದಿನಗಣನೆ ಆರಂಭವಾಗಿದೆ.