ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಡ್ಯಾನ್ಸ್ ಫ್ಲೋರ್‌ನಲ್ಲಿ ತಾಯಂದಿರ ಮ್ಯಾಜಿಕ್; ಜೀ ಕನ್ನಡದಲ್ಲಿ ಶುರುವಾಗ್ತಿದೆ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್' ಶೋ!

Dance Karnataka Dance: ಜೀ ಕನ್ನಡದಲ್ಲಿ ವಾಹಿನಿಯ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ –ಸೂಪರ್ ಮಾಮ್ʼ ಶೋ ಗ್ರ್ಯಾಂಡ್‌ ಓಪನಿಂಗ್‌ ಪಡೆದುಕೊಳ್ಳುತ್ತಿದೆ. ಈ ಶೋ ಮೂಲಕ ಕರುನಾಡಿನ ತ್ಯಾಗಮಯಿ ತಾಯಂದಿರು ತಮ್ಮ ಹಳೆಯ ಕನಸುಗಳನ್ನು ನನಸು ಮಾಡಿಕೊಳ್ಳಲು ವೇದಿಕೆಗೆ ಮರಳುತ್ತಿದ್ದಾರೆ. ದೈನಂದಿನ ಮನೆ ಕೆಲಸಗಳು, ಕುಟುಂಬದ ಜವಾಬ್ದಾರಿಗಳ ಆಚೆಗೂ ಅವರಲ್ಲಿರುವ ನೃತ್ಯ ಕೌಶಲವನ್ನು ಜಗತ್ತಿಗೆ ಪರಿಚಯಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

‘ಜೀ ಕನ್ನಡ’ ವಾಹಿನಿಯು ಕರ್ನಾಟಕದ ಮನೆ-ಮನದ ತಾಯಂದಿರ ನೃತ್ಯ ಪ್ರತಿಭೆ ಹಾಗೂ ಅವರ ಸುಪ್ತ ಕನಸುಗಳಿಗೆ ಹೊಸ ರೆಕ್ಕೆ ನೀಡಲು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್’ ರಿಯಾಲಿಟಿ ಶೋನೊಂದಿಗೆ ಮತ್ತೊಮ್ಮೆ ವೀಕ್ಷಕರ ಮುಂದೆ ಬರಲು ಸಜ್ಜಾಗಿದೆ. ಕುಟುಂಬ, ಉದ್ಯೋಗ ಹಾಗೂ ದೈನಂದಿನ ಜಂಜಾಟಗಳ ನಡುವೆಯೂ ನೃತ್ಯದ ಮೇಲಿನ ಒಲವನ್ನು ಜೀವಂತವಾಗಿರಿಸಿಕೊಂಡಿರುವ ಸ್ಫೂರ್ತಿದಾಯಕ ಅಮ್ಮಂದಿರನ್ನು ಗುರುತಿಸಿ ಪ್ರೋತ್ಸಾಹಿಸುವ ಈ ವಿನೂತನ ಶೋ, ಇದೇ ಸೆಪ್ಟೆಂಬರ್ 12ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

ಸೂಪರ್ ಮಾಮ್‌ಗಳಿಗೆ ಅದ್ಭುತ ಅವಕಾಶ

ಸಾಮಾನ್ಯವಾಗಿ ತಾಯಂದಿರು ತಮ್ಮ ಇಡೀ ಜೀವನವನ್ನು ಕುಟುಂಬ, ಮಕ್ಕಳು ಮತ್ತು ಮನೆಯ ಜವಾಬ್ದಾರಿಗಳಿಗಾಗಿಯೇ ಮುಡಿಪಾಗಿಡುತ್ತಾರೆ. ಈ ಓಟದಲ್ಲಿ ಅವರ ವೈಯಕ್ತಿಕ ಆಸೆ-ಆಕಾಂಕ್ಷೆಗಳು ಹಾಗೂ ಕಲಾ ಪ್ರತಿಭೆಗಳು ಹಿನ್ನೆಲೆಗೆ ಸರಿದುಬಿಡುತ್ತವೆ. ಅಂತಹ ತಾಯಂದಿರ ಸುಪ್ತ ಪ್ರತಿಭೆಯನ್ನು ಮತ್ತೆ ಮುನ್ನೆಲೆಗೆ ತಂದು, ವರ್ಷಗಳಿಂದ ಬದಿಗೊತ್ತಿದ್ದ ಕನಸುಗಳಿಗೆ ಮರುಜೀವ ನೀಡುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು, ಹೊಸ ಉತ್ಸಾಹದೊಂದಿಗೆ ವೇದಿಕೆಯ ಮೇಲೆ ನೃತ್ಯ ಪ್ರದರ್ಶಿಸಲು ಈ ರಿಯಾಲಿಟಿ ಶೋ ಸೂಪರ್ ಮಾಮ್‌ಗಳಿಗೆ ಅದ್ಭುತ ಅವಕಾಶ ಕಲ್ಪಿಸಿಕೊಟ್ಟಿದೆ.

ಪ್ರತಿಯೊಬ್ಬ ಅಮ್ಮನ ಸ್ಫೂರ್ತಿದಾಯಕ ಕಥೆ

ಆರಂಭಿಕ ಆಡಿಷನ್ ಹಂತಗಳಲ್ಲಿ ಕರ್ನಾಟಕದ ಮೂಲೆ ಮೂಲೆಗಳಿಂದ ಆಗಮಿಸಿರುವ ಪ್ರತಿಭಾವಂತ ತಾಯಂದಿರನ್ನು ವೀಕ್ಷಕರಿಗೆ ಪರಿಚಯಿಸಲಾಗುತ್ತದೆ. ನೃತ್ಯದ ಮೇಲಿನ ಅಪಾರ ಪ್ರೀತಿಯಿಂದ ವೇದಿಕೆಯನ್ನೇರುವ ಸ್ಪರ್ಧಿಗಳು, ತಮ್ಮ ನೃತ್ಯದ ಜೊತೆಗೆ ಬದುಕಿನ ನೈಜ ಪಯಣ, ಎದುರಿಸಿದ ಸವಾಲುಗಳು ಹಾಗೂ ಕನಸುಗಳನ್ನು ವೀಕ್ಷಕರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂಸಾರದ ಜವಾಬ್ದಾರಿಗಳ ನಡುವೆಯೂ ತಮ್ಮ ಕನಸುಗಳಿಗೆ ಆದ್ಯತೆ ನೀಡಿ ಅಖಾಡಕ್ಕಿಳಿದಿರುವ ಪ್ರತಿಯೊಬ್ಬ ಅಮ್ಮನ ಸ್ಫೂರ್ತಿದಾಯಕ ಕಥೆ ಮತ್ತು ಅವರ ವಿಭಿನ್ನ ನೃತ್ಯ ಶೈಲಿಯ ಪ್ರದರ್ಶನಗಳು ಈ ಬಾರಿಯ ಶೋಗೆ ವಿಶೇಷ ಮೆರುಗು ನೀಡಲಿವೆ.

ಜೀ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ 'ಹಳ್ಳಿ ಪವರ್ ರಿಲೋಡೆಡ್'; ಅಕುಲ್ ಬಾಲಾಜಿ ನಿರೂಪಣೆ, ಆಗಸ್ಟ್ 8ರಿಂದ ಪ್ರಸಾರ!

ಜಡ್ಜ್‌ ಕುರ್ಚಿಯಲ್ಲಿ ಶಿವಣ್ಣ

ಕಿರುತೆರೆಯ ನೆಚ್ಚಿನ ನಿರೂಪಕಿ ಅನುಶ್ರೀ ತಮ್ಮ ಎಂದಿನ ಲವಲವಿಕೆ ಮತ್ತು ವಿಶಿಷ್ಟ ಶೈಲಿಯ ಮೂಲಕ ಈ ರಿಯಾಲಿಟಿ ಶೋವನ್ನು ಮುನ್ನಡೆಸಲಿದ್ದಾರೆ. ಇನ್ನು ಸ್ಪರ್ಧಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ತೀರ್ಪುಗಾರರ ಕುರ್ಚಿಯಲ್ಲಿ ʻಹ್ಯಾಟ್ರಿಕ್ ಹೀರೋʼ ಡಾ. ಶಿವರಾಜ್‌ಕುಮಾರ್, ಖ್ಯಾತ ನಿರ್ದೇಶಕ ತರುಣ್ ಸುಧೀರ್, ನಟ 'ಚಿನ್ನಾರಿ ಮುತ್ತ' ವಿಜಯ್ ರಾಘವೇಂದ್ರ ಹಾಗೂ ನಟಿ ರಚಿತಾ ರಾಮ್ ಆಸೀನರಾಗಲಿದ್ದಾರೆ. ಸಿನಿಮಾ ರಂಗದ ದಿಗ್ಗಜರ ಅನುಭವ, ಪ್ರೋತ್ಸಾಹ ಹಾಗೂ ಸೂಕ್ತ ಸಲಹೆಗಳು ಸ್ಪರ್ಧಿಗಳ ಪ್ರತಿಭೆಯನ್ನು ಮತ್ತಷ್ಟು ಹರಿತಗೊಳಿಸಲಿವೆ.

ರಾಜ್ಯದ ಅಮ್ಮಂದಿರಿಗಾಗಿ ಜೀ ಕನ್ನಡದಲ್ಲಿ ಬರಲಿದೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ - ಸೂಪರ್ ಮಾಮ್’ ಶೋ; ಆಡಿಷನ್ ಎಲ್ಲಿ, ಯಾವಾಗ?

ತಾಯಂದಿರ ನೃತ್ಯ ಸಂಭ್ರಮ

ಕುಟುಂಬದವರ ಏಳಿಗೆ ಮತ್ತು ಕನಸುಗಳಿಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತಿದ್ದ ಅಮ್ಮಂದಿರು, ಇದೀಗ ತಮಗಾಗಿ ಹೆಜ್ಜೆ ಹಾಕಲು ಮುಂದಾಗಿರುವುದು ಈ ಶೋನ ಹೈಲೈಟ್. ವಿವಿಧ ಹಿನ್ನೆಲೆಗಳಿಂದ ಬಂದಿರುವ ತಾಯಂದಿರ ನೃತ್ಯ ಸಂಭ್ರಮವನ್ನು ಹೊತ್ತು ತರುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್’ ಕಾರ್ಯಕ್ರಮವು ಸೆಪ್ಟೆಂಬರ್ 12ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದ್ದು, ವೀಕ್ಷಕರು ಯಾವುದೇ ಸಮಯದಲ್ಲಿ ‘Zee5’ ಒಟಿಟಿ ಆ್ಯಪ್‌ನಲ್ಲೂ ಈ ಸಂಚಿಕೆಗಳನ್ನು ವೀಕ್ಷಿಸಬಹುದಾಗಿದೆ.