ರಾಜ್ಯದ ಅಮ್ಮಂದಿರಿಗಾಗಿ ಜೀ ಕನ್ನಡದಲ್ಲಿ ಬರಲಿದೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ - ಸೂಪರ್ ಮಾಮ್’ ಶೋ; ಆಡಿಷನ್ ಎಲ್ಲಿ, ಯಾವಾಗ?
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಇದೀಗ ರಾಜ್ಯದ ಅಮ್ಮಂದಿರಿಗಾಗಿ 'ಸೂಪರ್ ಮಾಮ್' ಸರಣಿಯೊಂದಿಗೆ ಮರಳಿದೆ. ಕೇವಲ ಕುಟುಂಬದ ಆರೈಕೆಯಲ್ಲೇ ತಮ್ಮ ಜೀವನ ಮುಡಿಪಾಗಿಟ್ಟ ತಾಯಂದಿರಿಗೆ ತಮ್ಮ ನೃತ್ಯ ಪ್ರತಿಭೆಯನ್ನು ತೋರಿಸಲು ಜೀ ಕನ್ನಡ ವೇದಿಕೆ ಕಲ್ಪಿಸಿದೆ.
-
ಕನ್ನಡ ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ರಿಯಾಲಿಟಿ ಶೋಗಳಲ್ಲಿ ಒಂದಾದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ (Dance Karnataka Dance) ಇದೀಗ ಮತ್ತೆ ಶುರುವಾಗಲು ಸಜ್ಜಾಗುತ್ತಿದೆ. ಇದುವರೆಗೆ ಮಕ್ಕಳು, ಯುವಕರು ಮತ್ತು ಸೆಲೆಬ್ರಿಟಿಗಳ ಅದ್ಭುತ ನೃತ್ಯದ ಮೂಲಕ ಕನ್ನಡಿಗರನ್ನು ರಂಜಿಸಿದ್ದ ಈ ಶೋ, ಇದೀಗ ನಾಡಿನ ಹೆಮ್ಮೆ ಹಾಗೂ ಮಮತೆಯ ಸಂಕೇತವಾದ ಅಮ್ಮಂದಿರಿಗಾಗಿ ‘ಸೂಪರ್ ಮಾಮ್’ (Super Mom) ಸರಣಿಯೊಂದಿಗೆ ಮರಳಿ ಬಂದಿದೆ.
ಅಮ್ಮಂದಿರಿಗೆ ತಮ್ಮ ಪ್ರತಿಭೆ ಸಾಬೀತುಪಡಿಸಲು ಸುವರ್ಣಾವಕಾಶ!
ಈ ಪ್ರಸಿದ್ಧ ರಿಯಾಲಿಟಿ ಶೋಗಾಗಿ ಅರ್ಹ ತಾಯಂದಿರನ್ನು ಆಯ್ಕೆ ಮಾಡಲು ಆಗಸ್ಟ್ 2ರಂದು (ಭಾನುವಾರ) ಬೆಂಗಳೂರಿನಲ್ಲಿ ಬೃಹತ್ ಆಡಿಷನ್ ಆಯೋಜಿಸಲಾಗಿದೆ. ಸದಾ ಮನೆ, ಆಫೀಸ್, ಗಂಡ, ಮಕ್ಕಳು, ಅತ್ತೆ-ಮಾವ ಎನ್ನುತ್ತಾ ಕುಟುಂಬದ ಆರೈಕೆಯಲ್ಲೇ ತಮ್ಮ ಜೀವನವನ್ನು ಮುಡಿಪಾಗಿಡುವ ಪ್ರತಿಯೊಬ್ಬ ಅಮ್ಮಂದಿರಲ್ಲೂ ಒಂದಲ್ಲ ಒಂದು ಅಡಗಿರುವ ಕಲೆ ಇರುತ್ತದೆ. ಅಂತಹ ನೃತ್ಯಾಸಕ್ತ ತಾಯಂದಿರಿಗೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಜೀ ಕನ್ನಡ ವೇದಿಕೆ ಕಲ್ಪಿಸಿಕೊಡುತ್ತಿದೆ. ವಯಸ್ಸಿನ ಹಂಗಿಲ್ಲದೆ ನೃತ್ಯದ ಬಗ್ಗೆ ಆಸಕ್ತಿ ಹೊಂದಿದ್ದು, ಅದ್ಭುತವಾಗಿ ಹೆಜ್ಜೆ ಹಾಕಬಲ್ಲ ತಾಯಂದಿರು ಈ ಆಡಿಷನ್‌ನಲ್ಲಿ ಭಾಗವಹಿಸಬಹುದಾಗಿದೆ.
ಆಡಿಷನ್ ನಡೆಯುವ ಸ್ಥಳ ಮತ್ತು ದಿನಾಂಕದ ವಿವರ
ಆಗಸ್ಟ್ 2ರಂದು (ಭಾನುವಾರ) ಬೆಳಿಗ್ಗೆ 9 ಗಂಟೆಯಿಂದ ಬೆಂಗಳೂರಿನ ಚಿಕ್ಕಲಸಂದ್ರ,ದಲ್ಲಿ ಮಧು ಆರ್ಟ್ಸ್ ಸ್ಟುಡಿಯೋ (ಅಬ್ಬಯ್ಯ ನಾಯ್ಡು ಸ್ಟುಡಿಯೋ)ದಲ್ಲಿ ಈ ಆಡಿಷನ್ ನಡೆಯಲಿದೆ. ಇನ್ನು, ಆಡಿಷನ್‌ನಲ್ಲಿ ಭಾಗವಹಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಪಾಸ್‌ಪೋರ್ಟ್ ಸೈಜ್ ಫೋಟೋ ಹಾಗೂ ಅಡ್ರೆಸ್ ಪ್ರೂಫ್ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರತಕ್ಕದ್ದು ಎಂದು ವಾಹಿನಿಯು ತಿಳಿಸಿದೆ. ಇನ್ನು, ಈ ಆಡಿಷನ್ ಸಂಪೂರ್ಣವಾಗಿ ಉಚಿತವಾಗಿದ್ದು, ಆಡಿಷನ್‌ನಲ್ಲಿ ಭಾಗವಹಿಸಲು ಜೀ ಕನ್ನಡ ವಾಹಿನಿಯು ಯಾವುದೇ ರೀತಿಯ ಶುಲ್ಕ ಅಥವಾ ಹಣವನ್ನು ಪಡೆಯುವುದಿಲ್ಲ ಎಂದು ಹೇಳಲಾಗಿದೆ.
Zee Kannada Serial: ಜೀ ಕನ್ನಡದಲ್ಲಿ ಎರಡು ಹೊಸ ಧಾರಾವಾಹಿಗಳು ಬಂದಾಯ್ತು! ಅಂತ್ಯ ಹಾಡೋ ಸೀರಿಯಲ್‌ಗಳು ಯಾವವು?
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋ ಕುರಿತು
ಜೀ ಕನ್ನಡ ವಾಹಿನಿಯ ಪ್ರಮುಖ ರಿಯಾಲಿಟಿ ಶೋಗಳಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕೂಡ ಒಂದಾಗಿದ್ದು, ಕಳೆದ ಹಲವು ಸೀಸನ್‌ಗಳಿಂದ ರಾಜ್ಯಾದ್ಯಂತ ಅಪಾರ ಪ್ರಮಾಣದ ಅಭಿಮಾನಿಗಳನ್ನು ಗಳಿಸಿದೆ. ಈ ಶೋ ಕೇವಲ ನೃತ್ಯ ಪ್ರದರ್ಶನಕ್ಕೆ ಸೀಮಿತವಾಗಿರದೆ, ಸಾಮಾನ್ಯ ಹಿನ್ನೆಲೆಯಿಂದ ಬಂದ ಅನೇಕ ನೃತ್ಯ ಪಟುಗಳಿಗೆ ಸಿನಿಮಾ ಲೋಕಕ್ಕೆ ಹೆಜ್ಜೆ ಇಡಲು ದೊಡ್ಡ ಬಾಗಿಲನ್ನು ತೆರೆದುಕೊಟ್ಟಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ನಟಿ ರಕ್ಷಿತಾ ಪ್ರೇಮ್, ಮತ್ತು ಪ್ರಸಿದ್ಧ ನೃತ್ಯ ಸಂಯೋಜಕ ಚಿನ್ನಿ ಪ್ರಕಾಶ್ ಅವರಂತಹ ದಿಗ್ಗಜರು ಈ ಶೋನಲ್ಲಿ ತೀರ್ಪುಗಾರರಾಗಿ ಭಾಗವಹಿಸಿ ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಅನುಶ್ರೀ ಅವರು ನಿರೂಪಣೆಯಲ್ಲಿ ಈ ಹಿಂದಿನ ಸೀಸನ್‌ಗಳು ಉತ್ತಮವಾಗಿ ಮೂಡಿಬಂದಿವೆ.
ಮನೆಯ ನಾಲ್ಕು ಗೋಡೆಗಳ ಮಧ್ಯೆ ತಮ್ಮ ನೃತ್ಯದ ಕನಸನ್ನು ಕಂಡಿದ್ದ ಅಮ್ಮಂದಿರಿಗೆ ಇದೀಗ ರಾಜ್ಯಾದ್ಯಂತ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ಸಿಕ್ಕಿದೆ. ಇನ್ನೇಕೆ ತಡ? ಈ ಭಾನುವಾರ ನಡೆಯುವ ಆಡಿಷನ್‌ನಲ್ಲಿ ಭಾಗವಹಿಸಿ.